Hebri
ಕ್ರೀಡಾ ತಾರೆ ಹೆಬ್ರಿ ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನ
ಹೆಬ್ರಿ : ಕ್ರೀಡಾ ತಾರೆಯಾಗಿರುವ ಹೆಬ್ರಿ ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಅವರನ್ನು ಉಡುಪಿ ಜಿಲ್ಲಾಡಳಿತದ ವತಿಯಿಂದ ಕಂದಾಯ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು.
ಉಡುಪಿಯಲ್ಲಿ ನಡೆದ 2023-24ನೇ ಸಾಲಿನ ಜಿಲ್ಲಾ ಮಟ್ಟದ 2೦೦ ಮೀಟರ್ ಹರ್ಡಲ್ಸ್ನಲ್ಲಿ ಪ್ರಥಮ, 100 ಮೀಟರ್ ಹರ್ಡಲ್ಸ್ ಪ್ರಥಮ, ಹೈಜಂಪ್ನಲ್ಲಿ ದ್ವೀತಿಯ ಪ್ರಶಸ್ತಿ, ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ 11೦ ಮೀಟರ್ ಹರ್ಡಲ್ಸ್ನಲ್ಲಿ ಪ್ರಥಮ ಪ್ರಶಸ್ತಿ ಪಡೆದ ಚಂಡೀಗಢದಲ್ಲಿ ನಡೆದ ರಾಷ್ಟ್ರಮಟ್ಟದ 1೦೦ ಮೀಟರ್ ಹರ್ಡಲ್ಸ್ನಲ್ಲಿ 5 ಸ್ಥಾನ ಪಡೆದಿದ್ದಾರೆ.
ಗ್ರಾಮೀಣ ಪ್ರತಿಭೆಯಾಗಿರುವ ನವೀನ್ ಕುಮಾರ್ ಸೇವೆಯಲ್ಲಿ ಜನಮೆಚ್ಚುಗೆ ಪಡೆದು ನಿಷ್ಠಾವಂತ ಅಧಿಕಾರಿಯಾಗಿದ್ದಾರೆ. ಕಂದಾಯ ಇಲಾಖೆಯ ಜೊತೆಗೆ ನಾಡಿಗೆ ಕೀರ್ತಿ ತಂದಿದ್ದಾರೆ. ರಾಷ್ಟ್ರ ಮಟ್ಟದ ಸಿವಿಲ್ ಸರ್ವಿಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ವೈಯಕ್ತಿಕ ಸಾಧನೆ ಮಾಡಿದ್ದಾರೆ. ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸತತ 4 ವರ್ಷಗಳಿಂದ ವೈಯಕ್ತಿಕ ಚಾಂಪಿಯನ್ ಶಿಪ್ ಸಾಧನೆ ಮಾಡುತ್ತಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಸನ್ಮಾನಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿಎಸ್, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ, ಹೆಬ್ರಿ ತಹಶೀಲ್ಧಾರ್ ಪ್ರಸಾದ್ ಎಸ್ಎ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ : ಕುಂದಾಪ್ರ ಭಾಷಾ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಅನುದಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭಾಷಾ ಅಧ್ಯಯನ ಪೀಠದ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಾರ್ಯಚಟುವಟಿಕೆಗಳನ್ನು ವಿಸ್ತರಣೆ ಮಾಡಲು ಅಗತ್ಯವಿರುವ ಅನುದಾನ ನೀಡುವಂತೆ ಮಂಗಳೂರು ವಿಶ್ವವಿದ್ಯಾಲಯ ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ವಿಚಾರ ಸರ್ಕಾರ ಮಟ್ಟದಲ್ಲಿ ಬಾಕಿ ಉಳಿದಿತ್ತು.
ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅವರು, ಈ ವಿಚಾರದ ಕುರಿತು ಸರ್ಕಾರಕ್ಕೆ ಪತ್ರ ಬರೆದು, ಉಡುಪಿ ಜಿಲ್ಲಾ ವ್ಯಾಪ್ತಿಯ ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲ್ಲೂಕುಗಳಲ್ಲಿ ಪೂರ್ಣವಾಗಿ, ಹೆಬ್ರಿ, ಕಾಪು ಉಡುಪಿಯೂ ಸೇರಿದಂತೆ ಕೆಲವು ಭಾಗಗಳಲ್ಲಿ ಮಾತೃ ಭಾಷೆಯಾಗಿ ಬಳಸುತ್ತಿರುವ ಕುಂದಾಪ್ರ ಭಾಷೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕುಂದಗನ್ನಡ ಭಾಷೆಯ ಅಧ್ಯಯನ ಪೀಠದ ರಚನಾತ್ಮಕ ಕಾರ್ಯಗಳಿಗಾಗಿ ಕೊಡಲೇ ಒಂದೂವರೆ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಡಿದ್ದ ಮನವಿಗೆ, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮೊದಲ ಹಂತದ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಮುಂದೆ ಹಂತ ಹಂತವಾಗಿ ಹಣ ಬಿಡುಗಡೆಯಾಗುವ ಭರವಸೆ ಇದೆ.
ಹೆಬ್ರಿ ನಾಡ್ಪಾಲು ಗ್ರಾಮದಲ್ಲಿ ಕಾಣಿಸಿಕೊಂಡ ಮರಿ ಆನೆ; ಬೆಚ್ಚಿಬಿದ್ದ ಗ್ರಾಮಸ್ಥರು
ಉಡುಪಿ : ಹೆಬ್ರಿ ಸಮೀಪದ ನಾಡ್ಪಾಲು ಗ್ರಾಮದಲ್ಲಿ ಮರಿ ಆನೆಯೊಂದು ಕಾಣಿಸಿಕೊಂಡಿದೆ. ರಾತ್ರೋ ರಾತ್ರಿ ಮರಿ ಆನೆಯನ್ನು ಕಂಡು ಸ್ಥಳೀಯ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಮರಿ ಆನೆಯು ಕೆರೆಕಟ್ಟೆ ಪರಿಸರದಿಂದ ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಹಲಸಿನ ಹಣ್ಣು ತಿನ್ನಲು ಜನವಸತಿ ಪ್ರದೇಶಕ್ಕೆ ಬಂದಿದ್ದು, ಸ್ಥಳೀಯ ಗ್ರಾಮಸ್ಥರ ಗದ್ದೆಗಳಲ್ಲಿ ದಾಂಧಲೆ ನಡೆಸಿದೆ.
ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಸ್ಥಳದಿಂದ ಓಡಿಸಿದರು.
ಪರಿಸರದ ನಾಲ್ಕಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಕಾರ್ಯಾಚರಣೆ ನಡೆಸುವ ಮೂಲಕ ಆನೆಯನ್ನು ಸೆರೆ ಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಪುನರ್ವಸು ಮಳೆ ಅಬ್ಬರ; ಜನ, ಜಾನುವಾರುಗಳ ರಕ್ಷಣೆ
ಉಡುಪಿ : ಜಿಲ್ಲೆಯಲ್ಲಿ ನಿನ್ನೆ ಪ್ರಾರಂಭಗೊಂಡ ಮಳೆ ಮುಂದುವರೆದಿದ್ದು ಉಡುಪಿಯ ಹಲವೆಡೆ ಜನ ಜಾನುವಾರುಗಳನ್ನು ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. ಮುಖ್ಯವಾಗಿ ತಗ್ಗುಪ್ರದೇಶಗಳಾದ ಬೈಲಕೆರೆ, ಕಲ್ಸಂಕ ಮಠದಬೆಟ್ಟುವಿನ ಬಹುಭಾಗ ಜಲಾವೃತಗೊಂಡಿವೆ. ಗುಂಡಿಬೈಲುವಿನಲ್ಲಿ ನೆರೆ ನೀರು ಮನೆಗಳು ಮತ್ತು ಅಂಗಡಿಗಳಿಗೆ ನುಗ್ಗಿದ್ದ ಅಗ್ನಿಶಾಮಕ ದಳ ಹಲವರನ್ನು ರಕ್ಷಣೆ ಮಾಡಿದೆ.
ಅಗ್ನಿಶಾಮಕ ದಳ ರಕ್ಷಣಾ ಕಾರ್ಯಚರಣೆ ನಡೆಸಿ ಒಂದೇ ಮನೆಯ ಮೂವರನ್ನು ರಕ್ಷಣೆ ಮಾಡಿತು. ಉಳಿದಂತೆ ಪಾಡಿಗಾರು ಸಮೀಪ ನಾಲ್ಕು ಮನೆಗಳಿಂದ ಜನರನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. ಪೊಲೀಸ್ ಅಗ್ನಿಶಾಮಕ ದಳದ ಜೊತೆಗೆ ಸಾರ್ವಜನಿಕರು ಕೂಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾದರು.
ಗುಂಡಿಬೈಲುವಿನಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಸ್ಥಳಕ್ಕೆ ನಗರಸಭೆ ಆಯುಕ್ತ ರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಬೈಂದೂರು ಮತ್ತು ಕುಂದಾಪುರದಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು ಆ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಹೆಬ್ರಿ : ಹೆಬ್ರಿ ಸಮೀಪದ ಶಿವಪುರದ ನಾಯರ್ ಕೋಡು ಬಳಿ ಜೆಸಿಬಿ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ನಾಯರ್ ಕೋಡು ನಿವಾಸಿ ಪ್ರತ್ಯಕ್ಷ ಶೆಟ್ಟಿ (21 ) ಮೃತ ಪಟ್ಟ ಯುವಕ. ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಹಿಂಬದಿ ಸವಾರ ಸಹೋದರ ಪ್ರೀತಿಶ್ಗೆ ಸಣ್ಣ ಪುಟ್ಟ ಗಾಯವಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ : ಮುದ್ರಾಡಿ ರಾಂಬೆಟ್ಟು ನಿವಾಸಿ ದಿ.ಉಪೇಂದ್ರ ಆಚಾರ್ಯ ಅವರ ಪತ್ನಿ ಕುಸುಮಾ ಆಚಾರ್ಯ ಎಂಬವರು ಶುಕ್ರವಾರ ಬೇಸಾಯದ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಜನಾನುರಾಗಿಯಾಗಿದ್ದ ಕುಸುಮಾ ಆಚಾರ್ಯ ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯಕ್ರಮ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೆಬ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಸಕ್ರಿಯ ಸದಸ್ಯರು.
ಮೃತರು ದತ್ತು ಪುತ್ರಿಯನ್ನು ಅಗಲಿದ್ದಾರೆ.
ಜಿಲ್ಲೆಯಲ್ಲಿ ಗಾಳಿ, ಮಳೆ ಹಾನಿ – ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ ಉಸ್ತುವಾರಿ ಸಚಿವೆ ಹೆಬ್ಬಾಳಕರ್
ಉಡುಪಿ : ಉಡುಪಿ ಜಿಲ್ಲೆಯ ಕೆಲವೆಡೆ ಗಾಳಿ ಮತ್ತು ಮಳೆಯಿಂದ ಹಾನಿಯಾಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಪಡೆದಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಚಿವರು ಸಚಿವ ಸಂಪುಟ ಸಭೆಗೆ ಹೊರಡುವ ಮುನ್ನ ಉಡುಪಿಯ ಸದ್ಯದ ಪರಿಸ್ಥಿತಿಯ ಕುರಿತು ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿದರು. ಜಿಲ್ಲೆಯ ಅಮಾಸೆಬೈಲು ಸೇರಿದಂತೆ ಕೆಲವೆಡೆ ಮಳೆ, ಗಾಳಿಯಿಂದ ಉಂಟಾಗಿರುವ ಹಾನಿಯ ಮಾಹಿತಿ ಪಡೆದರು.
ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ ಸಚಿವರು, ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಜೊತೆಗೆ, ಜನರಿಗೆ ಎಚ್ಚರಿಕೆ ಕ್ರಮಗಳ ಕುರಿತು ತಿಳಿಸಬೇಕೆಂದೂ ಸೂಚಿಸಿದರು.
ಕುಂದಾಪುರ : ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶವಾದ ಹೆಬ್ರಿ, ಕುಂದಾಪುರ ಭಾಗದಲ್ಲಿ ಬುಧವಾರ ಬೀಸಿದ ಸುಂಟರಗಾಳಿಗೆ ಅಪಾರ ಪ್ರಮಾಣದ ಕೃಷಿ, ಮನೆ, ದನದ ಕೊಟ್ಟಿಗೆಗಳು, ನೂರಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿಯಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.

ಶಂಕರನಾರಾಯಣ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಮನೆ, ದನದ ಕೊಟ್ಟಗೆ ಮತ್ತು ಅಪಾರ ಕೃಷಿ ಹಾನಿಗೀಡಾಗಿದೆ. ಕುಳ್ಳುಂಜೆ ಗ್ರಾಮದಲ್ಲೂ ಮನೆಗೆ ಹಾನಿಯಾಗಿದೆ. ಇಲ್ಲಿ ದನದ ಕೊಟ್ಟಿಗೆ ಗಾಳಿಗೆ ಹಾರಿ ಹೋಗಿದ್ದು, ಸಂಪೂರ್ಣ ಹಾನಿಗೊಂಡಿದೆ. 1,000ಕ್ಕೂ ಹೆಚ್ಚು ಅಡಿಕೆ ಮರ, 50ಕ್ಕೂ ಹೆಚ್ಚು ತೆಂಗಿನ ಮರ, ಅಪಾರ ಪ್ರಮಾಣದ ಬಾಳೆ, ಗೇರು ಕಾಳು ಮೆಣಸು ಗಿಡಗಳು ಹಾನಿಗೊಂಡಿವೆ. ಸುಶೀಲಾ ಎಂಬ ಮಹಿಳೆಗೆ ಗಾಯಗಳಾಗಿದ್ದು, ಪುತ್ರಿ ಪ್ರೇಮಾನಾಯ್ಕ ಅವರ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ವರದಿಯಾಗಿದೆ.
ಕುಳ್ಳುಂಜೆ ಗ್ರಾಮದ ಗುಲಾಬಿ ನಾಯ್ಕ ಅವರು ಅಡಿಕೆ ತೋಟವು ಸುಂಟರಗಾಳಿಗೆ ಹಾನಿಗೊಂಡಿವೆ. 600ಕ್ಕೂ ಹೆಚ್ಚು ಅಡಿಕೆ ಮರ ಹಾನಿಗೊಂಡಿವೆ. ಸುಮಾರು 2 ಲಕ್ಷ ರೂ.ಗೂ ಹೆಚ್ಚು ಹಾನಿ ಸಂಭವಿಸಿದೆ.
ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಟ್ಟಾಡಿ, ತೆಂಕೂರು, ಹೊರ್ಲಿಜೆಡ್ಡು ನಡಂಬೂರು, ಹಳೆ ಅಮಾಸೆಬೈಲು, ಜಡ್ಡಿನಗದ್ದೆ ಪ್ರದೇಶದಲ್ಲಿ ಬೀಸಿದ ಸುಂಟರಗಾಳಿ ಅಪಾರ ಪ್ರಮಾಣದಲ್ಲಿ ಮನೆಗಳು ಮತ್ತು ಕೃಷಿಗೆ ಹಾನಿ ಸಂಭವಿಸಿದೆ.