ಉಡುಪಿ : ನಗರದ ಸ್ವಸ್ತಿಕ್ ಎನ್ಕ್ಲೇವ್ ಅಪಾರ್ಟ್ಮೆಂಟ್ನ್ನು ‘ತಂಬಾಕು ಮುಕ್ತ ಅಪಾರ್ಟ್ಮೆಂಟ್’ ಎಂದು ಜಿಲ್ಲಾಡಳಿತ ಗುರುತಿಸಿದ್ದು, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ಇಂದು ಅಜ್ಜರಕಾಡಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿಯಲ್ಲಿ ಸಂಬಂಧಿತರಿಗೆ ಮೆಚ್ಚುಗೆ ಪ್ರಮಾಣ ಪತ್ರ (ಅಪ್ರಿಸಿಯೇಷನ್ ಸರ್ಟಿಫಿಕೇಟ್)ವನ್ನು ವಿತರಿಸಿದರು.
ನಗರದಲ್ಲಿ ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತದ ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಈ ಸಂದರ್ಭದಲ್ಲಿ ತಂಬಾಕಿನ ಬಳಕೆಯನ್ನು ಜನರಿಂದ ದೂರ ಮಾಡುವ ನಿಟ್ಟಿನಲ್ಲಿ ತಂಬಾಕಿನಿಂದ ದೂರವಿರುವ ಸ್ವಸ್ತಿಕ್ ಎನ್ಕ್ಲೇವ್ ಅಪಾರ್ಟ್ಮೆಂಟ್ಗೆ ಮೆಚ್ಚುಗೆ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.
Udupi
ಉಡುಪಿ : ಯಕ್ಷಗಾನ, ಕಲೆಯ ಎಲ್ಲಾ ಅಂಗಗಳನ್ನು ಪರಿಪೂರ್ಣ ಕಲಾ ಪ್ರಕಾರ. ಅದನ್ನು ಪ್ರಸ್ತುತ ಪಡಿಸುವ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರು. ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕೆಲಸ ಅನನ್ಯ ಮತ್ತು ಅಗಾಧ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದ್ದಾರೆ.
ಮೇ 31ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ 25ನೇ ವರ್ಷದ ಯಕ್ಷಗಾನ ಕಲಾವಿದರ ಸಮಾವೇಶದಲ್ಲಿ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಯೋಜಿತ ಅಧ್ಯಕ್ಷರಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸ್ವಾಮೀಜಿ ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಕಲಾವಿದರಾದ ಸುಬ್ರಹ್ಮಣ್ಯ ಬೈಪಾಡಿತ್ತಾಯರು ಬರೆದ ‘ಆಗಸದ ಬೆಳಕು’ ಪುಸ್ತಕವನ್ನು ಅವರು ಲೋಕಾರ್ಪಣೆಗೊಳಿಸಿದರು. ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿ ಅವರ ಧರ್ಮಪತ್ನಿಗೆ ಸಾಂತ್ವನ ನಿಧಿಯನ್ನು ನೀಡಲಾಯಿತು. ಅಲ್ಲದೇ 21 ಮಂದಿ ಯಕ್ಷಗಾನ ಕಲಾವಿದರಿಗೆ ತಲಾ ಹತ್ತು ಸಾವಿರದಂತೆ ಗೃಹ ನಿರ್ಮಾಣದ ಉಡುಗೊರೆ ಹಾಗೂ 7 ಮಂದಿ ಕಲಾವಿದರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.
ಉಡುಪಿಯಲ್ಲಿ ಮತ ಎಣಿಕೆಗೆ ಎಲ್ಲ ಸಿದ್ಧತೆಗಳು ಪೂರ್ಣ – ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ
ಉಡುಪಿ : ಲೋಕಸಭೆ ಚುನಾವಣೆ ಮತ ಎಣಿಕೆಯು ಜೂನ್ 4, 2024 ರಂದು ಉಡುಪಿಯ ಸೇಂಟ್ ಸಿಸಿಲಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಲಿದೆ, ಮತ ಎಣಿಕೆಗೆ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಡಾ. ವಿದ್ಯಾಕುಮಾರಿ ಜಿಲ್ಲಾಧಿಕಾರಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ವಿದ್ಯಾಕುಮಾರಿ ಅವರು ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತದ ಭದ್ರತೆ ಏರ್ಪಡಿಸಲಾಗಿದೆ. ಜೂನ್ 4 ಡ್ರೈ ಡೇ ಎಂದು ಘೋಷಿಸಲಾಗಿದೆ. ಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆಗೆ ಸಂಬಂಧಿಸಿದಂತೆ 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ ಎಂದರು. ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್ ಫೋನ್ಗಳು, ಕ್ಯಾಲ್ಕುಲೇಟರ್ಗಳು, ಕತ್ತರಿಗಳು, ಚಾಕುಗಳು, ಆಯುಧಗಳು ಮತ್ತು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಷೇಧಿಸಲಾಗಿದೆ.
ಚುನಾವಣಾ ವೀಕ್ಷಕರ ಅನುಮೋದನೆಯ ನಂತರವೇ ಪ್ರತಿ ಸುತ್ತಿನ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಚುನಾವಣಾ ಆಯೋಗದ ಅನುಮೋದನೆ ಪಡೆದ ನಂತರವೇ ವಿಜೇತ ಅಭ್ಯರ್ಥಿಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸಚಿವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ : ಕೋಟ ಲೇವಡಿ
ಉಡುಪಿ : ವಾಲ್ಮೀಕಿ ನಿಗಮದಲ್ಲಿ ಹಗರಣ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸಚಿವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ನಾವು ಸಿಬಿಐ ತನಿಖೆಗೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದೇವೆ. ಆದರೆ ಎಸ್ಐಟಿ ನೇಮಕ ಮಾಡಿ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು.
ಮುಖ್ಯಮಂತ್ರಿಗಳು ನಾಗೇಂದ್ರರನ್ನು ಕರೆದು ರಾಜಿನಾಮೆ ಕೊಡಲು ಹೇಳಿದ್ದಾರಂತೆ. ನನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದಿಗ್ಧತೆಯಲ್ಲಿದ್ದಾರೆ. ಪರಿಶಿಷ್ಟ ಜಾತಿ ಪಂಗಡದವರ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಆದರೆ ಬಡವರ ಹಣ ಇವತ್ತು ಕಂಪನಿಗಳ ಖಾತೆಗೆ ಹೋಗಿದೆ. ತಕ್ಷಣ ಸಚಿವರು ರಾಜೀನಾಮೆ ನೀಡಬೇಕು, ನಾವು ಒಂದು ವಾರದ ಗಡುವು ನೀಡಿದ್ದೇವೆ ಎಂದು ಕೋಟ ಹೇಳಿದರು.
ಗ್ಯಾಂಗ್ವಾರ್ ಪ್ರಕರಣದಲ್ಲಿ ಮಾದಕ ದ್ರವ್ಯಗಳ ಬಳಕೆಯಾಗಿರುವ ಶಂಕೆ; ಮಣಿಪಾಲದಲ್ಲಿ ತಡರಾತ್ರಿ ಪೊಲೀಸ್ ಕಾರ್ಯಾಚರಣೆ
ಮಣಿಪಾಲ : ಉಡುಪಿಯ ಕುಂಜಿಬೆಟ್ಟಿನಲ್ಲಿ ನಡೆದ ಗ್ಯಾಂಗ್ವಾರ್ ಪ್ರಕರಣದ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ತಡರಾತ್ರಿ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಈ ಗ್ಯಾಂಗ್ವಾರ್ ಪ್ರಕರಣದಲ್ಲಿ ಮಾದಕ ದ್ರವ್ಯಗಳ ಬಳಕೆಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ಇರುವ ಪಬ್ ಮತ್ತು ಬಾರ್ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
https://www.instagram.com/reel/C7rEjwmBkTt/?utm_source=ig_web_copy_link&igsh=MzRlODBiNWFlZA==
ಮಣಿಪಾಲ ಪೊಲೀಸರು ತಡರಾತ್ರಿ ಅವಧಿಗೂ ಮೀರಿ ಕಾರ್ಯಾಚರಿಸುತ್ತಿದ್ದ ಪಬ್ಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳು ಮತ್ತು ಮಾದಕ ದ್ರವ್ಯಗಳ ಸೇವನೆಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಲಾಗಿದೆ.
“ಜಿಲ್ಲೆಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಚಟುವಟಿಕೆಗಳಿಗೆ ಅವಕಾಶ ನೀಡಬಾರದು” ಎಂಬ ಉದ್ದೇಶದಿಂದ ಕಾರ್ಯಾಚರಣೆ ನಡೆದಿದೆ. ತಡ ರಾತ್ರಿ ವಿನಾ ಕಾರಣ ಅಲೆದಾಡುವವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಣಿಪಾಲ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಮಣಿಪಾಲ : ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ರಚಿಸಿದ ಕಲಾಕೃತಿಯನ್ನು ಕೆಎಂಸಿ ಅಸೋಸಿಯೆಟ್ ಡೀನ್ ಡಾ| ಕೃಷ್ಣಾನಂದ ಪ್ರಭು ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ। ಅಶ್ವಿನಿ ಕುಮಾರ್ ಅನಾವರಣಗೊಳಿಸಿದರು.
ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಮುರಳೀಧರ್ ಕುಲಕರ್ಣಿ, ಕಲಾವಿದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೇಬೆಟ್ಟು ರಚಿಸಿದ ತಂಬಾಕು ಜಾಗೃತಿ ಕಲಾಕೃತಿ ಬಗ್ಗೆ ವಿವರಿಸಿದರು.
ಸಮುದಾಯ ವೈದ್ಯಕೀಯ ವಿಭಾಗದ ಡಾ| ವೀಣಾ ಕಾಮತ್, ಡಾ। ಚೈತ್ರಾ ರಾವ್, ಡಾ। ಸ್ನೇಹಾ ಕಾಮತ್, ಡಾ। ಈಶ್ವರಿ, ಡಾ| ಯಶ್, ಡಾ। ಅಖಿಲಾ, ಡಾ| ಮಂಜುಳಾ, ಡಾ| ಅರುಣ್ ದಾಸ್, ಸಮುದಾಯ ವೈದ್ಯಕೀಯ ವಿಭಾಗದ ಬೋಧಕೇತರ ಸಿಬಂದಿ, ಸ್ನಾತಕೋತ್ತರ ಹಾಗೂ ಪ.ಪೂ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಡುಪಿ : ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಶ್ರೀ ಯೋಗೀರಾಜ್ ಅವರು ಇಂದು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಕೃಷ್ಣಮಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಶ್ರೀ ಪಾದದ್ವಯರ ಭೇಟಿ ಮಾಡಿದರು.
ಪರ್ಯಾಯ ಶ್ರೀಪಾದರು ಯೋಗೀರಾಜ್ ಅವರನ್ನು ಗೌರವಿಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ಯೋಗೀರಾಜ್ ಅವರು ಪರ್ಯಾಯ ಶ್ರೀಪಾದರ ಕೋಟಿಗೀತಾಲೇಖನ ಯಜ್ಞದ ವಿಷಯ ತಿಳಿದು ಸ್ವಯಂ ಪ್ರೇರಿತರಾಗಿ ಗೀತಾಲೇಖನ ದೀಕ್ಷೆ ಸ್ವೀಕರಿಸಿದರು.
ಉಡುಪಿ : ಉಡುಪಿಯ ಒಳಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ಸಂಭ್ರಮದಿಂದ ಜರುಗಿತು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣರವರು ಉಡುಪಿಯ ಒಳಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಶುಭ ಹಾರೈಸಿದರು.

ಉಡುಪಿ : ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ.
“ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನಪರಿಷತ್ ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದುದರಿಂದ, ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆಯಲ್ಲಿ ರೇಶನಿಂಗ್ ಪದ್ಧತಿ ರದ್ದು – ನಗರಕ್ಕೆ ಇನ್ನು ನಿರಂತರ ನೀರು ಸರಬರಾಜು
ಉಡುಪಿ : ಜಿಲ್ಲೆಯಾದ್ಯಂತ ಹಾಗೂ ಪಶ್ಚಿಮ ಘಟ್ಟದಲ್ಲಿ ಮಳೆ ಸುರಿಯುತ್ತಿರುವುದರಿಂದ ಕಾರ್ಕಳದಲ್ಲಿರುವ ಮುಂಡ್ಲಿ ಅಣಿಕಟ್ಟಿನಲ್ಲಿ ನೀರು ತುಂಬಿದ್ದು, ಸದ್ರಿ ಅಣಿಕಟ್ಟಿನ 2 ಬಾಗಿಲುಗಳನ್ನು ತೆರೆದಿರುವುದರಿಂದ ಸ್ವರ್ಣ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಸ್ವರ್ಣ ನದಿಯ ಬಜೆ ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದ ನೀರು ತುಂಬಿದ್ದು, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇಂದಿನಿಂದ ರೇಶನಿಂಗ್ ಪದ್ಧತಿಯ ನೀರನ್ನು ರದ್ದುಪಡಿಸಿ ನಿರಂತರವಾಗಿ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.