ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಕಳೆದ ಐದು ದಿನಗಳಿಂದ ಭಾರೀ ವರ್ಷಾಧಾರೆಯಾಗುತ್ತಿದ್ದು, ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.

ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿ ಎದುರಾಗಿದೆ. ಪಾಪನಾಶಿನಿ ನದಿಗೆ ಹೊಂದಿಕೊಂಡಿರುವ ಉದ್ಯಾವರ, ಮಟ್ಟು ಪ್ರದೇಶದಲ್ಲಿ ನೆರೆ ಬಂದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಉದ್ಯಾವರದ ಮಠದ ಕುದ್ರು ,ಕೆಮ್ತೂರು ಮತ್ತಿತರೆಡೆಗಳಲ್ಲಿ ನದಿ ಅಪಾಯದ ಮಟ್ಟ ತಲುಪಿದೆ.
ಇಂದು ಮುಂಜಾನೆ ಅಗ್ನಿಶಾಮಕ ಸಿಬ್ಬಂದಿ ಈ ಭಾಗದ ಜನರ ನೆರವಿಗೆ ಧಾವಿಸಿದ್ದಾರೆ. ತಗ್ಗುಪ್ರದೇಶದಲ್ಲಿ ಸಿಲುಕಿಕೊಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ಈ ಭಾಗದಲ್ಲಿ ಹಲವು ಮನೆಗಳಿದ್ದು ಅಗತ್ಯ ಬಿದ್ದರೆ ಇನ್ನಷ್ಟು ಜನರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಾಲೆ ಮತ್ತು ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದ್ದು ಮಳೆ ಬಿಟ್ಟೂ ಬಿಟ್ಟೂ ಬರುತ್ತಿದೆ. ನದಿ ಪಾತ್ರದ ಜನರು ಮುಂಜಾಗರೂಕತೆ ವಹಿಸುವಂತೆ ಸಂದೇಶ ನೀಡಲಾಗಿದೆ.
 
			        


 
			         
                         
                        


 
                        
 
                        
 
                        

 
                        
 
                         
                         
                        
 
                        
