ಉಡುಪಿ : ಶ್ರೀ ಕೃಷ್ಣಮಠಕ್ಕೆ ಖ್ಯಾತ ನಿರ್ದೇಶಕ ಶ್ರೀ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರು ಆಗಮಿಸಿ ದೇವರ ದರ್ಶನ ಪಡೆದು ತಾವು ಬರೆದ ಕೋಟಿಗೀತಾ ಪುಸ್ತಕವನ್ನು ಪರ್ಯಾಯ ಶ್ರೀ ಗಳಿಗೆ ಸಮರ್ಪಿಸಿ ಮಂತ್ರಾಕ್ಷತೆ ಪಡೆದುಕೊಂಡರು.

ಉಡುಪಿ : ಹೋಳಿಹುಣ್ಣಿಮೆಯ ದಿನವಾದ ನಿನ್ನೆ ಶ್ರೀಕೃಷ್ಣಮಠದಲ್ಲಿ ವಿಶೇಷ ಪೂಜೆ ಸಂಪನ್ನಗೊಂಡಿತು.
ಸಂಪ್ರದಾಯದಂತೆ ಶ್ರೀಕೃಷ್ಣಮಠದ ಚಂದ್ರಶಾಲೆಯಲ್ಲಿ ಪರ್ಯಾಯ ಶ್ರೀಪಾದದ್ವಯರ ಉಪಸ್ಥಿತಿಯಲ್ಲಿ ಪ್ರಾರ್ಥನೆ ನಡೆಯಿತು. ಬಳಿಕ ವಾದ್ಯ, ಬಿರುದಾವಲಿಗಳೊಂದಿಗೆ ಕಡಿಯಾಳಿಗೆ ಹೋಗಿ ಹಣ್ಣುಕಾಯಿ ನೈವೇದ್ಯ ಮಾಡಿಸಿ ಬಣ್ಣ ಸಮರ್ಪಣೆ ಮಾಡಲಾಯಿತು. ಬಳಿಕ ಪ್ರಸಾದವನ್ನು ಪರ್ಯಾಯ ಶ್ರೀಗಳಿಗೆ ಸಮರ್ಪಿಸಲಾಯಿತು.
ಈ ಸಂದರ್ಭ ಮಠದ ಭಾಗವತರು, ದಿವಾನರು, ಪುರೋಹಿತರು, ಪಾರ್ಪತ್ಯೆಗಾರರು ಉಪಸ್ಥಿತರಿದ್ದರು.
ಮಣಿಪಾಲ : ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಆರೋಪಿ ಇಸಾಕ್ ಕಾಲಿಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಸಾಕ್ನನ್ನು ಸರ್ಜರಿಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಸಾಕ್ ಜೊತೆ ಇದ್ದ ಇತರ ಆರೋಪಿಗಳಾದ ರಾಹಿದ್(25), ಸಾಮಿಲ್ (26), ನಿಜಾಮುದ್ದೀನ್(26) ಇವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿದೆ.
ಘಟನೆ ನಡೆದ ಸ್ಥಳದಲ್ಲಿ ಸ್ಥಳ ಮಹಜರು ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿರ್ವ : ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ನಿಂದ ಹಾರಿದ ಕಿಡಿಯಿಂದ ಕಾಡಿಕಂಬಳ ನಜರೆತ್ನಗರ-ಹಿಂದೂ ರುದ್ರಭೂಮಿ-ಶಿರ್ವ ಹಿಂದೂ ಪ.ಪೂ. ಕಾಲೇಜಿನ ಬಳಿಯ ಪ್ರದೇಶಕ್ಕೆ ಬೆಂಕಿ ತಗಲಿ ಮರಗಿಡಗಳು ಹೊತ್ತಿ ಉರಿದಿದ್ದು, ಅಪಾರ ಹಾನಿ ಸಂಭವಿಸಿದೆ.
ರಸ್ತೆ ಬದಿಯಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕಿಡಿ ಹಾರಿ ಬೆಂಕಿ ಹತ್ತಿಕೊಂಡು ಸುಮಾರು 2-3 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿತು. ಕಡಿದು ಹಾಕಿದ ಮರದ ಗೆಲ್ಲುಗಳು ಮತ್ತು ಒಣಗಿದ ತರಗೆಲೆಗಳು ಇದ್ದ ಪರಿಣಾಮ ಇಡೀ ಪ್ರದೇಶ ಹೊತ್ತಿ ಉರಿದಿದ್ದು, ಪಕ್ಕದಲ್ಲಿದ್ದ ಮನೆಗಳಿಗೆ ಬೆಂಕಿ ಹರಡದಂತೆ ಸ್ಥಳೀಯರು ಸೇರಿ ಪ್ರಯತ್ನಿಸಿದ್ದಾರೆ. ಉಡುಪಿ ಅಗ್ನಿಶಾಮಕ ದಳದ ತಂಡ ಆಗಮಿಸಿ ಬೆಂಕಿಯನ್ನು ನಂದಿಸಿದರು.
ಬಳಿಕ ಬೀಸಿದ ಗಾಳಿಗೆ ಮತ್ತೂಮ್ಮೆ ಬೆಂಕಿ ಹತ್ತಿಕೊಂಡು ಇಡೀ ಪರಿಸರಕ್ಕೆ ವ್ಯಾಪಿಸಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕೂಡಾ ಕೈಕೊಟ್ಟಿದ್ದು ಸ್ಥಳೀಯರು, ಶಿರ್ವದ ರಿಕ್ಷಾಚಾಲಕರು ಮತ್ತು ಹಾಸ್ಟೆಲ್ನ ವಿದ್ಯಾರ್ಥಿಗಳು ಸೇರಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಉಡುಪಿ ಅಗ್ನಿ ಶಾಮಕ ದಳದ ಅಧಿಕಾರಿ ಕೇಶವ ಅವರ ನೇತೃತ್ವದ ತಂಡ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ.
ಫೈರ್ಮ್ಯಾನ್ಗಳಾದ ರಾಘವೇಂದ್ರ, ಅಮರ್ ಕಟ್ಟಿ, ಅರುಣ್, ವಿನಾಯಕ ಕಲ್ಮನೆ, ಚಾಲಕ ಆಲ್ವಿನ್, ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಪ್ರಾಂಶುಪಾಲ ಡಾ| ಮಿಥುನ್ ಚಕ್ರವರ್ತಿ, ಸ್ಥಳೀಯರಾದ ಜಯಪಾಲ ಶೆಟ್ಟಿ, ಅಶೋಕ್, ಡಾ| ರವಿಶಂಕರ್, ಕಾಲೇಜಿನ ವಾಚ್ಮೆನ್ ಮತ್ತಿತರರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) 2025ನೇ ಸಾಲಿನ ಕ್ವಾಕ್ವರೆಲ್ಲಿ ಸೈಮಂಡ್ಸ್ (ಕ್ಯೂಎಸ್) ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕದಲ್ಲಿ ಉತ್ತಮ ಶ್ರೇಯಾಂಕಗಳನ್ನು ಗಳಿಸಿ ಮಹತ್ತರ ಸಾಧನೆ ಮಾಡಿದೆ. ಮಾಹೆ ಎಂಟು ಸೀಮಿತ ವಿಷಯಗಳಲ್ಲಿ ಮತ್ತು ಒಂದು ವಿಸ್ತಾರ ವಿಷಯದಲ್ಲಿ ಅತ್ಯುತ್ತಮ ಶ್ರೇಯಾಂಕ ಪಡೆದಿದೆ. ಜೀವ ವಿಜ್ಞಾನ ವಿಭಾಗದಲ್ಲಿ ಈ ವರ್ಷ 293ನೇ ಸ್ಥಾನ ಗಳಿಸಿದ್ದು ವಿಶೇಷವಾಗಿದೆ. ಕಳೆದ ವರ್ಷ ಈ ವಿಷಯಕ್ಕೆ 317ನೇ ಸ್ಥಾನ ದೊರಕಿದ್ದು, ಈ ಬಾರಿ 24 ಸ್ಥಾನ ಏರಿಕೆಯಾಗಿದೆ. ಮೆಡಿಸಿನ್ ವಿಭಾಗವು 251-300ನೇ ಸ್ಥಾನದಲ್ಲಿದೆ.
ಹೊಸ ಕ್ಯೂಎಸ್ ಶ್ರೇಯಾಂಕದಲ್ಲಿ ಮಾಹೆ, ಜೈವಿಕ ವಿಜ್ಞಾನ ಮತ್ತು ವೈದ್ಯಶಾಸ್ತ್ರ (ಲೈಫ್ ಸೈನ್ಸಸ್ ಮತ್ತು ಮೆಡಿಸಿನ್), ರಸಾಯನ ಶಾಸ್ತ್ರ (ಕೆಮಿಸ್ಟ್ರಿ), ಜೀವ ಶಾಸ್ತ್ರ (ಬಯಾಲಾಜಿಕಲ್ ಸೈನ್ಸಸ್), ಗಣಕ ವಿಜ್ಞಾನ ಮತ್ತು ಮಾಹಿತಿ ವ್ಯವಸ್ಥೆ (ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫರ್ಮೇಷನ್ ಸಿಸ್ಟಮ್ಸ್), ದಂತ ವೈದ್ಯಕೀಯ, ರಾಸಾಯನಿಕ (ಕೆಮಿಕಲ್) ಎಂಜಿನಿಯರಿಂಗ್, ವೈದ್ಯಕೀಯ (ಮೆಡಿಸಿನ್), ಔಷಧ ಹಾಗೂ ಔಷಧವಿಜ್ಞಾನ (ಫಾರ್ಮಸಿ ಆಂಡ್ ಫಾರ್ಮಕಾಲಜಿ), ಮತ್ತು ಅರ್ಥಶಾಸ್ತ್ರ ಮತ್ತು ಅರ್ಥಮಾಪನಶಾಸ್ತ್ರ (ಎಕಾನಾಮಿಕ್ಸ್ ಆಂಡ್ ಎಕನಾಮೆಟ್ರಿಕ್ಸ್) ನಂತಹ ಪ್ರಮುಖ ಸಬ್ಜೆಕ್ಟ್ ಗಳಲ್ಲಿ ಮನ್ನಣೆ ಗಳಿಸಿದೆ.
ಈ ಸಾಧನೆ ಕುರಿತು ಮಾತನಾಡಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ (ಮಾಹೆ) ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ವಿಎಸ್ಎಂ ಮಾತನಾಡಿ, “ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) 2025ರ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರಾಂಕಿಂಗ್ ನಲ್ಲಿ ಶ್ರೇಷ್ಠ ಸಾಧನೆ ತೋರಿರುವುದನ್ನು ನಾವು ಗರ್ವದಿಂದ ಸಂಭ್ರಮಿಸುತ್ತಿದ್ದೇವೆ. ಈ ವರ್ಷ ನಮ್ಮ ಸಂಸ್ಥೆಯು ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸಿದೆ. ಜೀವ ವಿಜ್ಞಾನ ಮತ್ತು ವೈದ್ಯಕೀಯ, ರಸಾಯನಶಾಸ್ತ್ರ, ಜೀವ ವಿಜ್ಞಾನ ಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫರ್ಮೇಷನ್ ಸಿಸ್ಟಮ್ಸ್, ದಂತ ವೈದ್ಯಕೀಯ, ರಾಸಾಯನಿಕ ಎಂಜಿನಿಯರಿಂಗ್, ವೈದ್ಯಕೀಯ ನಂತಹ ವಿಷಯಗಳಲ್ಲಿ ಉತ್ತಮ ಮನ್ನಣೆ ಗಳಿಸಿದೆ. ಈ ಸಾಧನೆ ನಮ್ಮ ನಿರಂತರ ಅಭಿವೃದ್ಧಿಯನ್ನು ತೋರಿಸುತ್ತದೆ. ಜಾಗತಿಕ ಶ್ರೇಯಾಂಕದಲ್ಲಿನ ನಮ್ಮ ಸ್ಥಿರ ಸ್ಥಾನವು ನಮ್ಮ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಬದ್ಧತೆಯನ್ನು ಪ್ರದರ್ಶಿಸುತ್ತದೆ. 2024ರ ಸಾಲಿನಲ್ಲಿ ಮೆಡಿಸಿನ್, ಫಾರ್ಮಸಿ ಆಂಡ್ ಫಾರ್ಮಕಾಲಜಿ, ಅನಾಟಮಿ ಆಂಡ್ ಫಿಸಿಯೋಲಜಿ ಮತ್ತು ದಂತ ವೈದ್ಯಕೀಯ ವಿಭಾಗಗಳಲ್ಲಿ ಮಾಹೆ ಮನ್ನಣೆ ಪಡೆದಿತ್ತು. ಈ ವರ್ಷ ಹೊಸ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ್ದು, ನಮ್ಮ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು ಈ ಸಾಧನೆಯು ತೋರಿಸಿದೆ. ಉತ್ತಮ ಶೈಕ್ಷಣಿಕ ವಾತಾವರಣ, ಸಂಶೋಧನೆ, ಮತ್ತು ಸಮಾಜ ಪರಿವರ್ತಿಸುವ ಶಿಕ್ಷಣದ ಮೂಲಕ ಕೊಡುಗೆ ನೀಡುವ ನಮ್ಮ ಬದ್ಧತೆಯನ್ನು ಈ ಮನ್ನಣೆಯು ಮತ್ತಷ್ಟು ಬಲಪಡಿಸಲಿದೆ. ಮಾಹೆ ಉನ್ನತ ಶಿಕ್ಷಣದಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಡಲು ಬದ್ಧವಾಗಿದೆ” ಎಂದು ಹೇಳಿದರು.
ಕಳೆದ ವರ್ಷದ ಶ್ರೇಯಾಂಕಕ್ಕೆ ಹೋಲಿಸಿದರೆ ಎರಡು ಸೂಕ್ಷ್ಮ ಸಬ್ಜೆಕ್ಟ್ ಗಳು ಈ ವರ್ಷ 400ರ ಒಳಗಿನ ಶ್ರೇಯಾಂಕ ಪಡೆದಿವೆ (ಕೆಮಿಕಲ್ ಎಂಜಿನಿಯರಿಂಗ್ ಮತ್ತು ಎಕಾನಾಮಿಕ್ಸ್ ಆಂಡ್ ಎಕನಾಮೆಟ್ರಿಕ್ಸ್).
ಪ್ರಮುಖ ವಿಶೇಷತೆಗಳು:
ಶೈಕ್ಷಣಿಕ ಶ್ರೇಷ್ಠತೆ ಮತ್ತು ಹೊಸತನದ ಗಟ್ಟಿ ಅಡಿಪಾಯ ಹೊಂದಿರುವ ಮಾಹೆ ಶಿಕ್ಷಣದ ಭವಿಷ್ಯದ ಹಾದಿಯನ್ನು ರೂಪಿಸುತ್ತಿದೆ. 2025ರ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ಸಬ್ಜೆಕ್ಟ್ ರಾಂಕಿಂಗ್ ನಲ್ಲಿನ ಈ ಹೊಸ ಸಾಧನೆಯು, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಶ್ರೇಷ್ಠತಾ ಕೇಂದ್ರವಾಗುವ ಮಾಹೆಯ ಗುರಿಸಾಧನೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ.
ಉಡುಪಿ : ದೇಶದ ರಾಜಧಾನಿ ದೆಹಲಿಗೆ ಹಗಲು ವೇಳೆಯಲ್ಲಿ ಸಂಚರಿಸುವ ಪ್ರಯಾಣಿಕರಿಗಾಗಿ ಮತ್ತು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದೆಹಲಿಗೆ ತೆರಳುವ ಎರಡು ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆ ಬೇಕು ಎನ್ನುವುದು ಸಾರ್ವಜನಿಕರ ಮತ್ತು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹಲವು ವರ್ಷಗಳ ಬೇಡಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಸಂಸದ ಕೋಟ, ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲು ಇಲಾಖಾ ರಾಜ್ಯ ಸಚಿವರಾದ ವಿ. ಸೋಮಣ್ಣನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಸಂಸದರ ಮನವಿಯನ್ನು ಪರಿಗಣಿಸಿದ ಸಚಿವರು, ಎರ್ನಾಕುಲಂ ನಿಜಾಮುದ್ದೀನ್ ಎಕ್ಸ್ ಪ್ರೆಸ್ ಹಾಗೂ ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲುಗಳನ್ನು ಕುಂದಾಪುರದಲ್ಲಿ ನಿಲುಗಡೆಗೆ ಒಪ್ಪಿಗೆ ಸೂಚಿಸಿ ಆದೇಶ ನೀಡಿದ್ದಾರೆ.
ಇದಕ್ಕಾಗಿ ಸಾರ್ವಜನಿಕರ ಪರವಾಗಿ ಕೇಂದ್ರ ಸರಕಾರಕ್ಕೆ, ಸಚಿವರುಗಳಿಗೆ ಮತ್ತು ಭಾರತೀಯ ರೈಲ್ವೆಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಉಡುಪಿ : ತಂದೆ, ತಾಯಿಗಳ ಮಧ್ಯೆ ವಿರಸ ಉಂಟಾದಾಗ ಮಕ್ಕಳಲ್ಲಿ ಅಸುರಕ್ಷಿತ ಭಾವನೆ ಉಂಟಾಗುತ್ತದೆ. ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂತಹ ಸನ್ನಿವೇಶದಲ್ಲಿ ಹಿರಿಯರು ಜಾಗರೂಕತೆ ವಹಿಸಬೇಕು ಎಂದು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ್ ಎಸ್. ಗಂಗಣ್ಣನವರ್ ಅಭಿಪ್ರಾಯಪಟ್ಟರು.
ಅವರು ಬನ್ನಂಜೆಯ ಎಸ್ಪಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಠಾಣೆಯ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿ (ಪಿಎಸ್ಐ) & ಸಹಾಯಕ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನೀಚ ಮತ್ತು ಕೆಟ್ಟ ಕೆಲಸ ಮಾಡಿದವರ ವಿರುದ್ದ ತನಿಖೆಯನ್ನು ನಡೆಸಿದ ಪೋಲಿಸರಿಗೆ ಮಾತ್ರ ವಾಸ್ತವಾಂಶ ತಿಳಿದಿರುತ್ತದೆ. ಆದರೆ ನ್ಯಾಯಾಲಯವು ಸೂಕ್ತ ಸಾಕ್ಷ್ಯಗಳನ್ನು ಕೇಳುತ್ತವೆ. ಇಂತಹ ಸಂದರ್ಭದಲ್ಲಿ ಮನಸ್ಸು ಮತ್ತು ವಿವೇಕದಿಂದ ಕೆಲಸಗಳನ್ನು ಮಾಡಿದಾಗ ಯಶಸ್ಸು ಲಭ್ಯ ಎಂದರು.
ಮಕ್ಕಳ ರಕ್ಷಣೆಗೆ ಇರುವ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಅಂತರಾತ್ಮ ಹಾಗು ಅಂತರ್ಚಕ್ಷುವಿನಿಂದ ಕರ್ತವ್ಯ ನಿರ್ವಹಿಸಬೇಕು. ಇದರ ಮೂಲಕ ತಮ್ಮ ಸಾಧನೆಯ ಬೆಳಕನ್ನು ಚೆಲ್ಲಬೇಕು ಎಂದು ನುಡಿದರು.
ಜಿಲ್ಲಾ ಎಸ್ಪಿ ಡಾ.ಅರುಣ್ ಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗು ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಮನುಪಟೇಲ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನಾ ನಾಯಕ್, ಹೆಚ್ಚುವರಿ ಎಸ್ಪಿಗಳಾದ ಎಸ್.ಟಿ ಸಿದ್ದಲಿಂಗಪ್ಪ, ಪಿ.ಎ ಹೆಗಡೆ, ಹಿರಿಯ ಮಕ್ಕಳ ಪೋಲಿಸ್ ಕಲ್ಯಾಣಾಧಿಕಾರಿ ಪ್ರಭು ಡಿಟಿ ಉಪಸ್ಥಿತರಿದ್ದರು.
ಉಡುಪಿ : ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾಕಷ್ಟು ಜನಾಕ್ರೋಶಕ್ಕೂ ಕಾರಣವಾಗಿರುವ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಮಾರ್ಚ್ 31ರೊಳಗೆ ಪೂರ್ಣ ಗೊಳಿಸುವ ವಿಶ್ವಾಸವನ್ನು ರೈಲ್ವೆ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಇರುವ ಇಂದ್ರಾಳಿಯ ರೈಲ್ವೇ ಮೇಲ್ಲೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರೊಂದಿಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಈ ವಿಷಯ ತಿಳಿಸಿದರು.
ರೈಲ್ವೆಯ ಕಾರ್ಯನಿರ್ವಾಹಕ ಇಂಜಿಯರ್ ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕಾಮಗಾರಿಯ ಪ್ರಗತಿಯ ಕುರಿತು ಚರ್ಚಿಸಿದ್ದು, ಯೋಜಿತ ರೀತಿಯಲ್ಲಿ ಎಲ್ಲಾ ಕಾಮಗಾರಿಯನ್ನು ವಿಳಂಬಕ್ಕೆ ಆಸ್ಪದ ನೀಡದೇ ನಡೆದರೆ ಮಾರ್ಚ್ 31ರೊಳಗೆ ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಗರ್ಡರ್ಗಳ ಜೋಡಣೆ ಹಾಗೂ ವೆಲ್ಡಿಂಗ್ ಕಾಮಗಾರಿ ಮುಗಿದಿದೆ. ರೈಲ್ವೆಯಿಂದ ಬಂದಿರುವ ಇಂಜಿನಿಯರ್ಗಳು ಪ್ರತಿ ಜಾಯಿಂಟ್ನ್ನು ಪರಿಶೀಲಿಸುತ್ತಿದ್ದಾರೆ. ಇದು ಇನ್ನು ಮೂರು ದಿನಗಳಲ್ಲಿ ಮುಗಿಯಬಹುದು. ಆ ಬಳಿಕ ಅವರು ಕಾಮಗಾರಿಯ ಬಗ್ಗೆ ವಿಸ್ತ್ರತವಾದ ವರದಿಯನ್ನು ರೈಲ್ವೆಯ ಹಿರಿಯ ಅಧಿಕಾರಿಗಳಿಗೆ ನೀಡಲಿದ್ದಾರೆ. ಅವರು ಬಂದು ಪರಿಶೀಲಿಸಿ ಓಕೆ ಮಾಡಿದ ನಂತರ ಕಬ್ಬಿಣದ ಸೇತುವೆಯನ್ನು ಕೂರಿಸುವ ಕಾಮಗಾರಿ ನಡೆಯಲಿದೆ ಎಂದರು.
ಉಡುಪಿ : ಬ್ರಹ್ಮಗಿರಿ ಲಯನ್ಸ್ ಭವನದ ಬಳಿ ರಾತ್ರಿ 10 ಗಂಟೆಯ ಅನಂತರವೂ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿದ್ದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರ ನೆಮ್ಮದಿಗೆ ಭಂಗವಾಗುತ್ತಿರುವ ಬಗ್ಗೆ ಬಂದ ಮಾಹಿತಿಯನುಸಾರ ರಾತ್ರಿ 10.40ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಬೆಳಕಿನ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ನಡೆಯುತ್ತಿತ್ತು. ವಿಚಾರಿಸಿದಾಗ ಮಂಜುನಾಥ ಎಂಬವರ ಮೆಹಂದಿ ಕಾರ್ಯಕ್ರಮ ಎನ್ನಲಾಗಿದೆ. ಆ ಬಗ್ಗೆ ಯಾವುದೇ ಪರವಾನಿಗೆ ಪಡೆದುಕೊಂಡಿರಲಿಲ್ಲ. ಪೊಲೀಸರು ಲೈಟ್ ಮತ್ತು ಸೌಂಡ್ ಬಾಕ್ಸ್ ಬಗ್ಗೆ ವಿಚಾರಿಸಿದಾಗ ಸ್ಥಳದಲ್ಲಿದ್ದ ದಾಮೋದರ ಅವರು, ಇದು ಬೈಲೂರಿನ ರವಿ ಎಂಬವರು ನಡೆಸಿಕೊಂಡಿರುವ ಸೌಂಡ್ ಸಿಸ್ಟಮ್ನಲ್ಲಿ ತಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಪರವಾನಿಗೆ ಇಲ್ಲದೆ ದ್ವನಿವರ್ಧಕವನ್ನು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಬಳಸುತ್ತಿದ್ದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ : ಇತ್ತೀಚೆಗಷ್ಟೇ ಮಣಿಪಾಲ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಗರುಡ ಗ್ಯಾಂಗ್ನ ಕುಖ್ಯಾತ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಇದಕ್ಕೂ ಮುನ್ನ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದ ಇಸಾಕ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದ. ಇದೀಗ ಇಸಾಕ್ ಮತ್ತು ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಇಸಾಕ್ ಹಾಗೂ ಇತರರ ಬಂಧನಕ್ಕಾಗಿ ಮಣಿಪಾಲ ಪೊಲೀಸರು ಮತ್ತು ಮಲ್ಪೆ ಪೊಲೀಸರ ತಂಡ ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ತೆರಳಿತ್ತು. ಅಲ್ಲಿಂದ ಆರೋಪಿ ಇಸಾಕ್ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಬಂಧಿಸಿ ಕರೆತರಲಾಗುತ್ತಿತ್ತು.
ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ, ಸಂಜೆ 7.15ಕ್ಕೆ ಆರೋಪಿ ಇಸಾಕ್ ತನಗೆ ವಾಂತಿ ಹಾಗೂ ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಮಾಡಿದ್ದಾನೆ. ಮೂತ್ರ ವಿಸರ್ಜನೆ ನಂತರ ಏಕಾಏಕಿ ಈತನೊಂದಿಗೆ ಇದ್ದ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರನ್ನು ತಳ್ಳಿ ಅವರ ಮೇಲೆ, ಆತನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್ ಅನ್ನು ಬಳಸಿ ಬಲವಾಗಿ ಸುತ್ತಿ ದೂಡಿದ್ದಾನೆ. ನಂತರ ಇಬ್ಬರು ಪೊಲೀಸ್ ಉಪನಿರೀಕ್ಷಕರು ಹಿಡಿಯಲು ಪ್ರಯತ್ನಿಸಿದಾಗ ಅವರಿಗೆ ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಹೀಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಜೀಪ್ನ ಗ್ಲಾಸ್ ಒಡೆದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಪೊಲೀಸ್ ನಿರೀಕ್ಷಕ ದೇವರಾಜ್ ಅವರು ಎಚ್ಚರಿಕೆ ನೀಡಿದ್ದು, ಕೇಳದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಕೂಡ ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆರೋಪಿ ಇಸಾಕ್ ಕಾಲಿಗೆ ಗುಂಡು ಹಾರಿಸಲಾಗಿದೆ.
ಸದ್ಯ ಗಾಯಗೊಂಡ ಆರೋಪಿ ಇಸಾಕ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.