ಉಡುಪಿ : ಒಂದು ವಾರದ ಮಳೆ ಉಡುಪಿಯಲ್ಲಿ ಭಾರೀ ಹಾನಿಯನ್ನುಂಟು ಮಾಡಿದೆ. ಮುಖ್ಯವಾಗಿ ಎರಡು ದಿನಗಳ ಗಾಳಿಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಂದು ಬಂದ ಭಾರೀ ಗಾಳಿ ಮಳೆಗೆ ಉಡುಪಿ ತಾಲೂಕಿನ ಕರ್ಜೆ ಗ್ರಾಮದ ಕುರ್ಪಾಡಿ ಭಾಗದಲ್ಲಿ ಸುಮಾರು 36 ಮನೆಗಳಿಗೆ ತೀವ್ರ ಹಾನಿಯಾಗಿದೆ. ಹಲವಾರು ಮರ, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು ಸಮಸ್ಯೆಯಾಗಿದೆ. ಕಡೇಕಾರ್ ಗ್ರಾಮದಲ್ಲೂ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಈಗಾಗಲೇ ಕಂದಾಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದು, ಜನರ ನರವಿಗೆ ಧಾವಿಸಿದ್ದಾರೆ. ಬೈಂದೂರಿನಲ್ಲಿ ಹೊಟೇಲೊಂದರ ಮೇಲ್ಛಾವಣಿ ಗಾಳಿಗೆ ಹಾರಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಕಾಪು ತಾಲೂಕು ಮತ್ತು ಕುಂದಾಪುರ ತಾಲೂಕಿನಲ್ಲೂ ಗಾಳಿಮಳೆಗೆ ಮನೆಗಳು ಮತ್ತು ಕೊಟ್ಟಿಗೆಗಳು ಹಾನಿಗೊಂಡಿದ್ದು ಸ್ಥಳೀಯ ಪಂಚಾಯತ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.