Religious
ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುವ ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ : ದೇವಸ್ಥಾನದಲ್ಲಿ ಶತ ಚಂಡಿಕಾಯಾಗ ನಿರ್ವಿಘ್ನವಾಗಿ ನಡೆಯಲಿ. ಇದರಿಂದ ಲೋಕ ಮತ್ತು ಎಲ್ಲ ಭಕ್ತರಿಗೂ ಒಳಿತಾಗಲಿ. ಇಂಥ ಧಾರ್ಮಿಕ ಕಾರ್ಯಕ್ರಮಗಳು ಜಿಲ್ಲೆಯ ದೇವಸ್ಥಾನಗಳಲ್ಲಿ ನಡೆಯುವಂತಾಗಲಿ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.9ರಿಂದ 14ರ ವರೆಗೆ ನಡೆಯುವ ಶತ ಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆಯ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ಬಿಡುಗಡೆಗೊಳಿಸಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಉಡುಪಿ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಶತ ಚಂಡಿಕಾಯಾಗ ಮತ್ತು ಬ್ರಹ್ಮಮಂಡಲ ಸೇವೆ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಅರ್ಥಿಕ ಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ನಾರಾಯಣ ದಾಸ್ ಉಡುಪ, ಕೋಶಾಧಿಕಾರಿ ಸುದರ್ಶನ್ ಶೇರಿಗಾರ್, ಪವಿತ್ರಪಾಣಿ ಶ್ರೀನಿವಾಸ ಆಚಾರ್ಯ, ಮೊಕ್ತೇಸರರಾದ ರಾಜಶೇಖರ ಭಟ್, ಸುಭಾಶ್ ಭಂಡಾರಿ, ಸುರೇಶ್ ಶೆಟ್ಟಿ ಬೈಲೂರು, ಮೋಹನ ಆಚಾರ್ಯ, ಅರುಣ್ ಶೆಟ್ಟಿಗಾರ್, ಜಿ.ಪ್ರೇಮ್ನಾಥ್, ಪ್ರವೀಣ್ ಕುಮಾರ್, ದುರ್ಗಾಪ್ರಸಾದ್ ಸಿ.ಎಚ್., ಭಾರತಿ ಜಯರಾಮ್ ಆಚಾರ್ಯ, ಹರೀಶ್ ಸುವರ್ಣ, ಶಾಂತಾ ಶೇರಿಗಾರ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉಡುಪಿ ವಿಭಾಗದ ಗೌರವ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೆ.ದಿವಾಕರ ಶೆಟ್ಟಿ ತೋಟದ ಮನೆ, ಮಹಿಳಾ ವಿಭಾಗ ಅಧ್ಯಕ್ಷೆ ನಿರುಪಮಾ ಪ್ರಸಾದ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಪ್ರಸಂಗಕರ್ತ ಪವನ್ ಕಿರಣ್ಕೆರೆ, ಎಂ.ಎಲ್.ಸಾಮಗ ಉಪಸ್ಥಿತರಿದ್ದರು. ಉಡುಪಿ ವಿಭಾಗದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ದಾಮೋದರ ಶರ್ಮಾ ನಿರೂಪಿಸಿದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂ|ಡಾ| ಲೊರೇನ್ಸ್ ಸಿ ಡಿಸೋಜಾ ನಿಧನ
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂ|ಡಾ| ಲೊರೇನ್ಸ್ ಸಿ ಡಿಸೋಜಾ ಅವರು ದೀರ್ಘಕಾಲದ ಅಸೌಖ್ಯದಿಂದ ಮಂಗಳವಾರ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
1948 ನವೆಂಬರ್ 28ರಂದು ಶಿರ್ವ ಸಮೀಪದ ಪೆರ್ನಾಲ್ನಲ್ಲಿ ಜನಿಸಿದ ಅವರು 1977ರಲ್ಲಿ ಧರ್ಮಗುರುವಾಗಿ ಯಾಜಕ ದೀಕ್ಷೆಯನ್ನು ಪಡೆದರು.
ಗುರುದೀಕ್ಷೇ ಪಡೆದ ಬಳಿಕ ಹಲವಾರು ಹುದ್ದೆಗಳನ್ನು ಅಲಂಕರಿಸಿರುವ ವಂ| ಲೋರೆನ್ಸ್ ಡಿಸೋಜಾ ಅವರ ಸೇವೆಯ ವಿವರ :
1977-79ರ ವರೆಗೆ ಕುಲಶೇಖರ ಚರ್ಚಿನ ಸಹಾಯಕ ಧರ್ಮಗುರುಗಳಾಗಿ, 1979-84ರ ತನಕ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿ ಸಹಾಯಕ ನಿರ್ದೇಶಕರಾಗಿ, 1984-92ರ ವರೆಗೆ ಮಂಗಳೂರು ಧರ್ಮಪ್ರಾಂತ್ಯ ಕಥೊಲಿಕ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ, 1998-2006ರ ವರೆಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ, 2006-2008 ರ ವರೆಗೆ ಕುಲಶೇಖರ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ, 2008-2014 ರ ವರೆಗೆ ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯ ನಿರ್ದೇಶಕರಾಗಿ, 2015-18ರ ವರೆಗೆ ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ಕಾರ್ಯದರ್ಶಿಯಾಗಿ, 2018-2020ರ ವರೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
ನಾಲ್ಕು ದಶಕಗಳ ಸುದೀರ್ಘ ಧಾರ್ಮಿಕ ಸೇವೆಯ ಬಳಿಕ 2020ರಲ್ಲಿ ತಮ್ಮ ಅನಾರೋಗ್ಯದ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿ ಕಲ್ಯಾಣಪುರದಲ್ಲಿ ನಿವೃತ್ತ ಯಾಜಕರ ನಿವಾಸ ಮಿಲಾಗ್ರಿಸ್ ಹೋಮ್ನಲ್ಲಿ ವಾಸ್ತವ್ಯ ಹೊಂದಿದ್ದರು.
ಮೃತರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿಗಳಾದ ವಂ|ಡಾ|ರೋಶನ್ ಡಿಸೋಜಾ, ಧರ್ಮಪ್ರಾಂತ್ಯದ ಧರ್ಮಗುರುಗಳು ಹಾಗೂ ಭಕ್ತವೃಂದ ಕಂಬನಿ ಮಿಡಿದಿದ್ದಾರೆ.
ಮೃತ ವಂ|ಲೋರೆನ್ಸ್ ಸಿ ಡಿಸೋಜಾ ಅವರ ಅಂತ್ಯಕ್ರಿಯೆ ನವೆಂಬರ್ 16 ಶನಿವಾರ ಬೆಳಿಗ್ಗೆ ನಡೆಯಲಿದ್ದು, 8.00 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನಲ್ಲಿ ಇರಿಸಿ, ಬೆಳಿಗ್ಗೆ 9.30ಕ್ಕೆ ಬಲಿಪೂಜೆಯೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತರ ಕಣ್ಮನ ಸೆಳೆದ ವಿಶ್ವರೂಪ ದರ್ಶನ
ಕಾರ್ಕಳ : ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ನಸುಕಿನ ವೇಳೆಯಲ್ಲಿ ನಡೆದ ವಿಶ್ವರೂಪ ದರ್ಶನ ನೆರೆದ ಅಸಂಖ್ಯಾತ ಭಕ್ತರ ಕಣ್ಮನ ಸೆಳೆಯಿತು.
ದೇವಸ್ಥಾನದ ಒಳ ಹಾಗೂ ಹೊರ ಭಾಗಗಳಲ್ಲಿ ಬೆಳಗಿಸಿದ ಸಾವಿರಾರು ಹಣತೆಗಳ ಬೆಳಕಿನಲ್ಲಿ ದೇವಾಲಯದ ಸೊಬಗು ಇಮ್ಮಡಿಗೊಂಡಿತ್ತು. ಆ ದೃಶ್ಯ ಸಹೃದಯಿ ಭಕ್ತರ ಮನಕ್ಕೆ ಮುದನೀಡಿತು. ದೇವಾಲಯದ ಒಳ ಪ್ರಾಂಗಣದಲ್ಲಿ ವರ್ಣರಂಜಿತ ರಂಗೋಲಿಗಳು ಮೂಡಿದ್ದವು. ಅದರಲ್ಲೂ ತ್ರೀಡಿ ಎಫೆಕ್ಟ್ನ ಈ ರಂಗೋಲಿಗಳು ನೋಡುಗರಿಗೆ ಅಚ್ಚರಿ ಹುಟ್ಟಿಸಿತು. ನಸುಕಿನ ವೇಳೆ ಮೂರು ಗಂಟೆಗೆ ಮಣ್ಣಗೋಪುರದಿಂದ ಭಜನೆ ಹೊರಟು ದೇವಾಲಯವನ್ನು ತಲುಪಿತು. ಮೂರೂವರೆ ಗಂಟೆಗೆ ದೇವಾಲಯದಲ್ಲಿ ಮಂತ್ರಘೋಷ ಸಹಿತ ಭಜನಾ ಸಂಕೀರ್ತನೆಗಳ ಹಿನ್ನೆಲೆಯಲ್ಲಿ ದೇವಾಲಯದ ದ್ವಾರಪೂಜೆ ನಡೆದು ದೇವರ ದರ್ಶನ ಆರಂಭಗೊಂಡಿತು.
ಅಸಂಖ್ಯಾತ ಮಂದಿ ಸರದಿ ಸಾಲಿನಲ್ಲಿ ಆಗಮಿಸಿ ದೇವರ ವಿಶ್ವರೂಪ ದರ್ಶನ ಪಡೆದರು. ಹಿನ್ನೆಲೆಯ ಭಕ್ತಿ ಸಂಗೀತ ದೈವಿಕ ವಾತಾವರಣಕ್ಕೆ ಸಾಕ್ಷಿಯಾಗಿತ್ತು. ಬಂದ ಎಲ್ಲ ಭಕ್ತಾದಿಗಳಿಗೂ ದೇವಾಲಯದಿಂದ ಪ್ರಸಾದ ವಿತರಣೆ ವ್ಯವಸ್ಥೆಯಿತ್ತು. ಒಂದೇ ಒಂದು ವಿದ್ಯುದ್ದೀಪ ಇಲ್ಲದೇ ಎಲ್ಲವೂ ನೈಸರ್ಗಿಕ ಮಣ್ಣಿನ ಹಣತೆಗಳ ಬೆಳಕಿನಲ್ಲಿ ವೆಂಕಟರಮಣ ದೇವಳವು ಮಿಂದೇಳುವಂತಿತ್ತು. ಸೂರ್ಯೋದಯದ ಮೊದಲು ದೇವರಿಗೆ ವಿಶೇಷ ಪೂಜೆ ನಡೆಯಿತು. ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದವಾಗಿ ಇಲ್ಲಿಯೇ ತಯಾರಾದ ತುಪ್ಪದ ತಿರುಪತಿಯ ಲಾಡು ಮತ್ತು ಫಲವಸ್ತುಗಳನ್ನು ನೀಡಲಾಯ್ತು.
ಬೆಳಿಗ್ಗೆ ನಸುಕಾದರೂ ಸರತಿಯ ಸಾಲು ಕರಗಲಿಲ್ಲ. ಇದೇ ಕಾರಣಕ್ಕೆ ಭಕ್ತಿ ಭಾವ ಪರಾಕಾಷ್ಠೆಯ ವಿಶ್ವರೂಪ ದರ್ಶನ ಭಕ್ತರಿಗೆ ಇಡೀ ವರ್ಷ ಮರೆತು ಹೋಗುವುದೇ ಇಲ್ಲ.
ಉಡುಪಿ : ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯ ಅಂಗವಾಗಿ ಪರ್ಯಾಯ ಪೀಠಾಧೀಶರಾದ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಹತ್ವಾಕಾಂಕ್ಷಿ ಯೋಜನೆಯಾದ ಭಗವದ್ಗೀತಾ ಕೋಟಿ ಲೇಖನ ಯಜ್ಞ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಆಯೋಜಿಸಲಾಗುವ ಬೃಹತ್ ಗೀತೋತ್ಸವ ಉದ್ಘಾಟನೆಗೆ ಕಾಂಚೀ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯನ್ನು ಆಹ್ವಾನಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಕಾಂಚೀ ಶ್ರೀಗಳನ್ನು ಪುತ್ತಿಗೆ ಶ್ರೀಪಾದರ ಅಪೇಕ್ಷೆ ಮೇರೆಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನಾಚಾರ್ಯ ಸಹಿತ ಅಧಿಕಾರಿಗಳು ಭೇಟಿ ಮಾಡಿ ಆಮಂತ್ರಣ ನೀಡಿದರು.
ಪುತ್ತಿಗೆ ಶ್ರೀಪಾದರ ಆಹ್ವಾನವನ್ನು ಮನ್ನಿಸಿದ ಕಾಂಚೀ ಶ್ರೀಗಳು ನವೆಂಬರ್ 20ರಂದು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲು ಸಮ್ಮತಿಸಿದರು.
ಕಾಂಚಿ ಪೀಠದ ಈ ಹಿಂದಿನ ಯತಿಗಳಾಗಿದ್ದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ತೃತೀಯ ಪರ್ಯಾಯ ಸಂದರ್ಭದಲ್ಲಿ ನಡೆದ ನವರತ್ನರಥದ ಉದ್ಘಾಟನೆಗಾಗಿ ಉಡುಪಿಗೆ ಭೇಟಿ ನೀಡಿದ್ದನ್ನು ಸ್ಮರಿಸಬಹುದು.
ರಘುಪತಿ ಭಟ್ ಅವರೇ ಕರಂಬಳ್ಳಿ ದೇವಸ್ಥಾನ ಶುದ್ಧಿಕರಣ ಮಾಡಿಸಿ ವೆಂಕಟರಮಣನ ಕ್ಷಮೆಗೆ ಪಾತ್ರರಾಗಿ – ಶ್ರೀರಾಮಸೇನೆ
ಉಡುಪಿ : ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹತಾಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ನಡೆದುಕೊಳ್ಳುತ್ತಿರುವ ಮಾಜಿ ಶಾಸಕರು ಕೆಲ ಹಿಂದೂ ವಿರೋಧಿ ಶಕ್ತಿಗಳ ಆಟಕ್ಕೆ ಗೊಂಬೆಯಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಖಂಡ ಹಿಂದೂರಾಷ್ಟ್ರದ ಕಲ್ಪನೆಗೆ ಮಗ್ಗಲ ಮುಳ್ಳಾಗಿರುವ ಗೋ ಭಕ್ಷಕರನ್ನು ದೇವಸ್ಥಾನದ ಪ್ರಾಂಗಣದೊಳಕ್ಕೆ ಕರೆಸಿ ದೇವಸ್ಥಾನದ ಪಾವಿತ್ರ್ಯ ತೆಯನ್ನು ಅಶುದ್ದಿ ಗೊಳಿಸಿರುವಿರಿ. ಹಿಂದೂ ಸಮಾಜದ ಬೆಂಬಲದಿಂದಲೇ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ ತಾವು ಅಧಿಕಾರದಲಿದ್ದಾಗ ಹಿಂದೂ ಫೈರ್ ಬ್ರಾಂಡ್ ತರ ನಡೆದುಕೊಳ್ಳುತ್ತಿದ್ದ ತಾವು ಇತ್ತೀಚಿನ ದಿನಗಳ ನಿಮ್ಮ ಕಾರ್ಯವೈಖರಿ ಅನುಮಾನ ಹುಟ್ಟಿಸುವಂತಿದೆ. ಇನ್ನಾದರೂ ಬುದ್ಧಿಕಲಿತು ವೆಂಕಟರಮಣನ ಶಾಪಕ್ಕೆ ತುತ್ತಾಗದೆ ದೇವಸ್ಥಾನ ಶುದ್ಧೀಕರಿಸಿ ಹಿಂದೂ ಸಮಾಜದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಿ ಎಂದು ಶ್ರೀರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಪೂಜಾರಿ ಆಗ್ರಹಿಸಿದ್ದಾರೆ.
ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಿಜಯದಾಸರ ಆರಾಧನೆ ಉತ್ಸವದಲ್ಲಿ ಮೇಘಾಲಯದ ರಾಜ್ಯಪಾಲರಾದ ಎಚ್ ಸಿ ವಿಜಯಶಂಕರ್ ಪಾಲ್ಗೊಂಡರು.
ಶ್ರೀ ಕೃಷ್ಣ ಮುಖ್ಯ ಪ್ರಾಣರ ದರ್ಶನಗೈದ ರಾಜ್ಯಪಾಲರು ಗೀತಾಮಂದಿರದಲ್ಲಿ ಪರ್ಯಾಯ ಶ್ರೀಪಾದರ ಅನುಗ್ರಹ ಪ್ರಸಾದವನ್ನು ಪಡೆದರು. ಶ್ರೀಪಾದರ ಜಾಗತಿಕ ಮಟ್ಟದ ಧಾರ್ಮಿಕ ಆಂದೋಲನ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆಯನ್ನೂ ಪಡೆದರು.
ಕರ್ನಾಟಕದ ಹರಿದಾಸರ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ರಾಜ್ಯಪಾಲರು ಉಡುಪಿಯ ಪ್ರಸಿದ್ಧ ಕನಕನಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನವನ್ನು ಪಡೆದು ಭಕ್ತ ಕನಕದಾಸರ ವಿಗ್ರಹಕ್ಕೆ ನಮಿಸಿದರು.
ಶ್ರೀವಿಜಯದಾಸರ ಆರಾಧನೆ ಪ್ರಯುಕ್ತ ನಡೆಯುತ್ತಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲೂ ಪಾಲ್ಗೊಂಡರು. ಉಡುಪಿಯ ದೈವಿಕ ಸ್ಪಂದನದಿಂದ ವಿಶೇಷ ಸಂತೋಷಗೊಂಡು ಉಡುಪಿಯ ಶ್ರೀಕೃಷ್ಣನ ಮಹತ್ವವನ್ನು ಶ್ರೀಪಾದರ ಅನುಗ್ರಹಕ್ಕೆ ಪಾತ್ರರಾದರು.
ಮುಲ್ಕಿ : ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನ.30ರಂದು ಲಕ್ಷದೀಪ ಬಲಿ ಉತ್ಸವ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವರ ಸನ್ನಿಧಿಯಲ್ಲಿ ಅರ್ಚಕ ಪ್ರಸಾದ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಸಚಿವ ಅಭಯ ಚಂದ್ರ ಜೈನ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀಮೆಯ ಅರಸ ಹಾಗೂ ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಾಹಣಾಧಿಕಾರಿ ಶ್ವೇತಾ ಪಳ್ಳಿ, ಅಕೌಂಟೆಂಟ್ ಶಿವಶಂಕರ್, ಲಕ್ಷದೀಪೋತ್ಸವ ಸಮಿತಿಯ ಪದಾಧಿಕಾರಿಗಳಾದ ಸುನಿಲ್ ಆಳ್ವ, ಮಹೀಮ್ ಹೆಗ್ಡೆ, ಕೃಷ್ಣರಾಜ ಬಪ್ಪನಾಡು, ಪುರುಷೋತ್ತಮ ಬಡಗುಹಿತ್ಲು, ಚಿರಾಗ್ ಬಪ್ಪನಾಡು, ಗಿರೀಶ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಲಕ್ಷದೀಪೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಬೆಳಿಗ್ಗೆ ಲಕ್ಷ ಕುಂಕುಮಾರ್ಚನೆ, ಸಂಜೆ 4 ಗಂಟೆಗೆ ಸಾರ್ವಜನಿಕ ಶನಿಪೂಜೆ, ರಾತ್ರಿ 8 ಗಂಟೆಗೆ ಲಕ್ಷದೀಪ ಬಲಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿದ್ದು ಬಳಿಕ ಸಾರ್ವಜನಿಕ ಭಕ್ತಾದಿಗಳಿಗೆ ಫಲಹಾರ ವ್ಯವಸ್ಥೆ ಇದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶ್ರೀ ಬೋಳಂಬಳ್ಳಿ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲಿ ಮೂರ್ತಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದು ಬೈಂದೂರಿಗೆ ವಿಗ್ರಹವನ್ನು ತರಲಾಯಿತು.
ಬೈಂದೂರು ಕಂಬದಕೋಣೆ ಜಂಕ್ಷನ್ನಲ್ಲಿ ಬಾಹುಬಲಿಯ ಮೂರ್ತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯ್ತು. ನೂರಾರು ಜನ ಬೋಳಂಬಳ್ಳಿವರೆಗೆ ಅದ್ಧೂರಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯ್ತು. ಮೂರ್ತಿಯ ಫಿನಿಶಿಂಗ್ ಮತ್ತು ಪೀಠದ ಕೆತ್ತನೆ ಇನ್ನುಮುಂದೆ ನಡೆಯಲಿದೆ ಎಂದು ಬೋಳಂಬಳ್ಳಿ ಕ್ಷೇತ್ರದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಈಗಾಗಲೇ ಕಾರ್ಕಳ, ವೇಣೂರು, ಧರ್ಮಸ್ಥಳದಲ್ಲಿ ಬಾಹುಬಲಿಯ ವಿಗ್ರಹ ಸ್ಥಾಪನೆ ಮಾಡಲಾಗಿದ್ದು ಪ್ರತೀ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ದೇಶದ ಅತೀ ಎತ್ತರದ ಗೊಮ್ಮಟೇಶ್ವನ ವಿಗ್ರಹ ಹಾಸನದ ಶ್ರವಣಬೆಳಗೊಳದಲ್ಲಿದೆ. ಇದೀಗ ಬೈಂದೂರಿನ ಬೋಳಂಬಳ್ಳಿಯಲ್ಲಿ ಬಾಹುಬಲಿಯ ನೂತನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ.
ಲವ್ ಜಿಹಾದ್ : ‘ಸಮೀರ್’ ಎಂಬಾತನಿಗೆ ಶಿಕ್ಷೆ ನೀಡಿ ಎಂದು ಬರೆದ ಪತ್ರ ಕಾಣಿಕೆ ಹುಂಡಿಯಲ್ಲಿ ಪತ್ತೆ…!!
ಪುತ್ತೂರು : ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪುತ್ತೂರಿನಲ್ಲಿ ಹೊಸ ಘಟನೆಯೊಂದು ಬೆಳಕಿಗೆ ಬಂದಿದೆ. ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ದೇವಾಲಯದ ಕಾಣಿಕೆ ಹುಂಡಿ ತೆರೆಯುವ ಸಂದರ್ಭ ಲವ್ ಜಿಹಾದ್ ಬಲೆಗೆ ಬಿದ್ದ ಯುವತಿಯೋರ್ವಳು ದೇವರಿಗೆ ಬರೆದ ಪತ್ರವೊಂದು ಸಿಕ್ಕಿದ್ದು ಹೊಸ ಸಂಚಲನ ಸೃಷ್ಟಿ ಮಾಡಿದೆ.
ಕಾಣಿಕೆ ಹುಂಡಿ ಲೆಕ್ಕಾಚಾರದ ವೇಳೆ ಸಿಕ್ಕಿದ ಚೀಟಿಯಲ್ಲಿ “ಸಮೀರ್ ಅನ್ನುವವನು ನನ್ನ ಜೀವನ ಹಾಳು ಮಾಡಿದ್ದಾನೆ. ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ.. ಅವನ ಜೀವನ ಕೂಡ ಹಾಳಗಬೇಕು. ಅವನಿಗೆ ಮದುವೆಯಾಗಲು ಹುಡುಗಿ ಸಿಗಬಾರದು – ಓ ದೇವರೆ ಇದು ನನ್ನ ಪ್ರಾರ್ಥನೆ” ಎಂದು ಬರೆಯಲಾಗಿದೆ.
ಇತಿಹಾಸ ಪ್ರಸಿದ್ಧವಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಅನೇಕ ಕಾರಣಿಕದ ಸಂಗತಿಯನ್ನು ಒಳಗೊಂಡಿದ್ದು, ಹತ್ತೂರ ಒಡೆಯನಲ್ಲಿ ತಮ್ಮ ಮನದಾಳದ ಮಾತನ್ನು ಚೀಟಿ ಮೂಲಕ ತಿಳಿಸಿದ್ದಾರೆ. ಸದ್ಯ ಈ ಪ್ರಕರಣದ ಮೂಲಕ ಮತ್ತೊಂದು ಲವ್ ಜಿಹಾದ್ ಘಟನೆ ಬೆಳಕಿಗೆ ಬಂದಂತಾಗಿದೆ. ಈ ಪತ್ರದ ವಿಷಯ ತಿಳಿದು ಪುತ್ತೂರಿನ ಹಿಂದೂ ಸಮಾಜ, ದೇವರೇ ನ್ಯಾಯ ಒದಗಿಸಲಿ ಎಂದು ಮನವಿ ಮಾಡಿದೆ.