ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಮಾ. 15ರಿಂದ ಮಾ. 24ರವರೆಗೆ ನಡೆಯಲಿರುವ ರಥೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ದೇಗುಲದ ಕಚೇರಿಯಲ್ಲಿ ನಡೆಯಿತು.

ಮಾ. 22ರಂದು ಬೆಳಗ್ಗೆ 11.15ಕ್ಕೆ ರಥಾರೋಹಣ ನಡೆಯಲಿದೆ. ಸಂಜೆ 5.00ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ, ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ ಒದಗಿಸಲು ಸಿದ್ಧತೆ ನಡೆದಿದೆ. ಪರಿಸರ ಸ್ವಚ್ಛತೆ ಸಹಿತ ವಾಹನ ನಿಲುಗಡೆ ಸಂಚಾರ ವ್ಯವಸ್ಥೆ ಬಗ್ಗೆ ವಿವಿಧೆಡೆ ವ್ಯವಸ್ಥೆ ಮಾಡಲಾಗಿದೆ. ಸೌಪರ್ಣಿಕ ನದಿ ಮಾಲಿನ್ಯವಾಗದಂತೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಸಹಿತ ಒಳಚರಂಡಿ ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸುವಲ್ಲಿ ತಜ್ಞರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಸರಕಾರ ಸೌಪರ್ಣಿಕ ಸ್ನಾನ ಘಟಕ ಅಭಿವೃದ್ಧಿ ಒಳಚರಂಡಿ, ಹೀಗೆ ಇತರ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಅನುಮತಿ ನೀಡಿದೆ, ಎಂದರು.
ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ವಿವಿಧ ಯೋಜನೆ ಬಗ್ಗೆ ಮಾಹಿತಿ ನೀಡಿದರಲ್ಲದೇ ಕೊಲ್ಲೂರು ಜಾತ್ರೆಗೆ ಇಲಾಖೆಗಳ ಸಹಕಾರ ಕೋರಿದರು. ದೇಗುಲದ ಸಮಿತಿ ಸದಸ್ಯರಾದ ರಘುರಾಮ್ ದೇವಾಡಿಗ, ಸುರೇಂದ್ರ ಶೆಟ್ಟಿ ಮಹಾಲಿಂಗ ನಾಯ್ಕ, ಸುಧಾ ಕೆ. ಧನಾಕ್ಷೀ, ದೇಗುಲದ ಸಂತೋಷ್ ಉಪಸ್ಥಿತರಿದ್ದರು.