ಉಡುಪಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಹೆಬ್ರಿ ತಾಲೂಕುಗಳ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.31ರಂದು ರಜೆ ಘೋಷಿಸಿ ಆಯಾ ತಾಲೂಕಿನ ತಹಶೀಲ್ದಾರ್ಗಳು ಆದೇಶ ನೀಡಿದ್ದಾರೆ.
Government
ವಿನಯ್ ಕುಮಾರ್ ಸೊರಕೆ ಸತತ ಸೋಲಿನಿಂದ ಹತಾಶರಾಗಿದ್ದಾರೆ – ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿಕೆ
ಕಾಪು : ಸತತ ಎರಡು ಬಾರಿಯ ಸೋಲಿನಿಂದ ವಿನಯ ಕುಮಾರ್ ಸೊರಕೆ ಕಂಗೆಟ್ಟಿದ್ದಾರೆ. ನಮ್ಮದೇ ಸರಕಾರ ಇದೆ, ನಾನು ಏನು ಆಗಿಲ್ಲ ಎಂಬ ಹತಾಶೆ ಅವರನ್ನು ಕಾಡುತ್ತಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಲೇವಡಿ ಮಾಡಿದರು.
ಕಾಪುವಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಸೊರಕೆಗೆ ಟಾಂಗ್ ನೀಡಿದರು. ಕಳೆದ ಬಾರಿ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಾ ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವ ಕೆಲಸ ಮಾಡಿದ್ದರು. ಅವರು ರಾಜಕೀಯದಲ್ಲಿ ನಿವೃತ್ತಿಯಾಗಲಿ ಎಂದು ನಾನು ಯಾವತ್ತೂ ಹೇಳುವುದಿಲ್ಲ. ಎಲ್ಲಿಯವರೆಗೆ ಅವರಿಗೆ ಶಕ್ತಿ, ತಾಕತ್ ಇರುತ್ತೊ ಅಲ್ಲಿಯವರೆಗೆ ಅವರು ಖಂಡಿತವಾಗಿಯೂ ರಾಜಕೀಯದಲ್ಲಿ ಇರಬೇಕು ಎಂದರು.
ಅವರಿಗೆ ಭಗವಂತಹ ಒಳ್ಳೆಯ ಬುದ್ಧಿಕೊಡಲಿ. ಅವರ ಹಿರಿತನ, ರಾಜಕೀಯ ಅನುಭವ, ಅವರ ಸುದೀರ್ಘ ರಾಜಕಾರಣವನ್ನು ಗೌರವಿಸುತ್ತೇನೆ. ಅವರು ಮಂತ್ರಿ ಪದವಿ ಕಳೆದುಕೊಂಡಾಗ ಮೊದಲನೇಯವನಾಗಿ ನಾನೇ ಅವರಿಗೆ ಸಾಂತ್ವನ ಹೇಳಿದ್ದೇನೆ. ರಾಜಕಾರಣದಲ್ಲಿ ಅಧಿಕಾರ ಬರುತ್ತೆ, ಹೋಗುತ್ತೆ ಎಂದಿದ್ದೆ. ಆದರೆ, ಅವರ ಮಂತ್ರಿ ಸ್ಥಾನ ಯಾವ ಕಾರಣಕ್ಕೆ ಹೋಯಿತು ಅಂತಾ ಇವತ್ತಿನವರೆಗೂ ನನಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಸೊರಕೆ ಆಡಳಿತ ವ್ಯವಸ್ಥೆ, ಪೊಲೀಸ್ ಠಾಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನ್ನ ಮಾತು ಕೇಳದಿದ್ದರೆ ನಿನನ್ನು ಟ್ರಾನ್ಸ್ ಫಾರ್ ಮಾಡುತ್ತೇನೆಂದು ಸರಕಾರಿ ಅಧಿಕಾರಿ, ನೌಕರರನ್ನು ಬೆದರಿಸುತ್ತಿದ್ದಾರೆ. ಇದು ಒಳ್ಳೆದಲ್ಲ. ಸರಕಾರ ಬರುತ್ತೆ, ಹೋಗುತ್ತೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಕಳಂಕ ಎಂದು ಅವರು ಕಿಡಿಕಾರಿದರು. ಸೊರಕೆ ಸರಕಾರದಲ್ಲಿ ಆರ್ಥಿಕ ಸಮಸ್ಯೆ ಇಲ್ಲ ಅಂತಾರೆ. ಆದರೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಸರಕಾರದ ಆರ್ಥಿಕ ವ್ಯವಸ್ಥೆ ಸರಿಯಿಲ್ಲ. ನಮಗೆ ಯಾರಿಗೂ ಅನುದಾನ ಬರುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ನನಗೆ ಪರಿಚಯವಿರುವ ತುಂಬಾ ಜನ ಶಾಸಕರು ಕೂಡ ನಮಗೆ ಅನುದಾನ ಬರುತ್ತಿಲ್ಲ ಎನ್ನುತ್ತಿದ್ದಾರೆ ಎಂದರು.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ಜು 31 ರಂದು ರಜೆಯನ್ನು ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ನಾಳೆ ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ತುರ್ತು ಕ್ರಮಗಳನ್ನು ಕೈಗೊಂಡಿದೆ.
ಮಣಿಪಾಲ : ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಇದರ ವತಿಯಿಂದ ಸಮುದಾಯದ ಯುವ ಜನರ 100% ಉದ್ಯೋಗ ಭರವಸೆ ಈಡೇರಿಕೆಗಾಗಿ ಹಾಗೂ ಕೃಷಿ ಭೂಮಿ ಹಕ್ಕು ಪತ್ರ ಮಂಜೂರಾತಿಗಾಗಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಕಳೆದ 7 ದಿನಗಳಿಂದ ಅಹೋ ರಾತ್ರಿ ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಇಂದು ಸತ್ಯಾಗ್ರಹದಲ್ಲಿ ಭಾಗವಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೊರಗ ಸಮುದಾಯದ ಜೊತೆಯಲ್ಲಿ ಇರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮನವಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ಉಡುಪಿ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳನ್ನು ಅಗಸ್ಟ್ 2024ರ ಮಾಹೆಯಲ್ಲಿ ಶೇ.50 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಓದುಗರು ಆನ್ಲೈನ್ http://www.kuvempubhashabharathi.karnataka.gov.in ಮೂಲಕ ಅಥವಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿಯೂ ಕೂಡ ಶೇ.50 ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿನಗರ, ಅಲೆವೂರು, ಉಡುಪಿ ದೂರವಾಣಿ ಸಂಖ್ಯೆ: 0820- 2986168 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನವದೆಹಲಿ : ಬಿಜೆಪಿಯು ಲೋಕಸಭೆಯ ಮುಖ್ಯ ಮತ್ತು ಸಚೇತಕರನ್ನು ನೇಮಕ ಮಾಡಿದೆ. ಒಬ್ಬರನ್ನು ಮುಖ್ಯ ಸಚೇತಕ ಹಾಗೂ 16 ಜನರನ್ನು ಸಚೇತಕರನ್ನಾಗಿ ನೇಮಕ ಮಾಡಿ ಬಿಜೆಪಿ ಸಂಸದೀಯ ಮಂಡಳಿಯ ಕಾರ್ಯದರ್ಶಿ ಶಿವಶಕ್ತಿನಾಥ್ ಭಕ್ಷಿ ಅವರು ಇಂದು(ಜುಲೈ 29) ಆದೇಶ ಹೊರಡಿಸಿದ್ದಾರೆ. ಡಾ ಸಂಜಯ್ ಜೈಸ್ವಾಲ್ ಅವರನ್ನು ಲೋಕಸಭೆಯ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿದ್ದರೆ, ಇನ್ನುಳಿದ 16 ಜನರನ್ನು ಸಚೇತಕರನ್ನಾಗಿ ನೇಮಿಸಲಾಗಿದೆ. ಇನ್ನು ಈ 16 ಜನರ ಸಚೇತಕರ ಪೈಕಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸ್ಥಾನ ಸಿಕ್ಕಿದೆ. ಈ ಮೂಲಕ ಕೋಟ ಶ್ರೀನಿವಾಸ್ ಪೂಜಾರಿ ಅವರು ರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಹಂತ ಮೇಲಕ್ಕೆ ಹೋಗಿದ್ದಾರೆ.
ಇನ್ನು ತಮ್ಮನ್ನು ಸಚೇತಕರನ್ನಾಗಿ ನೇಮಕ ಮಾಡಿದ ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಗೆ ಕೋಟ ಶ್ರೀನಿವಾಸ್ ಪೂಜಾರಿ ಅವರು ಧನ್ಯವಾದ ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಯು ನನ್ನನ್ನು ಲೋಕಸಭಾ ಸಚೇತಕ ಹುದ್ದೆಗೆ ಪರಿಗಣಿಸಿ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ವಿಧಾನಪರಿಷತ್ಗೆ ಆಯ್ಕೆಯಾಗಿ ವಿಪಕ್ಷ ನಾಯಕರಾಗಿದ್ದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಹೈಕಮಾಂಡ್ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿತ್ತು. ಅದರಂತೆ ಕೋಟ ಶ್ರೀನಿವಾಸ್ ಪೂಜಾರಿ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. ಇದೀಗ ಇವರನ್ನು ಪಕ್ಷದ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ಲೋಕಸಭಾ ಸಚೇತಕರಾಗಿ ಆಯ್ಕೆಯಾದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಇತರೆ ನಾಯಕರು ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ಲೋಕಸಭಾ ಸಚೇತಕರಾಗಿ ಆಯ್ಕೆಯಾದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಅಭಿನಂದನೆಗಳು. ರಾಜ್ಯದಲ್ಲಿ ಸಚಿವರಾಗಿ, ವಿಧಾನ ಪರಿಷತ್ ವಿರೋಧಪಕ್ಷ ನಾಯಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಹಾಗೂ ಪಕ್ಷ ಸಂಘಟನೆಗೂ ಅನನ್ಯ ಕೊಡುಗೆ ನೀಡಿರುವ ಶ್ರೀನಿವಾಸ್ ಪೂಜಾರಿ ಅವರು ಲೋಕಸಭೆಯ ಸಚೇತಕರಾಗಿಯು ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುವರೆಂಬ ವಿಶ್ವಾಸದೊಂದಿಗೆ ಶುಭ ಹಾರೈಸುವೆ ಎಂದು ಬರೆದುಕೊಂಡಿದ್ದಾರೆ.
ನಂದಿಕೂರು M11 ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ಗೆ ಶಾಸಕರೊಂದಿಗೆ ಜಿಲ್ಲಾಧಿಕಾರಿ ಭೇಟಿ
ಪಡುಬಿದ್ರೆ : M11 ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಹೊಸದಾಗಿ ಸ್ಥಾಪಿಸಿರುವ ಪಾಮ್ ಆಯಿಲ್, ಸನ್ ಫ್ಲವರ್ ಆಯಿಲ್ ಮತ್ತು ಬಯೋಡೀಸಲ್ ಉತ್ಪಾದನಾ ಘಟಕಕ್ಕೆ ಶಾಸಕರೊಂದಿಗೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಭೇಟಿ ನೀಡಿದರು.
M11 ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಹೊಸದಾಗಿ ಸ್ಥಾಪಿಸಿರುವ ಪಾಮ್ ಆಯಿಲ್, ಸನ್ ಫ್ಲವರ್ ಆಯಿಲ್ ಮತ್ತು ಬಯೋಡೀಸಲ್ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಉಂಟಾಗುತ್ತಿರುವ ಮಾಲಿನ್ಯ ಸಮಸ್ಯೆ ಸಲುವಾಗಿ ಭೇಟಿ ನೀಡಿ ಸಂಸ್ಥೆಯೊಂದಿಗೆ ಚರ್ಚಿಸಿದರು.
M11 ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಮಾಲಿನ್ಯ ನಿಯಂತ್ರಿಸುವಲ್ಲಿ ಕೆಲವೊಂದು ತಾಂತ್ರಿಕ ದೋಷಗಳಿದ್ದು ಅವುಗಳನ್ನು ಸರಿಪಡಿಸಿಕೊಂಡು ಸ್ಥಳೀಯರಿಗೆ ಸಮಸ್ಯೆ ಆಗದ ರೀತಿಯಲ್ಲಿ ಮುಂದುವರೆಯಬೇಕು ಒಂದು ತಿಂಗಳ ಹಿಂದೆ ಈ ಬಗ್ಗೆ ತಮಗೆ ಸೂಚನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡದಿದ್ದಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ನೀಡುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷರಾದ ರಾಯೇಶ್ ಪೈ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷರಾದ ಹೇಮಚಂದ್ರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಸ್ಥಳೀಯರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಾಗೇಶ್ ಭಟ್, ಸಹಾಯಕ ಆಯುಕ್ತರಾದ ಮಹೇಶ್ ಚಂದ್ರ, ಕಾಪು ತಹಶೀಲ್ದಾರರಾದ ಪ್ರತೀಭಾ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ್ ನಾಯಕ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ, ಪೊಲ್ಲ್ಯೂಷನ್ ಬೋರ್ಡ್ ಅಧಿಕಾರಿಗಳು, M11 ಕಂಪೆನಿಯ ಅಧಿಕಾರಿಗಳು, ಪಲಿಮಾರು ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಧಾನಸಭೆಯಲ್ಲಿ ಕೆಟ್ಟ ಸಂಪ್ರದಾಯ ಹುಟ್ಟು ಹಾಕುವುದು ಇಷ್ಟವಿಲ್ಲ – ಸ್ಪೀಕರ್ ಖಾದರ್
ಮಂಗಳೂರು : ವಿಧಾನಸಭೆ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕೇ ಹೊರತು, ವಿಮರ್ಶೆಗಳ ಮರ್ಜಿಗೆ ಅನುಗುಣವಾಗಿ ಅಲ್ಲ. ನಿಯಮ ಮೀರಿ ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಲು ನನಗೆ ಇಷ್ಟವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿಂದು 16ನೇ ವಿಧಾನಸಭೆಯ 4ನೇ ಅಧಿವೇಶನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಮುಡಾ ಹಗರಣದ ಸಂಬಂಧ ಶಾಸಕರು ಮಂಡಿಸಿರುವ ನಿಲುವಳಿ ಸೂಚನೆಗೆ, ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲು ಆಗುವುದಿಲ್ಲ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 62(7) ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 63ರ ಪ್ರಕಾರ ಅದರದ್ದೇ ಆದ ನಿಯಮಗಳಿವೆ. ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ, ಸಿದ್ಧವಿಲ್ಲದಿದ್ದರೂ ನಿಯಮಾವಳಿಗಳನ್ನು ಮುರಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮುಡಾ ಹಗರಣದ ತನಿಖೆಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ಆಯೋಗವನ್ನು ರಚನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಸ್ಪೀಕರ್ ಪೀಠಕ್ಕೆ ನೀಡಿದೆ. ಸದನದಲ್ಲಿ ವಿಷಯ ಚರ್ಚೆಯಾದರೆ ನ್ಯಾಯಾಧಿಕರಣ, ಆಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸದನದ ಎಲ್ಲ ಸದಸ್ಯರಿಗೂ ಕಲಾಪದಲ್ಲಿ ಮಾತನಾಡುವ ಮುಕ್ತ ಅವಕಾಶ ಇದೆ. ಕಾನೂನು ರಚಿಸುವ ಹುದ್ದೆಯಲ್ಲಿರುವ ವಿಧಾನಸಭಾ ಸದಸ್ಯರು ನಿಯಮ ಮೀರಿ ಚರ್ಚಿಸುವ ಕೆಟ್ಟ ಪರಂಪರೆ ಹುಟ್ಟು ಹಾಕಬಾರದು. ಜನರು ಬಯಸುತ್ತಾರೆ, ಬಹುಮತ ಇದೆ ಎಂದು ನಿಯಮಾವಳಿ, ಕಾನೂನು ಮೀರಬಾರದು ಎಂಬ ಪ್ರಜ್ಞೆ ನಮಗಿರಬೇಕು. ಬಿಎಸಿ ಸಮಿತಿಯಲ್ಲಿ ಚರ್ಚಿಸಿ ನಿಯಮಾವಳಿಗಳಂತೆ ಬೇರೊಂದು ನಿಯಮ ಸಂಖ್ಯೆಯಡಿಯಲ್ಲಿ ಚರ್ಚಿಸುವ ಅವಕಾಶವನ್ನು ಸರ್ವಾನುಮತದ ನಿರ್ಧಾರಕ್ಕೆ ಬರುವ ‘ಮಾದರಿ’ ಅವಕಾಶ ಇದ್ದೇ ಇದೆ. ನಿಯಮ ಮೀರುವುದು ಮುಂದಿನ ಪೀಳಿಗೆಗೆ ಕೆಟ್ಟ ಪರಂಪರೆ ಹಾಕಿಕೊಟ್ಟಂತಾಗುತ್ತದೆ ಎಂದು ಯು.ಟಿ.ಖಾದರ್ ಹೇಳಿದರು.
ಕೇರಳದಲ್ಲಿ ನಿಫಾ ಸೋಂಕಿನಿಂದ ಬಳಲುತ್ತಿರುವ ಕಡಬ ಮೂಲದ ಯುವಕ – 8 ತಿಂಗಳಿನಿಂದ ಕೋಮಾದಲ್ಲಿ
ಮಂಗಳೂರು : ಕೇರಳದಲ್ಲಿ ನಿಫಾ ಸೋಂಕಿತನಿಗೆ ಆರೈಕೆ ಮಾಡುತ್ತಿದ್ದ ಕಡಬ ಮೂಲದ ನರ್ಸ್ ಯುವಕನಿಗೆ ನಿಫಾ ಸೋಂಕು ತಗುಲಿ 8 ತಿಂಗಳಿನಿಂದ ಕೋಮಾದಲ್ಲಿದ್ದಾರೆ.
ದ.ಕ.ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಸಮೀಪದ ತುಂಬ್ಯ ನಿವಾಸಿ ಟಿಟ್ಟೋ ತೋಮಸ್(24) ಕೋಮಾದಲ್ಲಿರುವ ಯುವಕ.
ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಅವರು, ಕೇರಳದ ಕ್ಯಾಲಿಕಟ್ನಲ್ಲಿರುವ ಇಕ್ರಾ ಇಂಟರ್ ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 2023ರ ಸೆಪ್ಟೆಂಬರ್ನಲ್ಲಿ ಟಿಟ್ಟೋ ತೋಮಸ್ ನಿಫಾ ವೈರಸ್ ಬಾಧಿತನಿಗೆ ಆರೈಕೆ ಮಾಡಿದ್ದರು. ಆದ್ದರಿಂದ ಕ್ವಾರಂಟೈನ್ನಲ್ಲಿದ್ದ ಟಿಟ್ಟೋಗೆ ಎರಡು ತಿಂಗಳು ಕಳೆದ ಬಳಿಕ ವಿಪರೀತ ತಲೆನೋವು ಆರಂಭವಾಗಿದೆ. ಡಿಸೆಂಬರ್ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ ಸ್ಟ್ರೋಕ್ಗೆ ತುತ್ತಾಗಿದ್ದರು.
ಚಿಕಿತ್ಸೆಗೆ ಸ್ಪಂದಿಸದೇ ಮರುದಿನವೇ ಕೋಮಾಗೆ ಜಾರಿದ ಟಿಟ್ಟೋ 8 ತಿಂಗಳಿನಿಂದ ಕೇರಳದ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 40 ಲಕ್ಷ ರೂ.ಗಳಷ್ಟು ಖರ್ಚಾದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ. ಇನ್ನು ಮುಂದೆ ನಿಭಾಯಿಸುವುದು ಕಷ್ಟ ಎಂದು ಹೇಳುತ್ತಿದೆ. ಆದ್ದರಿಂದ ಟಿಟ್ಟೋ ತೋಮಸ್ರನ್ನು ಬೇರೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಕುಟುಂಬಸ್ಥರು ಕೇರಳ ಸರಕಾರವನ್ನು ಆಗ್ರಹಿಸಿದ್ದಾರೆ.
ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಕೊರಗ ಸಮುದಾಯದ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳ ಭೇಟಿ
ಕಳೆದ 8 ದಿನಗಳಿಂದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ರಿ. ಕರ್ನಾಟಕ ಕೇರಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಕೊರಗ ಸಮುದಾಯದ ಮುಖಂಡರು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಕೊರಗ ಸಮುದಾಯದ ನ್ಯಾಯ ಸಮ್ಮತ ಬೇಡಿಕೆಗಳಾದ ಭೂಮಿ ಹಕ್ಕು ಹಾಗೂ ವಿದ್ಯಾವಂತ ಕೊರಗ ಸಮುದಾಯದ ಯುವ ಜನತೆಗೆ ಅರ್ಹ ಸರಕಾರಿ ಉದ್ಯೋಗದ ಒದಗಿಸುವ ಬಗ್ಗೆ ಈಗಾಗಲೇ ರಾಜ್ಯ ಸರಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿಯೇ ಕೊರಗ ಸಮುದಾಯದ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಆಗ್ರಹಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗಳು ಜಿಲ್ಲೆಯ ಕೊರಗ ಸಮುದಾಯದ ಗಂಭೀರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಸಂಬಂಧಿತ ಇಲಾಖೆಗೆ ಸೂಕ್ತ ವರದಿ ನೀಡುವಂತೆ ಶಾಸಕರು ಕೊರಗ ಸಮುದಾಯದ ಪರವಾಗಿ ಹೇಳಿದರು.
ಕೊರಗ ಸಮುದಾಯದ ಮುಖಂಡರು ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕೊರಗ ಸಮುದಾಯದ ಮುಖಂಡರಾದ ಸುಶೀಲ, ಸಂಜೀವ, ಶೇಖರ್, ಬೊಗ್ರ, ಪವಿತ್ರ, ಐ. ಟಿ. ಡಿ. ಪಿ. ಯೋಜನಾಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.