ಉಡುಪಿ : ಚಾಲಕ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ತೋಡಿಗೆ ಉರುಳಿಬಿದ್ದ ಪರಿಣಾಮ ನಾಲ್ಕು ಮಂದಿ ಭಕ್ತಾದಿಗಳು ಗಾಯಗೊಂಡ ಘಟನೆ ಉಡುಪಿ ಕಲ್ಸಂಕ ಬಳಿಯ ಕೃಷ್ಣಮಠದ ಪಾರ್ಕಿಂಗ್ ಸ್ಥಳಕ್ಕೆ ಹೋಗುವ ದಾರಿ ಮಧ್ಯೆ ಇಂದು ಮಧ್ಯಾಹ್ನ ಸಂಭವಿಸಿದೆ.
ಆಟೋ ರಿಕ್ಷಾದಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚು, ಆರು ಮಂದಿ ಪ್ರಯಾಣಿಕರು ಪ್ರಯತ್ನಿಸುತ್ತಿದ್ದರು. ಈ ಪೈಕಿ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರೆಲ್ಲರೂ ಉಡುಪಿ ಕೃಷ್ಣದೇವರ ದರ್ಶನಕ್ಕಾಗಿ ಆಗಮಿಸಿದ್ದರು. ದರ್ಶನ ಪಡೆದು ಹಿಂತಿರುಗುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕನ ಕೈಗೂ ಗಂಭೀರ ಗಾಯವಾಗಿದೆ. ಅಪಘಾತದ ರಭಸಕ್ಕೆ ಆಟೋದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಲ್ಸಂಕದಿಂದ ಕೃಷ್ಣಮಠದ ಪಾರ್ಕಿಂಗ್ ಸ್ಥಳಕ್ಕೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ತಡೆಬೇಲಿ ಇಲ್ಲದ ಪರಿಣಾಮ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Accident
ಉಡುಪಿ: ತಂತಿ ಬೇಲಿಯಲ್ಲಿ ಸಿಲುಕಿ ಸಾಯುವ ಸ್ಥಿತಿಯಲ್ಲಿದ್ದ ಚಿರತೆಯನ್ನು ರಕ್ಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ- ಹಿರಿಯಡ್ಕ ರಸ್ತೆಯ ಬಕ್ಕಾರೆ ಎಂಬಲ್ಲಿ ಈ ರಕ್ಷಣಾ ಕಾರ್ಯಚರಣೆ ನಡೆದಿದೆ.
ಸರಕಾರಿ ಜಾಗದಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿಗೆ ಸಿಲುಕಿಕೊಂಡ ಚಿರತೆ, ಹೊರಬರಲು ಪರದಾಡುತ್ತಿತ್ತು. ಸುಮಾರು 4-5 ವರ್ಷ ಪ್ರಾಯದ ಗಂಡು ಚಿರತೆಯ ಸೊಂಟದ ಭಾಗಕ್ಕೆ ಉರುಳು ಬಿದ್ದಿತ್ತು. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅವರಿಂದ ಕಾರ್ಯಾಚರಣೆ ನಡೆಯಿತು. ಮಂಗಳೂರಿನ ಅರಿವಳಿಕೆ ತಜ್ಞರಾದ ಯಶಸ್ವಿ ನಾರಾವಿ ಹಾಗೂ ಅಕ್ಷಯ್ ಶೇಟ್ ಸ್ಥಳಕ್ಕೆ ಬಂದು ಉರುಳಿನಲ್ಲಿ ಸಿಲುಕಿದ ಚಿರತೆಗೆ ಶೂಟ್ ಮಾಡಿ ಅರವಳಿಕೆ ಔಷಧ ನೀಡಿದರು. ಪ್ರಜ್ಞೆ ತಪ್ಪಿದ ಚಿರತೆಯನ್ನು ಬೋನಿನೊಳಗೆ ಹಾಕಿ, ನಿಗಾದಲ್ಲಿ ಇರಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಚಿರತೆಯನ್ನು ಸುರಕ್ಷಿತ ಅರಣ್ಯಕ್ಕೆ ಬಿಡಲಾಗಿದೆ.
ಪಡುಬಿದ್ರಿ : ಕಾರೊಂದು ಬಸ್ ಹಿಂಬದಿಗೆ ಡಿಕ್ಕಿಯಾಗಿ ಪುಷ್ಪಲತಾ ಆಚಾರ್ಯ (56) ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.
ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಠಾತ್ತನೇ ಯಾವುದೇ ಮುನ್ಸೂಚನೆ ಇಲ್ಲದೇ ನಿಲ್ಲಿಸಿದ ಪರಿಣಾಮವಾಗಿ ಅದರ ಹಿಂದಿನಿಂದ ಹೆದ್ದಾರಿಯಲ್ಲೇ ಬಂದಿದ್ದ ಕಾರೊಂದು ಬಸ್ ಹಿಂಬದಿಗೆ ಡಿಕ್ಕಿಯಾಗಿದೆ.
ಇದೇ ಕಾರಲ್ಲಿ ಚಾಲಕನ ಬದಿಯಲ್ಲೇ ಕುಳಿತಿದ್ದ ಪುಷ್ಪಲತಾ ಅವರ ಕಾಲುಗಳಿಗೆ, ಕೈಗೆ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದು ಪಡುಬಿದ್ರಿಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಕುಂದಾಪುರ : ತಾಲೂಕಿನ ಬೀಜಾಡಿಯಲ್ಲಿ ಕಡಲ ಅಲೆಗಳ ರಭಸಕ್ಕೆ ಸಿಕ್ಕು ಸಮುದ್ರಪಾಲಾದ ತುಮಕೂರು ತಿಪಟೂರು ಮೂಲದ ಟಿ.ಆರ್ ಯೋಗೀಶ್ (23) ಎನ್ನುವ ಯುವಕನ ಮೃತದೇಹ ಮೂರು ದಿನ ಕಳೆದರೂ ಸಿಕ್ಕಿಲ್ಲ. ಆತನಿಗಾಗಿ ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಲೇ ಇದ್ದಾರೆ.
ಕುಂದಾಪುರದ ಗೋಪಾಡಿ-ಬೀಜಾಡಿಯ ಸ್ನೇಹಿತನ ಮನೆಯ ವಿವಾಹ ಕಾರ್ಯಕ್ರಮಕ್ಕೆಂದು ಯೋಗೀಶ್ ಮತ್ತು ಸ್ನೇಹಿತ ಸಂದೀಪ್ ಬಂದಿದ್ದರು. ಮರುದಿನ ಮದುವೆ ಕಾರ್ಯಕ್ರಮ ಇತ್ತು. ಹಿಂದಿನ ದಿನ ಯೋಗೀಶ್ ತನ್ನ ಸ್ನೇಹಿತ ಸಂದೀಪ್ ಜೊತೆಗೂಡಿ ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿತ್ತು. ಸಂದೀಪ್ ನೀರಲ್ಲಿ ಮುಳುಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಯೋಗೀಶ್ ಅಲೆಗಳ ರಭಸಕ್ಕೆ ನೀರುಪಾಲಾಗಿ ನಾಪತ್ತೆಯಾಗಿದ್ದ. ಗುರುವಾರ ಬೆಳಿಗ್ಗಿನಿಂದಲೂ ಮೀನುಗಾರರು, ಪೊಲೀಸರು, ಕರಾವಳಿ ಕಾವಲು ಪಡೆಯವರು, ಸ್ಥಳೀಯರು ಸತತ ಹುಡುಕಾಟ ನಡಸಿದರೂ ಕೂಡ ಕಡಲು ಪ್ರಕ್ಷುಬ್ಧಗೊಂಡಿದ್ದು ಅಲೆಗಳು ಹೆಚ್ಚಿದ ಕಾರಣ ಯುವಕನ ಸುಳಿವು ಪತ್ತೆಯಾಗಿಲ್ಲ.
ಸದ್ಯ ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದಲ್ಲಿ ಹುಡುಕಾಟ ನಡೆಸುತ್ತಿದ್ದರೂ ಯೋಗೀಶ್ ಪತ್ತೆಯಾಗಿಲ್ಲ. ಸಮುದ್ರದ ಒತ್ತಡಕ್ಕೆ ದೇಹ ಬೈಂದೂರು ಅಥವಾ ಭಟ್ಕಳದತ್ತ ತೇಲಿ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.
ಕುಂದಾಪುರ : ತಾಲೂಕಿನ ಬೀಜಾಡಿಯಲ್ಲಿ ಕಡಲ ಅಲೆಗಳ ರಭಸಕ್ಕೆ ಸಿಕ್ಕು ತುಮಕೂರು ತಿಪಟೂರು ಮೂಲದ ಟಿ.ಆರ್ ಯೋಗೀಶ್ (23) ಎನ್ನುವ ಯುವಕ ಕೊಚ್ಚಿಹೋದ ಘಟನೆ ಬುಧವಾರ ಸಂಜೆ ವೇಳೆ ನಡೆದಿದ್ದು ಆತನ ಸುಳಿವು ಗುರುವಾರ ಸಂಜೆವರೆಗೂ ಪತ್ತೆಯಾಗಿಲ್ಲ.
ಕುಂದಾಪುರದ ಗೋಪಾಡಿ-ಬೀಜಾಡಿಯ ಸ್ನೇಹಿತನ ಮನೆಯ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಯುವಕರಿಬ್ಬರು ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿತ್ತು. ಈತನೊಂದಿಗಿದ್ದ ಇನ್ನೋರ್ವ ಸಂದೀಪ್ ಎನ್ನುವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಗುರುವಾರ ಬೆಳಿಗ್ಗಿನಿಂದಲೂ ಮೀನುಗಾರರು, ಪೊಲೀಸರು, ಕರಾವಳಿ ಕಾವಲು ಪಡೆಯವರು, ಸ್ಥಳೀಯರು ಸತತ ಹುಡುಕಾಟ ನಡಸಿದರೂ ಕೂಡ ಕಡಲು ಪ್ರಕ್ಷುಬ್ಧಗೊಂಡಿದ್ದು ಅಲೆಗಳು ಹೆಚ್ಚಿದ್ದ ಕಾರಣ ಯುವಕನ ಸುಳಿವು ಪತ್ತೆಯಾಗಿಲ್ಲ.
ಬಂಟ್ವಾಳ : ಬಿ.ಸಿ.ರೋಡ್ ಕೈಕಂಬ ನಿವಾಸಿಯೋರ್ವರು ಕಳೆದ 2 ದಿನದಿಂದ ನಾಪತ್ತೆಯಾಗಿದ್ದು ಬಿ.ಸಿ. ರೋಡ್ ತಲಪಾಡಿ ಮೆಸ್ಕಾಂ ಸಬ್ ಸ್ಟೇಷನ್ ಬಳಿ ನದಿಯಲ್ಲಿ ಶವವಾಗಿ ಇಂದು ಸಂಜೆ ಪತ್ತೆಯಾಗಿದ್ದಾರೆ.
ಅಬ್ದುಲ್ ಕರೀಂ (61) ಎಂಬ ವ್ಯಕ್ತಿಯು ಬಕ್ರೀದ್ ದಿವಸ ಸಂಜೆ ಮನೆಯಿಂದ ಹೊರ ಹೋದವರು ಕಾಣೆಯಾಗಿದ್ದರು.
ಇದೀಗ ಅಬ್ದುಲ್ ಕರೀಂ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಯೋ, ಆಕಸ್ಮಿಕವಾಗಿ ನದಿಗೆ ಜಾರಿ ಬಿದ್ದಿದ್ದೋ ಇನ್ನಷ್ಟೇ ತಿಳಿಯಬೇಕಿದೆ. ಮೃತ ದೇಹ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.
ಕಾಪು : ಮಜೂರು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಇವರ ಸಹಯೋಗದೊಂದಿಗೆ ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆ ಅಫಘಾತ ವಿಮಾ ಯೋಜನೆ ನೋಂದಣಿ ಮತ್ತು ಆಧಾರ್ ತಿದ್ದುಪಡಿ ಹಾಗೂ ಹೊಸ ನೋಂದಣಿ ಕಾರ್ಯಕ್ರಮ ಮಜೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು ಸಾರ್ವಜನಿಕರಿಗಾಗಿ ಸರಕಾರ ಅನೇಕ ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿಯ ಕೊರತೆ ಇದೆ. ಪ್ರತಿ ಗ್ರಾಮಗಳಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಂಡಾಗ ಇದರಿಂದ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದರು ಅಂಚೆ ಇಲಾಖೆ ಜಾರಿಗೆ ತಂದಿರುವ ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆ ಅಫಘಾತ ವಿಮಾ ಯೋಜನೆ ನೋಂದಣಿ ಮಾಡಿಸಿ ಸಾರ್ವಜನಿಕರು ಇರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಳದೂರು, ಉಪಾಧ್ಯಕ್ಷರಾದ ಮಂಜುಳಾ ಆಚಾರ್ಯ, ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ್ ಭಟ್, ಮಜೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲಾಸಿನಿ, ಕಾರ್ಯದರ್ಶಿಗಳಾದ ಪ್ರಸಾದ್ ಭಂಡಾರಿ, ಇಂಡಿಯನ್ ಪೋಸ್ಟ್ ಬ್ಯಾಂಕ್ ಅಧಿಕಾರಿಗಳಾದ ಸ್ಮಿತಾ, ದಯಾನಂದ ಉಪಸ್ಥಿತರಿದ್ದರು.
ಕುಂದಾಪುರ : ತಿಪಟೂರು ಮೂಲದ ಯುವಕರಿಬ್ಬರು ಸಮುದ್ರ ವಿಹಾರಕ್ಕೆ ತೆರಳಿದ್ದು ಈ ವೇಳೆ ಓರ್ವ ಅಲೆಗಳ ರಭಸಕ್ಕೆ ಸಿಕ್ಕು ಕೊಚ್ಚಿಹೋದ ಘಟನೆ ಕುಂದಾಪುರ ತಾಲೂಕಿನ ಬೀಜಾಡಿ ಎಂಬಲ್ಲಿ ಸಂಭವಿಸಿದೆ.
ಸಮುದ್ರಕ್ಕೆ ತೆರಳಿದ ಇಬ್ಬರು ತಿಪಟೂರು ಮೂಲದವರಾಗಿದ್ದು ಬೀಜಾಡಿಯ ಸ್ನೇಹಿತನ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದರು. ಸಂಜೆ ವೇಳೆ ಇವರಿಬ್ಬರು ಸಮುದ್ರದ ಬಳಿ ತೆರಳಿದ್ದು ನೀರಿಗಿಳಿದ ಯೋಗೀಶ್ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದು, ಆತನ ಸ್ನೇಹಿತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಂಜೆಯವರೆಗೂ ಕಾಣೆಯಾದ ಯುವಕನ ಹುಡುಕಾಟಕ್ಕೆ ಪೊಲೀಸರು, ಮೀನುಗಾರರು, ಸ್ಥಳೀಯರು ಹರಸಾಹಸಪಟ್ಟರು.
ಕುಂದಾಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಆಹಾರ ಅರಸಿಬಂದ ಅಪರೂಪದ ಕರಿಚಿರತೆ ಬಾವಿಗೆ; ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಬಳಿ ಘಟನೆ
ಕುಂದಾಪುರ : ಬೇಟೆ ಅರಸಿ ಬಂದ ಕರಿ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ನಡೆದಿದೆ.
ಸ್ಥಳೀಯ ಕೃಷ್ಣ ನಾಯ್ಕ ಎಂಬವರ ಜಾಗ ದಲ್ಲಿರುವ ತೆರೆದ ಬಾವಿಗೆ ಶುಕ್ರವಾರ ತಡರಾತ್ರಿ ಕರಿ ಚಿರತೆ ಬಿತ್ತೆನ್ನಲಾಗಿದೆ. ಶನಿವಾರ ಸಂಜೆ ವೇಳೆಗೆ ಬಾವಿಯಲ್ಲಿ ಚಿರತೆ ಬಿದ್ದ ಬಗ್ಗೆ ತಿಳಿದ ತಕ್ಷಣ ಶೇಖರ್ ಶೆಟ್ಟಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಬಾವಿ ಸುತ್ತ ಬಲೆ ಹಾಕಿ ಕರಿ ಚಿರತೆ ರಕ್ಷಣೆಗೆ ಮುಂದಾದರು. ಆದರೆ ಕಾರ್ಯಾಚರಣೆ ವೇಳೆ ಚಿರತೆ ಬಲೆಯಿಂದ ಸರಿದು ಸಮೀಪದ ತೋಟದೊಳಕ್ಕೆ ಓಡಿ ಹೋಯಿತೆನ್ನಲಾಗಿದೆ. ಈ ಮೂಲಕ ಕರಿ ಚಿರತೆ ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ಬಂದು ಕಾಡು ಪ್ರದೇಶ ಸೇರಿದೆ ಎಂದು ತಿಳಿದುಬಂದಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದಲ್ಲಿ ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪವಲಯ ಅರಣ್ಯಾಧಿ ಕಾರಿ ನಾಗರಾಜ ಮತ್ತು ಸಿಬ್ಬಂದಿ, ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪೆಟ್ರೋಲ್ ಬಂಕ್ನಲ್ಲಿದ್ದ ಜನರೇಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ; ಸಮಯಪ್ರಜ್ಞೆ ಮೆರೆದ ಕಾರ್ಮಿಕರು
ಉಡುಪಿ : ಪೆಟ್ರೋಲ್ ಬಂಕ್ನಲ್ಲಿದ್ದ ಜನರೇಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಕಾರ್ಮಿಕರು ಸಮಯಪ್ರಜ್ಞೆ ಮೆರೆದ ಪರಿಣಾಮ ಸಂಭವನೀಯ ಅವಘಡವೊಂದು ತಪ್ಪಿದ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಮಂಗಳವಾರ ನಡೆದಿದೆ.
ಉಡುಪಿಯ ಸಿಟಿಬಸ್ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ನ ಜನರೇಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಪಂಪ್ನ ಸಿಬಂದಿಗಳು ಎಚ್ಚೆತ್ತು ಜನರೇಟರ್ ಅನ್ನು ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಗೆ ತಂದು ಬೆಂಕಿ ನಂದಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪೆಟ್ರೋಲ್ ಪಂಪ್ ಸಿಬಂದಿಯ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.