Friday, December 27, 2024
Banner
Banner
Banner
Home » “ನೆರವು ಪಡೆದ ಕೈಗಳು ಮುಂದೊಂದು ದಿನ ಸಮಾಜಕ್ಕೆ ತಮ್ಮಿಂದಾದ ನೆರವನ್ನು ನೀಡಬೇಕು” – ಡಾ. ಕೆ. ಪ್ರಕಾಶ್ ಶೆಟ್ಟಿ; ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು”

“ನೆರವು ಪಡೆದ ಕೈಗಳು ಮುಂದೊಂದು ದಿನ ಸಮಾಜಕ್ಕೆ ತಮ್ಮಿಂದಾದ ನೆರವನ್ನು ನೀಡಬೇಕು” – ಡಾ. ಕೆ. ಪ್ರಕಾಶ್ ಶೆಟ್ಟಿ; ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು”

by NewsDesk

ಮಂಗಳೂರು : 2019ರಿಂದ ಆಯೋಜಿಸಿಕೊಂಡು ಬಂದಿರುವ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಸಹಾಯಹಸ್ತ ಪ್ರದಾನ ಕಾರ್ಯಕ್ರಮ ಬುಧವಾರ ಸಂಜೆ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಎಂ.ಆರ್.ಜಿ. ಗ್ರೂಪ್ ಚೇರ್ಮನ್ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು, “ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಸಮಾಜಕ್ಕೆ ನನ್ನಿಂದ ಕಿಂಚಿತ್ತು ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂದಿನಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇಂದು ನನ್ನ ಬಾಳಿನಲ್ಲಿ ಅತ್ಯಂತ ಖುಷಿಯ ದಿನ. ನನ್ನ ಈ ಕಾರ್ಯಕ್ಕೆ ನನ್ನ ಪತ್ನಿ ಮಗ ಸೊಸೆ ಸಹಿತ ಕುಟುಂಬದ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಮೊದಲ ವರ್ಷದಲ್ಲಿ 1 ಕೋಟಿ 25 ಲಕ್ಷ ರೂ. ನೆರವು ನೀಡಿದ್ದು ಅದು ಇಂದು 6 ಕೋಟಿ ರೂ. ಗಡಿಯನ್ನು ದಾಟಿದೆ. ಇಂದು ಇಲ್ಲಿ ಸಮಾರಂಭ ನಡೆಸಿ ನೆರವು ನೀಡುವ ಉದ್ದೇಶ ಇಷ್ಟೇ. ಇಂತಹ ಕಾರ್ಯಕ್ರಮ ಇಂದು ಸಹಾಯ ಪಡೆದ ಕೈಗಳಿಗೆ ಸ್ಫೂರ್ತಿಯಾಗಬೇಕು. ಮುಂದೊಂದು ದಿನ ಅವರು ಕೂಡಾ ಸಮಾಜದಲ್ಲಿ ಒಂದಷ್ಟು ಮಂದಿಗೆ ನೆರವು ನೀಡಲು ಮುಂದೆ ಬರಬೇಕು. ಕಷ್ಟ ಎಲ್ಲರಿಗೂ ಬರುತ್ತದೆ, ಆದರೆ ಧೃತಿಗೆಡದೆ ಅದನ್ನು ಎದುರಿಸುವ ಛಲ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿಮ್ಮ ತಂದೆ ತಾಯಿ ಗೌರವ ಪಡುವಂತೆ ಸಾಧನೆ ಮಾಡಿ ದೇಶದಲ್ಲಿ ಗುರುತಿಸುವಂತಾಗಬೇಕು“ ಎಂದರು.

ಬಳಿಕ ಮಾತಾಡಿದ ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ನಿನ ಅಧ್ಯಕ್ಷೆ ಹಾಗೂ ಸಹ-ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತಕುಮಾರ್ ಅವರು, “ಶಿಕ್ಷಣದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳು, ವಿಶೇಷ ಚೇತನ ಮಕ್ಕಳು, ಸಾಮಾಜಿಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಪ್ರಕಾಶ್ ಶೆಟ್ಟಿಯವರ ನೆರವು ಕಾರ್ಯಕ್ರಮ ಶ್ಲಾಘನೀಯವಾದುದು. ನಾವೇ ಹುಡುಕಿಕೊಂಡು ಹೋಗಿ ಅರ್ಹರಿಗೆ ನೆರವು ನೀಡುವ ಮಾದರಿ ಕಾರ್ಯಕ್ರಮ ಇದಾಗಿದೆ. ಇಲ್ಲಿ ಆರ್ಥಿಕ ಸಹಾಯ ಪಡೆದಿರುವ ಮಕ್ಕಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ“ ಎಂದರು.

ಪ್ರಾಸ್ತಾವಿಕ ಮಾತನ್ನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, “ಬೆಂಗಳೂರು ಹುಬ್ಬಳ್ಳಿ ಗುಲ್ಬರ್ಗದಲ್ಲಿ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅದಮ್ಯ ಫೌಂಡೇಶನ್‌ನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಅವರು ಮಾಡುತ್ತ ಬಂದಿದ್ದಾರೆ. ಎಲ್ಲೂ ತಮ್ಮ ಸಹಾಯವನ್ನು ಹೊರಗಡೆ ತೋರಿಸದೆ ಎಲ್ಲರೊಳಗೆ ಒಂದಾಗಿ ಬದುಕುತ್ತಿರುವ ಅವರು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಅದೇ ರೀತಿ ಪ್ರಕಾಶ್ ಶೆಟ್ಟಿಯವರ ಪ್ರತೀ ಕಾರ್ಯದ ಹಿಂದೆ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ಅವರ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಇದೆ. ಅವರ ಪುತ್ರ ಗೌರವ್ ಅವರು ತಂದೆ ತಾಯಿಯ ಪ್ರೀತಿಯ ಪುತ್ರನಾಗಿ ಸರಳ ಸಜ್ಜನಿಕೆಯಿಂದ ಗುರುತಿಸಲ್ಪಡುತ್ತಿದ್ದಾರೆ. ಇಂತಹ ಪುಣ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಪ್ರಕಾಶ್ ಶೆಟ್ಟಿಯವರ ಕುಟುಂಬಕ್ಕೆ ನಿಮ್ಮೆಲ್ಲರ ಹಾರೈಕೆಯಿರಲಿ“ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, “ಪ್ರಕಾಶ್ ಶೆಟ್ಟಿ ಅವರಂತಹ ಪುಣ್ಯಾತ್ಮನ ಜೊತೆಯಲ್ಲಿ ಇರುವುದೇ ನಮ್ಮ ಭಾಗ್ಯ. ಹುಟ್ಟುವಾಗ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಕಾರ್ಯ ಸಾಧನೆಯಿಂದ ಹಂತಹಂತವಾಗಿ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡು ಬಂದಿರುವ ಪ್ರಕಾಶ್ ಶೆಟ್ಟಿ ಅವರ ವ್ಯಕ್ತಿತ್ವ ನಮಗೆಲ್ಲ ಮಾದರಿ. ಅವರ ದಾನ ಧರ್ಮದ ಸಮಾಜಮುಖಿ ಕಾರ್ಯ ಇದೇ ರೀತಿ ಮುಂದುವರಿಯಲಿ” ಎಂದರು.

ಬಳಿಕ ವೇದಿಕೆಯಲ್ಲಿ ಶಿಕ್ಷಣ, ಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆ, ವಿಶೇಷ ಚೇತನ ಮಕ್ಕಳು ಹಾಗೂ ಸಾಮಾಜಿಕ ಸಂಘಟನೆಗಳಿಗೆ ಸಾಂಕೇತಿಕವಾಗಿ “ನೆರವು” ಸಹಾಯಹಸ್ತವನ್ನು ವಿತರಿಸಲಾಯಿತು.

ಅನುಷ್ಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಒಟ್ಟು 3,000 ಕುಟುಂಬಗಳಿಗೆ 6 ಕೋಟಿ ರೂಪಾಯಿಗೂ ಮಿಕ್ಕಿ ನೆರವು ವಿತರಣೆ :

ಈ ವರ್ಷ ಒಟ್ಟು 3,000 ಕುಟುಂಬಗಳಿಗೆ 6 ಕೋಟಿ ರೂಪಾಯಿಗೂ ಮಿಕ್ಕಿ ನೆರವನ್ನು ವಿತರಿಸಲಾಗಿದ್ದು ಇದರಿಂದ ಸುಮಾರು ಹದಿನೈದು ಸಾವಿರ ಮಂದಿಗೆ ಪ್ರಯೋಜನವಾಗಲಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಒಂದು ನಿಗದಿತ ಮಾನದಂಡವನ್ನು ಅನುಸರಿಸಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ, ಅವಶ್ಯ ಹಿಮ್ಮಾಹಿತಿಗಳನ್ನು ಪಡೆದು ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಸಮಾಜದಲ್ಲಿ ಪರಿವರ್ತನೆ ತರಬಲ್ಲಂತಹ, ಸಾಮೂಹಿಕ ಹಿತದ ಕಾರ್ಯಕ್ರಮಗಳನ್ನು ಕೈಗೊಂಡ ಸಂಘ ಸಂಸ್ಥೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಪ್ರತೀ ವರ್ಷದ ಶಿಷ್ಟಾಚಾರದಂತೆ ಫಲಾನುಭವಿಗಳನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸ್ವಯಂಸೇವಕರ ತಂಡಗಳಿವೆ. ನೆರವು ವಿತರಣೆ ನಡೆಯುವ ಸ್ಥಳದಲಿ 25 ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಈಗಾಗಲೇ ವಿತರಣೆ ಮಾಡಿರುವ ಟೋಕನ್‌ಗಳನ್ನು ತೋರಿಸಿ ಕೌಂಟರ್‌ಗಳಲ್ಲಿ ನೆರವಿನ ಚೆಕ್ ಪಡೆಯಬಹುದು. ಎಲ್ಲಿಯೂ ಅವ್ಯವಸ್ಥೆಗಳಿಗೆ ಆಸ್ಪದ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ. ಮಾನಸಿಕ ವಿಕಲತೆ, ಹುಟ್ಟಿನಿಂದ ಬರುವ ದೀರ್ಘಕಾಲೀನ ಚಿಕಿತ್ಸೆ ಅವಶ್ಯವಿರುವ ಖಾಯಿಲೆ ಪೀಡಿತರಿಗೆ, ಅಂಗವೈಕಲ್ಯ, ಕ್ಯಾನ್ಸರ್ ಮುಂತಾದ ಖಾಯಿಲೆಗಳಿಂದ ಬಾಧಿತರಾಗಿರುವವರಿಗೆ ಚಿಕಿತ್ಸೆಗಾಗಿ ಆದ್ಯತೆಯ ಮೇಲೆ ನೆರವು ನೀಡುವುದನ್ನು ಪರಿಗಣಿಸಲಾಗಿದೆ. ಶಿಕ್ಷಣ ಮುಂದುವರಿಸಲು ಕಷ್ಟ ಪಡುತ್ತಿರುವವರಿಗೆ, ಕ್ರೀಡಾ ಕ್ಷೇತ್ರದ ಸಾಧಕರಿಗೆ, ಉತ್ತಮ ಶೈಕ್ಷಣಿಕ ಸಾಧನೆ ಮಾಡಿದವರಿಗೆ ಉತ್ತೇಜನ ನೀಡುವುದಕ್ಕಾಗಿ ಅವರನ್ನು “ನೆರವು” ನೀಡಲು ಆಯ್ಕೆ ಮಾಡಲಾಗಿದೆ.
ಮೊದಲ ವರ್ಷ ವಿತರಣೆ ಮಾಡಲಾದ ಮೊತ್ತ 1.25 ಕೋಟಿ ರೂಪಾಯಿ. ವರ್ಷದಿಂದ ಈ ಮೊತ್ತ ಏರುತ್ತಾ ಹೋಗಿದೆ.
ವರ್ಷದಿಂದ ವರ್ಷ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ, ಸಹಜವಾಗಿ ಮೊತ್ತವೂ ಹೆಚ್ಚಾಗಿದೆ. ಈ ಯೋಜನೆಯ ವ್ಯಾಪ್ತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಗಡಿನಾಡು ಕಾಸರಗೋಡು ಜಿಲ್ಲೆಗಳು. (ಕೆಲವು ವಿಶೇಷ ಪ್ರಕರಣಗಳಲ್ಲಿ ಮಾನವೀಯತೆಯ ಹಿನ್ನೆಲೆಯಲ್ಲಿ ಈ ಗಡಿಯನ್ನು ದಾಟಿಯೂ ನೆರವು ನೀಡಲಾಗಿದೆ)

ಪ್ರತೀ ವ್ಯಕ್ತಿಗೆ ಅವರವರ ಅವಶ್ಯಕತೆಯನ್ನು ಪರಿಗಣಿಸಿ ಕನಿಷ್ಠ 10,000 ರೂ.ಗಳಿಂದ ಗರಿಷ್ಠ 1,00,000 ರೂ.ಗಳವರೆಗೆ ನೀಡಲಾಗಿದೆ, ಆರೋಗ್ಯ ರಕ್ಷಣೆ, ಚಿಕಿತ್ಸೆಗೆ ಮೊದಲಾದ್ಯತೆ ನೀಡಲಾಗಿದೆ.

ಸಂಘ ಸಂಸ್ಥೆಗಳಾದರೆ ಕನಿಷ್ಠ 1,00,000 ರೂ.ಗಳಿಂದ ಗರಿಷ್ಠ 10,00,000 ರೂ.ಗಳವರೆಗೆ ನೆರವು ನೀಡಲಾಗಿದೆ.
ವೈದ್ಯಕೀಯ ಪ್ರಕರಣಗಳಲ್ಲಿ ಅವಶ್ಯ ದಾಖಲೆಗಳನ್ನು ಪಡೆದು, ಪರಿಶೀಲಿಸಿ, ಹಿಮ್ಮಾಹಿತಿ ಪಡೆದು ನೆರವು ನೀಡಲಾಗಿದೆ.
ಬಹುತೇಕ ಅರ್ಜಿಗಳು ವೈದ್ಯಕೀಯ ನೆರವನ್ನು ಕೋರಿದವುಗಳಾಗಿವೆ.

ಸಂಘ ಸಂಸ್ಥೆಗಳ ಸಂದರ್ಭದಲ್ಲಿ ಅವುಗಳ ಚಟುವಟಿಕೆ ಸ್ವಚ್ಚತೆ ಕಾಪಾಡುವಿಕೆ, ಮಹಿಳಾ ಸಶಕ್ತೀಕರಣ, ಯುವಜನರ ಸಬಲೀಕರಣ, ಕೌಶಲ್ಯೀಕರಣ ಸಹಿತ ಸಾಮಾಜಿಕ ಪರಿವರ್ತನೆಗೆ ಅವುಗಳ ಕೊಡುಗೆಯನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb