ಹೆಬ್ರಿ : ಚಾರ್ಜಿಗೆ ಇರಿಸಿದ್ದ ಎಲೆಕ್ಟ್ರಿಕ್ ಬೈಕಿನ ಬ್ಯಾಟರಿ ಸ್ಫೋಟಗೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಸಮೀಪ ಸಂಭವಿಸಿದೆ. ಇಲ್ಲಿನ ಬಾಡಿಗೆ ರೂಮಿನಲ್ಲಿ ಇರುವ ವ್ಯಕ್ತಿಯೊಬ್ಬರು ಎಲೆಕ್ಟ್ರಿಕ್ ಬೈಕಿನ ಬ್ಯಾಟರಿಯನ್ನು ಮನೆಯ ಒಳಗೆ ಚಾರ್ಜಿಗೆ ಇಟ್ಟಿದ್ದರು. ಈ ಬ್ಯಾಟರಿ ಅರ್ಧ ಗಂಟೆ ಸಮಯದಲ್ಲಿ ಸ್ಫೋಟಗೊಂಡಿದ್ದು ಮನೆಯಲ್ಲಿ ಆ ಸಂದರ್ಭ ಒಳಗೆ ಯಾರೂ ಇಲ್ಲದೆ ಇದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮನೆಯೊಳಗಿದ್ದ ಬಟ್ಟೆಬರೆ, ಬ್ಯಾಟರಿ ಹಾಗೂ ದಿನ ಬಳಕೆಯ ಹಲವಾರು ವಸ್ತುಗಳು ಸುಟ್ಟು ಹೋಗಿವೆ. ಬ್ಯಾಟರಿ ಸ್ಪೋಟಗೊಂಡ ಈ ಪ್ರಕರಣ ಮನೆಯವರ ಆತಂಕಕ್ಕೆ ಕಾರಣವಾಗಿದೆ.
Problems
ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಕಾಪು ಪುರಸಭಾ ವ್ಯಾಪ್ತಿಯ ಕಲ್ಯಾ ಹಾಗೂ ದಂಡತೀರ್ಥ ವಾರ್ಡಿನ ರಸ್ತೆ ಬದಿಯಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗುತ್ತಿರುವ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದು ಸ್ಥಳೀಯರ ಮನವಿಯಂತೆ ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಪು ಪುರಸಭಾ ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚರಂಡಿಗಳ ಸಮರ್ಪಕ ನಿರ್ವಹಣೆ ಮಾಡದೇ ಇರುವುದರಿಂದ ಮಳೆ ನೀರು ರಸ್ತೆಯ ಮೂಲಕ ಹರಿದು ಮನೆಗಳಿಗೆ ನುಗ್ಗುತ್ತಿದ್ದು ಚರಂಡಿಗಳ ಹೂಳೆತ್ತಿ ಚರಂಡಿಯ ನೀರು ಸರಾಗವಾಗಿ ಹರಿಯುವಂತೆ ಮಾಡಲು ತಕ್ಷಣದಲ್ಲಿ ಕ್ರಮ ವಹಿಸುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಸುರೇಶ ದೇವಾಡಿಗ, ಲತಾ ದೇವಾಡಿಗ, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್, ಅಭಿಯಂತರರಾದ ನಯನತಾರ ಹಾಗೂ ಸ್ಥಳೀಯ ಉಪಸ್ಥಿತರಿದ್ದರು.
ಕಾರ್ಕಳದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ..!!
ಕಾರ್ಕಳ : ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾರ್ಕಳ ಬಿಜೆಪಿ ವತಿಯಿಂದ ಬ್ರಹತ್ ಪ್ರತಿಭಟನೆ ನಡೆಯಿತು. ನೂರಾರು ಬಿಜೆಪಿ ಕಾರ್ಯಕರ್ತರು ತಮ್ಮ ದ್ವಿಚಕ್ರ ವಾಹನವನ್ನು ತಳ್ಳುತ್ತಾ, ಲಾರಿಯನ್ನು ಹಗ್ಗದಿಂದ ಕಟ್ಟಿ ಎಳೆಯುತ್ತಾ, ಮಹಿಳಾ ಕಾರ್ಯಕರ್ತರು ಕೈಯಲ್ಲಿ ಚೊಂಬು ಮತ್ತು ತೆಂಗಿನಕಾಯಿಯ ಗೆರಟೆಯನ್ನು ಪ್ರದರ್ಶಿಸುತ್ತಾ ಕಾರ್ಕಳ ಬಸ್ ನಿಲ್ದಾಣದವರೆಗೆ ಬಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧಿಕ್ಕಾರವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷರಾದ ನವೀನ್ ನಾಯಕ್, ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಾದರೆ ಎಲ್ಲಾ ವಸ್ತುಗಳ ದರ ತನ್ನಷ್ಟಕ್ಕೆ ಏರಿಕೆಯಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಚ್ಚ ಸಾಮಗ್ರಿಗಳನ್ನು ಸಾಗಿಸುವುದಾದರೆ ವಾಹನಗಳನ್ನು ಬಳಸಬೇಕಾಗುತ್ತದೆ.

ಕಾಂಗ್ರೆಸ್ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಮಾಡಿ ರಾಜ್ಯದ ಜನರಿಗೆ ಬಹಳ ದೊಡ್ಡ ಹೊಡೆತ ನೀಡಿದೆ.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಬೇಕಾದರೆ ರಾಜ್ಯ ಜನರಿಗೆ ಗ್ಯಾರಂಟಿಗಳ ಅಮೀಷವಡ್ಡಿ ಗೆದ್ದು ಬಂದು ಈಗ ಜನರನ್ನು ಲೂಟಿ ಮಾಡುವ ಕೆಲಸದಲ್ಲಿ ನಿರತವಾಗಿದೆ. ಬಡಜನರ ಜೇಬಿಗೆ ಕತ್ತರಿ ಹಾಕಿ ದೋಚಲು ಪ್ರಾರಂಭಿಸಿದೆ ಎಂದರು.
ಮಹಿಳಾ ಮೋರ್ಚ ಅಧ್ಯಕ್ಷರಾದ ರೇಷ್ಮಾ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಗ್ಯಾರಂಟಿಗಳ ಅಮಿಷ ತೋರಿಸಿ ಈಗ ಹಣವನ್ನು ಕ್ರೋಡಿಕರಿಸಲಾಗದೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿ, ಖಾಲಿ ಖಜಾನೆ ತುಂಬಿಸಿಕೊಳ್ಳಲು ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ ಕೂಡಲೇ ರಾಜ್ಯದ ಮುಖ್ಯಮಂತ್ರಿ, ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರು ಮಾತನಾಡಿದರು. ಮಣಿರಾಜ್ ಶೆಟ್ಟಿ, ಮಹಾವೀರ್ ಹೆಗಡೆ, ಉದಯ ಕೋಟ್ಯಾನ್, ಮುಟ್ಲುಪಾಡಿ ಸುಹಾಸ್ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ್ ಹೆಗಡೆ, ಹಾಗೂ ಪೊಲೀಸ್ ಉಪಾಧಿಕ್ಷಕರಾದ ಅರವಿಂದ ಕಲಗಜ್ಜಿ ಇವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತಿನೊಂದಿಗೆ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು.
ಬೈಂದೂರು : ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಂದೂರು ವಲಯದ ಉಪವಲಯ ಅರಣ್ಯ ಅಧಿಕಾರಿ ಬಂಗಾರಪ್ಪ ಮತ್ತು ಅರಣ್ಯ ವೀಕ್ಷಕ ವಿನಾಯಕ್ರನ್ನು ಬಲೆಗೆ ಕೆಡವಿದ್ದಾರೆ. ಆರೋಪಿಗಳ ಪೈಕಿ ಬಂಗಾರಪ್ಪನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು ಮತ್ತೋರ್ವ ಆರೋಪಿ ವಿನಾಯಕ ನಾಪತ್ತೆಯಾಗಿದ್ದಾನೆ.
ಇವರಿಬ್ಬರು ಹಲಸಿನ ಮರವನ್ನು ತೆರವುಗೊಳಿಸಲು ಅನುಮತಿ ನೀಡುವುದಕ್ಕಾಗಿ 4000 ರೂ. ಲಂಚ ಕೇಳಿದ್ದರು. ಮರ ತೆರವು ಮಾಡಲು ಪಿರ್ಯಾದಿದಾರ ಮಹಮ್ಮದ್ ಅನ್ವರ್ ಹಸನ್ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನಟರಾಜ್ ಎಂ ಎ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಡಿವೈಎಸ್ಪಿ ಪ್ರಕಾಶ್ ಕೆ ಸಿ, ಮತ್ತು ಪೊಲೀಸ್ ನಿರೀಕ್ಷಕ ಮಂಜುನಾಥ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 21 – 24ರವರೆಗೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಶುಕ್ರವಾರ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ರೆಡ್ ಹಾಗೂ ಆರೆಂಜ್ ಘೋಷಿಸಿರುವ ಜಿಲ್ಲೆಗಳಲ್ಲಿ 30ರಿಂದ 40 ಕಿ.ಮೀ. ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯುದ್ದಕ್ಕೂ ಹಾಗೂ ಹೊರಗೆ ಚಂಡಮಾರುತ ರೀತಿಯ ವಾತಾವರಣ ಇರಲಿದೆ. ಗಾಳಿ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ತಿಳಿಸಿದೆ.
ರಾಜ್ಯದ 10 ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆಯಾಗಲಿದೆ. ಆದ್ದರಿಂದ ಕರಾವಳಿಯ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ರವಿವಾರವೂ 13 ಜಿಲ್ಲೆಗಳಿಗೆ ಭಾರಿ ಮಳೆಯ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗುವ ಸಂಭವವಿದೆ ಎಂದು ಇಲಾಖೆ ಹೇಳಿದೆ.
ಮಂಗಳೂರು : ಕುಳಾಯಿ ಹೊಸಬೆಟ್ಟುವಿನ ಕೆರೆಕಾಡು ನಿವಾಸಿ ಯಶೋಧರ ವಿಕಲಚೇತನರಾಗಿದ್ದು ಮನೆಯವರ ಮನವಿಯಂತೆ ಅವರಿಗೆ ನಮ್ಮ ತುಳುನಾಡ್ ಟ್ರಸ್ಟ್ (ರಿ)ನ ಸದಸ್ಯರಾದ ಮಹೇಶ್ ಪೂಜಾರಿ ಮುಂಬೈ ಇವರ ಸಹಕಾರದೊಂದಿಗೆ ಟ್ರಸ್ಟಿನ ವತಿಯಿಂದ ವಾಟರ್ ಬೆಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಸ್ಥಾಪಕಧ್ಯಕ್ಷರಾದ ಸುಧಾಕರ ಶೆಟ್ಟಿ, ಅಧ್ಯಕ್ಷರಾದ ರೋಹಿತಾಶ್ವ, ಉಪಾಧ್ಯಕ್ಷರಾದ ದಯಾನಂದ ಶೆಟ್ಟಿ, ಕಾರ್ಯದರ್ಶಿ ರಾಜೇಶ್. ಯು, ರಾಜ್ಯ ಸಂಚಾಲಕರಾದ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಹಾಗೂ ಸಂದೀಪ್ ಶೆಟ್ಟಿ ಅಡ್ಕ ಉಪಸ್ಥಿತರಿದ್ದರು.
ಕರಾವಳಿ ಮೀನುಗಾರರ ವಿವಿಧ ಸಮಸ್ಯೆ ಬೇಡಿಕೆಗಳ ಬಗ್ಗೆ ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಿದರು.

ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಪದಾಧಿಕಾರಿಗಳು ಸಚಿವರನ್ನು ಭೇಟಿಯಾಗಿ ರಾಜ್ಯದ ಎಲ್ಲಾ ಮೀನುಗಾರಿಕಾ ಬಂದರಿಗೆ ಸಂಬಂಧಿಸಿದ ರಸ್ತೆ ಹಾಗೂ ಮೂಲ ಸೌಕರ್ಯ ಅಭಿವದ್ಧಿ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಮಾಡಿದರು.
1984 ಮೀನುಗಾರಿಕಾ ಕಾಯ್ದೆಯ ನಿಯಮಾವಳಿಗಳನ್ನು ಪ್ರಸ್ತುತ ಸಾಲಿಗೆ ಪೂರಕವಾಗುವಂತೆ ತಿದ್ದುಪಡಿ, ಬಂದರಿನ ಸಮರ್ಪಕ ನಿರ್ವಹಣೆಯ ಹಿತದೃಷ್ಟಿಯಿಂದ ಸ್ಥಳೀಯ ಮೀನುಗಾರಿಕಾ ಸಂಘ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವುದು, ದಿನವಹಿ ಡೀಸೆಲ್ ಕೋಟವನ್ನು 500 ಲೀಟರಿಗೆ ಏರಿಕೆ, ಮಹಿಳಾ ಮೀನುಗಾರರಿಗೆ ಬಡ್ಡಿರಹಿತ ಸಾಲ ಹಾಗೂ ಮೀನು ಒಣಗಿಸುವ ಸ್ಥಳವನ್ನು ರಿಯಾಯಿತಿ ದರದಲ್ಲಿ ಕನಿಷ್ಠ 15 ವರ್ಷಕ್ಕೆ ಗುತ್ತಿಗೆ ನೀಡುವುದು, ಮೀನುಗಾರಿಕಾ ಬೋಟ್ ವಿಮೆಯ ನಿಯಮಾವಳಿ ಸರಳೀಕರಣ ಹಾಗೂ ವಿಮಾ ಪರಿಹಾರ ಮೊತ್ತವನ್ನು ಶೀಘ್ರ ಮಂಜೂರು ಮಾಡಲು ಕ್ರಮ ಹಾಗೂ ಮಲ್ಪೆ ಮೀನುಗಾರಿಕಾ ಬಂದರಿನ ಔಟರ್ ಹಾರ್ಬರ್ ಯೋಜನೆ ಮಂಜೂರು, ಡ್ರೆಜಿಂಗ್ ಹಾಗೂ ವಿವಿಧ ಬಂದರುಗಳ ಅಭಿವೃದ್ಧಿ, ನಾಡದೋಣಿ ಮೀನುಗಾರರಿಗೆ ಸಮರ್ಪಕ ಸೀಮೆ ಎಣ್ಣೆ ಪೂರೈಕೆ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಮೀನುಗಾರಿಕೆ ಇಲಾಖೆ ನಿರ್ದೇಶಕರಾದ ದಿನೇಶ್ ಕಲ್ಲೇರ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ರಾಮಚಂದ್ರ ಕುಂದರ್, ಸೋಮನಾಥ ಕಾಂಚನ್, ಮೋಹನ್ ಬೆಂಗ್ರೆ, ಚೇತನ್ ಬೆಂಗ್ರೆ, ನವೀನ್ ಮೊದಲಾದವರು ಉಪಸ್ಥಿತರಿದ್ದರು.
ಶೆಡ್ ದ್ವಂಸಕ್ಕೆ ಸಜ್ಜಾಗಿ ಬಂದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್; ಸ್ಥಳೀಯರಿಂದ ಪ್ರತಿಭಟನೆ ಬಿಸಿ
ಕುಂದಾಪುರ : ಸ್ಥಳೀಯ ಖಾರ್ವಿ ಮೇಲ್ಕೇರಿಯಲ್ಲಿಂದು ಅಕ್ರಮ ಶೆಡ್ ಎಂದು ಆರೋಪಿಸಿ ಅದನ್ನು ಕೆಡವಲು ಪೊಲೀಸ್ ಪಡೆ ಸಹಿತ ಜೆಸಿಬಿ, ಲಾರಿ, ಹಾರೆ ಗುದ್ದಲಿ, ಕಾರ್ಮಿಕರೊಂದಿಗೆ ಸಜ್ಜಾಗಿ ಬಂದ ಅಧಿಕಾರಿಗಳು ಸ್ಥಳೀಯ ಮಹಿಳೆಯರು ಹಾಗೂ ಸಮಾಜ ಮುಖಂಡರ ಪ್ರತಿಭಟನೆಗೆ ಮಣಿದು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಿ ಹೋದ ಘಟನೆ ನಡೆದಿದೆ.
ಮೇಲ್ಕೇರಿಯಲ್ಲಿ ಈ ಶೆಡ್ ಇರುವ ಜಾಗದಲ್ಲಿ ಅನಾದಿ ಕಾಲದಿಂದಲೂ ಒಂದು ಗೂಡಂಗಡಿ ಇದ್ದು ಕಾಲಕ್ರಮೇಣ ಅದು ಮುಚ್ಚಲ್ಪಟ್ಟಿತು. ಮುಂದೆ ಅದೇ ಜಾಗದಲ್ಲಿ ಯಾರಿಗೂ ತೊಂದರೆಯಾಗದೆ ಪರಿಸರದವರು ಸೇರಿ ಕಷ್ಟ ಸುಖ ವಿಚಾರಿಸಿಕೊಳ್ಳುವ ಸಣ್ಣ ಪಂಚಾಯಿತಿ ಕಟ್ಟೆಯಾಗಿ ಮಾರ್ಪಟ್ಟಿತು. ಹೆಚ್ಚಾಗಿ ಮಹಿಳಾ ಸಂಘಗಳ ಸದಸ್ಯರೇ ಇಲ್ಲಿ ಸೇರುತ್ತಿದ್ದರಿಂದ ಮಳೆ ಬಿಸಿಲಿನಿಂದ ಪಾರಾಗಲು ಇದನ್ನು ಉಪಯೋಗಿಸಲಾಗುತ್ತಿತ್ತು. ಬಾಗಿಲು ಕಿಟಕಿ ಅಥವಾ ಯಾವುದೇ ಕೋಣೆಯಾಗಲಿ ಆಕ್ರಮ ವಿದ್ಯುತ್ ಸಂಪರ್ಕವಾಗಲಿ, ಆಳವಡಿಸದೆ ನೆತ್ತಿಯ ಮೇಲೆ ಒಂದೆರಡು ತಗಡುಗಳನ್ನು ಹಾಸಿದ ಪುಟ್ಟ ಶೆಡ್ಡನ್ನು ಇಲ್ಲಿ ನಿರ್ಮಿಸಿಕೊಂಡಿದ್ದರು. ಸಾರ್ವಜನಿಕರ ಪಾಲಿಗೂ ಇದೊಂದು ತಂಗುದಾಣದಂತಿದ್ದು ಯಾರಿಗೂ ತೊಂದರೆಯಂತಿರಲಿಲ್ಲ. ಆದರೆ ಪುರಸಭೆಯ ಅಧಿಕಾರಿಗಳು ಏಕಾಏಕಿ ಕೆಲವರ ಚಿತಾವಣೆಯಿಂದಾಗಿ ಇದೊಂದು ಬೃಹತ್ ಅಕ್ರಮ ಕಟ್ಟಡ ಎಂಬ ನೆಲೆಯಲ್ಲಿ ಕಾನೂನು ಬಳಸಿಕೊಂಡು ಧ್ವಂಸಕ್ಕೆ ಮುಂದಾಗಿರುವುದು ವಿಷಾದಕರ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಪು : ಮಳೆ, ವಿಪತ್ತು ನಿರ್ವಹಣೆ ಕುರಿತು ಕಾಪು ವಿಧಾನಸಭಾ ವ್ಯಾಪ್ತಿಯ ಇಲಾಖಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾಪು ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯುಂಟಾದ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಸ್ಥಳ ಪರಿಶೀಲನೆ ನಡೆಸಿ ಗರಿಷ್ಠ ಪರಿಹಾರ ನೀಡಬೇಕು. ರಸ್ತೆ ಬದಿಗಳಲ್ಲಿರುವ ವಿದ್ಯುತ್ ತಂತಿಗಳನ್ನು ಮತ್ತು ಅಪಾಯಕಾರಿ ಮರಗಳನ್ನು ತೆರವು ಗೊಳಿಸುವಂತೆ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಮಳೆ ಕಡಿಮೆಯಾಗುತ್ತಿದ್ದಂತೆ ಲೋಕೋಪಯೋಗಿ ರಸ್ತೆ ಮತ್ತು ಜಿಲ್ಲಾ ಪಂಚಾಯತ್ ರಸ್ತೆಗಳನ್ನು ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೆ ತಿಳಿಸಲಾಯಿತು. ಜಲ್-ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು ಪೈಪ್ಲೈನ್ ಅಳವಡಿಸಲು ತೆಗೆದ ಹೊಂಡ ಗುಂಡಿಗಳನ್ನು ಸರಿಯಾಗಿ ಮಚ್ಚದ ಕಾರಣ ಸ್ಥಳೀಯರಿಂದ ದೂರುಗಳು ಬರುತ್ತಿದ್ದು ಗುಣಮಟ್ಟವನ್ನು ಕಾಯ್ದುಕೊಂಡು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಜಾತಿ ಆದಾಯ ಪ್ರಮಾಣ ಪತ್ರ ಅಗತ್ಯವಾಗಿದ್ದು, ಜಾತಿ ಆದಾಯ ಪ್ರಮಾಣ ಪತ್ರ ನೀಡಲು ವಿಳಂಬ ಮಾಡದಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಹಾಗೂ 9/11 ಅರ್ಜಿದಾರರಿಗೆ 9/11 ಗೆ ಬೇಕಾಗುವ ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಶೀಘ್ರದಲ್ಲಿ ಕಡತ ವಿಲೇವಾರಿ ಮಾಡುಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ, ಅತಿಸಾರ ಮುಂತಾದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಉಲ್ಬಣವಾಗಲಿದ್ದು ಇದರ ತಡೆಗೆ ಮುಂಜಾಗ್ರತ ಕ್ರಮ ಹಾಗೂ ಸಾರ್ವಜನಿಕರಿಗೆ ಜಾಗೃತಿ ಉಂಟುಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆಯವರಿಗೆ ಸೂಚಿಸಲಾಯಿತು.
ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಪರಿಸರ ಹಿತದೃಷ್ಟಿಯಿಂದ ಮಲೀನ ನೀರು ಮತ್ತು ಮಲೀನ ತ್ಯಾಜ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮತ್ತು ಮಳೆಗಾಲದ ಸಂದರ್ಭದಲ್ಲಿ ಪುರಸಭೆಯಲ್ಲಿ ತುರ್ತು ಸೇವಾ ಕೇಂದ್ರ ತೆರೆದು ಜವಾಬ್ದಾರಿಯುತ ಸಿಬ್ಬಂದಿಗಳನ್ನು ನೇಮಕ ಮಾಡಿ ಅರ್ಜಿಗಳನ್ನು ಸ್ವೀಕರಿಸಿ ತುರ್ತು ಪರಿಹಾರೋಪಾಯ ಕೈಗೊಳ್ಳವಂತೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಯಿತು. ರಸ್ತೆಗಳಲ್ಲಿ ದಿನೇ ದಿನೇ ಅಪಘಾತ ಹೆಚ್ಚುತ್ತಿದ್ದು ಸೂಚನಾ ಫಲಕ, ಸ್ಪೀಡ್ ಬ್ರೇಕರ್, ಬ್ಯಾರಿಕೇಡ್ಗಳನ್ನು ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕಡಲ್ಕೊರೆತ ಬಾದಿತ ಪ್ರದೇಶಗಳ ಕಡಲ್ಕೊರೆತ ತಡೆಗೆ ಯೋಜನೆ ಸಿದ್ಧಪಡಿಸುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು.

ಸುಬ್ರಹ್ಮಣ್ಯದಲ್ಲಿ ಲೋಡುಗಟ್ಟಲೆ ಕಸದ ರಾಶಿ, ಕೊಳೆಯುತ್ತಿದೆ ಕಸಗಳು, ಗಬ್ಬು ವಾಸನೆ; ರೋಗ ಹರಡುವ ಭೀತಿಯಲ್ಲಿ ಸಾರ್ವಜನಿಕರು
ದಿನಂಪ್ರತಿ ಸಾವಿರಾರು ಜನರು ಬರುವ ಸುಬ್ರಹ್ಮಣ್ಯದಲ್ಲಿ ಕಸ ವಿಲೇವಾರಿ ಘಟಕದಲ್ಲಿ ಲೋಡುಗಟ್ಟಲೆ ಕಸದ ರಾಶಿ ಬಿದ್ದು ಕೊಳೆಯಲು ಆರಂಭವಾಗಿದೆ, ಇಂಜಾಡಿ ಬಳಿಯ ಈ ಘಟಕದಲ್ಲಿ ಗಬ್ಬು ವಾಸನೆ ಹರಡುತ್ತಿದ್ದು ಸಾರ್ವಜನಿಕರಿಗೆ ರೋಗ ಭೀತಿ ಎದುರಾಗಿದೆ.
ಗ್ರಾ.ಪಂ. ವತಿಯಿಂದ ನಿರ್ವಹಿಸಲ್ಪಡುವ ಕಸ ವಿಲೇವಾರಿ ಘಟಕ ಇಂಜಾಡಿ ಬಳಿ ಇದೆ. ಇಲ್ಲಿಗೆ ಪಂಚಾಯತ್ನ ಕಸ ವಿಲೇವಾರಿ ಘಟಕದ ವಾಹನಗಳು ಕಸ ಸಂಗ್ರಹಿಸಿ ತಂದು ಹಾಕುತ್ತಿವೆ. ಇಲ್ಲಿ ಸಂಜೀವಿನಿಯರು ಹಾಗೂ ಗ್ರಾ.ಪಂ ದಿನಗೂಲಿಯ ಕೆಲವರು ಸೇರಿ ಕಸ ವಿಂಗಡನೆ ಮಾಡುತಿದ್ದಾರೆ. ಆದರೆ ಇಲ್ಲಿ ವಿಂಗಡನೆ ಆಗುತ್ತಿರುವ ಕಸ ಮತ್ತು ಇಲ್ಲಿಗೆ ಸರಬರಾಜು ಆಗುವ ಕಸಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಸಾಮರ್ಥ್ಯಕ್ಕಿಂತ ಹೆಚ್ಚು ಕಸವೂ ಸಂಗ್ರಹವಾಗುತ್ತಿದೆ. ಇದೇ ಮುಂದುವರೆದರೆ ಮುಂದೊಂದು ದಿನ ಇದು ಅಪಾಯಕಾರಿಯಾಗುವ ಮುನ್ಸೂಚನೆ ಇದೆ.
ಇಲ್ಲಿ ದಿನ ಪ್ರತಿ ಕಸ ಸಂಗ್ರಹವಾಗುತಿದ್ದರೂ ಅಲ್ಪ ಪ್ರಮಾಣದ ಕಸವಷ್ಟೇ ವಿಲೇವಾರಿಯಾಗುತಿದೆ. ರಟ್ಟು, ಹಾಲಿನ ಪ್ಯಾಕೆಟ್, ನೀರಿನ ಬಾಟಲ್ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಅಂತದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗುತಿದ್ದಾರೆ. ಆದರೆ ಈಗಾಗಲೇ ಬಿದ್ದಿರುವ ಲೋಡ್ಗಟ್ಟಲೆ ಕಸ ಕೊಳೆಯುತಿದ್ದು ಅದು ಭಾರಿ ಪ್ರಮಾಣದಲ್ಲಿ ದುರ್ವಾಸನೆಯೂ ಎದ್ದಿದೆ. ಅಲ್ಲಿಂದ ಬರುವ ಕೊಳಚೆ ನೀರು ನೇರವಾಗಿ ಕಣಿ ಸೇರಿ ನದಿ ಸೇರುತ್ತಿದೆ.
ಗ್ರಾ.ಪಂ. ವತಿಯಿಂದ ಪ್ಲಾಸ್ಟಿಕ್ ಬರ್ನಿಂಗ್ ಮೆಶಿನ್ ಕೆಲವೇ ವರ್ಷಗಳ ಹಿಂದೆಯಷ್ಟೆ ಅಳವಡಿಸಲಾಗಿದ್ದು ದಿನಪ್ರಂತಿ ವಿಲೇವಾರಿ ಆದ ಪ್ಲಾಸ್ಟಿಕ್ನ್ನು ಕೆಮಿಕಲ್ ಹಾಕಿ ಬರ್ನ್ ಮಾಡಲಾಗುತಿತ್ತು. ಆದರೆ ಈ ಯಂತ್ರಗಳು ಕೈಕೊಟ್ಟು ಬರ್ನಿಂಗ್ ನಿಲ್ಲಿಸಲಾಗಿದೆ.