ಮಂಗಳೂರು : ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ಓರ್ವ ಐಎಎಸ್ ಅಧಿಕಾರಿಯಂತೆ ಹೇಳಿಕೆ ನೀಡುವ ಬದಲು ಧರ್ಮಸ್ಥಳದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರನಂತೆ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ನಗರದ ಖಾಸಗಿ ಹೊಟೇಲ್ನಲ್ಲಿ ಮಾತನಾಡಿದ ಅವರು, ನನ್ನ ಮನೆಗೆ ಅಂದು ಮೂವರು ಪೋಲಿಸರು ನೋಟಿಸ್ ನೀಡಲು ಬಂದಿದ್ದರು ಅವರು ಹೇಳಿದ್ದಾರೆ. ಆದರೆ ಎಷ್ಟು ಮಂದಿ ಬಂದಿದ್ದಾರೆಂದು ನಮ್ಮ ಮನೆಯ ಸಿಸಿ ಟಿವಿ ಪರಿಶೀಲನೆ ನಡೆಸಿದರೆ ಗೊತ್ತಾಗುತ್ತದೆ. ಮೂರು ವಾಹನದಲ್ಲಿ 15ಕ್ಕೂ ಅಧಿಕ ಪೊಲೀಸರು ಬಂದಿದ್ದರು. ನನ್ನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದರು. ಆದರೆ ಕಾನೂನು ಪ್ರಕಾರ ಅವರು ನನಗೆ ನೋಟಿಸ್ ನೀಡಲಿಲ್ಲ. ಆದರೆ ಪೊಲೀಸ್ ಠಾಣೆಗೆ ಬರಬೇಕೆಂದು ಬೆಳಗ್ಗೆಯಿಂದ ಸಂಜೆ ಏಳರವರೆಗೆ ದೌರ್ಜನ್ಯ ಮಾಡಿದ್ದಾರೆ ಎಂದರು.
ಶಶಿರಾಜ್ ಶೆಟ್ಟಿ ಅಮಾಯಕ. ಅವನನ್ನು ಹೇಗೆ ಜೈಲಿಗೆ ಹಾಕಿದ್ದಾರೆ. ಎಸ್ಪಿಯವರು ಆಮೇಲೆ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ. ದೇಶದಲ್ಲಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆದೇ ಇಲ್ಲವೇ. ಕಲ್ಲು ಗಣಿಗಾರಿಕೆ ನಡೆದದ್ದು ಯಾವ ಸ್ಥಳದಲ್ಲಿ ಇದೆ ಅನ್ನೋದನ್ನು ತನಿಖೆ ಮಾಡಬೇಕೆಂದು ಎಸ್ಪಿ ಹೇಳಿದ್ದಾರೆ. ಆ್ಯಪ್ನಲ್ಲಿ ನೋಡಿದ್ದಲ್ಲಿ ಗೊತ್ತಾಗುದಿಲ್ವಾ. ಅಂತಹ ಸಾಮಾನ್ಯ ಜ್ಞಾನ ಎಸ್ಪಿ ಅವರಿಗೆ ಇಲ್ವಾ. ಅಲ್ಲದೆ ನನ್ನ ಮೇಲೆ ಮೂರು ದಿನಗಳಲ್ಲೇ ಜಾರ್ಜ್ ಶೀಟ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದರು.