ಉಡುಪಿ : ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿರುವ ಕಿಶೋರ್ ಕುಮಾರ್ ಬೊಟ್ಯಾಡಿರವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರಕ್ಕೆ ತಕ್ಕ ಉತ್ತರ ನೀಡೋಣ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಬ್ರಹ್ಮಾವರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಉಡುಪಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಯ ಪೂರ್ವಭಾವಿಯಾಗಿ ಗ್ರಾಮ ಪಂಚಾಯತ್ ಸದಸ್ಯರ ಸಭೆಯಲ್ಲಿ ಯಶ್‌ಪಾಲ್ ಸುವರ್ಣ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರಕಾರ ಕರಾವಳಿ ಜಿಲ್ಲೆಯನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿದ್ದು, ಈ ಭಾಗಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡದೆ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದೆ. ಗ್ಯಾರಂಟಿ ಭಾಗ್ಯಗಳ ನೆಪದಲ್ಲಿ ಬಡ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ರಾಜ್ಯ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿಯ ಮಾತನಾಡಿ ಕಿಶೋರ್ ಕುಮಾರ್‌ರವರ ಪ್ರಚಂಡ ಗೆಲುವಿನ ಮೂಲಕ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಶಕ್ತಿಯನ್ನು ಮತ್ತೊಮ್ಮೆ ಸಾಬೀತು ಮಾಡಬೇಕು ಎಂದರು.
ಅಭ್ಯರ್ಥಿ ಕಿಶೋರ್ ಕುಮಾರ್ ಮಾತನಾಡಿ ಅವಿಭಜಿತ ಜಿಲ್ಲೆಯ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್‌ನಲ್ಲಿ ತಮ್ಮೆಲ್ಲರ ಬೇಡಿಕೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಜೀವ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ, ಪಕ್ಷದ ಪ್ರಮುಖರಾದ ಶ್ರೀ ಪ್ರತಾಪ್ ಹೆಗ್ಡೆ ಮಾರಾಳಿ, ಶ್ರೀಮತಿ ವೀಣಾ ನಾಯ್ಕ್, ಶ್ರೀ ಬಿ. ಎನ್. ಶಂಕರ ಪೂಜಾರಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ರೀಜ್ಞಾನ ವಸಂತ್ ಶೆಟ್ಟಿ, ಶ್ರೀ ರಾಜೇಶ್ ಶೆಟ್ಟಿ ಬಿರ್ತಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಹಿರಿಯರು ಉಪಸ್ಥಿತರಿದ್ದರು.