ಕಾರ್ಕಳ : ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾರ್ಕಳ ಬಿಜೆಪಿ ವತಿಯಿಂದ ಬ್ರಹತ್ ಪ್ರತಿಭಟನೆ ನಡೆಯಿತು. ನೂರಾರು ಬಿಜೆಪಿ ಕಾರ್ಯಕರ್ತರು ತಮ್ಮ ದ್ವಿಚಕ್ರ ವಾಹನವನ್ನು ತಳ್ಳುತ್ತಾ, ಲಾರಿಯನ್ನು ಹಗ್ಗದಿಂದ ಕಟ್ಟಿ ಎಳೆಯುತ್ತಾ, ಮಹಿಳಾ ಕಾರ್ಯಕರ್ತರು ಕೈಯಲ್ಲಿ ಚೊಂಬು ಮತ್ತು ತೆಂಗಿನಕಾಯಿಯ ಗೆರಟೆಯನ್ನು ಪ್ರದರ್ಶಿಸುತ್ತಾ ಕಾರ್ಕಳ ಬಸ್ ನಿಲ್ದಾಣದವರೆಗೆ ಬಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧಿಕ್ಕಾರವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷರಾದ ನವೀನ್ ನಾಯಕ್, ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಾದರೆ ಎಲ್ಲಾ ವಸ್ತುಗಳ ದರ ತನ್ನಷ್ಟಕ್ಕೆ ಏರಿಕೆಯಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಚ್ಚ ಸಾಮಗ್ರಿಗಳನ್ನು ಸಾಗಿಸುವುದಾದರೆ ವಾಹನಗಳನ್ನು ಬಳಸಬೇಕಾಗುತ್ತದೆ.

ಕಾಂಗ್ರೆಸ್ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಮಾಡಿ ರಾಜ್ಯದ ಜನರಿಗೆ ಬಹಳ ದೊಡ್ಡ ಹೊಡೆತ ನೀಡಿದೆ.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಬೇಕಾದರೆ ರಾಜ್ಯ ಜನರಿಗೆ ಗ್ಯಾರಂಟಿಗಳ ಅಮೀಷವಡ್ಡಿ ಗೆದ್ದು ಬಂದು ಈಗ ಜನರನ್ನು ಲೂಟಿ ಮಾಡುವ ಕೆಲಸದಲ್ಲಿ ನಿರತವಾಗಿದೆ. ಬಡಜನರ ಜೇಬಿಗೆ ಕತ್ತರಿ ಹಾಕಿ ದೋಚಲು ಪ್ರಾರಂಭಿಸಿದೆ ಎಂದರು.
ಮಹಿಳಾ ಮೋರ್ಚ ಅಧ್ಯಕ್ಷರಾದ ರೇಷ್ಮಾ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಗ್ಯಾರಂಟಿಗಳ ಅಮಿಷ ತೋರಿಸಿ ಈಗ ಹಣವನ್ನು ಕ್ರೋಡಿಕರಿಸಲಾಗದೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿ, ಖಾಲಿ ಖಜಾನೆ ತುಂಬಿಸಿಕೊಳ್ಳಲು ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ ಕೂಡಲೇ ರಾಜ್ಯದ ಮುಖ್ಯಮಂತ್ರಿ, ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರು ಮಾತನಾಡಿದರು. ಮಣಿರಾಜ್ ಶೆಟ್ಟಿ, ಮಹಾವೀರ್ ಹೆಗಡೆ, ಉದಯ ಕೋಟ್ಯಾನ್, ಮುಟ್ಲುಪಾಡಿ ಸುಹಾಸ್ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ್ ಹೆಗಡೆ, ಹಾಗೂ ಪೊಲೀಸ್ ಉಪಾಧಿಕ್ಷಕರಾದ ಅರವಿಂದ ಕಲಗಜ್ಜಿ ಇವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತಿನೊಂದಿಗೆ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು.
 
			        


 
			         
                        




 
                        
 
                        






 
                        
 
                         
                        
 
                        
 
                        
 
                         
                        