Accident
ಸತತ ಏಳು ಗಂಟೆ ಕಾರ್ಯಾಚರಣೆ ಬಳಿಕ ಮಣ್ಣಿನಡಿ ಸಿಲುಕಿದ ಕಾರ್ಮಿಕ ಮೃತದೇಹವನ್ನು ಮೇಲಕ್ಕೆತ್ತಿದ ರಕ್ಷಣಾ ತಂಡ
ಮಂಗಳೂರು : ಸತತ ಏಳು ಗಂಟೆ ಕಾರ್ಯಾಚರಣೆ ಬಳಿಕ ಬಲ್ಮಠದ ಬಳಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮಣ್ಣಿನಡಿ ಸಿಲುಕಿದ್ದ ಮತ್ತೋರ್ವ ಕಾರ್ಮಿಕನ ಮೃತದೇಹವನ್ನು ರಕ್ಷಣಾ ತಂಡ ಮೇಲಕ್ಕೆತ್ತಿದೆ.
ಉತ್ತರಪ್ರದೇಶ ಮೂಲದ ಕಟ್ಟಡ ಕಾರ್ಮಿಕ ಚಂದನ್ ಕುಮಾರ್ (30)ನನ್ನು ಸತತ ಕಾರ್ಯಾಚರಣೆ ಮೂಲಕ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಮಣ್ಣಿನಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದೆ. ಆದರೆ ಆತನ ಮುಖದ ತುಂಬಾ ಗಾಯಗಳಾಗಿದ್ದು ರಕ್ತ ಒಸರಿ ಹೆಪ್ಪುಗಟ್ಟಿದಂತಿತ್ತು. ತಕ್ಷಣ ಆತನ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ಬುಧವಾರ 12.30 ಸುಮಾರಿಗೆ ನಿರ್ಮಾಣ ಹಂತದ ಕಟ್ಟಡದ ಬಳಿ ತಡೆಗೋಡೆಗೆ ವಾಟರ್ ಪ್ರೂಫಿಂಗ್ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮಣ್ಣು ಕುಸಿದಿದೆ. ಈ ಮಣ್ಣಿನಡಿ ಇಬ್ಬರು ಕಾರ್ಮಿಕರ ಸಿಲುಕಿದ್ದಾರೆ. ಅದರಲ್ಲಿ ಬಿಹಾರ ಮೂಲದ ರಾಜ್ಕುಮಾರ್(18) ಎಂಬಾತನನ್ನು ಮಧ್ಯಾಹ್ನ 2.15ರ ಸುಮಾರಿಗೆ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಬಳಿಕ ಚಂದನ್ ಕುಮಾರ್ ರಕ್ಷಣೆಗೆ ಸತತ ಕಾರ್ಯಾಚರಣೆ ನಡೆಸಿದರೂ, ರಕ್ಷಣೆ ಸುಲಭ ಸಾಧ್ಯವಾಗಿರಲಿಲ್ಲ.
ಕಾಂಕ್ರೀಟ್ ಸ್ಲ್ಯಾಬ್ ಅನ್ನು ರಂಧ್ರ ಕೊರೆದು ಮಣ್ಣಿನಡಿ ಸಿಲುಕಿರುವ ಚಂದನ್ ಕುಮಾರ್ ಅವರ ಇರವನ್ನು ಪತ್ತೆ ಮಾಡಲಾಯಿತು. 3.45ರ ಸುಮಾರಿಗೆ ಆತನ ಕೈ ರಂಧ್ರ ಕೊರೆದಿರುವ ಸ್ಲ್ಯಾಬ್ ನಿಂದ ಕಾಣಲುಸಿಕ್ಕಿದೆ. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ವೈದ್ಯರ ತಂಡ ಆತನ ಪಲ್ಸ್ ರೇಟ್ ತಪಾಸಣೆ ನಡೆಸಿದೆ. ಈ ವೇಳೆ ಆತನ ರಕ್ತದೊತ್ತಡದಲ್ಲಿ ಏರುಪೇರು ಕಂಡಿದೆ. ಆದ್ದರಿಂದ ಆತನಿಗೆ ಪ್ರಥಮ ಚಿಕಿತ್ಸೆ ನೀಡುವ ಸಲುವಾಗಿ ಗ್ಲೋಕೋಸ್ ಅನ್ನು ಡ್ರಿಪ್ಸ್ ಮೂಲಕ ನೀಡಲಾಗಿದೆ. ಈ ವೇಳೆ ಆತನ ಪರಿಸ್ಥಿತಿ ಗಂಭೀರವಾಗಿರುವುದು ತಿಳಿದು ಬಂದಿದೆ.
ಪ್ರಥಮ ಚಿಕಿತ್ಸೆ ಬಳಿಕ ಮತ್ತೆ ಕಾಂಕ್ರೀಟ್ ಸ್ಲ್ಯಾಬ್ನ ರಂಧ್ರ ಕೊರೆಯುವ ಕಾರ್ಯಾಚರಣೆ ಮುಂದುವರಿದಿದೆ. ಮತ್ತೊಂದೆಡೆ ಕಾಂಕ್ರೀಟ್ ಸ್ಲ್ಯಾಬ್ ಮೇಲಿನ ಮಣ್ಣು ಬಿದ್ದ ಸ್ಥಳದಲ್ಲಿಯೂ ಕಾರ್ಯಾಚರಣೆ ನಡೆಸಲಾಗಿದೆ. ಈ ಮೂಲಕ ಎರಡೂ ಕಡೆಗಳಲ್ಲಿ ಆತನ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ತಂಡ ಆತನನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಲು ಹರಸಾಹಸವನ್ನೇ ಮಾಡಿದೆ. ರಾತ್ರಿ ಏಳುವರೆ ವೇಳೆಗೆ ಆತನ ಮೃತದೇಹವನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಚಂದನ್ ಕುಮಾರ್ ಬದುಕಿ ಉಳಿಯಬೇಕೆನ್ನುವುದು ಎಲ್ಲರ ಆಶಯ ಕೊನೆಗೂ ಫಲಿಸಲಿಲ್ಲ.
ಉಳ್ಳಾಲ : ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸವಾರ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತ ದುರ್ದೈವಿಯನ್ನು ಪಾವೂರು ಮಲಾರು ಅಕ್ಷರನಗರ ನಿವಾಸಿ ವಿಶ್ವನಾಥ್ ಆಚಾರ್ಯ ಎಂಬವರ ಪುತ್ರ ಗಣೇಶ್ ಆಚಾರ್ಯ (27) ಎಂದು ಗುರುತಿಸಲಾಗಿದೆ.
ಜೂ.28ರಂದು ಗಣೇಶ ಅವರು ಪಾವೂರು ಹರೇಕಳ ಕಡೆಯಿಂದ ಕೊಣಾಜೆ ಕಡೆಗೆ ತೆರಳುವ ವೇಳೆ ಬೆಳಿಗ್ಗೆ 11.50ರ ಸುಮಾರಿಗೆ ಹರೇಕಳ ಗ್ರಾಮ ಪಂಚಾಯತ್ ಕಚೇರಿಯ ಎದುರುಗಡೆ ಅಪಘಾತ ಸಂಭವಿಸಿತ್ತು.
ಟಿಪ್ಪರ್ ವಾಹನ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆ ನಡೆಸಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸಮೇತ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನು ಟಿಪ್ಪರ್ ಲಾರಿ ಚಾಲಕ ಮಹಮ್ಮದ್ ಹನೀಫ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗಾಯಾಳುವನ್ನು ತಕ್ಷಣ ಟಿಪ್ಪರ್ ಚಾಲಕ ಸೇರಿದಂತೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನಲ್ಲಿ ಎ.ಸಿ ಮೆಕ್ಯಾನಿಕ್ ಆಗಿದ್ದ ಗಣೇಶ್, ಮನೆಯ ಹಿರಿಯ ಪುತ್ರನಾಗಿದ್ದು, ಜೀವನಾಧಾರವಾಗಿದ್ದರು. ಗಣೇಶ್ ಆಚಾರ್ಯ ಅವರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಹಕರಿಸಿದ ಹಿತೈಷಿಗಳ, ಸಂಬಂಧಿಕರ, ಸ್ನೇಹಿತರ ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.
ಶಿರಾಡಿ ಘಾಟ್ನಲ್ಲಿ ರಾಜಹಂಸ – ಐರಾವತ ಬಸ್ಸುಗಳ ಮುಖಾಮುಖಿ ಡಿಕ್ಕಿ; ಅಪಘಾತ ತಪ್ಪಿಸಲು ಹೋಗಿ ಟೆಂಪೋ ಚರಂಡಿಗೆ
ಬೆಳ್ತಂಗಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನ ಮಾರನಹಳ್ಳಿ ಕೆಳಗಡೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಶನಿವಾರ ನಡೆದಿದೆ.
ರಾಜಹಂಸ ಬಸ್ ಹಾಗೂ ಐರಾವತ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಅಪಘಾತ ತಪ್ಪಿಸಲು ಹೋಗಿ ಟೆಂಪೋ ಚರಂಡಿಗೆ ಬಿದ್ದಿದೆ. ಈ ಅಪಘಾತದಲ್ಲಿ ಎರಡೂ ಬಸ್ಸುಗಳ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತದ ಹಿನ್ನಲೆಯಲ್ಲಿ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿದ್ದು, ಬಳಿಕ ಕಾರ್ಯಾಚರಣೆ ನಡೆಸಿ ಅಪಘಾತ ನಡೆದ ಬಸ್ಸುಗಳನ್ನು ತೆರವುಗೊಳಿಸಲಾಗಿದೆ.
ಕಲ್ಸಂಕ ತೋಡಿಗೆ ಸುರಕ್ಷತಾ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಯಶ್ಪಾಲ್ ಸುವರ್ಣ ಸೂಚನೆ
ಉಡುಪಿ : ಕಲ್ಸಂಕದಿಂದ ಕೃಷ್ಣ ಮಠ ಪಾರ್ಕಿಂಗ್ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳ ತೋಡಿಗೆ ತಕ್ಷಣ ಸುರಕ್ಷತಾ ತಡೆಗೋಡೆ ನಿರ್ಮಿಸಲು ಕ್ರಮ ವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.

ಕೆಲವು ದಿನಗಳ ಹಿಂದೆ ರಿಕ್ಷಾ ತೋಡಿಗೆ ಬಿದ್ದ ಘಟನೆ ಹಿನ್ನೆಲೆಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ಸಂಚರಿಸುವ ರಸ್ತೆ ಸಂಚಾರದ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಥಿಲಗೊಂಡಿರುವ ತೋಡಿನ ಬದಿಗಳ ಮರು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ನಗರಸಭೆ ಎಇಇ ದುರ್ಗಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ : ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಅಪಘಾತಗೊಂಡು ನವವಿವಾಹಿತೆ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೊಸ್ಮಾರು ಬಳಿ ಸಂಭವಿಸಿದೆ.
ಈದು ಗ್ರಾಮದ ಕರೆಂಬಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ (26) ಮೃತಪಟ್ಟ ಮಹಿಳೆ. ಇವರು ವಿಶಾಲ್ ಅವರನ್ನು ಮದುವೆಯಾಗಿ ಮೂರು ತಿಂಗಳಷ್ಟೇ ಕಳೆದಿತ್ತು. ಶುಕ್ರವಾರ ಸಂಜೆ ಗಂಡನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ನಾಯಿ ರಸ್ತೆಗೆ ಅಡ್ಡ ಬಂದಿದ್ದು, ಇದರ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ.
ಇದರಿಂದ ನೀಕ್ಷಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಕರ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಬೆಂಜ್ ಕಾರು – ಉದ್ಯಮಿಯ ಪುತ್ರ ದಾರುಣ ಸಾವು
ಬೆಳ್ತಂಗಡಿ : ತಾಲೂಕಿನ ಉಜಿರೆಯಲ್ಲಿ ಶನಿವಾರ ನಸುಕಿನ ಜಾವ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಉದ್ಯಮಿಯ ಪುತ್ರ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಉದ್ಯಮಿ, ಪ್ರಜ್ವಲ್ ಕಾಂಪ್ಲೆಕ್ಸ್ ಮಾಲಕ ಎಂ.ಆರ್.ನಾಯಕ್ ಪುತ್ರ ಪ್ರಜ್ವಲ್ ಮೃತಪಟ್ಟ ದುರ್ದೈವಿ.

ಇಂದು ಬೆಳಗ್ಗಿನ ಜಾವ ಪ್ರಜ್ವಲ್ ತಮ್ಮ ಬೆಂಜ್ ಕಾರಿನಲ್ಲಿ ಸಂಚಾರ ಮಾಡುತ್ತಿದ್ದರು. ಉಜಿರೆ ತಲುಪುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಡಿವೈಡರ್ ಹಾರಿ ಪಕ್ಕದ ರಸ್ತೆಗೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಜ್ವಲ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪ್ರಜ್ವಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಳ್ತಂಗಡಿ : ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಲಾಯಿಲದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಮೃತ ದುರ್ದೈವಿಯನ್ನು ಬಳಂಜ ನಿವಾಸಿ, ನಡ ಗ್ರಾಮ ಕರಣಿಕರ ಕಚೇರಿ ಸಹಾಯಕ ಜಯರಾಜ್(50) ಗುರುತಿಸಲಾಗಿದೆ.
ಕಿಲ್ಲೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ತಂಗಡಿ ಕಡೆಯಿಂದ ನಡಕ್ಕೆ ತೆರಳುತ್ತಿದ್ದ ಬೈಕ್ ಮಧ್ಯೆ ಪುತ್ರಬೈಲು ಎಂಬಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ತ್ರೀವ ಗಾಯಗೊಂಡಿದ್ದ ಜಯರಾಜ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಲಿಸುತ್ತಿದ್ದ ಬಸ್ನಲ್ಲೇ ಮೂರ್ಛೆಹೋದ ಚಾಲಕ; ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಪ್ರಯಾಣಿಕರು
ಉಡುಪಿ : ಚಾಲಕನೋರ್ವ ಮೂರ್ಛೆಹೋದ ಪರಿಣಾಮ ಸಿಟಿ ಬಸ್ವೊಂದು ಹಿಂಮುಖವಾಗಿ ಚಲಿಸಿ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಉಡುಪಿಯ ಕೆಳಪರ್ಕಳದ ಬಳಿ ನಿನ್ನೆ ಸಂಜೆ ವೇಳೆ ಸಂಭವಿಸಿದೆ.
ಎಚ್ಎಂಟಿ ಸಿಟಿ ಬಸ್ ಪರ್ಕಳದಿಂದ ಮಣಿಪಾಲದ ಕಡೆಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿತ್ತು. ಬಸ್ ಕೆಳಪರ್ಕಳದ ಏರಿನಲ್ಲಿ ಬರುತ್ತಿದ್ದಂತೆ ಚಾಲಕ ಕೃಷ್ಣ ಎಂಬವರಿಗೆ ಹಠಾತ್ ಆಗಿ ಫಿಟ್ಸ್ ಬಂದಿದೆ. ಇದರಿಂದ ಏಕಾಏಕಿಯಾಗಿ ಬಸ್ ಹಿಂದಕ್ಕೆ ಚಲಿಸಿ ಕಂದಕಕ್ಕೆ ನುಗ್ಗಿದೆ.
ಕೆಲವು ಪ್ರಯಾಣಿಕರು ಬಸ್ ನಿಂದ ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡರು. ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಚಾಲಕ ಕೃಷ್ಣ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ : ವಿದ್ಯುತ್ ಆಘಾತಕ್ಕೆ ಮಂಗಳೂರಿನಲ್ಲಿ ಇಬ್ಬರು ರಿಕ್ಷಾ ಚಾಲಕರು ಸಾವನ್ನಪ್ಪಿರುವ ಪ್ರಕರಣ ಇನ್ನೂ ಹಸಿಯಾಗಿದ್ದಾಗಲೇ ಬೆಳ್ತಂಗಡಿಯಲ್ಲಿ ಯುವತಿಯೊಬ್ಬಳು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ.
ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ (20) ಮೃತಪಟ್ಟ ಯುವತಿ.

ಮನೆಯ ಬಳಿ ಪಾರ್ಸೆಲ್ ಬಂದಿದ್ದರಿಂದ ರಸ್ತೆಗೆ ಬಂದ ಪ್ರತೀಕ್ಷಾ ಶೆಟ್ಟಿಗೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿದೆ. ಈ ವೇಳೆ ವಿದ್ಯುತ್ ಶಾಕ್ಗೊಳಗಾಗಿ ಮೃತಪಟ್ಟಿದ್ದಾಳೆ. ವಿದ್ಯುತ್ ಕಂಬಕ್ಕೆ ಕೊಡುವ ಸ್ಟೇವೈಯರ್ ಮೂಲಕ ವಿದ್ಯುತ್ ನೀರಿಗೆ ಪ್ರವಾಹಿಸಿದ ಕಾರಣ ಆಕೆ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಆಕೆಯ ರಕ್ಷಣೆಗೆ ತಂದೆ ಗಣೇಶ್ ಶೆಟ್ಟಿ ಧಾವಿಸಿದ್ದು, ಅವರಿಗೂ ಶಾಕ್ ಆಗಿದೆ. ತಕ್ಷಣ ಪ್ರತೀಕ್ಷಾ ಶೆಟ್ಟಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ಮೃತಪಟ್ಟ ಯುವತಿ ಕೊಕ್ಕಡ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದಳು.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಸ್ಕಾಂ ತಕ್ಷಣ ಯುವತಿಯ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಕೊಡಬೇಕೆಂದು ಸ್ಪೀಕರ್ ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಬೆಳ್ತಂಗಡಿ ಶಾಸಕ ಸ್ಥಳಕ್ಕೆ ಭೇಟಿ ನೀಡಿ ಗರಿಷ್ಠ ಮೊತ್ತ 25 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.
