ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ಮಣಿಪಾಲ ಜಿ.ಎಸ್.ಎಲ್.ಆರ್ ಘಟಕದ ಟ್ಯಾಂಕನ್ನು ಸ್ವಚ್ಛಗೊಳಿಸುವ ಹಿನ್ನೆಲೆ, ನವೆಂಬರ್ 14ರಂದು ಕುಡಿಯುವ ನೀರಿನ ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Government
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಪ್ರಕರಣ : ಶಿಲ್ಪಿ ಕೃಷ್ಣ ನಾಯ್ಕ್ ಬಂಧನವಾಗಿದೆ.. ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
ಉಡುಪಿ : ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್ನಲ್ಲಿನ ಪರಶುರಾಮ ಮೂರ್ತಿ ನಿರ್ಮಾಣದ ಹಿಂದಿನ ಅಕ್ರಮ ವಿಳಂಬವಾಗಿ ಬೆಳಕಿಗೆ ಬಂದಿದೆ.
ವಂಚನೆ ಮಾಡಿದ ಶಿಲ್ಪಿ ಕೃಷ್ಣ ನಾಯ್ಕ ಈಗಾಗಲೇ ಬಂಧನಕ್ಕೊಳಗಾಗಿದ್ದು, ಉಳಿದ ಆರೋಪಿಗಳನ್ನು ಪೊಲೀಸರು ತತ್ಕ್ಷಣವೇ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದರು.
ಪರಶುರಾಮನ ಮೂರ್ತಿಯ ಸೊಂಟದ ಮೇಲ್ಭಾಗ ಎಲ್ಲಿಗೆ ಹೋಗಿದೆ ಎಂಬ ಬಗ್ಗೆಯೂ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಹಲವರ ಕೈವಾಡವಿದ್ದು ಪೊಲೀಸರು ಎಲ್ಲರನ್ನು ವಿಚಾರಣೆಗೆ ಒಳಗಪಡಿಸಬೇಕು. ಪ್ರಕರಣವನ್ನು ಅತಿ ಶೀಘ್ರದಲ್ಲಿ ಇತ್ಯರ್ಥಪಡಿಸಿ. ಉಮಿಕಲ್ ಬೆಟ್ಟದ ಮೇಲೆ ಹೊಸ ಮೂರ್ತಿಯನ್ನು ನಿರ್ಮಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಶುರಾಮನ ಮೂರ್ತಿ ವಿಚಾರದಲ್ಲಿ ಶಿಲ್ಪಿ ಕೃಷ್ಣ ನಾಯ್ಕಗೆ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ತಪ್ಪಿಗೆ ನೇರ ಹೊಣೆಯಾಗಿರುವವರು ವಿಧಾನಸಭೆ ಸದಸ್ಯರಾಗಿದ್ದು, ಕಲಾವಿದ ಮಾತ್ರ ಜೈಲುಪಾಲಾಗಿದ್ದಾನೆ. ಮೂರ್ತಿ ನಿರ್ಮಾಣಕ್ಕೆಂದು ಮಂಜೂರಾದ 1.25 ಕೋಟಿ ರೂ.ಗಳನ್ನು ಟೆಂಡರ್ಗೂ ಮೊದಲೇ ಕೃಷ್ಣ ನಾಯ್ಕಗೆ ನೀಡಿದ್ದಾರೆ. ಕೇವಲ 45 ದಿನಗಳಲ್ಲಿ 33 ಅಡಿ ಕಂಚಿನ ಮೂರ್ತಿ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
‘ಕಾರ್ಮಿಕರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ’ ಉಡುಪಿ ಡಿಸಿ ಕರೆ
ಉಡುಪಿ : ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಅವರ ಪರವಾದ ಕಾನೂನುಗಳಿವೆ. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಉದ್ಯೋಗದಾತರು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಕಾರ್ಮಿಕರ ದುಡಿಮೆಗೆ ಅನುಗುಣವಾಗಿ ಕನಿಷ್ಠ ವೇತನ ಕಾಯಿದೆಯಂತೆ ಸಂಬಳ, ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಇ.ಎಸ್.ಐ, ಪಿಎಫ್, ಹೆಚ್ಚುವರಿ ಕೆಲಸ ಮಾಡಿಸಿಕೊಂಡಲ್ಲಿ ಹೆಚ್ಚುವರಿ ಪೇಮೆಂಟ್ ನೀಡಬೇಕು. ಅಲ್ಲದೇ ಕಾರ್ಮಿಕರು ಸುರಕ್ಷತೆಯಿಂದ ಕೆಲಸ ಮಾಡಲು ಸುರಕ್ಷಿತ ವಾತಾವರಣವನ್ನು ಅವರಿಗೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ, ವೈದ್ಯಕೀಯ ಸೇವೆ ಹಾಗೂ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಹಾಗೂ ಇತರೆ ಇಲಾಖೆಗಳಿಂದ ಅನುಷ್ಠಾನ ಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಮಿಕ ಕಾಯ್ದೆಗಳು ಬಲಿಷ್ಠವಾಗಿವೆ. ಇವುಗಳ ಬಗ್ಗೆ ಉದ್ಯೋಗದಾತರಿಗೆ ಕಾನೂನಿನ ಅರಿವು ಮೂಡಿಸಿ, ಆ ಮೂಲಕ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಸರಿಯಾಗಿ ನೀಡುವಂತೆ ನೋಡಿಕೊಳ್ಳಿ. ಮಾನವೀಯ ನೆಲೆಯೊಂದಿಗೆ ಕಾನೂನಿನ ಅಡಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಕಾಯಿದೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳುತ್ತವೆ ಎಂದವರು ನುಡಿದರು.

ಉಡುಪಿ : ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಮಾತನಾಡಿ ಉಡುಪಿ ತಾಲೂಕಿನ ಕಾಪು ಕ್ಷೇತ್ರದ 10 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 94 ಸಿ. ಹಾಗೂ 94 ಸಿ.ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕಡತಗಳನ್ನು ಶೀಘ್ರವೇ ವಿಲೆಗೊಳಿಸುವಂತೆ ತಿಳಿಸಿದರು. ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ, ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಸಣ್ಣ ನೀರಾವರಿ ವ್ಯಾಪ್ತಿಗೆ ಬರುವ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಶೇಖರಣೆಯನ್ನು ಸಮರ್ಪಕವಾಗಿ ನಿರ್ವಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕುಡಿಯುವ ನೀರು ಹಾಗೂ ಕೃಷಿ ಕಾರ್ಯಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಅನರ್ಹ ಬಿಪಿಎಲ್ ಕಾರ್ಡ್ ಎಂದು ಗುರುತಿಸಿರುವ ಪಡಿತರ ಚೀಟಿಗಳ ಫಲಾನುಭವಿಗಳ ದಾಖಲೆಗಳ ನೈಜತೆ ಪರಿಶೀಲನೆ ಮಾಡಿ ನಂತರವೇ ಅವರ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ರವೀಂದ್ರ, ಉಡುಪಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ, ತಹಶೀಲ್ದಾರರಾದ ಗುರುರಾಜ್ ಹಾಗೂ ಉಡುಪಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಎಬಿವಿಪಿಯಿಂದ ಮಂಗಳೂರು ವಿವಿಯ ವಿವಿಧ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಕುಲಪತಿಗಳೊಂದಿಗೆ ಚರ್ಚೆ; ಬಗೆಹರಿಸಲು ಆಗ್ರಹ
ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ನಿಯೋಗವು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಭೇಟಿ ಮಾಡಿ ವಿವಿಯ ವಿವಿಧ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇದನ್ನು ಬಗೆಹರಿಸುವಂತೆ ಆಗ್ರಹಿಸಿ ತಪ್ಪಿದ್ದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ವಿವಿಯು ಪರೀಕ್ಷಾ ಶುಲ್ಕವನ್ನು ಏಕಾಏಕಿ 50-60% ದಷ್ಟು ಏರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಣದ ಬರೆಯನ್ನು ಎಳೆದಿದ್ದಾರೆ. ಇದಲ್ಲದೆ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರ ಕೊರತೆ, ಅಂಕಪಟ್ಟಿ ಕುರಿತು ಇರುವಂತಹ UUCMS ನ ತಾಂತ್ರಿಕ ಸಮಸ್ಯೆಗಳು ಹಾಗೂ ಇತರ ಮೂಲಭೂತ ಸಮಸ್ಯೆಗಳು ವಿವಿಯನ್ನು ಸಮಸ್ಯೆಯ ಗೂಡಾಗಿ ಪರಿವರ್ತಿಸಿದೆ.
ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಕುಲಪತಿಗಳು ಇದಕ್ಕೆಲ್ಲ ಕಾರಣ ಕಳೆದ 6 ವರ್ಷಗಳಿಂದ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಧನ ಸಹಾಯ ಬಾರದೆ ಇರುವುದು ಇದರಿಂದಾಗಿ ಬೇರೆ ಯಾವುದೇ ದಾರಿ ಇಲ್ಲದೆ ವಿದ್ಯಾರ್ಥಿಗಳ ಮೂಲಕವೇ ಶುಲ್ಕವನ್ನು ಪಡೆದು ವ್ಯವಸ್ಥೆಯನ್ನು ಕಲ್ಪಿಸುವ ಪರಿಸ್ಥಿತಿ ಬಂದಿದೆ ಇದರಿಂದಾಗಿ ಎಲ್ಲಾ ಅಗತ್ಯತೆಗಳನ್ನು ಸರಿಯಾಗಿ ಪೂರೈಸಲು ಕಷ್ಟ ಸಾಧ್ಯವಾಗುತ್ತಿದೆ ಎಂದು ತಮ್ಮ ಸ್ಥಿತಿಯನ್ನು ಹೇಳಿಕೊಂಡರು.
ಈ ಸಂದರ್ಭ ಎಬಿವಿಪಿ ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ, ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಮಹಾನಗರ ಕಾರ್ಯದರ್ಶಿ ಮೊನಿಶ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಿತೇಶ್ ಹಾಗೂ ಪ್ರಮುಖರಾದ ಹರ್ಷ ಮತ್ತಿತರರಿದ್ದರು.
ಪುತ್ತೂರು : ಹಗರಣಗಳಿಂದಲೇ ಕುಖ್ಯಾತಿ ಪಡೆದ ರಾಜ್ಯ ಸರಕಾರದ ಆಡಳಿತವನ್ನು ಧಿಕ್ಕರಿಸಿ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಯ ಕೈ ಹಿಡಿಯಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಬಂಗಾರು ಹನುಮಂತ ಅವರ ಪರವಾಗಿ ವಡ್ಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸರಕಾರವು ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ವಿವಾದಗಳೇ ಬಂಡವಾಳವಾಗಿದೆ ಹೊರತು ಜನರ ಸಂಕಷ್ಟ ಕೇಳುವವರಿಲ್ಲದಂತಾಗಿದೆ. ಗ್ಯಾರಂಟಿ ಯೋಜನೆಗಳು ಮೂಲೆ ಸೇರುತ್ತಿರುವಂತೆ ರಾಜ್ಯ ಸರಕಾರವೂ ಕೂಡ ಮೂಲೆ ಗುಂಪಾಗುವ ದಿನ ದೂರವಿಲ್ಲ ಎಂದು ಹೇಳಿದರು.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಶತ ಸಿದ್ಧ. ಕಾಂಗ್ರೆಸಿನ ಷಡ್ಯಂತ್ರಗಳಿಗೆ ಮತದಾರ ಮರುಳಾಗದೆ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರ ಕುರಿತು ಕ್ಷೇತ್ರದ ಜನರಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತಿದ್ದು ಬಿಜೆಪಿ ಗೆಲುವಿನ ನಗೆ ಬೀರಲಿದೆ ಎಂದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಿಧಿಗಾಗಿ ರಸ್ತೆ ಅಗೆದ ಸರ್ಕಾರ! – ಗಮನಸೆಳೆಯುತ್ತಿದೆ ವಿಶಿಷ್ಟ ಒಕ್ಕಣೆಯ ಬ್ಯಾನರ್
ಮಂಗಳೂರು : ಆದಾಯ ಗಳಿಕೆಯಲ್ಲಿ ರಾಜ್ಯಕ್ಕೇ ಅಗ್ರಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ರಸ್ತೆ (ಕುಮಾರಧಾರ-ಕೈಕಂಬ)ಯಲ್ಲಿ ಅಪಾಯಕಾರಿ ಹೊಂಡ-ಗುಂಡಿಗಳು ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವನ್ನೇ ಅಣಕವಾಡುವ ಬ್ಯಾನರ್ ಒಂದು ಕೈಕಂಬ ರಸ್ತೆಯಲ್ಲಿ ಕಂಡು ಬಂದಿದೆ.
“ಯಾರೋ ಮಾಂತ್ರಿಕರು ಕೈಕಂಬದಿಂದ – ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿಯಿದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮದ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ, ನಿಧಾನವಾಗಿ ಚಲಿಸಿ” ಎಂಬ ಬ್ಯಾನರ್ ಅಳವಡಿಸಲಾಗಿದೆ. ಕೈಕಂಬದಿಂದ ಸುಬ್ರಹ್ಮಣ್ಯವರೆಗಿನ ರಸ್ತೆಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರೇ ಈ ಬ್ಯಾನರ್ ಅಳವಡಿಸಿರಬಹುದೆಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸ್ಥಳೀಯ ವಾಹನ ಸವಾರರು ಈ ರಸ್ತೆಯ ಹೊಂಡಗುಂಡಿಗಳನ್ನು ಟೇಪ್ ಹಿಡಿದು ಅಳತೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಕುಮಾರಧಾರ ಸೇತುವೆ ಬಳಿ ಸುಮಾರು 12 ಫೀಟ್ ಅಗಲಕ್ಕೆ 3 ಫೀಟ್ ಆಳದ ಹೊಂಡ ಪತ್ತೆಯಾಗಿದೆ ಎಂದು ಗುಂಡಿಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಗುಂಡಿಗೆ ಜಲ್ಲಿಹುಡಿಗಳನ್ನು ಹಾಕಿ ಮುಚ್ಚಿದ್ದರು. ಇದೀಗ ಮತ್ತೆ ಗುಂಡಿಗಳು ಸವಾರರಿಗೆ ತೊಂದರೆ ಕೊಡುತ್ತಿವೆ.
ಅಪಘಾತಗಳು ನಡೆದು ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಹೊಂಡಗಳನ್ನು ಮುಚ್ಚಬೇಕಾಗಿದೆ. ಯಾವಾಗ ಈ ರಸ್ತೆಯ ಹೊಂಡಗಳಿಗೆ ಮುಕ್ತಿ ದೊರೆಯುತ್ತದೆಯೋ ಎಂದು ಕಾದು ನೋಡಬೇಕಿದೆ.
ನಾವು ಯಾವುದೇ ಹಣ ಕೊಟ್ಟಿಲ್ಲ, ನಮ್ಮನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ : ರಾಜ್ಯ ವೈನ್ ವೈನ್ ಮರ್ಚೆಂಟ್ ಅಸೋಸಿಯೇಷನ್
ಉಡುಪಿ : ಅಬಕಾರಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.

ಮಹಾರಾಷ್ಟ್ರ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಮದ್ಯ ಮಾರಾಟಗಾರರಿಂದ 700 ಕೋಟಿ ಲೂಟಿ ಹೊಡೆದಿದೆ ಎಂಬ ಆರೋಪದ ಕುರಿತು ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ಚುನಾವಣೆಗಾಗಿ ಸರ್ಕಾರಕ್ಕೆ ನಾವು ಯಾವುದೇ ಹಣ ಕೊಟ್ಟಿಲ್ಲ. ದಯವಿಟ್ಟು ಈ ವಿಚಾರವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ 25ನೇ ತಾರೀಕು ಪ್ರತಿಭಟನಾ ಸಭೆ ಮಾಡಿದ್ದೆವು. 3000ಕ್ಕೂ ಹೆಚ್ಚು ಜನ ಸೇರಿದ್ದೆವು. ಅಬಕಾರಿ ಅಧಿಕಾರಿಗಳು ಪ್ರಮೋಷನ್ಗೆ ನಾವು ಹಣ ಕೊಡಬೇಕು ಎಂದು ಹೇಳಿದ್ದರು. ಹಣಕೊಟ್ಟು ಟ್ರಾನ್ಸರ್ ಮಾಡಿಕೊಳ್ಳುತ್ತಿದ್ದೇವೆ. ಆದ್ದರಿಂದ ನಮಗೆ ಜಾಸ್ತಿ ಲಂಚ ಕೊಡಿ ಎಂದು ಕೇಳುತ್ತಿದ್ದಾರೆ ಎಂದು 3000ಕ್ಕೂ ಅಧಿಕ ಸನ್ನದುದಾರರು ಈ ವಿಚಾರವನ್ನು ಪ್ರತಿಭಟನೆಯಲ್ಲಿ ಹೇಳಿದ್ದೆವು. ಅದನ್ನು ಹೊರತುಪಡಿಸಿದರೆ ನಾವು ಯಾವುದೇ ಆರೋಪ ಮಾಡಿಲ್ಲ. ನಾವು ಯಾರಿಗೂ ಚುನಾವಣಾ ರಾಜಕೀಯಕ್ಕೆ ಹಣ ಕೊಟ್ಟಿಲ್ಲ. ದಯವಿಟ್ಟು ನಮ್ಮ ಹೇಳಿಕೆಯನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದರು.
ನಾವು ವ್ಯವಹಾರಸ್ಥರು, ನಾವ್ಯಾಕೆ ಚುನಾವಣೆಗೆ ಹಣಕೊಡಬೇಕು. ಹಿಂದಿನ ಸರಕಾರಗಳು ಇದ್ದಾಗಲೂ ನಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದೆವು. ಆ ಸರ್ಕಾರ ಇದ್ದಾಗಲೂ ಪ್ರಮೋಷನ್ಗೆ ಟ್ರಾನ್ಸಫರ್ಗೆ ಮಂತ್ರಿಗಳು ಹಣ ತೆಗೆದುಕೊಳ್ಳುತ್ತಿದ್ದರು. 15 ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಈಗ ಸಮಸ್ಯೆ ಮತ್ತಷ್ಟು ಉಲ್ಬಣ ಆಗಿದೆ ಎಂದು ಬಿಜೆಪಿ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಆರೋಪಗಳಿಗೆ ತಿರುಗೇಟು ನೀಡಿದರು.
ಉಡುಪಿ : ಒನಕೆ ಓಬವ್ವ ಓರ್ವ ನಿಸ್ವಾರ್ಥ ನಾಡಪ್ರೇಮಿ. ವೀರರ ನಾಡೆನಿಸಿದ ಚಿತ್ರದುರ್ಗದ ಉಕ್ಕಿನ ಕೋಟೆಯನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಲು ಒನಕೆಯನ್ನು ಆಯುಧವಾಗಿ ಹಿಡಿದು ಶತ್ರುಗಳನ್ನು ಸಂಹಾರ ಮಾಡಿದ್ದರಿಂದ ಚರಿತ್ರೆಯಲ್ಲಿ ಅಜರಾಮರಳಾಗಿ, ಸ್ತ್ರೀ ಶಕ್ತಿಯ ಸಂಕೇತವಾಗಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಯನ್ನು ಉದ್ಘಾಟಿಸಿ, ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಒನಕೆ ಓಬವ್ವ 18ನೇ ಶತಮಾನದ ಓರ್ವ ವೀರ ವನಿತೆ. ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದ ಸಂದರ್ಭದಲ್ಲಿ, ಒಬ್ಬ ಸಾಮಾನ್ಯ ಹೆಣ್ಣುಮಗಳು, ಅಸಾಮಾನ್ಯವಾಗಿ ಯುದ್ಧಕಲೆಯ ಆಳ, ಅಗಲದ ಅರಿವಿಲ್ಲದೆ, ಊಟ ಮಾಡುತ್ತಿರುವ ಗಂಡನನ್ನು ಎಬ್ಬಿಸದೇ, ಶತ್ರು ಸೈನ್ಯವನ್ನು ಕೇವಲ ಒನಕೆಯಿಂದ ಸದೆ ಬಡಿದ ಆಕೆಯ ಸಾಹಸ, ಇಂದು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಸರಕಾರ ಒನಕೆ ಓಬವ್ವ ಜಯಂತಿಯನ್ನು ಆಚರಿಸುತ್ತಿರುವುದು ಇಡೀ ನಾರಿಕುಲಕ್ಕೆ ಸಂದ ಗೌರವ ಎಂದವರು ನುಡಿದರು.
ನೆಲ್ಲಿಕಾರು ಗ್ರಾ. ಪಂ. ಅಧ್ಯಕ್ಷರ ಜಾತಿ ನಿಂದನೆ : ಆರೋಪಿ ಉಪಾಧ್ಯಕ್ಷರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ ಮಂಗಳೂರಿನ ಜಿಲ್ಲಾ ವಿಶೇಷ ನ್ಯಾಯಾಲಯ
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನೆಲ್ಲಿಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಬೆದರಿಸಿ, ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಈ ಆದೇಶ ಹೊರಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿಯನ್ನು ಆರೋಪದಿಂದ ಖುಲಾಸೆಗೊಳಿಸಿದೆ.
ಪ್ರಕರಣದ ವಿವರ :
ಆರೋಪಿ ನೆಲ್ಲಿಕಾರು ಗ್ರಾ. ಪಂ. ಉಪಾಧ್ಯಕ್ಷರಾದ ಶಶಿಧರ್ ಎಂ. ವಿರುದ್ಧ 23-06-2021ರಂದು ನೆಲ್ಲಿಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದರು ಎಂದು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ದೂರುದಾರ ಸಂತ್ರಸ್ತೆ ನೆಲ್ಲಿಕಾರು ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿದ್ದರು. ಅವರು ಪರಿಶಿಷ್ಟ ಜಾತಿಯ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ್ದರು. ದಿನಾಂಕ 22-06-2021ರಂದು ಪಂಚಾಯತ್ನಲ್ಲಿ ಸಾಮಾನ್ಯ ಸಭೆ ನಡೆದ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ದೂರುದಾರ ಸುಶೀಲಾ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ 14 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ 21 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಆರೋಪಿ ಪರವಾಗಿ ಒಂದು ದಾಖಲೆಯನ್ನು ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಯು ಗ್ರಾಮ ಪಂಚಾಯತ್ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದನ್ನು ಸಾಕ್ಷಿಗಳು ಒಪ್ಪಿಕೊಂಡರು. ಮಾತ್ರವಲ್ಲದೆ, ದೂರುದಾರರು ಸ್ವತಃ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿ, ಒಂಬುಡ್ಸ್ಮನ್ ತನಿಖೆಯಿಂದ ತಪ್ಪಿತಸ್ಥೆ ಎಂದು ದೃಢವಾಗಿತ್ತು. ದೂರುದಾರೆ ಸುಶೀಲಾ ಮತ್ತು ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಅವರು ಸೇರಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಗಟ್ಟಲೆ ಹಣದ ದುರುಪಯೋಗ ಮಾಡಿ ಪಂಚಾಯತ್ಗೆ ವಂಚಿಸಿದ್ದು ಸಾಬೀತಾಗಿದ್ದು, ಈ ದಾಖಲೆಯನ್ನು ಸಾಕ್ಷಿಗಳು ಒಪ್ಪಿಕೊಂಡಿದ್ದರು. ದೂರುದಾರೆ ಮತ್ತು PDO ಒಟ್ಟಾಗಿ ರೂ. 1.98 ಲಕ್ಷ ಮರು ಪಾವತಿಸಲು ಆದೇಶವಾಗಿದ್ದು, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದಾಗಿ ಪಿಡಿಒ ಒಪ್ಪಿಕೊಂಡಿದ್ದರು.
ಆರೋಪಿಯು ಘಟನೆಯನ್ನು ಸ್ವತಃ ಒಪ್ಪಿಕೊಂಡಿದ್ದರೂ, ತನಗೆ ದೂರುದಾರರ ವಿರುದ್ಧ ಯಾವುದೇ ಜಾತಿ ನಿಂದನೆ ಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಿಕೊಂಡಿದ್ದರು. ಸಾಕ್ಷಿಗಳ ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಮಾನ್ಯ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿಯ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಅಭಿಯೋಜನೆ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಆರೋಪಿಯ ಪರವಾಗಿ ಮಂಗಳೂರಿನ ಆಧಾಯ ತೆರಿಗೆ ಇಲಾಖೆಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಹರ್ಷ ಕುಮಾರ್ ಅವರು ವಾದಿಸಿದ್ದರು.