ಉಡುಪಿ : ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿದ್ದು ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಕರ್ನಾಟಕ ಯುವರಕ್ಷಣಾ ವೇದಿಕೆ ಒತ್ತಾಯಿಸಿದೆ.
ಕರ್ನಾಟಕ ಯುವರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಅಂಗಡಿ, ಶೋ ರೂಮ್ಗಳು, ಹೋಟೆಲ್ಗಳು ಮತ್ತು ಶಾಲಾ ಕಾಲೇಜುಗಳ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಕಡ್ಡಾಯವಾಗಿ ಅಳವಡಿಸಲು ಸರಕಾರ ಆದೇಶ ನೀಡಿದೆ. ಸರಕಾರವು ಕನ್ನಡ ಭಾಷೆ ಅಳವಡಿಸಲು ಆದೇಶ ಮಾಡಿದ್ದರೂ ಸಹ ಹಲವೆಡೆಗಳಲ್ಲಿ ಇಲ್ಲಿಯವರೆಗೆ ನಾಮಫಲಕವನ್ನು ಅಳವಡಿಸಿರುವುದಿಲ್ಲ. ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ ಕನ್ನಡ ಭಾಷೆ ಮಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಫಲಕ ಆಳವಡಿಸದಿದ್ದಲ್ಲಿ ಕಾನೂನು ಪ್ರಕಾರ ಹೋರಾಟವನ್ನು ಮಾಡಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಸಿದ್ಧವಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ಬದ್ಧರಿದ್ದೇವೆ ಎಂದು ಹೇಳಿದ್ದಾರೆ.