ಇಂದ್ರಾಣಿ ಕಾಲುವೆಗೆ ಜನರು ಮತ್ತೆ ಮತ್ತೆ ತ್ಯಾಜ್ಯ ಎಸೆಯುತ್ತಿದ್ದು, ಪ್ಲಾಸ್ಟಿಕ್ ಬಾಟಲಿ, ಬಟ್ಟೆ ವೈದ್ಯಕೀಯ ತ್ಯಾಜ್ಯ ಸಹಿತ ಮೊದಲಾದ ತ್ಯಾಜ್ಯಗಳು ಅಪಾರ `ಪ್ರಮಾಣದಲ್ಲಿ ಶೇಖರಣೆಗೊಂಡಿದೆ. ಕೊಡಂಕೂರಿನಲ್ಲಿ ಇಂದ್ರಾಣಿ ನದಿಗೆ ಅಳವಡಿಸಿದ ಟ್ರ್ಯಾಶ್ ಬ್ಯಾರಿಯಲ್ನಲ್ಲಿ ಸಾಕಷ್ಟು ಪ್ರಮಾಣದ ತ್ಯಾಜ್ಯ ಶೇಖರಣೆಗೊಂಡಿದೆ. ಎಲ್ಲ ತ್ಯಾಜ್ಯವನ್ನು ಸಂಸ್ಕರಣ ಘಟಕಕ್ಕೆ ಕಳುಹಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ
Problems
ಕಂಪೌಂಡ್ ಕುಸಿದು ಮನೆಗೆ ಹಾನಿ – ಮಣ್ಣಿನಡಿ ಸಿಲುಕಿದ ಮಕ್ಕಳು; ಮದನಿನಗರ ದುರಂತದ ಬೆನ್ನಲ್ಲೇ ಮತ್ತೊಂದು ಘಟನೆ
ಪುತ್ತೂರು : ದ.ಕ.ಜಿಲ್ಲೆಯ ಕುತ್ತಾರು ಮದನಿನಗರದಲ್ಲಿ ನಿನ್ನೆ ಕಂಪೌಂಡ್ ಕುಸಿದು ಮನೆಯ ಮೇಲೆಯೇ ಬಿದ್ದು ನಾಲ್ವರು ಮೃತಪಟ್ಟ ಘಟನೆಯ ನೆನಪು ಮರೆಯುವ ಮುನ್ನವೇ ಪುತ್ತೂರಿನಲ್ಲಿ ಮನೆ ಮೇಲೆಯೇ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಘಟನೆ ನಡೆದಿದೆ.

ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿ ಎಂಬಲ್ಲಿನ ಮಜೀದ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಜೂನ್ 27ರ ನಸುಕಿನ ಜಾವ ನಿದ್ದೆಯಲ್ಲಿದ್ದ ಸಂದರ್ಭ ಮನೆಯ ಮೇಲೆ ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿದ ಪರಿಣಾಮ ಮನೆಯ ಅರ್ಧಭಾಗ ಕುಸಿದು ಮಜೀದ್ ಹಾಗೂ ಇಬ್ಬರು ಮಲಗಿದ್ದ ಕೊಠಡಿ ಮೇಲೆಯೇ ಬಿದ್ದಿದೆ.
ತಕ್ಷಣ ಎಚ್ಚೆತ್ತ ಮಜೀದ್ ಅವರು ಮಣ್ಣಿನಡಿ ಸಿಲುಕಿದ್ದ ಮಕ್ಕಳಿಬ್ಬರನ್ನು ಪಾರು ಮಾಡಿದ್ದಾರೆ. ಆದ್ದರಿಂದ ಬಹುದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರಸಭೆ ಮತ್ತು ಸ್ಥಳೀಯರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಂಸದ ಕೋಟ – ಹೆದ್ದಾರಿ ಕಾಮಗಾರಿಗೆ ವೇಗ ನೀಡುವಂತೆ ಮನವಿ
ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.
ಉಡುಪಿ ಜಿಲ್ಲೆಯ ಸಂತೆಕಟ್ಟೆ ಕಲ್ಯಾಣಪುರದ ಸುರಂಗ ಮಾರ್ಗ, ಇಂದ್ರಾಳಿಯ ಮೇಲ್ಸೇತುವೆ, ಮಲ್ಪೆ ಭೂಸ್ವಾಧೀನದ ವಿಳಂಬ ಮತ್ತು ನೆನೆಗುದ್ದಿಗೆ ಬಿದ್ದಿರುವ ತನಿಕೋಡು ಗೇಟ್ನಿಂದ ಎಸ್.ಕೆ. ಬಾರ್ಡರ್ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ತುರ್ತು ಪರಿಹರಿಸಬೇಕೆಂದು ಮನವಿ ಸ್ವೀಕರಿಸಿದ ಸಚಿವ ಗಡ್ಕರಿ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಕಾಮಗಾರಿಗಳನ್ನು ವಿಳಂಬವಿಲ್ಲದೆ ಅತಿ ಶೀಘ್ರದಲ್ಲಿ ಮುಗಿಸುವಂತೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆಗೆ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಬಿ ವೈ ರಾಘವೇಂದ್ರ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ವರುಣನ ಅಬ್ಬರ : ಕರಾವಳಿಗೆ ನಾಳೆ ರೆಡ್ ಅಲರ್ಟ್ ಘೋಷಣೆ
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆ ಭಾರೀ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ. ಕರಾವಳಿಯ ಜನರು ನಾಳೆ ಮನೆಯಿಂದ ಹೊರಬಂದಾಗ ಗರಿಷ್ಠ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ನಾಳೆ ಮಾತ್ರವಲ್ಲದೆ ಶುಕ್ರವಾರಕ್ಕೂ ಮಳೆ ಮುಂದುವರೆಯಲಿದೆ. ಸುಮಾರು 30 ತಾಸಿನ ಭಾರೀ ಮಳೆಗೆ ತಯಾರಾಗಲು ಈ ಜಿಲ್ಲೆಗಳ ಜನರಿಗೆ ಸೂಚಿಸಲಾಗಿದೆ.
ನಾಳೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹೊರಡಿಸಲಾಗಿದ್ದು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಹಾಸನ ಜಿಲ್ಲೆಗಳಿಗೆ ಎಲ್ಲೋ ಅಲೆರ್ಟ್ ಹೊರಡಿಸಲಾಗಿದೆ.
ದಕ್ಷಿಣ ಒಳನಾಡಿನಲ್ಲೂ ಮುಂಗಾರು ಮಳೆಯ ಪ್ರಮಾಣ ಹೆಚ್ಚಿದ್ದು, ಕೊಡುಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಕುದುರೆಮುಖ ಸಮೀಪ ರಾಜ್ಯ ಹೆದ್ದಾರಿಗೆ ಬಿದ್ದ ಮರ ಕಾರಣ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ಕಳಸ – ಮಂಗಳೂರು ರಸ್ತೆಯಲ್ಲೂ ಭಾರೀ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಮಡಿಕೇರಿ ತಾಲ್ಲೂಕಿನ ಮೂರ್ನಾಡು ಸಮೀಪದ ಬಲಮುರಿ ಪುರಾತನ ಸೇತುವೆ ಜಲಾವೃತಗೊಂಡಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ (ಗುರುವಾರ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜೂನ್ 27ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್ 27ರಂದು ರಜೆಯನ್ನು ಘೋಷಿಸಲಾಗಿದೆ.
ಅದೇ ರೀತಿ ಸಂಭಾವ್ಯ ಪ್ರವಾಹ/ಭೂಕುಸಿತ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಬುಧವಾರ ಬೆಳಿಗ್ಗಿನಿಂದ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜೂನ್ 26 ಮತ್ತು 27 ರಂದು “ಆರೆಂಜ್ ಅಲರ್ಟ್” ನೀಡಲಾಗಿದೆ, ಜೂನ್ 28 ಮತ್ತು 29 ರಂದು “ಯಲ್ಲೋ ಅಲರ್ಟ್” ನೀಡಲಾಗಿದೆ. ಈ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕಾಪು ತಾಲೂಕಿನ ಮೂಳೂರು ಉದಯ್ ಪೂಜಾರಿ ಎಂಬವರ ಮನೆಗೆ ಇಂದು ಬೆಳಿಗ್ಗೆ ಮರಬಿದ್ದು ಅಪಾರ ಹಾನಿಯುಂಟಾಗಿದೆ. ಮಳೆಗೆ ಬೀಸಿದ ಭಾರಿ ಗಾಳಿಯಿಂದಾಗಿ ಮರ ಬಿದ್ದಿದ್ದು ಬಚ್ಚಲು ಕೋಣೆ, ಶೌಚಾಲಯಕ್ಕೆ ಹಾನಿಯುಂಟಾಗಿದೆ. ಮನೆಯವರು ಹಾಲ್ನಲ್ಲಿ ಕುಳಿತಿದ್ದಾಗ ಘಟನೆ ಸಂಭವಿಸಿದ್ದು, ಹಿಂಬದಿಯ ಮರ ಬಿದ್ದ ಪರಿಣಾಮ ಮನೆಯೊಳಗೆ ಇದ್ದವರಿಗೆ ಯಾವುದೇ ಅಪಾಯಗಳುಂಟಾಗಿಲ್ಲ.
ಸಾವಿರಾರು ರೂಪಾಯಿ ನಷ್ಟ ಅಂದಾಜಿಸಲಾಗಿದ್ದು ತಾಲೂಕು ಆಡಳಿತ, ಕಂದಾಯ ಇಲಾಖೆ, ಪುರಸಭೆಗೆ ಮಾಹಿತಿ ನೀಡಿದ್ದಾರೆ.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ : ಉಡುಪಿ ಜಿಲ್ಲಾಧಿಕಾರಿ
ಉಡುಪಿ : ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಇದರ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸ್ಥಳೀಯ ಸಂಸ್ಥೆಯ ಪರಿಶೀಲನಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ದೂರು ದಾಖಲಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಬಂದ ತಕ್ಷಣವೇ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶೀಲನಾ ಅಧಿಕಾರಿಗಳು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಮನೆ, ಕಂಪೆನಿಗಳು, ಆಸ್ಪತ್ರೆ, ಅಪಾರ್ಟ್ಮೆಂಟ್ ಸೇರಿದಂತೆ ಇತರೆ ಯಾವುದೇ ಕಟ್ಟಡಗಳಲ್ಲಿ ಮ್ಯಾನ್ಹೋಲ್, ಸೆಪ್ಟಿಕ್ ಟ್ಯಾಂಕ್, ತೆರೆದ ಚರಂಡಿ, ಪಿಟ್ಗುಂಡಿಗಳು ಕಟ್ಟಿಕೊಂಡಲ್ಲಿ ಸ್ವಚ್ಛಗೊಳಿಸಲು ಅನುಕೂಲ ವಾಗುವಂತೆ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಹಾಯವಾಣಿ ಸಂಖ್ಯೆ 14420 ಹಾಗೂ ಗ್ರಾಮೀಣ ಪ್ರದೇಶದಲ್ಲಿ 9480985555ಗೆ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಸಂಖ್ಯೆ ಪ್ರದರ್ಶಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೊಳ್ಳೆ ಉತ್ಪತ್ತಿಗೆ ಕಾರಣರಾಗುವವರ ವಿರುದ್ಧ ಕ್ರಮಕ್ಕೆ ಸಿವಿಲ್ ಬೈಲಾ ಜಾರಿ : ಡಾ.ಪ್ರಶಾಂತ್ ಭಟ್
ಉಡುಪಿ : ಡೆಂಗು ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಜವಾಬ್ದಾರಿ ಮರೆಯುವ ನಾಗರಿಕರ ವಿರುದ್ಧ ಕಾನೂನು ಕ್ರಮ ಜರಗಿಸುವ ಸಿವಿಲ್ ಬೈಲಾವನ್ನು ಉಡುಪಿ ನಗರಸಭೆಗೆ ಕರಡು ಪ್ರತಿ ತಯಾರಿಸಿ ಸಲ್ಲಿಸಲಾಗಿದೆ. ಇದನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜನವರಿಯಿಂದ ಜೂನ್ 25ರವರೆಗೆ ಒಟ್ಟು 164 ಡೆಂಗು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಉಡುಪಿ- 102, ಕುಂದಾಪುರ- 35, ಕಾರ್ಕಳ- 25 ಪ್ರಕರಣಗಳು ಕಂಡುಬಂದಿವೆ. ಅದೇ ರೀತಿ ಒಟ್ಟು 30 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ 29 ವಲಸೆ ಕಾರ್ಮಿಕರು ಹಾಗೂ ಒಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮಳೆಗಾಲದ ತುರ್ತು ಸ್ಪಂದನೆಗೆ ಎರಡು ತಂಡ ಸಿದ್ಧ : ಶಾಸಕ ಗುರುರಾಜ್ ಗಂಟಿಹೊಳೆ ಮುಂದಾಳತ್ವದಲ್ಲಿ ಕಾರ್ಯಾಚರಣೆ
ಬೈಂದೂರು : ಮಳೆಗಾಲದಲ್ಲಿ ಸಂಭವಿಸಬಹುದಾದ ವಿಪತ್ತು ನಿರ್ವಹಣೆಗೆ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ಒಂದು ರೀತಿಯ ಸಿದ್ಧತೆ ಮಾಡಿಕೊಂಡಿದ್ದರೆ, ಬೈಂದೂರು ಕ್ಷೇತ್ರದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ವಿಶೇಷ ಮೇಲುಸ್ತುವಾರಿಯಲ್ಲಿ ಸಾರ್ವಜನಿಕ ತುರ್ತು ವಿಪತ್ತು ನಿರ್ವಹಣೆಗೆ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.
ಕ್ಷೇತ್ರದ ಕರಾವಳಿ ಭಾಗಕ್ಕೆ ಒಂದಕ್ಕೆ ತಂಡ ಹಾಗೂ ಮಲೆನಾಡು ಭಾಗಕ್ಕೆ ಒಂದು ತಂಡ ರಚನೆ ಮಾಡಲಾಗಿದೆ. ಪ್ರತಿ ತಂಡದಲ್ಲೂ ಹತ್ತು ಸದಸ್ಯರಿದ್ದು, ಮಳೆಗಾಲದಲ್ಲಿ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಮಾಹಿತಿ ಬಂದ ತಕ್ಷಣವೇ ತಂಡ ಸದಸ್ಯರು ಸ್ಥಳಕ್ಕೆ ಧಾವಿಸುವುದು ಅಥವಾ ಸ್ಥಳೀಯ ಕಾರ್ಯಕರ್ತರ ಮೂಲಕ ತುರ್ತು ಸ್ಪಂದನೆ ಇತ್ಯಾದಿ ನಡೆಸಲಿದ್ದಾರೆ. ಇದೊಂದು ಶಾಸಕರ ನೇತೃತ್ವದ ಖಾಸಗಿ ವ್ಯವಸ್ಥೆಯಾಗಿದ್ದು, ಬಿಜೆಪಿ ಕಾರ್ಯಕರ್ತರು, ಪ್ರಮುಖರು, ಪಂಚಾಯತ್ ಸದಸ್ಯರು ಸೇರಿಕೊಂಡಿದ್ದಾರೆ.
ತುರ್ತು ಸ್ಪಂದನೆ ಅತಿಮುಖ್ಯ
ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ಅಥವಾ ಹಾನಿಗೆ ತುರ್ತು ಸ್ಪಂದನೆ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ನಮ್ಮ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಈ ತಂಡದ ಸದಸ್ಯರು ಸಮನ್ವಯದಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಲೆನಾಡು ತಂಡ
- ಸಂಚಾಲಕ : ರಾಘವೇಂದ್ರ ನೆಂಪು :(7892643784)
- ಸಹ ಸಂಚಾಲಕ : ಲಕ್ಷಣ ಮುದೂರು :(9448142785)
- ಹರೀಶ ಸೆಳಕೊಡು
- ಗುರುಪ್ರಸಾದ ಕೊಲ್ಲೂರು
- ಸಿದ್ದೇಶ ಏಳಜಿತ್
- ಪ್ರಶಾಂತ ಆಲೂರು
- ಪ್ರಜ್ವಲ ಕಾಲ್ತೋಡು
- ಹರ್ಷ ಸಿದ್ದಾಪುರ
- ಗಣೇಶ ಪೂಜಾರಿ
- ಚಂದ್ರ ಜೋಗಿ
ಕರಾವಳಿ ತಂಢ
- ಸಂಚಾಲಕ : ಗೋಪಾಲ ವಸ್ರೆ : (9535959138)
- ಸಹ ಸಂಚಾಲಕ : ಲಕ್ಕ್ಷ್ಮಿರಾಜ ತಲ್ಲೂರು : (9480071959)
- ಸುಕೇಶ್ ಪೂಜಾರಿ
- ಅಶೋಕ ದೇವಾಡಿಗ
- ಕೃಷ್ಣ ಕೊಡೇರಿ
- ಜಗದಿಶ ಆಲಂದೂರು
- ಅವಿನಾಶ ಶಿರೂರು
- ಪ್ರದೀಪ ಉಪ್ಪುಂದ
- ನಾಗರಾಜ ಪಟೆಗಾರ
- ರಾಮದಾಸ ಖಾರ್ವಿ
ಚಾರ್ಜಿಗೆ ಇರಿಸಿದ್ದ ಎಲೆಕ್ಟ್ರಿಕ್ ಬೈಕಿನ ಬ್ಯಾಟರಿ ಸ್ಫೋಟ : ಅಪಾರ ಪ್ರಮಾಣದ ಹಾನಿ
ಹೆಬ್ರಿ : ಚಾರ್ಜಿಗೆ ಇರಿಸಿದ್ದ ಎಲೆಕ್ಟ್ರಿಕ್ ಬೈಕಿನ ಬ್ಯಾಟರಿ ಸ್ಫೋಟಗೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಸಮೀಪ ಸಂಭವಿಸಿದೆ. ಇಲ್ಲಿನ ಬಾಡಿಗೆ ರೂಮಿನಲ್ಲಿ ಇರುವ ವ್ಯಕ್ತಿಯೊಬ್ಬರು ಎಲೆಕ್ಟ್ರಿಕ್ ಬೈಕಿನ ಬ್ಯಾಟರಿಯನ್ನು ಮನೆಯ ಒಳಗೆ ಚಾರ್ಜಿಗೆ ಇಟ್ಟಿದ್ದರು. ಈ ಬ್ಯಾಟರಿ ಅರ್ಧ ಗಂಟೆ ಸಮಯದಲ್ಲಿ ಸ್ಫೋಟಗೊಂಡಿದ್ದು ಮನೆಯಲ್ಲಿ ಆ ಸಂದರ್ಭ ಒಳಗೆ ಯಾರೂ ಇಲ್ಲದೆ ಇದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮನೆಯೊಳಗಿದ್ದ ಬಟ್ಟೆಬರೆ, ಬ್ಯಾಟರಿ ಹಾಗೂ ದಿನ ಬಳಕೆಯ ಹಲವಾರು ವಸ್ತುಗಳು ಸುಟ್ಟು ಹೋಗಿವೆ. ಬ್ಯಾಟರಿ ಸ್ಪೋಟಗೊಂಡ ಈ ಪ್ರಕರಣ ಮನೆಯವರ ಆತಂಕಕ್ಕೆ ಕಾರಣವಾಗಿದೆ.