ಉಡುಪಿ : ಶ್ರೀ ಕೃಷ್ಣಮಠಕ್ಕೆ ಖ್ಯಾತ ನಿರ್ದೇಶಕ ಶ್ರೀ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರು ಆಗಮಿಸಿ ದೇವರ ದರ್ಶನ ಪಡೆದು ತಾವು ಬರೆದ ಕೋಟಿಗೀತಾ ಪುಸ್ತಕವನ್ನು ಪರ್ಯಾಯ ಶ್ರೀ ಗಳಿಗೆ ಸಮರ್ಪಿಸಿ ಮಂತ್ರಾಕ್ಷತೆ ಪಡೆದುಕೊಂಡರು.

ಉಡುಪಿ : ಮಾನವನಿಗೆ 48 ವರ್ಷಗಳು ತುಂಬಿದೆ ಎಂದರೆ ವಯಸ್ಸಾಗುತ್ತಾ ಬಂತು ಎಂದರ್ಥ ಆದರೆ ಯಾವುದೇ ಸಂಸ್ಥೆಗೆ ವಯಸ್ಸು ಹೆಚ್ಚುತ್ತಾ ಬಂದರೆ ಅದು ಯೌವ್ವನಕ್ಕೆ ಕಾಲಿಟ್ಟಿದೆ ಎಂದರ್ಥ. ಪ್ರಸ್ತುತ 48 ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಬೈಂದೂರಿನ ಲಾವಣ್ಯ ಸಂಸ್ಥೆ ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಬೈಂದೂರಿನ ಶ್ರೀ ಸೇನೇಶ್ವರ ದೇವಳದ ಮುಂಭಾಗದ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯುತ್ತಿರುವ ಲಾವಣ್ಯ ಬೈಂದೂರು ಇದರ 48ನೇ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ.ಕೆ. ಲಕ್ಷ್ಮೀ ನಾರಾಯಣ ಬೈಂದೂರು ಸ್ಮರಣಾರ್ಥ ಹಮ್ಮಿಕೊಂಡ, ‘ರಂಗಪoಚಮಿ -2025’ ರಂಗೋತ್ಸವದ 4ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ರಂಗಭೂಮಿಯ ಕೊಡುಗೆಯನ್ನು ಪ್ರಸ್ತಾಪಿಸಿದ ಅವರು, ರಂಗಭೂಮಿ ಉಡುಪಿ ಇದೀಗ ತನ್ನ 60ನೇ ಸಂಭ್ರಮೋತ್ಸವದ ಪ್ರಯುಕ್ತ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರಾರಂಭಿಸಲಾದ ‘ರಂಗ ಶಿಕ್ಷಣ ‘ ಯೋಜನೆಯನ್ನು ಪ್ರಾಯೋಗಿಕವಾಗಿ 12 ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ. ಈ ಮೂಲಕ ಮಕ್ಕಳಿಗೆ ರಂಗತರಬೇತಿಯನ್ನು ನೀಡಿ ಅವರಲ್ಲಿ ರಂಗಪ್ರಜ್ಞೆಯ ಜೊತೆಗೆ ನೈತಿಕತೆಯ ಪಾಠವನ್ನು ಕಲಿಸುವ ಉದ್ದೇಶವಿದೆ. ನೈತಿಕತೆಯ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕೊಡುವುದು ಅತೀ ಅಗತ್ಯವಾಗಿದೆ. ಇದರಿಂದ ಅಲ್ಲಲ್ಲಿ ವೃದ್ಧಾಶ್ರಮಗಳು ತಲೆ ಎತ್ತುವ ಪ್ರಶ್ನೆಯೇ ಬರುವುದಿಲ್ಲ. ಗುರುಹಿರಿಯರಿಗೆ ಗೌರವ ಕೊಡುವುದು, ತಂದೆತಾಯಿಗಳಿಗೆ ವಿಧೇಯಕರಾಗಿರುವುದನ್ನು ಕಲಿಸಿಕೊಡುತ್ತದೆ. ಇದೇ ಉದ್ದೇಶದಿಂದ ಉಡುಪಿಯಲ್ಲಿ ಪ್ರಾರಂಭಿಸಲಾದ ಯಕ್ಷ ಶಿಕ್ಷಣಕ್ಕೆ ಇಂದು 90 ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಿದ್ದು, ಸುಮಾರು 3,000ಕ್ಕೂ ಅಧಿಕ ಮಕ್ಕಳು ಯಕ್ಷಗಾನವನ್ನು ಅಭ್ಯಾಸಿಸುತ್ತಿದ್ದಾರೆ. ಇದಕ್ಕೆ ಶಿಕ್ಷಣಾಧಿಕಾರಿಗಳು, ಪೋಷಕರು ಎಲ್ಲರಿಂದಲೂ ಉತ್ತಮ ಪ್ರೋತ್ಸಾಹ ಸಿಕ್ಕಿದೆ ಎಂದು ಅವರು ತಿಳಿಸಿದರು.
ಬೈಂದೂರಿನ ಜನತೆಗೆ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ರಂಗಭೂಮಿಯ ಕಂಪನ್ನು ಹರಡಿರುವ ಲಾವಣ್ಯ ಸಂಸ್ಥೆ ಕೂಡಾ ಬೈಂದೂರು ತಾಲೂಕಿನಲ್ಲಿ ಇದೇ ಮಾದರಿಯಲ್ಲಿ ಮಕ್ಕಳಿಗೆ ರಂಗಶಿಕ್ಷಣ ನೀಡುವ ಕಾರ್ಯಕ್ಕೆ ಮುಂದಾಗಬೇಕು. ಈ ಮೂಲಕ ಭವಿಷ್ಯದಲ್ಲಿ ರಂಗ ಕಲಾವಿದರು ಹಾಗೂ ಸದಾಭಿರುಚಿಯ ಪ್ರೇಕ್ಷಕರ ಕೊರತೆಯಾಗದಂತೆ ಮುತುವರ್ಜಿ ವಹಿಸಬೇಕು. ಲಾವಣ್ಯದ ಈ ಕೆಲಸಕ್ಕೆ ಸಮಾಜದ ಸಂಘಸoಸ್ಥೆಗಳು, ದಾನಿಗಳ ಪ್ರೋತ್ಸಾಹ ಸಿಗಲಿ. ಸಂಸ್ಥೆ ಶತಮಾನೋತ್ತರ ಸಂಭ್ರಮಾಚರಣೆಯನ್ನು ಕಾಣುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಪ್ರವೀಣ್ ಶೆಟ್ಟಿ ಶುಭಾಶಂಸನೆಗೈದರು.
ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಭಟ್ನಾಡಿ, ಉಡುಪಿ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಆಲೂರು ತಾರಿಬೇರು ಶ್ರೀ ಸೋಮನಾಥೇಶ್ವರ ದೇವಳದ ಅಧ್ಯಕ್ಷ ರಾಜರಾಮ್ ಭಟ್ ಉಪ್ಪುಂದ, ಬೈಂದೂರು ತಾಲೂಕು ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಕೃಷ್ಣಯ್ಯ ಮದ್ದೋಡಿ,, ಉದ್ಯಮಿ ಸತೀಶ್ ಶೆಟ್ಟಿ, ಜೆಸಿಐ ಉಪ್ಪುಂದ ಅಧ್ಯಕ್ಷ ಭರತ ದೇವಾಡಿಗ, ಬೈಂದೂರು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಂಗ ಯಡ್ತರೆ, ಲಾವಣ್ಯ ಅಧ್ಯಕ್ಷ ನರಸಿಂಹ ನಾಯಕ್ ಹಾಗೂ ಕಾರ್ಯದರ್ಶಿ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಮದ್ದಲೆ ವಾದಕ ನಾರಾಯಣ ದೇವಾಡಿಗ ಹಾಗೂ ಕೊಂಕಣಿ ರಂಗ ಕಲಾವಿದ ಜೋಸೆಫ್ ಫೆರ್ನಾಂಡಿಸ್ ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿ ಧುರೀಣ ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ನಟನಾ ಮೈಸೂರು ತಂಡದಿoಧ ‘ಪ್ರಮೀಳಾರ್ಜುನೀಯಂ ‘ ನಾಟಕ ಪ್ರದರ್ಶನಗೊಂಡಿತು.
ಮಂಗಳೂರು : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.
ಶಿಲ್ಪಾ ಶೆಟ್ಟಿಗೆ ತನ್ನ ಮಕ್ಕಳು, ಸಹೋದರಿ ನಟಿ ಶಮಿತಾ ಶೆಟ್ಟಿ, ತಾಯಿ ಸುನಂದ ಜೊತೆ ಕಟೀಲು ದೇವಸ್ಥಾನಕ್ಕೆ ಆಗಮಿಸಿದ್ದರು. ಕಟೀಲು ದುರ್ಗೆಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಂಚಿಕೊಂಡಿರುವ ಅವರು ಬ್ಯಾಕ್ ಟು ಹೋಮ್ ಎಂದು ನಮ್ಮ ತುಳುನಾಡು ಎಂದು ಬರೆದಿದ್ದಾರೆ.
ಉಡುಪಿ : ಮೊಬೈಲ್, ಇನ್ನಿತರ ಕಾರಣಗಳಿಂದ ನಾಟಕ, ಇನ್ನಿತರ ರಂಗ ಚಟುವಟಿಕೆಗಳಿಂದ ಜನರು ದೂರವಾಗುತ್ತಿದ್ದಾರೆ. ಸಾಮಾಜಿಕ ಮೌಲ್ಯಗಳನ್ನು, ಪ್ರಜ್ಞೆಯನ್ನು ಬಿತ್ತುವ ಮೂಲಕ ಮತ್ತೆ ಪ್ರೇಕ್ಷಕರನ್ನು ಹತ್ತಿರಕ್ಕೆ ತರುವ ಕೆಲಸವನ್ನು ಸುಮನಸಾದಂತಹ ರಂಗತಂಡಗಳು ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದರು.
ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ನಾಲ್ಕನೇ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ತರಬೇತಿ ನೀಡುವ ಮೂಲಕ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯವು ಶ್ಲಾಘನೀಯ. ಹಿರಿಯರೇ ಪ್ರೇಕ್ಷಕರಾಗಿ ಬರುತ್ತಿದ್ದಾರೆ. ತಮ್ಮ ಜೊತೆಗೆ ಮಕ್ಕಳನ್ನೂ ಕರೆದುಕೊಂಡು ಬಂದರೆ ಅವರೂ ಮುಂದೆ ರಂಗಕರ್ಮಿಗಳಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಆಶಿಸಿದರು.
ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿದರು. ಉಪ್ಪೂರು ಭಾಗ್ಯಲಕ್ಷ್ಮೀ ಅವರನ್ನು ರಂಗಸನ್ಮಾನ ನೀಡಿ ಗೌರವಿಸಲಾಯಿತು. ಉದ್ಯಮಿ ಹರೀಶ್ ಪೂಜಾರಿ, ವರಾಹಿ ದಂತ ಚಿಕಿತ್ಸಾಲಯದ ಡಾ. ವಿಜೇತ್ ಶೆಟ್ಟಿ, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಬಳಿಕ ಸುಮನಸಾ ಕೊಡವೂರು ಕಲಾವಿದರಿಂದ ‘ಈದಿ’ ನಾಟಕ ಪ್ರದರ್ಶನಗೊಂಡಿತು.
ಉಡುಪಿ : ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ ಅನುಸರಿಸುತ್ತಾರೆ. ಹಲವರು ಬಾರ್ಗೆ ಹೋಗುತ್ತಾರೆ. ಅದರಿಂದ ಹಣ ವ್ಯರ್ಥವಾಗುತ್ತದೆಯೇ ಹೊರತು ಬೇರೇನೂ ಸಿಗದು. ಆದರೆ, ನಾಟಕಗಳ ವೀಕ್ಷಣೆಯಿಂದ, ಅಲ್ಲಿನ ಧನಾತ್ಮಕ ಹಾಗೂ ಹಾಸ್ಯ ದೃಶ್ಯಗಳಿಂದ ಮನಸ್ಸಿಗೆ ಅಂಟಿಕೊಂಡ ಒತ್ತಡ ನಿವಾರಣೆಯಾಗಲು ಸಾಧ್ಯ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ತುಳು ನಾಟಕ ಮತ್ತು ಚಲನಚಿತ್ರ ಕಲಾವಿದ ನವೀನ್ ಡಿ. ಪಡೀಲ್ ಅವರಿಗೆ 2025ನೇ ಸಾಲಿನ 1 ಲಕ್ಷ ರೂ. ಮೊತ್ತದ ಪ್ರತಿಷ್ಠಿತ ವಿಶ್ವಪ್ರಭಾ ಪುರಸ್ಕಾರ ನೀಡಿ ಮಾತನಾಡಿದರು.
ಮಂಗಳೂರಿನ ಸಾಹಿತಿ ಶಶಿರಾಜ್ ಕಾವೂರು ಅಭಿನಂದನಾ ಮಾತುಗಳನ್ನಾಡಿ, ನವೀನ್ ಅವರು 10ನೇ ತರಗತಿಯಲ್ಲಿದ್ದಾಗಲೇ ಬಣ್ಣಹಚ್ಚಿ ರಂಗಭೂಮಿಗೆ ಬಂದವರು. 40 ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಅವರು 25-30ರ ಪ್ರಾಯದಲ್ಲಿದ್ದಾಗ ವೃದ್ಧನ ಪಾತ್ರವನ್ನೇ ನಿರ್ವಹಿಸಿದ್ದರು. 40-45ರ ಪ್ರಾಯದ ಬಳಿಕ ನಾಯಕನ ಪಾತ್ರ ಮಾಡತೊಡಗಿದರು. ಹೀಗೆ ಯಾವುದೇ ಪಾತ್ರವನ್ನಾದರೂ ಸಮರ್ಥವಾಗಿ ಅಭಿನಯಿಸಬಲ್ಲ ಪರಿಪೂರ್ಣ ಹಾಗೂ ನೈಪುಣ್ಯತೆಯ ಕಲಾವಿದರಾಗಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿದ ನವೀನ್ ಡಿ ಪಡೀಲ್ ಮಾತನಾಡಿ, ವಿಶ್ವಪ್ರಭಾ ಎಂದರೆ ಪ್ರಪಂಚಕ್ಕೆ ಬೆಳಕು ನೀಡುವುದು ಎಂದರ್ಥ. ಸೂರ್ಯದೇವನು ಹೇಗೆ ಸಮಸ್ತ ವಿಶ್ವಕ್ಕೆ ಬೆಳಕು ನೀಡುತ್ತಾನೆಯೋ ಅದರಂತೆ ಇಂತಹ ಪ್ರಶಸ್ತಿಗಳು ಕಲಾವಿದರ ಬಾಳಿಗೆ ಬೆಳಕು ನೀಡುತ್ತವೆ. ವಿಶ್ವಪ್ರಭಾ ಪ್ರಶಸ್ತಿಯು ಉಡುಪಿಯಿಂದ ನನಗೆ ಲಭಿಸುತ್ತಿರುವ ನೊಬೆಲ್ ಪ್ರಶಸ್ತಿ ಇದಾಗಿದೆ.
ಅಪಾರ ಕಷ್ಟ-ನಷ್ಟ, ದು:ಖ-ದುಗುಡ ಅನುಭವಿಸಿದವ ಮಾತ್ರ ಉತ್ತಮ ಕಲಾವಿದನಾಗಬಲ್ಲ. ನಾನಿಂದು ಯಶಸ್ವಿ ಕಲಾವಿದನಾಗಲು ಅಭಿಮಾನಿಗಳ ಪ್ರೋತ್ಸಾಹ, ಸಹಕಾರವೇ ಕಾರಣ. ಭಜನೆ ಬಸಪ್ಪ ಎಂಬ ಪಾತ್ರ ನನಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ನಾನೀಗ ಹಾಸ್ಯಕ್ಕಿಂತ ಗಂಭೀರ ಪಾತ್ರಗಳಿಗೆ ಆದ್ಯತೆ ನೀಡುತ್ತಿದ್ದೇನೆ ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ತುಳು ರಂಗಭೂಮಿಯಿಂದಾಗಿ ತುಳು ಭಾಷೆಯ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಪೂರಕವಾಯಿತು. ಪಡೀಲ್ ಅವರಂತಹ ಅನೇಕ ತುಳು ಕಲಾವಿದರು ರಂಗಭೂಮಿಯ ಶ್ರೇಷ್ಠತೆ ಹೆಚ್ಚಿಸಿದರು. ಹಾಸ್ಯದ ಪಾತ್ರ ನಿಭಾಯಿಸುವುದು, ಜನರನ್ನು ನಗೆಗಡಲಲ್ಲಿ ತೇಲಿಸುವುದು ಅಷ್ಟು ಸುಲಭವಲ್ಲ.
ಆದರೆ, ಕಲಾವಿದ ಪಡೀಲ್ ಅವರು ಹಾಸ್ಯ ಪಾತ್ರ ನಿಭಾಯಿಸುವಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಕುಡುಕನ ಪಾತ್ರವನ್ನು ಮನೋಜ್ಞನವಾಗಿ ಅಭಿನಯಿಸಿ ಜನರ ಮನ ಸೆಳೆಯುತ್ತಾರೆ ಎಂದರು. ತುಳು ನಾಟಕಗಳ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಉಪಾಧ್ಯಕ್ಷ ಮಧುಸೂದನ್ ಹೇರೂರು, ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ವಿಶ್ವನಾಥ್ ಶೆಣೈ, ಪ್ರಭಾವತಿ ಶೆಣೈ, ಜನಾರ್ದನ್ ಕೊಡವೂರ್, ರಾಘವೇಂದ್ರ ಪ್ರಭು ಕರ್ವಾಲ್, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಪುರಸ್ಕಾರದ ಸಂಚಾಲಕ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿಪೂರ್ಣಿಮಾ ಜನಾರ್ದನ್ ಸಾಧನೆಗೈದ ಸದಸ್ಯರನ್ನು ಗುರುತಿಸಿದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಡಿ ಧನಿವಾದವಿತ್ತರು. ವಿಘ್ನೇಶ್ವರ ಅಡಿಗ ಅಭಿನಂದನಾ ಪತ್ರ ವಾಚಿಸಿದರು.
ಉಡುಪಿ : ಕರಾವಳಿ ಜನರ ನಗರವಾಸಿಗಳ ಜೀವನ ಬರಡಾಗಿದೆ. ಆಧುನಿಕ ರಂಗಭೂಮಿ ಮತ್ತು ನಾಟಕ ಜನರನ್ನು ಹೊಸ ದಿಕ್ಕಿನ ಕಡೆ ಆಲೋಚಿಸಬಹುದಾದ ಸಶಕ್ತವಾದ ಮಾಧ್ಯಮ ಎಂದು ಪ್ರಗತಿಪರ ಚಿಂತಕ ಹೋರಾಟಗಾರ ಮುನೀರ್ ಕಾಟಿಪಳ್ಳ ಅಭಿಪ್ರಾಯ ಪಟ್ಟರು.
ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ರಥಬೀದಿ ಗೆಳೆಯರು ಸಂಘಟನೆ ಆಯೋಜಿಸುತ್ತಿರುವ ಮೂರು ದಿನಗಳ ಮುರಾರಿ ಕೆದ್ಲಾಯ ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು.
ನಾಟಕದ ಮೂಲಕ ಸಮಾಜದಲ್ಲಿ ಉತ್ತೇಜನ ಸೃಷ್ಟಿಸುವ ಹೆಚ್ಚಿಸುವ ಕೆಲಸ ಆಗಬೇಕು. ಭಾಷಣ ಸೆಮಿನಾರ್ ಸಂವಾದ ವಿಚಾರ ಸಂಕೀರ್ಣಗಳು ಒಂದು ಕಡೆ ನಡೆಯುತ್ತಿದ್ದರೆ ನಾಟಕ ಬಹಳ ಪರಿಣಾಮಕಾರಿಯಾಗಿ ಜನಾಭಿಪ್ರಾಯವನ್ನು ಸೃಷ್ಟಿಸುವ ಚಳುವಳಿಯ ರೂಪವನ್ನು ಪಡೆಯಬಹುದಾದ ಮಾಧ್ಯಮ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್, ಎನ್ ಸಂತೋಷ್ ಬಳ್ಳಾಳ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಾಟಕ ವಿಭಾಗದ ಮುಖ್ಯಸ್ಥ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರೊ. ಸುಬ್ರಮಣ್ಯ ಜೋಶಿ ವಂದಿಸಿದರು. ಮೈಸೂರು ಸಂಕಲ್ಪ ತಂಡದ, ಹಿರಿಯ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ನಟಿಸಿ ನಿರ್ದೇಶಿಸಿದ ಜೊತೆಗಿರುವನು ಚಂದಿರ ನಾಟಕ ಮೊದಲ ದಿನ ಪ್ರದರ್ಶನವಾಯ್ತು.
ಉಡುಪಿ : ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ಮೂರು ದಿನಗಳ ರಂಗಭೂಮಿ ರಂಗೋತ್ಸವದ ಎರಡನೇ ದಿನ ಭಾನುವಾರದಂದು ಪ್ರಸಿದ್ಧ ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಅವರು ನಾಡಿನ ಸಾಮಾಜಿಕ, ವೈದ್ಯಕೀಯ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಅನನ್ಯ ಕೊಡುಗೆಗಾಗಿ ‘2025 ನೇ ಸಾಲಿನ ರಂಗಭೂಮಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಡಾ. ಭಾಸ್ಕರಾನಂದ ಕುಮಾರ್ ಅವರು ಬಾಲ್ಯದಲ್ಲಿಯೇ ರಂಗಭೂಮಿಯತ್ತ ಸೆಳೆತವಿದ್ದ ತಾನು ಮುಂದೆ ಯಕ್ಷಗಾನ ಕ್ಷೇತ್ದಲ್ಲೂ ಹವ್ಯಾಸಿ ಕಲಾವಿದನಾಗಿ ನನ್ನಿಂದಾದಷ್ಟು ಕಲಾ ಸೇವೆ ಮಾಡಿದ್ದೇನೆ. ವೈದ್ಯ ವೃತ್ತಿಯಲ್ಲಿ ನಡೆಸಿದ ನನ್ನ ಕೆಲವೊಂದು ಸಾಧನೆಗಳು ವಿಶ್ವ ಮಾನ್ಯತೆ ತಂದುಕೊಟ್ಟಿದೆ. ಇದೀಗ ರಂಗಭೂಮಿ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ ಎಂದರು.
ಮoಗಳೂರಿನ ಶಾರದಾ ಸಮೂಹ ಸಂಸ್ಥೆಯ ಪ್ರೊ. ಎಂ.ಬಿ. ಪುರಾಣಿಕ್, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್, ಎಂಜಿಎo ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಡಾ.ಭಾಸ್ಕರಾನಂದ ಕುಮಾರ್ ಅವರ ವಾಲಿ ಸೇರಿದಂತೆ ಯಕ್ಷಗಾನದ ವಿವಿಧ ಪಾತ್ರಗಳು ಸಭಿಕರನ್ನು ಮನಸೆಳೆದಿವೆ. ಹವ್ಯಾಸಿ ಕಲಾವಿದನಾಗಿ, ಓರ್ವ ವೈದ್ಯನಾಗಿ ಅವರು ನಡೆಸಿದ ಕಲಾಸೇವೆ, ಕಲಾವಿದರಿಗೆ ನೀಡಿದ ನೆರವು ಪ್ರಶಂಸನೀಯ. ಅವರಿಗೆ ಈ ರಂಗಭೂಮಿ ಪ್ರಶಸ್ತಿ ಸಲ್ಲುತ್ತಿರುವುದು ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದಲ್ಲಿ ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ರಂಗಭೂಮಿ ಉಡುಪಿಯ ಪ್ರದಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಎನ್.ಆರ್.ಬಲ್ಲಾಳ್ ಹಾಗೂ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು. ರಂಗಭೂಮಿ ರಂಗಶಿಕ್ಷಣ ಸಂಚಾಲಕ ವಿದ್ಯಾವಂತ ಆಚಾರ್ಯ ಸ್ವಾಗತಿಸಿದರು. ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷ ಎಚ್.ಜಯಪ್ರಕಾಶ್ ಕೆದ್ಲಾಯ ಪ್ರಾಸ್ತಾವಿಕ ಮಾತನಾಡಿದರು. ಡಾ. ವಿಷ್ಣುಮೂರ್ತಿ ನಿರೂಪಿಸಿದರು. ಶ್ರೀಪಾದ ಹೆಗಡೆ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ರಂಗರಥ ಟ್ರಸ್ಟ್ ಬೆಂಗಳೂರು ತಂಡದಿoದ ಸಾಂಸಾರಿಕ ಹಾಸ್ಯ ನಾಟಕ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ಪ್ರದರ್ಶನ ಗೊಂಡಿತು.
ಉಡುಪಿ : ಜಗತ್ತಿನ ಎಲ್ಲ ಕಲೆಗಳ ಮೂಲ ಅಸ್ತಿತ್ವ ಜಾನಪದದಲ್ಲಿದೆ. ರಾಮಾಯಣ, ಮಹಾಭಾರತಗಳು ಬದುಕಿನ ರೂಪಕಗಳು ಎಂದು ರಂಗ ನಿರ್ದೇಶಕ ಹಾಗೂ ಚಿತ್ರನಟ ಮಂಡ್ಯ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕುಂಜಿಬೆಟ್ಟು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಸಂಸ್ಕೃತಿ ಉತ್ಸವದ ಎರಡನೇ ದಿನವಾದ ಶುಕ್ರವಾರ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ರಂಗ ಕಲಾವಿದನಾಗುವುದು ಸುಲಭದ ಮಾತಲ್ಲ. ಅದು ಸಾಹಸದ ಕೆಲಸ. ಗಾಂಧಿಯನ್ನು ಬದಲಾಯಿಸಿರುವುದೂ ಇದೇ ರಂಗಭೂಮಿ ಎಂದರು.
ಮನುಷ್ಯತ್ವ ವೃದ್ಧಿಗೆ ಸಹಕಾರಿ : ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನಾಟಕ, ಕಲೆ, ಸಂಗೀತ ಮನುಷ್ಯತ್ವ ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ. ಮನುಷ್ಯತ್ವದ ನೆಲೆಯಲ್ಲಿ ಸಂಬಂಧ ಗಟ್ಟಿಗೊಳಿಸುವುದು ಇಂದಿನ ಅಗತ್ಯ. ಮಕ್ಕಳು ಹಾಗೂ ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿ, ಬೆಳೆಸಿಕೊಳ್ಳಬೇಕಾದರೆ ಅವರು ಕಲೆಯಲ್ಲಿ ತೊಡಗಿಕೊಳ್ಳಬೇಕು.
ಭಿನ್ನ ದಾರಿಯಲ್ಲಿ ಸಾಗುತ್ತಿರುವ ಯುವಜನತೆಯನ್ನು ಸರಿಯಾದ ದಾರಿಯಲ್ಲಿ ಮನ್ನಡೆಸಿಕೊಂಡು ಹೋಗಬೇಕಾದರೆ ಈ ರೀತಿಯ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳಬೇಕು ಎಂದರು. ಮುಖ್ಯ ಅಭ್ಯಾಗತರಾಗಿದ್ದ ಕಾರ್ಕಳ ಯಕ್ಷರಂಗಾಯಣ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಎಂ.ಹರಿಶ್ಚಂದ್ರ ಮಾತನಾಡಿದರು.
ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನ ಮಾತುಗಳನ್ನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಉಪಾಧ್ಯಕ್ಷ ವಿಘ್ನೇಶ್ವರ ಅಡಿಗ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ, ಸುಗುಣ ಸುವರ್ಣ ಉಪಸ್ಥಿತರಿದ್ದರು.
ಪಂಚಮಿ ಪುರಸ್ಕಾರ ಸಂಚಾಲಕ ಜನಾರ್ದನ ಕೊಡವೂರು ಸ್ವಾಗತಿಸಿ, ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಡ್ಯ ರಮೇಶ್ ನಿರ್ದೇಶನ ‘ಚೋರ ಚರಣದಾಸ’ ನಾಟಕ ಪ್ರದರ್ಶನಗೊಂಡಿತು.
ಉಡುಪಿ : ಇದೇ ಮೊದಲ ಬಾರಿಗೆ ಹಿರಿಯ ನಟಿ ಉಮಾಶ್ರೀ ಯಕ್ಷಗಾನವೊಂದರಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ.
ಹೊನ್ನಾವರದಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ, ಮಾಯಾಮೃಗಾವತಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಉಮಾಶ್ರೀ ಅಭಿನಯಿಸಿದರು. ಅದರಲ್ಲಿ ಮಂಥರೆಯಾಗಿ ಅಭಿನಯಿಸಿದ ನಟಿ, ಯಕ್ಷಪ್ರೇಮಿಗಳ ಗಮನ ಸೆಳೆದರು.
ಉಡುಪಿ ಜಿಲ್ಲೆಯ ಪೆರ್ಡೂರು ಮೇಳದಿಂದ ಈ ಯಕ್ಷಗಾನ ಆಯೋಜನೆಗೊಂಡಿತ್ತು.
ರಾಜಕಾರಣಿ ಕಂ ಖ್ಯಾತ ನಟಿಯಾಗಿರುವ ಉಮಾಶ್ರೀ, ಯಕ್ಷಗಾನ ರಂಗದಲ್ಲಿ ಸವಾಲಿನ ಪಾತ್ರ ಎಂದೇ ಪರಿಗಣಿಸಲಾಗುವ ಮಂಥರೆಯ ವೇಷ ಧರಿಸಿದ್ದು ಯಕ್ಷಪ್ರೇಮಿಗಳನ್ನು ಪುಳಕಗೊಳಿಸಿದೆ.
ಮಂಗಳೂರು : ಡಾರ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ತಯಾರಾಗಿರುವ “ಕಣ್ಣಾಮುಚ್ಚೆ ಕಾಡೇ ಗೂಡೇ” ಸಿನಿಮಾ ಜನವರಿ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ವೀರೇಶ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
“ಸಿನಿಮಾದಲ್ಲಿ ಸಸ್ಪೆನ್ಸ್ ಕಥಾ ಹಂದರದ ಜೊತೆಗೆ ತಾಯಿಯ ಸೆಂಟಿಮೆಂಟ್ ಇದೆ. ನವಿರಾದ ಪ್ರೇಮಕತೆ, ಸುಂದರವಾದ ತಾಣಗಳಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. ಸಿನಿಮಾ ಕನ್ನಡಿಗರಿಗೆ ಖಂಡಿತ ಇಷ್ಟವಾಗುತ್ತದೆ. ನಾನು ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ಮಂದಿರಕ್ಕೆ ಬಂದು ಎಲ್ಲರೂ ಸಿನಿಮಾ ನೋಡಿ” ಎಂದರು.
ನಾಯಕನಟ ಅಥರ್ವ ಪ್ರಕಾಶ್ ಮಾತನಾಡಿ, “ನನ್ನ ಮೊದಲ ಸಿನಿಮಾ ತುಳುವಿನ ಚಾಲಿಪೋಲಿಲು, ನಂತರ ನಾನು ಎಂಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇನೆ. ಈ ಸಿನಿಮಾದಲ್ಲಿ ಬಹುತೇಕ ಎಲ್ಲರೂ ತುಳು ಕಲಾವಿದರೇ ಇದ್ದಾರೆ. ಸಿನಿಮಾದ ಕುರಿತು ನನಗೆ ಹೆಚ್ಚಿನ ನಿರೀಕ್ಷೆಯಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು.
ನಾಯಕಿ ಪ್ರಾರ್ಥನಾ ಮಾತಾಡಿ, “ನಾನು ಮಂಗಳೂರ ಹುಡುಗಿ. ಸಿನಿಮಾದಲ್ಲಿ ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ತುಳು ರಂಗಭೂಮಿಯ ಬಹುತೇಕ ಕಲಾವಿದರು ಸಿನಿಮಾದಲ್ಲಿದ್ದಾರೆ. ಎಲ್ಲರೂ ಚಿತ್ರತಂಡವನ್ನು ಪ್ರೋತ್ಸಾಹಿಸಿ” ಎಂದರು.
ನಟ ಜ್ಯೋತಿಷ್ ಶೆಟ್ಟಿ ಮಾತಾಡಿ, “ಸಿನಿಮಾದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ನನಗೆ ಸಿನಿಮಾ ಕಥೆ ಇಷ್ಟವಾಯಿತು. ಮಂಗಳೂರಿನ ಮಣ್ಣಿನ ಸೊಗಡು ಈ ಸಿನಿಮಾದಲ್ಲಿದೆ. ಎಲ್ಲರೂ ಸಿನಿಮಾ ನೋಡಿ” ಎಂದರು.
ನಟರಾಜ್ ಸಿನಿಮಾ ನಿರ್ದೇಶನ ಮಾಡಿದ್ದು ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್, ಚಂದ್ರಕಲಾ ರಾವ್, ನಮಿತಾ ಇತರರು ಸಿನಿಮಾದ ಪ್ರಧಾನ ಭೂಮಿಕೆಯಲ್ಲಿರಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅನಿತಾ, ರವಿ ರಾಮಕುಂಜ, ರಾಜೇಶ್ ಸ್ಕೈ ಲಾರ್ಕ್, ನಿರ್ಮಾಪಕಿ ಅನಿತಾ ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.