ಮಣಿಪಾಲ : ಟಾಸ್ಕ್ ಪೂರ್ಣಗೊಳಿಸಿ ಹಣ ಸಂಪಾದಿಸುವ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ಕ್ಲಿಕ್ ಮಾಡಿದ ಯುವತಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆೆ.
ಮಣಿಪಾಲದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡಿಕೊಂಡಿರುವ ಗಿಟಿಕಾ ಬಸಿನ್ ಅವರ ವಾಟ್ಸ್‌ಆ್ಯಪ್‌ಗೆ Review job & Pre Paid Tasks ಎಂಬ ಸಂದೇಶ ಬಂದಿತ್ತು. ಅದರಲ್ಲಿರುವ ಟಾಸ್ಕ್‌ಗಳನ್ನು ಪೂರ್ಣಗೊಳಿಸುವಂತೆ ತಿಳಿಸಲಾಗಿತ್ತು.
ಪೂರ್ಣಗೊಳಿಸಿದಾಗ ಅವರ ಬ್ಯಾಂಕ್ ಖಾತೆಗೆ 205 ರೂ.ಜಮೆಯಾಯಿತು. ಅನಂತರ ಅಪರಿಚಿತ ವ್ಯಕ್ತಿ ಅವರ ಟೆಲಿಗ್ರಾಂ ಆ್ಯಪ್‌ಗೆ Linkdin idea 2024 ಎrಟuಟ 827ಠಿಜ ಎಂಬ ಲಿಂಕ್ ಕಳುಹಿಸಿ ಜಾಯಿನ್ ಆಗುವಂತೆ ತಿಳಿಸಿದ್ದರು. ಗ್ರೂಪ್‌ಗೆ ಸೇರ್ಪಡೆಯಾದ ಬಳಿಕ Pre Paid Tasksನಲ್ಲಿ ಹೂಡಿಕೆ ಮಾಡುವಂತೆ ತಿಳಿಸಲಾಯಿತು. 4,600 ರೂ. ಹೂಡಿಕೆ ಮಾಡಿದಾಗ ಅವರ ಖಾತೆಗೆ 5,850 ರೂ. ಜಮೆ ಮಾಡುವ ಮೂಲಕ ವಂಚಕರು ವಿದ್ಯಾರ್ಥಿನಿಯನ್ನು ಮೋಸದ ಬಲೆಗೆ ಬೀಳಿಸಿಕೊಂಡರು.
ಎರಡು ಬಾರಿ ಹಣ ಗಳಿಸಿದ ಯುವತಿಯು “ಹೆಚ್ಚಿನ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ನೀಡುತ್ತೇವೆ” ಎಂಬ ಅಪರಿಚಿತರ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಒಟ್ಟು 2,20,100 ರೂ.ಗಳನ್ನು ಅಪರಿಚಿತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಇದಾದ ಬಳಿಕ ವಂಚಕರು ಹಣವನ್ನು ಮರಳಿಸದೆ ವಂಚನೆ ಎಸಗಿದ್ದಾರೆ ಎಂದು ಅವರು ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.