ಬೊಳಿಯಾರ್ ಹಿಂದು ಕಾರ್ಯಕರ್ತರಿಗೆ ಚೂರಿ ಇರಿದ ಪ್ರಕರಣವನ್ನು ಖಂಡಿಸಿ ಜೂನ್ 18ರ ಮಂಗಳವಾರದಂದು ಮಧ್ಯಾಹ್ನ 3.30 ಕ್ಕೆ ಸರಿಯಾಗಿ ಅಸೈಗೋಳಿ ಮೈದಾನದಲ್ಲಿ ಹಿಂದು ಜನಜಾಗೃತಿ ಸಮಿತಿ ಉಳ್ಳಾಲ ತಾಲೂಕು ಇದರ ನೇತೃತ್ವದಲ್ಲಿ ಬೃಹತ್ ಜನಾಂದೋಲನ ಜನಜಾಗೃತಿ ಸಭೆ ನಡೆಯಲಿದೆ. ಹಿಂದು ಸಮಾಜ ಬೃಹತ್ ಸಂಖ್ಯೆಯಲ್ಲಿ ಅಸೈಗೊಳಿಯಲ್ಲಿ ಜಾಗೃತಿಯಾಗುವಂತೆ ಹಿಂ.ಜಾ.ವೇ.ಕರೆ ನೀಡಿದೆ.
Problems
ಜೂ.17ಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ : ಕಿಶೋರ್ ಕುಮಾರ್ ಕುಂದಾಪುರ
ಉಡುಪಿ : ಯಾವುದೇ ಸಂಪನ್ಮೂಲದ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿಯಾಗಿ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಅನುಷ್ಠಾನಗೊಳಿಸದೆ ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು ಅಗತ್ಯ ವಸ್ತುಗಳ ದರದ ಜೊತೆಗೆ ಪೆಟ್ರೋಲ್ ಡೀಸೆಲ್ ದರವನ್ನು ದಿಡೀರ್ ಏರಿಕೆ ಮಾಡಿರುವುದು ಖಂಡನೀಯ. ರಾಜ್ಯ ಸರಕಾರದ ಈ ಜನ ವಿರೋಧಿ ನೀತಿಯನ್ನು ಖಂಡಿಸಿ ಜೂ.17 ರಂದು ಬೆಳಿಗ್ಗೆ 11.30ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ಮೂಲಭೂತ ಆದ್ಯತೆಗಳೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಚಿವರಿಗೆ ಹೊಸ ಕಾರು ಖರೀದಿ ಸಹಿತ ಅನಗತ್ಯ ದುಂದುವೆಚ್ಚಗಳಿಗೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇಂಧನ ದರ ಏರಿಕೆ ಮೂಲಕ ಗಾಯದ ಮೇಲೆ ಬರೆ ಹಾಕಿದೆ.
ಹಳಿ ತಪ್ಪಿದ ಕಾನೂನು ಸುವ್ಯವಸ್ಥೆ, ವಾಲ್ಮೀಕಿ ನಿಗಮದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಲೋಕಸಭಾ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣವನ್ನು ನಡೆಸುತ್ತಾ ರಾಜ್ಯವನ್ನು ದಿವಾಳಿಯ ಅಂಚಿಗೆ ದೂಡಿರುವುದು ವಾಸ್ತವ. ಆದರೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎನ್ನುವ ಪೊಳ್ಳು ಮಾತುಗಳಿಂದ ಮಂಕು ಬೂದಿ ಎರಚುತ್ತಾ ಸದ್ದಿಲ್ಲದೇ ಜನತೆಯ ಜೇಬಿಗೆ ಕತ್ತರಿ ಹಾಕುತ್ತಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ, ಇಂಧನ ದರ ಏರಿಕೆಯು ಎಲ್ಲ ಕ್ಷೇತ್ರಗಳಿಗೂ ಪರಿಣಾಮ ಬೀರಿ ಜನತೆಯ ಜೀವನ ದುಸ್ತರವಾಗುತ್ತದೆ ಎಂದು ಪುಂಖಾನುಪುಂಖ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಪೆಟ್ರೋಲ್ ದರವನ್ನು ಪ್ರತೀ ಲೀಟರ್ ಗೆ 3 ರೂ. ಹಾಗೂ ಡೀಸೆಲ್ ದರವನ್ನು ಪ್ರತೀ ಲೀಟರ್ ಗೆ 3 ರೂ. 50 ಪೈಸೆಗೆ ಏರಿಸಿರುವ ರಾಜ್ಯ ಸರಕಾರದ ಘನoಧಾರಿ ಕಾರ್ಯವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಜ್ಯದ ಖಜಾನೆಯನ್ನು ಬರಿದಾಗಿಸಿ ವಿಪರೀತ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ದರವನ್ನು ಏರಿಸುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವುದು ಜಗಜ್ಜಾಹೀರಾಗಿದೆ. ಜನರಿಂದಲೇ ಸುಲಿಗೆ ಮಾಡಿ ಜನತೆಗೆ ಉಚಿತ ಖಚಿತ ನಿಶ್ಚಿತ ಖಂಡಿತಗಳ ಗ್ಯಾರಂಟಿ ನೀಡುವ ಔಚಿತ್ಯವೇನಿದೆ ಎಂಬುದನ್ನು ಅರಿಯುವಷ್ಟು ಜನತೆ ಪ್ರಬುದ್ಧರಾಗಿದ್ದಾರೆ.
ರಾಜ್ಯ ಸರಕಾರ ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅದೇಶವನ್ನು ಹಿಂಪಡೆಯಬೇಕು. ತಪ್ಪಿದಲ್ಲಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಜನಪರ ಹೋರಾಟ ನಡೆಸಲಿದೆ. ಕಾಂಗ್ರೆಸ್ಸಿನ ಈ ಜನ ವಿರೋಧಿ ನೀತಿಗೆ ಜನತೆ ಮುoದಿನ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಟೆಲ್, ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ವಿಲೇವಾರಿಗೆ ಶಾಶ್ವತ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಒತ್ತಾಯ
ಮುಲ್ಕಿ : ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಹು ಮಹಡಿ ಕಟ್ಟಡ, ಮನೆ, ವಾಣಿಜ್ಯ ವಸತಿ ಸಮುಚ್ಚಯದ ತ್ಯಾಜ್ಯ ನೀರನ್ನು ದ್ರವ ತ್ಯಾಜ್ಯ ಘಟಕಕ್ಕೆ ಅನಧಿಕೃತವಾಗಿ ಬಿಡುತ್ತಿರುವುದರಿದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತ್ತುಲ್ ಪರಿಸರದಲ್ಲಿ ತ್ಯಾಜ್ಯ ನೀರು ಸರಿಯಾಗಿ ಹರಿದು ಹೋಗದೆ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು ಶಾಶ್ವತ ವ್ಯವಸ್ಥೆ ಕಲ್ಪಿಸಲು ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ವಾಣಿಜ್ಯ ವಸತಿ ಸಮುಚ್ಚಯ, ಹೋಟೆಲ್ ಮಾಲೀಕರ, ಸಾರ್ವಜನಿಕರ ಸಭೆ ನಡೆಯಿತು. ಸಭೆಯಲ್ಲಿ ಉದ್ಯಮಿ ಪ್ರಮೋದ್ ಕುಮಾರ್ ಮಾತನಾಡಿ ಹೋಟೆಲ್, ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ಸರಿಯಾದ ರೀತಿಯಲ್ಲಿ ಹರಿದು ಹೋಗಲು ಶಾಶ್ವತ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಮಾತನಾಡಿ ಹಿಂದಿನ ಕಿನ್ನಿಗೋಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷದಿಂದ ತ್ಯಾಜ್ಯ ಬಿಡುವ ಅವೈಜ್ಞಾನಿಕ ಕಾಮಗಾರಿ ನಡೆದಿದ್ದು ಈಗಲೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಇದೇ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇಲ್ಲಿನ ಅಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಇದರಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ, ಅಭಿವೃದ್ಧಿ ಬಗ್ಗೆ ಮಾತನಾಡಿದರೆ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆ ಒಡ್ಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಜ್ಯ ನಿರ್ವಹಣೆ ಅವ್ಯವಸ್ಥೆಯಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತುಲ್ ಪರಿಸರದ ಜನ ಹೈರಾಣಾಗಿದ್ದಾರೆ ಇದಕ್ಕೆ ಪೂರ್ಣ ಪ್ರಮಾಣದ ಪರಿಹಾರ ಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರಾದ ಐವನ್ ಮಾತನಾಡಿ ತ್ಯಾಜ್ಯ ನೀರು ಬಿಡುವ ಪ್ಲಾಂಟ್ ಶುರುವಾಗುವ ಮೊದಲೇ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಆದರೂ ಹಿಂದಿನ ಪಂಚಾಯತ್ ಆಡಳಿತ ಕ್ಯಾರೇ ಎನ್ನದೆ ಅರ್ಧಂಬರ್ಧ ಕಾಮಗಾರಿ ನಡೆಸಿ ಈಗ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಮಾಜೀ ಜಿ.ಪಂ. ಉಪಾಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಚುನಾಯಿತ ಸದಸ್ಯರು ಇಲ್ಲದೆ ಆಡಳಿತಾಧಿಕಾರಿಗಳು ತಮ್ಮದೇ ಆಟ ಆಡುತ್ತಿದ್ದು ಅವ್ಯವಸ್ಥೆಗಳ ಬಗ್ಗೆ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಪ್ರತೀ ಮನೆಗೆ ಹೋಗದಿದ್ದರೂ ಮನೆಯವರಿಂದ ತ್ಯಾಜ್ಯ ವಿಲೇವಾರಿ ಹಣ ವಸೂಲು ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ನಾಗರಿಕರನ್ನು ಸಮಾಧಾನಪಡಿಸಿ ಮಾತನಾಡಿ ತ್ಯಾಜ್ಯ ನೀರಿನ ಘಟಕದಲ್ಲಿರುವ ಅನಧಿಕೃತ ಕನೆಕ್ಷನ್ ಕೂಡಲೇ ತೆಗೆಯಬೇಕು, ದ್ರವ ತ್ಯಾಜ್ಯ ಮಾತ್ರ ಬಿಡಬೇಕು, ನಾಗರಿಕರ ಹಾಗೂ ಹೋಟೆಲ್ ವಸತಿ ಸಮುಚ್ಚಯ ಮಾಲಕರ ಸಮಿತಿ ರಚನೆ ಮಾಡಿ ಘಟಕವನ್ನು ಶುದ್ಧೀಕರಣ ಗೊಳಿಸಬೇಕು ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತ್ ಮೂಲಕ ಜಾಗ ಗುರುತಿಸಿ 10 ಕೋಟಿ ವೆಚ್ಚದಲ್ಲಿ ನೂತನ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗರಾಜ್, ಜೂನಿಯರ್ ಇಂಜಿನಿಯರ್ ನಾಗರಾಜ್ ಎಚ್ ಉಪಸ್ಥಿತರಿದ್ದರು.
ಉಡುಪಿ : ಪ್ರತೀ ಬಾರಿ ತೆರಿಗೆ ವಿಷಯ ಬಂದಾಗ ಮೊದಲಿಗೆ ಟ್ಯಾಕ್ಸಿಗಳ ಮೇಲೆ ಹೊರೆ ಹಾಕಲಾಗುತ್ತದೆ. ಆದರೂ ಸರಕಾರಗಳು ಟ್ಯಾಕ್ಸಿಯವರಿಗೆ ಏನು ನೀಡಿದೆ ಎಂದು ಪ್ರಶ್ನಿಸಿರುವ ಶ್ರೀರಾಮ ಸೇನೆ, ಟ್ಯಾಕ್ಸಿಗಳಿಗೆ ಸಬ್ಸಿಡಿ ತೈಲ ವಿತರಿಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಈಗಾಗಲೇ ರಾಜ್ಯ ಸರಕಾರದ ಕೆಲವು ತೆರಿಗೆ ನಿಯಮದಿಂದ ಟ್ಯಾಕ್ಸಿ ಮಾಲಕರು ಸಂಕಷ್ಟ ಅನುಭವಿಸುವಂತಾಗಿದೆ.
ಪ್ರತೀ ಬಾರಿಯೂ ಚುನಾವಣೆ ಇನ್ನಿತರ ಸರಕಾರದ ಕೆಲಸಕ್ಕೆ ಟ್ಯಾಕ್ಸಿಗಳು ಬೇಕು. ಆದರೆ, ನಂತರ ಟ್ಯಾಕ್ಸಿಗಳನ್ನು ಕಡೆಗಣಿಸುವುದು ರಾಜ್ಯ ಸರಕಾರಕ್ಕೆ ಅದರಲ್ಲೂ ಈಗಿನ ಮುಖ್ಯಮಂತ್ರಿಯ ಜಾಯಮಾನವಾಗಿದೆ.
ಕರ್ನಾಟಕದಲ್ಲಿ ತೆರಿಗೆ ಏರಿಸಿ, ಹೊರ ರಾಜ್ಯದ ಪ್ರವಾಸಿಗಳು ಈ ರಾಜ್ಯಕ್ಕೆ ಬಾರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಿಂದ ಹೈರಾಣಾಗಿರುವ ಟ್ಯಾಕ್ಸಿಗಳಿಗೆ ಮತ್ತೆ ಡೀಸೆಲ್, ಪೆಟ್ರೋಲ್ ದರಏರಿಸುವ ಮೂಲಕ ಬರೆ ಎಳೆಯಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ತೈಲ ಬೆಲೆ ಏರಿಕೆ ಮಾಡಿರುವುದು ನಗ್ನ ಸತ್ಯ.
ಗ್ಯಾರಂಟಿಗಳಿಗಾಗಿ ಪಕ್ಷದ ಹಣ ಬಳಸಿ. ಸಾಮಾನ್ಯ ಕುಟುಂಬಗಳನ್ನು ಬಲಿ ಕೊಡಬೇಡಿ ಎಂದು ಅಂಬೆಕಲ್ಲು ಸಲಹೆ ನೀಡಿದ್ದಾರೆ. ಕೂಡಲೇ ಡೀಸೆಲ್ ದರ ಕಡಿಮೆ ಮಾಡಬೇಕು. ಇಲ್ಲವಾದರೆ ಟ್ಯಾಕ್ಸಿಗಳಿಗೆ ಡೀಸೆಲ್ ಸಬ್ಸಿಡಿ ನೀಡಿ ಎಂದು ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಸರಕಾರವನ್ನು ಆಗ್ರಹಿಸಿದ್ದಾರೆ
ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿಯ ದ್ವಿಭಾಜಕದ ಕಲ್ಲುಗಳು ಜೆಸಿಬಿಯಿಂದ ಶಿಫ್ಟ್; ಸುಗಮ ಸಂಚಾರಕ್ಕೆ ಬ್ಯಾರಿಕೇಡ್ ಅಳವಡಿಕೆ
ಉಡುಪಿ : ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ರಸ್ತೆಯು ಕಿರಿದಾಗಿದ್ದು, ಪದೇ ಪದೇ ಅಪಘಾತಗಳು ನಡೆಯುತ್ತಿದ್ದ ಕಾರಣ ಮಾನ್ಯ ಪೊಲೀಸ್ ಉಪಾಧಿಕ್ಷಕರದ ಡಿ ಟಿ ಪ್ರಭುರವರ ಮಾರ್ಗದರ್ಶನದಲ್ಲಿ, ಮಾನ್ಯ ಮಣಿಪಾಲ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ರವರ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ರಾ ಹೆ 166 ಎ ರಲ್ಲಿ ರಸ್ತೆಯ ಮದ್ಯೆ ದ್ವಿಭಾಜಕಕ್ಕೆ ಹಾಕಿರುವ ಕಲ್ಲುಗಳನ್ನು ಜೆಸಿಬಿಯಿಂದ ತೆಗೆಸಿ ಅಲ್ಲಿ ಬ್ಯಾರಿಕೆಡ್ಗಳನ್ನು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಉಡುಪಿ : ಪ್ರತಿ ವರ್ಷ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮೂಳೂರಿನ ತೊಟ್ಟಂ ಪ್ರದೇಶ ಕಡಲ್ಕೊರೆತ ಉಂಟಾಗುವ ಪ್ರದೇಶವಾಗಿದ್ದು, ಹಲವಾರು ತೆಂಗಿನಮರಗಳು ಬಲಿಯಾಗುತ್ತಿವೆ ಆಸ್ತಿ ಪಾಸ್ತಿ ಹಾನಿ ಹಾಗೂ ಜನಜೀವನ ಅಸ್ತವ್ಯಸ್ತತೆಗೆ ಕಾರಣವಾಗುತ್ತದೆ.
ಈ ಪ್ರದೇಶಕ್ಕೆ ಮಾನ್ಯ ತಹಶಿಲ್ದಾರ್ ಪ್ರತಿಭಾ ಆರ್. ಭೇಟಿ ನೀಡಿ ಪರಿಶೀಲಿಸಿದರು. ತಡೆಗೋಡೆ ನಿರ್ಮಿಸಲು ಮತ್ತು ಜಾರುತ್ತಿರುವ ಬ್ರೇಕ್ ವಾಟರ್ ಕಲ್ಲುಗಳನ್ನು ವ್ಯವಸ್ಥಿತಗೊಳಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ರವರಿಗೆ ಸೂಚನೆ ನೀಡಲಾಗಿದೆ. ಹಾಗೂ ಅಲ್ಲಿನ ನಿವಾಸಿಗಳಿಗೆ ಕಡಲ್ಕೊರೆತದ ಪರಿಸ್ಥಿತಿಯ ಕುರಿತು ತಿಳುವಳಿಕೆ ನೀಡಿದೆ.
ಸಸ್ಯವರ್ಗದ ಉಪಸ್ಥಿತಿಯು ಸಮುದ್ರದ ಸವೆತ, ಚಂಡಮಾರುತದಂಥ ಬಿರುಗಾಳಿಗಳಿಗೆ ನೈಸರ್ಗಿಕ ನಿರೋಧಕವಾಗಿದೆ ಎಂದು ಸಾಬೀತಾಗಿದೆ ಎಂಬುದನ್ನು ಗಮನಿಸಲಾಗಿದೆ. ಆದ್ದರಿಂದ ನಾವು ಕಡಲ್ಕೊರೆತ ಎದುರಿಸಲು ಸಮರ್ಥನೀಯ ಕ್ರಮವಾಗಿ ಜೈವಿಕ ತಡೆಗೋಡೆಯಾಗಿ ಜೈವಿಕ ರಕ್ಷಾಕವಚವನ್ನು ನಿರ್ಮಿಸಬಹುದಾಗಿದೆ.
ಈ ಕ್ರಮದ ಕುರಿತು ಶೀಘ್ರದಲ್ಲೇ ಬಂದರು ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಪತ್ರಿಕೆಗೆ ತಿಳಿಸಿದ್ದಾರೆ.
ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಲೋಕನಾಥ್ ಅವರು ಸ್ಥಳ ಪರಿಶೀಲನೆಗೆ ಸಾತ್ ನೀಡಿದರು.
ಮಳೆಗಾಲದ ವಿಪತ್ತು ನಿರ್ವಹಣೆಗೆ ಕ್ರಮ ವಹಿಸಿ : ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ
ಉಡುಪಿ : ಮಳೆಗಾಲ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಮಳೆಗೆ ಸಂಬಂದಿಸಿದ ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರಿಸ್ಥಿತಿ ನಿರ್ವಹಣೆಗೆ ತುರ್ತಾಗಿ ಸ್ಪಂದಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರ ಉಪಸ್ಥಿತಿಯಲ್ಲಿ 19 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಸಭೆ ನಡೆಸಿದರು.
ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಸಹಿತ ಎಲ್ಲಾ ರಸ್ತೆಗಳ ತೋಡು ಹೂಳೆತ್ತುವುದು, ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿ ಅಗತ್ಯ ಸಲಕರಣೆ ಒದಗಿಸುವುದು, ಮಳೆ ಹಾನಿ ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ಕ್ರಮ ಹಾಗೂ ಸಂತ್ರಸ್ತ ಅರ್ಹ ಕುಟುಂಬಗಳಿಗೆ ಗರಿಷ್ಠ ಪರಿಹಾರ ಮಂಜೂರು ಮಾಡಲು ಆದ್ಯತೆ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಅಂಗನವಾಡಿ, ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮ, ಕಳೆದ ವರ್ಷ ಮಳೆ ಹಾನಿಗೀಡಾದ ಬಾಕಿ ಪರಿಹಾರ ಮೊತ್ತ ಬಿಡುಗಡೆ, ವಿದ್ಯುತ್ ಸರಬರಾಜು ವ್ಯತ್ಯಯವಾಗದಂತೆ ಮೆಸ್ಕಾಂ ಇಲಾಖೆ ಹಾಗೂ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಮಾಡುವಂತೆ ಹೇಳಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಲೈಸನ್ಸ್, 9/11, ಜಾತಿ ಆದಾಯ ಪ್ರಮಾಣ ಪತ್ರ, ಸಣ್ಣ ರೈತ, ತ್ಯಾಜ್ಯ ನಿರ್ವಹಣೆ ಸಹಿತ ಸಾರ್ವಜನಿಕರ ಕಡತಗಳನ್ನು ಪರಿಶೀಲಿಸಿ ಶೀಘ್ರ ವಿಲೇವಾರಿಗೆ ಅಗತ್ಯ ಕ್ರಮ ವಹಿಸಲು ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಗುರುರಾಜ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಜಯ ಹಾಗೂ ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ಇಬ್ರಾಹಿಂಪುರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಆದಿ ಉಡುಪಿ ಮೀನು ಮಾರುಕಟ್ಟೆಯಲ್ಲಿ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯಲ್ಲಿರುವ ಸಾರ್ವಜನಿಕ ಶೌಚಾಲಯ
ಉಡುಪಿ : ಆದಿಉಡುಪಿ ಮೀನು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಶೌಚಾಲಯವು ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬುವಾಸನೆಯಿಂದ ನಾರುತ್ತಿದ್ದು ಸಾರ್ವಜನಿಕರು ಮೂತ್ರಬಾಧೆ ತೀರಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಶೌಚಾಲಯ ಕೊಠಡಿ ಶುಚಿಗೊಳಿಸದೆ ಹಲವು ತಿಂಗಳುಗಳೇ ಕಳೆದಿದ್ದು. ಮದ್ಯದ ಬಾಟಲಿಗಳಿಂದ ತುಂಬಿಕೊಂಡಿದಲ್ಲದೆ, ಗೋಡೆಗಳ ಬಣ್ಣವು ಮಾಸಿದ್ದು, ಜೇಡರ ಬಲೆಗಳು ಆವರಿಸಿಕೊಂಡಿದೆ. ಮಾರಕ ರೋಗವಾಹಕ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ. ಶೌಚಾಲಯವು ಸುಸ್ಥಿತಿಯಲ್ಲಿ ಇಲ್ಲದೆ, ಮೀನು ಮಾರುಕಟ್ಟೆಗೆ ಬರುವ ಗ್ರಾಹಕರು, ಮೀನು ವ್ಯಾಪಾರಸ್ಥರು ಬಹಳವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಶುಚಿತ್ವ ನಿರ್ವಹಣೆ ಇಲ್ಲದೆ ಶೌಚಾಲಯ ಪಾಳುಬಿದ್ದಿದೆ. ನಗರಸಭೆ ತಕ್ಷಣ ಇಲ್ಲಿಯ ಅವ್ಯವಸ್ಥೆಯಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಸೂಕ್ತಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದ್ದಾರೆ.
ಉಡುಪಿ : ಎರಡೇ ದಿನ ಅಂತರದಲ್ಲಿ ಉಡುಪಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ತಡರಾತ್ರಿ ಸಂಭವಿಸಿದೆ.
ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಇಂದ್ರಾಳಿಯಲ್ಲಿ ರಸ್ತೆ ವಿಭಜಕವಾಗಿ ಇರಿಸಲಾಗಿದ್ದ ಕಲ್ಲುಗಳಿಗೆ ಢಿಕ್ಕಿ ಹೊಡೆದು ಪಲ್ಟಿಯಾಯ್ತು. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡರು. ಕಾರು ಪಲ್ಟಿಯಾಗುವ ಸಂದರ್ಭ ದೊಡ್ಡ ಕಲ್ಲೊಂದು ಬೈಕಿನತ್ತ ಚಿಮ್ಮಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಓರ್ವ ಪ್ರಯಾಣಿಕನ ಸ್ಥಿತಿ ಚಿಂತಾ ಜನಕವಾಗಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯಲ್ಲಿ ರಸ್ತೆ ಮಧ್ಯೆ ವಿಭಜಕವಾಗಿ ಕಲ್ಲುಗಳನ್ನು ಇರಿಸಲಾಗಿದೆ. ಇತ್ತೀಚೆಗೆ ಆ ಕಲ್ಲುಗಳನ್ನು ಎಲ್ಲೆಂದರಲ್ಲಿ ಇರಿಸಲಾಗಿತ್ತು. ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಟ್ರಾಫಿಕ್ ಪೊಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಲಕ್ಷಕ್ಕೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಉಡುಪಿ : ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ತುರ್ತು ವಿಲೇವಾರಿಗೆ ಆದ್ಯತೆ ನೀಡುವಂತೆ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭೆಯಲ್ಲಿ ಇ – ಖಾತಾ ಅರ್ಜಿಗಳ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿದ್ದು, ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಹಲವು ಬಾರಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ.
ಮನೆ ಹಾಗೂ ವಾಣಿಜ್ಯ ಕಟ್ಟಡಗಳ ತೆರಿಗೆ ಪಾವತಿಗೆ ಸೂಕ್ತ ವ್ಯವಸ್ಥೆ, ಸರ್ವರ್ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಬೇಕು. ನಗರಸಭೆಗೆ ಸಂಬಂಧಿಸಿದ ಜಾಗಗಳನ್ನು ಗುರುತಿಸಿ ಸುಪರ್ದಿಗೆ ಪಡೆಯಲು ಕ್ರಮ ವಹಿಸಬೇಕು.
ವಿವಿಧ ಮೂಲಗಳ ತೆರಿಗೆ ಸಂಗ್ರಹದ ಜೊತೆಗೆ ಬಾಕಿ ಇರುವ ತೆರಿಗೆ ಸಂಗ್ರಹಣೆಗೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ರಿಕ್ಷಾ ನಿಲ್ದಾಣ, ಬಸ್ ನಿಲ್ದಾಣ ನಿರ್ಮಾಣ, ವಾಣಿಜ್ಯ ಸಂಕೀರ್ಣಗಳ ನಿರ್ವಹಣೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಹೇಳಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತರಾದ ರಾಯಪ್ಪ, ಕಂದಾಯ ಅಧಿಕಾರಿ ಸಂತೋಷ್, ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.