ಉಡುಪಿ : ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ಉಡುಪಿಯ ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿವೆ. ಇಂದ್ರಾಣಿ ನದಿ ಹರಿಯುವ ಪಾತ್ರದಲ್ಲಿ ಗುಂಡಿಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದೆ.
ಕರಂಬಳ್ಳಿ ವೆಂಕಟರಮಣ ಲೇಔಟ್‌ನ ಹಲವು ಮನೆಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಭಾರಿ ಮಳೆಯಿಂದ ನಗರದಲ್ಲಿನ ಮಳೆನೀರು ತೋಡು ತುಂಬಿ ಹರಿಯುತ್ತಿದ್ದು ಇದರಿಂದ ಈ ಪರಿಸರದ ಹತ್ತಾರು ಮನೆಗಳು ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಹಲವೆಡೆ ಮಕ್ಕಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕೂಡ ಜಲಾವೃತಗೊಂಡಿರುವುದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.

