ಉಡುಪಿ : ಅಯೋಧ್ಯೆಯ ಶ್ರೀ ರಾಮಮಂದಿರದ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಗುರುವಾರ ಅಯೋಧ್ಯೆಯಲ್ಲಿ 25 ಬ್ರಾಹ್ಮಣ ಬಾಲಕರಿಗೆ ಸಾಮೂಹಿಕ ಬ್ರಹ್ಮೋಪದೇಶ ನೆರವೇರಿತು.
ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಕಡುಬಡತನದಲ್ಲಿರುವ ಕುಟುಂಬಗಳ 80ಕ್ಕೂ ಅಧಿಕ ಬ್ರಾಹ್ಮಣ ಬಾಲಕರನ್ನು ಶ್ರೀಪಾದರು ಆರೇಳು ವರ್ಷಗಳಿಂದ ಹೊಸದಿಲ್ಲಿಯಲ್ಲಿರುವ ಶ್ರೀಮಠದ ಶಾಖೆಗೆ ಕರೆತಂದು ಅಲ್ಲಿನ ಶ್ರೀ ವೇದವ್ಯಾಸ ಗುರುಕುಲದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಾ ಅವರ ಯೋಗಕ್ಷೇಮವನ್ನು ಮಠದ ವತಿಯಿಂದಲೇ ನಿರ್ವಹಿಸುತ್ತಿದ್ದಾರೆ.
ಆ ಪೈಕಿ 25 ಬಾಲಕರಿಗೆ ಅಯೋಧ್ಯೆಯ ಶ್ರೀ ರಾಮನ ಕ್ಷೇತ್ರದಲ್ಲಿ ವಿಧ್ಯುಕ್ತವಾಗಿ ಉಪನಯನ ವಿಧಿಗಳನ್ನು ನೆರವೇರಿಸಿದರು. ಜಾನಕೀ ಘಾಟ್ ಬಳಿ ಇರುವ ಶ್ರೀ ರಾಮವಲ್ಲಭ ಕುಂಜ ಎಂಬ ಭವನದಲ್ಲಿ ಉಪನಯನ ನಡೆಯಿತು. ಎಲ್ಲ ವಟುಗಳಿಗೆ ಮಧುಪರ್ಕ ಸಾಹಿತ್ಯ, ವಸ್ತ್ರ, ಮಕ್ಕಳ ಪಾಲಕರಿಗೆ ವಸ್ತ್ರ ಹಾಗೂ ಊಟೋಪಹಾರ ಸಹಿತ ಎಲ್ಲ ವೆಚ್ಚಗಳನ್ನೂ ಮಠದಿಂದಲೇ ಭರಿಸಲಾಯಿತು.
ಶ್ರೀಪಾದರು ಎಲ್ಲ ವಟುಗಳಿಗೂ ಕೃಷ್ಣಮಂತ್ರೋಪದೇಶ ನೀಡಿ ಬ್ರಾಹ್ಮಣ್ಯದ ಕರ್ತವ್ಯಗಳನ್ನು ಜೀವನ ಪರ್ಯಂತ ಪಾಲಿಸುವಂತೆ ಸಂದೇಶ ನೀಡಿದರು.
			        


			        
                        
                        

                        
                        
                        
                        
                        
                        
                        