ಹೆಬ್ರಿ : ಚಾರ್ಜಿಗೆ ಇರಿಸಿದ್ದ ಎಲೆಕ್ಟ್ರಿಕ್ ಬೈಕಿನ ಬ್ಯಾಟರಿ ಸ್ಫೋಟಗೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಸಮೀಪ ಸಂಭವಿಸಿದೆ. ಇಲ್ಲಿನ ಬಾಡಿಗೆ ರೂಮಿನಲ್ಲಿ ಇರುವ ವ್ಯಕ್ತಿಯೊಬ್ಬರು ಎಲೆಕ್ಟ್ರಿಕ್ ಬೈಕಿನ ಬ್ಯಾಟರಿಯನ್ನು ಮನೆಯ ಒಳಗೆ ಚಾರ್ಜಿಗೆ ಇಟ್ಟಿದ್ದರು. ಈ ಬ್ಯಾಟರಿ ಅರ್ಧ ಗಂಟೆ ಸಮಯದಲ್ಲಿ ಸ್ಫೋಟಗೊಂಡಿದ್ದು ಮನೆಯಲ್ಲಿ ಆ ಸಂದರ್ಭ ಒಳಗೆ ಯಾರೂ ಇಲ್ಲದೆ ಇದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮನೆಯೊಳಗಿದ್ದ ಬಟ್ಟೆಬರೆ, ಬ್ಯಾಟರಿ ಹಾಗೂ ದಿನ ಬಳಕೆಯ ಹಲವಾರು ವಸ್ತುಗಳು ಸುಟ್ಟು ಹೋಗಿವೆ. ಬ್ಯಾಟರಿ ಸ್ಪೋಟಗೊಂಡ ಈ ಪ್ರಕರಣ ಮನೆಯವರ ಆತಂಕಕ್ಕೆ ಕಾರಣವಾಗಿದೆ.
Police
ಹೆಬ್ರಿ : ಬೈಕ್ಗೆ ಕಾರು ಡಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ವರಂಗ ಗ್ರಾಮದಲ್ಲಿ ಸಂಭವಿಸಿದೆ.

ಪಳ್ಳಿ ಗ್ರಾಮದ ವಿಶ್ವನಾಥ ಎಂಬವರು ಮೃತ ದುರ್ದೈವಿ. ಇವರು ರವಿ ಎಂಬವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹೆಬ್ರಿಯಿಂದ ಅಜೆಕಾರು ಕಡೆಗೆ ಬರುತ್ತಿರುವಾಗ ವರಂಗ ಗ್ರಾಮದ ಸೇತುವೆಯಿಂದ ಸ್ವಲ್ಪ ಮುಂದೆ ತಲುಪುವಾಗ ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ಆಲ್ಟೋ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಸವರಾರಿಬ್ಬರು ರಸ್ತೆಗೆ ಬಿದ್ದು, ಗಾಯಗೊಂಡಿದ್ದರು. ವಿಶ್ವನಾಥ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷಿಸಿ ವಿಶ್ವನಾಥ ಅವರು ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತ್ರೇಸಿಯಮ್ಮ ಎಂಬವರೂ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದ ಬಳಿಕ ಸಿಕ್ಕಿತು ತಿಪಟೂರು ಯುವಕನ ಮೃತದೇಹ; ಬೀಜಾಡಿಯಲ್ಲಿ ಸಮುದ್ರಪಾಲಾಗಿದ್ದ ಯುವಕ
ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ ಯುವಕನ ಶವ ಇಂದು ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಮೃತ ಯುವಕನನ್ನು ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಆರ್. ಯೋಗೀಶ್ (23) ಎನ್ನಲಾಗಿದೆ. ಕಳೆದ ಬುಧವಾರ (ಜೂನ್ 19) ರಂದು ಸಂಜೆ 6.45ರ ಸುಮಾರಿಗೆ ಕೋಟೇಶ್ವರ ಸಮೀಪದ ದಾರಸ್ ಮನೆ ಸಮೀಪದ ಬೀಚ್ಗೆ ಯೋಗೀಶ್ ಹಾಗೂ ಸಂದೀಪ್ ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಯೋಗೀಶ್ ನೀರಿಗಿಳಿದಿದ್ದಾರೆ. ಬುಧವಾರ ಸಂಜೆ ವೇಳೆಗೆ ಮಳೆ ಜಾಸ್ತಿ ಇದ್ದುದಲ್ಲದೆ, ಕಡಲ ಅಲೆಗಳ ಅಬ್ಬರ, ಗಾಳಿಯ ವೇಗವೂ ತುಸು ಜೋರಾಗಿಯೇ ಇತ್ತು. ಅಲೆಯಬ್ಬರಕ್ಕೆ ಯೋಗೀಶ್ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಕಂಡ ಜತೆಗಿದ್ದ ಸಂದೀಪ್ ಅವರು ಯೋಗೀಶ್ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಈ ವೇಳೆ ಆತ ಸಹ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯವನ್ನು ಅರಿತ ಅಲ್ಲಿದ್ದ ಸ್ಥಳೀಯರು ಸಂದೀಪ್ನನ್ನು ರಕ್ಷಿಸಿದ್ದಾರೆ. ಆದರೆ ಯೋಗೀಶ್ ಮಾತ್ರ ಸಮುದ್ರದ ನೀರಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ನಂದಕುಮಾರ್, ನಗರ ಠಾಣಾ ಎಸ್ಐ ಪ್ರಸಾದ್ ಕುಮಾರ್ ಹಾಗೂ ಪೊಲೀಸ್ ಸಿಬಂದಿ ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿ ಭೇಟಿ ನೀಡಿ, ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಆದರೆ ರಾತ್ರಿಯಾಗಿದ್ದರಿಂದ ಸ್ಥಗಿತಗೊಳಿಸಲಾಯಿತು. ಇದಾದ ಬಳಿಕ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಯೋಗೀಶ್ ಮೃತದೇಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಘಟನೆ ನಡೆದು ಏಳನೇ ದಿನಕ್ಕೆ ಯೋಗೀಶ್ ಮೃತ ದೇಹ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಉಡುಪಿ : ಬೀಜಾಡಿಯಲ್ಲಿ ನಡೆದ ದುರಂತದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ನಿವಾಸಿ ರಾಜೇಶ್ ಟೈಲರ್ ಎಂಬವರ ಮಗ ಯೋಗೇಶ್ (22) ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಮೃತ ದೇಹ ಇದುವರೆಗೂ ಸಿಗಲಿಲ್ಲ. ಅವರ ಮೃತದೇಹ ಶೀಘ್ರ ಹುಡುಕಿಕೊಡುವಂತೆ ಆಗ್ರಹಿಸಿ ಇಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ದಯಾನಂದ್ ಕೋಟ್ಯಾನ್ ಕೊರಂಗ್ರಪಾಡಿ, ರಾಜ್ಯ ಸಮಿತಿಯ ಕಾರ್ಯದರ್ಶಿ ಶಾಂತ ಬಸ್ರೂರು, ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸುರೇಶ್ ಪಾಲನ್, ಪ್ರಧಾನ ಕಾರ್ಯದರ್ಶಿ ದಯಾನಂದ ಪ್ರಭು ಹಿರಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಕಳ : ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಬೈಕ್ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿನಿ ಪ್ರಣಮ್ಯ ಶೆಟ್ಟಿ (14) ಮೃತಪಟ್ಟ ಘಟನೆ ನಂದಳಿಕೆಯಲ್ಲಿ ಸಂಭವಿಸಿದೆ.
ಹತ್ತನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿ ಸ್ಥಳೀಯ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆಂದು ಮನೆಯಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಬೈಕ್ ಡಿಕ್ಕಿಯಾಗಿತ್ತು. ಬೈಕ್ ಸವಾರ ರಸ್ತೆಯಿಂದ ತೀರಾ ಎಡಬದಿಗೆ ಬಂದು ಪ್ರಣಮ್ಯ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ.

ತಲೆಗೆ ಏಟಾದ ಆಕೆಯನ್ನು ಕೂಡಲೇ ಕಾರ್ಕಳದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೈಕ್ ಸವಾರನ ಅಜಾಗರೂಕತೆಯ ಚಾಲನೆಯ ಪರಿಣಾಮ ಈ ಘಟನೆ ನಡೆದಿದೆ ಎಂದು ದೂರು ದಾಖಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ : ಫೆಡೆಕ್ಸ್ ಕಂಪೆನಿಯ ಹೆಸರಿನಲ್ಲಿ ಮುಂಬಯಿ ಪೊಲೀಸ್ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಸಂಭವಿಸಿದೆ.
ಕುಂಜಿಬೆಟ್ಟುವಿನ ನಮೃತಾ ವಂಚನೆಗೊಳಗಾದವರು. ಇವರು ಮಣಿಪಾಲದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ತನ್ನ ಹೆಸರು ಸಂಜಯ್ ಕುಮಾರ್ ಎಂದು ತಿಳಿಸಿ ತಾನು ಫೆಡೆಕ್ಸ್ ಕಂಪೆನಿ ಉದ್ಯೋಗಿ ಎಂದು ತಿಳಿಸಿದ್ದಾನೆ.
ನಿಮ್ಮ ಹೆಸರಿನಲ್ಲಿ ಒಂದು ಪಾರ್ಸಲ್ ಬಂದಿದ್ದು, ಅದರಲ್ಲಿ 5 ಇರಾನಿ ಪಾಸ್ಪೋರ್ಟ್, 5 ಡೆಬಿಟ್ ಕಾರ್ಡ್, 2 ಕೆಜಿ ಬಟ್ಟೆ, 150 ಗ್ರಾಂ ಎಂಡಿಎಂಎ ಇದ್ದು, ಈ ಬಗ್ಗೆ ಮುಂಬಯಿ ಪೊಲೀಸರಿಗೆ ತಿಳಿಸಿದ್ದು, ಈ ಬಗ್ಗೆ ಎಫ್ಐಆರ್ ಆಗಿರುವುದಾಗಿ ನಂಬಿಸಿದ್ದಾನೆ.
ಅನಂತರ ನೀವು ಮುಂಬಯಿ ಪೊಲೀಸರೊಂದಿಗೆ ಮಾತನಾಡುವಂತೆ ಅಪರಿಚತ ವ್ಯಕ್ತಿ ಬೇರೊಬ್ಬ ವ್ಯಕ್ತಿಗೆ ಕರೆ ಮಾಡಿದ್ದಾನೆ. ಅನಂತರ ಆ ವ್ಯಕ್ತಿ ಮಾತನಾಡಿ, ತಾನು ಮುಂಬಯಿ ಪೊಲೀಸ್ ಪ್ರದೀಪ್ ಸಾವಂತ್ ಎಂದು ತಿಳಿಸಿ, ಅವರ ಆಧಾರ್ ಕಾರ್ಡ್, ಬ್ಯಾಂಕ್ ಡೆಬಿಟ್ ಕಾರ್ಡ್ಗಳ ಮಾಹಿತಿ ಪಡೆದು ಅವರ ಖಾತೆಯಿಂದ 7,90,000 ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ಗೋ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಶಿರೂರುಪೇಟೆಯ ಮಂಜುನಾಥ ಹೋಟೆಲ್ ಎದುರಿನಲ್ಲಿ ಮಲಗಿದ್ದ ಗೋವುಗಳನ್ನು ಇವರು ಕದ್ದಿರುವುದಾಗಿ ಸಾರ್ವಜನಿಕರು ದೂರು ನೀಡಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬೈಂದೂರು ಪೊಲೀಸರು ಆರೋಪಿಗಳಾದ ಅಬ್ದುಲ್ ಸಮಾದ್ ಮತ್ತು ಅಬ್ದುಲ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ತಾಲೂಕಿನ ಹಾಲಾಡಿ ರಸ್ತೆಯ ಫ್ಯಾಕ್ಟರಿ ಒಂದರ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಎರಡು ಕಾರುಗಳು, ಮೊಬೈಲ್, ಕೃತ್ಯದ ವೇಳೆ ಬಳಸಿದ್ದ ಚೂರಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ಒಟ್ಟು ಒಂಬತ್ತು ಲಕ್ಷ ರೂಪಾಯಿ ಆಗಿರುತ್ತದೆ. ಬೈಂದೂರು ಭಾಗದಲ್ಲಿ ಗೋಕಳ್ಳತನ ಪ್ರಕರಣ ಹೆಚ್ಚುತ್ತಿದ್ದು 24 ಗಂಟೆಗಳ ಅವಧಿಯಲ್ಲಿ ಎರಡು ಪ್ರಕರಣಗಳನ್ನು ಭೇದಿಸಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕುಂದಾಪುರ : ಕಮಲಶಿಲೆ ದೇವಸ್ಥಾನದ ಗೋಶಾಲೆಯ ದನಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ವರನ್ನು ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ರಾಜು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ವಾಜೀದ್ ಜೆ (26) ಮತ್ತು ಫೈಜಲ್ (40 ) ಬಂಧಿತರು. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹುಂಡೈ ಕ್ರೆಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಕಮಲಶಿಲೆ ದೇವಸ್ಥಾನದಲ್ಲಿ ಗೋ ಕಳ್ಳತನಕ್ಕೆ ಯತ್ನ; ಸಿಸಿಟಿವಿ ಮಾನಿಟರಿಂಗ್ ತಂಡದ ಸಮಯ ಪ್ರಜ್ಞೆಯಿಂದ ಕಳ್ಳತನ ವಿಫಲ
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿ : ಕೆಲ ದಿನಗಳ ಹಿಂದೆ ಉಡುಪಿಯ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ನಡೆದಿದ್ದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ಮನೆಯಿಂದಲೇ ಪೊಲೀಸರು ತಲವಾರು ವಶಪಡಿಸಿಕೊಂಡಿದ್ದಾರೆ.

ಸೆಲೂನಿನಲ್ಲಿ ಕೆಲಸ ಮಾಡಿಕೊಂಡಿದ್ದ ಪುತ್ತೂರು ಗ್ರಾಮದ ಚರಣ್ ರಾಜ್(18) ಎಂಬಾತನ ಮನೆಯಲ್ಲಿ ತಲವಾರು ಇರುವ ಬಗ್ಗೆ ಉಡುಪಿ ನಗರ ಠಾಣಾ ಎಸ್ಸೈ ಪುನೀತ್ ಕುಮಾರ್ರಿಗೆ ಮಾಹಿತಿ ಬಂದಿದ್ದು, ಅದರಂತೆ ನ್ಯಾಯಾಲಯದಿಂದ ಸರ್ಚ್ ವಾರೆಂಟನ್ನು ಪಡೆದುಕೊಂಡು ಆತನ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದರು.
ಈ ವೇಳೆ ಆತನ ಮನೆಯಲ್ಲಿ ತಲವಾರು ದೊರೆತಿದ್ದು, ಅದರಂತೆ ಆತನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾರದ ಹಿಂದೆ ಪ್ರವೀಣ್, ಅಭಿಷೇಕ್, ದೇಶರಾಜ್ ಮತ್ತು ಇತರರು ತಲವಾರಗಳನ್ನು ಹಿಡಿದುಕೊಂಡು ದಾಳಿ ಮಾಡಿ ದ್ವಿಚಕ್ರ ವಾಹನಗಳಿಗೆ ಹಾನಿ ಮಾಡಿದ್ದರೆಂದು ಚರಣ್ರಾಜ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದ.
ಕಾರ್ಕಳ : ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್ನಲ್ಲಿ ಕಂಚಿನ ಮೂರ್ತಿ ಬದಲು ಪರಶುರಾಮನ ನಕಲಿ ಮೂರ್ತಿಯನ್ನು ಸ್ಥಾಪಿಸಿ ಸರಕಾರಕ್ಕೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಕೃಷ್ಣ ಎಂಬಾತ ಕಾರ್ಕಳ ತಾಲೂಕಿನ ಪರಶುರಾಮ ಥೀಮ್ ಪಾರ್ಕ್ನಲ್ಲಿ ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1,25,50,000 ರೂ. ಹಣ ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ನಂತರ ಆರೋಪಿ ಕೃಷ್ಣ ಕಂಚಿನ ಮೂರ್ತಿಯನ್ನು ಮಾಡದೆ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ನಲ್ಲೂರು ಗ್ರಾಮದ ಕೃಷ್ಣ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.