ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಭೇಟಿ ನೀಡಿ ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಶ್ರೀಪಾದರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಮಲ್ಪೆ : ಉಡುಪಿಯ ಇತಿಹಾಸ ಪ್ರಸಿದ್ದ ಮಲ್ಪೆ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನಕ್ಕೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ ವಿಜಯೆಂದ್ರ ಭೇಟಿ ನೀಡಿ ದೇವರ ದರ್ಶನ ಪಡೆದು, ದೇವಾಲಯದ ಸಮಗ್ರ ಜೀರ್ಣೋದ್ಧಾರವನ್ನು ನೋಡಿ ಪ್ರಶಂಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಹರೀಶ್ ಪೂಂಜ ಹಾಗೂ ಮಂಗಳೂರು ಎಂ.ಪಿ. ಕ್ಯಾ. ಬ್ರಿಜೇಶ್ ಚೌಟ ಹಾಗೂ ದೇವಾಲಯದ ಟಿ. ಶ್ರೀನಿವಾಸ ಭಟ್, ಶ್ರೀಶ ಆಚಾರ್ಯ ಕಡೇಕಾರ್, ನಾಗರಾಜ ಮೂಲಿಗಾರ್, ಶಶಿಧರ್ ಅಮೀನ್, ಶರತ್ ಬೈಲಕೆರೆ, ಈಶ್ವರ್ ಜಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮಲ್ಪೆ : ಕಳೆದ ನಾಲ್ಕೈದು ವರ್ಷಗಳಿಂದ ಹೋಂಸ್ಟೇ ರೆಸಾರ್ಟ್ಗಳಿಂದ, ಅದರಿಂದ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಂದ, ಊರಿನ ಪರಂಪರೆಗೆ, ಭಜನಾ ಮಂದಿರಗಳ ಪಾವಿತ್ರ್ಯತೆಗೆ ಸತತ ಧಕ್ಕೆಯಾಗುತ್ತಿರುವುದನ್ನು ಕಂಡು ಕಳೆದ ನಾಲ್ಕೈದು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟೂ ಸುಸ್ತಾದ ಊರಿನ ನಾಗರಿಕರು ಮುಂದಿನ ಪ್ರಬಲ ಹೋರಾಟಕ್ಕೆ ಪೂರ್ವಭಾವಿಯಾಗಿ ಸರ್ವಸಂಸ್ಥೆಯ ನೇತೃತ್ವದಲ್ಲಿ ಬೃಹತ್ ಸಭೆಯನ್ನು ಆಯೋಜಿಸಿದ್ದರು.
ಸಭೆಯಲ್ಲಿ ಮಲ್ಪೆ ಪಡುಕರೆಯಿಂದ ಕಾಪು ತನಕದ ಎಲ್ಲಾ ಭಜನಾ ಮಂದಿರಗಳ ಸಹಿತವಾಗಿ ಒಟ್ಟು 35 ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾತೃಮಂಡಳಿಗಳ ಸದಸ್ಯರು ಹಾಗೂ ಊರ ನಾಗರಿಕರು ಸೇರಿದ್ದರು. ಎಲ್ಲಾ ಭಜನಾಮಂದಿರಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
“ಅನಾದಿ ಕಾಲದಿಂದ ಮೀನುಗಾರಿಕೆಯನ್ನೇ ನಂಬಿ ಭಜನಾಮಂದಿರಗಳ ನೆಲೆಯಲ್ಲಿ ಬದುಕು ಕಟ್ಟಿಕೊಂಡಿರುವ ಅಪೂರ್ವ ಸಂಸ್ಕೃತಿಯ ಊರು ನಮ್ಮದು. ಇತ್ತೀಚಿನ ಕೆಲವರ್ಷಗಳಿಂದ ಹೋಂಸ್ಟೇ ರೆಸಾರ್ಟ್’ಗಳಿಗೆ ಬರುವ ಪ್ರವಾಸಿಗರಿಂದಾಗಿ ನಮ್ಮ ಪರಂಪರೆಗೆ ಅಪಾರವಾದ ಹಾನಿಯಾಗಿದೆ. ಇನ್ನೂ ನಾವು ಸುಮ್ಮನೆ ಕುಳಿತರೆ ಕೇರಳದ ವಯನಾಡಿನಂತೆ ಊರು ಸರ್ವನಾಶವಾಗುವುದು ಖಂಡಿತ. ಕೊನೆಯ ಎಚ್ಚರಿಕೆಯ ಪ್ರತೀಕವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಎಲ್ಲಾ ಮಂದಿರಗಳೂ ಸೇರಿ ಮನವಿಯನ್ನು ನೀಡೋಣ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗದೇ ಹೋದರೆ ನಾವು ಬೃಹತ್ ಪ್ರತಿಭಟನೆಗೆ ಸಿದ್ಧರಾಗೋಣ. ಸಾವಿರಾರು ಕೋಟಿ ರೂಪಾಯಿಗಳ ಮರಿನಾದಂತಹ ಬೃಹತ್ ಯೋಜನೆಯನ್ನೇ ಓಡಿಸಿದವರಿಗೆ ಇದು ಅಸಾಧ್ಯದ ಸಂಗತಿಯಲ್ಲ” ಎಂದು ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ಮಂಡನೆಯಾಯಿತು.
ಮಲ್ಪೆ : ಕಾರ್ತಿಕ್ ಬಿಲ್ಡಿಂಗ್ ಬಳಿ, ಅನಾಥ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಮಂಗಳವಾರ ನಡೆದಿದೆ.
ಕಾರ್ಯಚರಣೆಗೆ ತಾಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಸಿಬ್ಬಂದಿಗಳು ನೆರವಿಗೆ ಬಂದಿದ್ದರು.
ರಕ್ಷಿಸಲ್ಪಟ್ಟ ವೃದ್ಧರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ದೇಹ ನಿತ್ರಾಣದಿಂದ ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣದಿಂದ ಹೆಸರು ವಿಳಾಸ ತಿಳಿದುಬಂದಿಲ್ಲ. ವೃದ್ಧರನ್ನು ಯಾರೋ ಕರೆದು ತಂದು ಬಿಟ್ಟು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಉಡುಪಿ : ಅ.21ರಂದು ನಡೆಯಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ಅಧ್ಯಕ್ಷತೆಯಲ್ಲಿ ಅ.15ರಂದು ಉಡುಪಿ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ‘ಜನಪ್ರತಿನಿಧಿಗಳ ಸಮಾವೇಶ’ವನ್ನು ಉದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ ಮಾರ್ಗದರ್ಶನ ನೀಡಿದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲೆಯ ಶಾಸಕರುಗಳಾದ ಯಶ್ಪಾಲ್ ಎ. ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ : ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಹೆಚ್ಚಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚಿಸಿರುತ್ತಾರೆ.
ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರುಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತನ್ನು ನಿಭಾಯಿಸಬೇಕು. ಪ್ರವಾಸಿಗರು, ಸಾರ್ವಜನಿಕರು, ಮೀನುಗಾರರು ನದಿ, ಜಲಪಾತ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು.
ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ವಿದ್ಯುತ್ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು.
ದುರ್ಬಲವಾದ, ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ ಹಾಗೂ ಮರಗಳ ಕೆಳಗೆ ನಿಲ್ಲಬಾರದು.
ಈ ಮೇಲ್ಕಂಡ ಅಂಶಗಳನ್ನು ಮಳೆಗಾಲದ ಎಲ್ಲಾ ಸಂದರ್ಭಗಳಲ್ಲಿ ಚಾಚು ತಪ್ಪದೇ ಕಡ್ಡಾಯವಾಗಿ ಪಾಲಿಸಬೇಕು.
ತುರ್ತುಸೇವೆಗೆ ಶುಲ್ಕರಹಿತ : 1077 ಹಾಗೂ ದೂ.ಸಂಖ್ಯೆ : 0820-2574802 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ : ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಚುನಾವಣೆ ಘೋಷಣೆಯಾಗಿದೆ. ಚನ್ನಪಟ್ಟಣ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ನಾಳೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸಂಡೂರು ಮತ್ತು ಶಿಗ್ಗಾವಿ ಬಗ್ಗೆ ಇವತ್ತು ರಾತ್ರಿ ಚರ್ಚೆ ಮಾಡುತ್ತೇವೆ. ಅಭ್ಯರ್ಥಿ ಯಾರು ಎಂಬ ಪಟ್ಟಿಯನ್ನು ಕಳುಹಿಸಿ ಕೊಡುತ್ತೇವೆ. ನಾಳೆ ಅಥವಾ ನಾಡಿದ್ದು ಅಂತಿಮ ತೀರ್ಮಾನ ಆಗುತ್ತೆ. ಮೂರೂ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿಯ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಎನ್ಡಿಎ ಗೆಲ್ಲಿಸಬೇಕು, ಇದು ನಮ್ಮ ಗುರಿ. ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಮಾಡಿದ್ದೇವೆ. ಅಭಿವೃದ್ಧಿ ಶೂನ್ಯ ಸರಕಾರದ ವಿರುದ್ಧ ಜನ ಆಕ್ರೋಶಿತರಾಗಿದ್ದಾರೆ. ಇದರ ಪರಿಣಾಮ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈಗಾಗಲೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಗಳ ರೇಸ್ನಲ್ಲಿ ಇರುವವರ ಪಟ್ಟಿ ದೊಡ್ಡದಿದೆ. ಸದ್ಯದಲ್ಲೇ ಯಾರ್ಯಾರು ಇದ್ದಾರೆ ಅನ್ನೋದು ಬಹಿರಂಗವಾಗಲಿದೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕಾದ ಸಂದರ್ಭ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು ಅನೇಕ ಹಿರಿಯರು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವುದನ್ನು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಉಡುಪಿ : ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾಗಿ ಸಂಘಟಕ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ನಿಯೋಜಿಸಿ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಉಡುಪಿ ಜಿಲ್ಲಾ ಸ್ಕೌಟ್ಸ್ ಆಯುಕ್ತರನ್ನಾಗಿ ಛಾಯಾಚಿತ್ರ ಪತ್ರಕರ್ತ ಹಾಗೂ ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಅವರನ್ನು ಜಯಕರ ಶೆಟ್ಟಿ ಇಂದ್ರಾಳಿ ನೇಮಿಸಿದ್ದಾರೆ.
ಉಡುಪಿ : ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿತರಾದ ಏಳು ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಏಳು ಮಂದಿ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಆರೋಪಿಗಳ ಬಳಿ ಇರುವ ನಕಲಿ ದಾಖಲೆಗಳನ್ನು ಎಲ್ಲಿ ಸೃಷ್ಟಿಸಲಾಗಿದೆ ಮತ್ತು ಇವರು ಯಾವ ಮಾರ್ಗದಿಂದ ಉಡುಪಿಗೆ ಆಗಮಿಸಿದ್ದಾರೆ ಹಾಗೂ ಇವರಂತೆ ಇನ್ನೂ ವಲಸಿಗರು ಇದ್ದಾರೆಯೇ ಎಂಬುವುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಜಿಲ್ಲೆಯ ಸರ್ವ ಸದಸ್ಯರು, 60% ಕನ್ನಡ ನಾಮಫಲಕ ಕಡ್ಡಾಯ ಕುರಿತಂತೆ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಉಡುಪಿ ಜಿಲ್ಲಾದ್ಯಂತ ಜಾಹಿರಾತು ಫಲಕಗಳು, ಶಿಕ್ಷಣ ಸಂಸ್ಥೆಗಳ ಫಲಕಗಳು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆಯ ಜಾಹಿರಾತು ಫಲಕಗಳು ಸೇರಿದಂತೆ ಎಲ್ಲಾ ಕಡೆ ಸರ್ಕಾರದ ನಿಯಮದ ನಾಮಫಲಕಗಳನ್ನು ಅಳವಡಿಸಿಕೊಳ್ಳದೇ ಮನಬಂದಂತೆ ಪರಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಷಯದದ ಬಗ್ಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024 ರನ್ವಯ ಉಡುಪಿ ಕರ್ನಾಟಕ ರಾಜ್ಯ ವ್ಯಾಪ್ತಿ ಪರವಾನಿಗೆ ಪಡೆದು ನಡೆಸುವ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು. ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಎಲ್ಲಾ ರೀತಿಯ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ನಾಮಫಲಕದಲ್ಲಿ ಶೇ. 60% ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಸುಗ್ರೀವಾಜ್ಞೆ ಹೊರಡಿಸಿದೆ. ಹತ್ತು ತಿಂಗಳು ಕಳೆದರೂ ಉಡುಪಿ ಜಿಲ್ಲೆಯಲ್ಲಿ ಸುಗ್ರಿವಾಜ್ಞೆ ಸಮರ್ಪಕವಾಗಿ ಜಾರಿಗೆ ಆಗುತ್ತಿಲ್ಲ. ಇದನ್ನು ಸಮರ್ಪಕ ರೀತಿಯಲ್ಲಿ ಜಾರಿಗೆ ತರಬೇಕೆಂದು ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಗೌರವಾಧ್ಯಕ್ಷರಾದ ಸುಂದರ ಎ.ಬಂಗೇರ, ಜಿಲ್ಲಾ ಮಹಿಳಾಧ್ಯಕ್ಷರಾದ ಗೀತಾ ಪಾಂಗಾಳ, ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್ ಮತ್ತಿತರರು ಉಪಸ್ಥಿತರಿದ್ದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.