ಕಾರ್ಕಳ : ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ಹ್ಯಾರಿಸ್ ನಲಪಾಡ್, ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಇನ್ನಾ ಇವರ ಶಿಫಾರಸ್ಸಿನ ಮೇರೆಗೆ ಶಶಿಧರ ಹವಲ್ದಾರಬೆಟ್ಟು ಅವರನ್ನು ಕಾರ್ಕಳ ನಗರ ಯುವ ಕಾಂಗ್ರೆಸ್ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಯೋಗೀಶ್ ಇನ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
NewsDesk
ಮಂಗಳೂರು MSPTCಗೆ ಸಚಿವೆ ಹೆಬ್ಬಾಳ್ಕರ್ ದಿಢೀರ್ ಭೇಟಿ; ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಸುವಂತೆ ಸೂಚನೆ
ಮಂಗಳೂರು : ಮಂಗಳೂರು ಹೊರವಲಯದ ಮೂಡುಶೆಡ್ಡೆ-ಶಿವನಗರದಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ (ಎಂಎಸ್ಪಿಸಿ)ಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಸಚಿವರು ಪರೀಕ್ಷಿಸಿದರು. ಕೇಂದ್ರದ ಉದ್ಯೋಗನಿರತ ಮಹಿಳೆಯರಿಂದಲೇ ಆಹಾರ ಸಾಮಗ್ರಿಗಳ ತಯಾರಿಕೆಯ ಬಗ್ಗೆ ಮಾಹಿತಿ ಪಡೆದರು.
ಪುಷ್ಟಿ ನ್ಯೂಟ್ರಿಮಿಕ್ಸ್, ಹಾಲಿನ ಪುಡಿ ಮತ್ತಿತರ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಸಚಿವರು ಪರೀಕ್ಷಿಸಿದರಲ್ಲದೇ, ಉತ್ಪಾದನಾ ಆಹಾರ ಸಾಮಗ್ರಿಗಳ ಬಗ್ಗೆ ಸ್ಥಳದಲ್ಲೇ ಇದ್ದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯಿಂದ ಮಾಹಿತಿ ಪಡೆದರು. ಆಹಾರ ಸಾಮಗ್ರಿಗಳ ಪ್ಯಾಕ್ ಮಾಡುವ ತೂಕವನ್ನು ಕೂಡ ಗಮನಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಎಲ್ಲ ಆಹಾರ ಸಾಮಗ್ರಿಗಳಲ್ಲಿ, ಅದರಲ್ಲೂ ಉತ್ಪಾದನೆಯಲ್ಲೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಆಹಾರ ಸಾಮಗ್ರಿಗಳು ಕಳಪೆ ಇದ್ದಲ್ಲಿ ಅಥವಾ ಯಾವುದೇ ಲೋಪದೋಷ ಇದ್ದಲ್ಲಿ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಇಲ್ಲವಾದರೆ ನೇರವಾಗಿ ತಮಗೆ ಪತ್ರ ಬರೆಯಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್, ಜಿಲ್ಲಾ ನಿರೂಪಣಾ ಅಧಿಕಾರಿ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ, ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದ ನಿರ್ವಹಣಾ ಅಧಿಕಾರಿ ಶೈಲಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಕರಾವಳಿ ಲೇಖಕಿಯರ ಮತ್ತು ವಾಚಿಕೆಯರ ಸಂಘದ ನವೀಕೃತ ಕಟ್ಟಡ ‘ಸಾಹಿತ್ಯ ಸದನ’ ಲೋಕಾರ್ಪಣೆ
ಮಂಗಳೂರು : ಮಹಿಳೆಯನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಯೋಜನೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.
ಶನಿವಾರ ಮಂಗಳೂರು ನಗರದ ಉರ್ವಸ್ಟೋರ್ ಬಳಿಯಿರುವ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ನವೀಕೃತ ಕಟ್ಟಡ ‘ಸಾಹಿತ್ಯ ಸದನ’ವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿದೆ. ಹಾಗಾಗಿ ಗೃಹಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳು ನಿತ್ಯ ನಿರಂತರವಾಗಿ ಮುಂದುವರೆಯಲಿವೆ ಎಂದರು.
ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಲಾಗುವುದು. ಅಂಗನವಾಡಿ ಎನ್ನುವುದು 50 ವರ್ಷದ ಹಿಂದಿನ ಹೆಸರು. ಅವುಗಳನ್ನು ಇನ್ನು ಮುಂದೆ ಗೌರ್ನಮೆಂಟ್ ಮೊಂಟೆಸರಿ ಎಂದು ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದ ಪ್ರತಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ಸರ್ಕಾರದ ಆಶಯವಾಗಿದೆ. ಮನೆಗೆಲಸ ಮಾಡುವ ಪೋಷಕರ ಜತೆಗೆ ಐಎಎಸ್ ಅಧಿಕಾರಿಗಳಿಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಆಕಾಂಕ್ಷೆ ಇರುತ್ತದೆ. ಹಾಗಾಗಿ, ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ ನೀಡುವುದರೊಂದಿಗೆ ಅಂಗನವಾಡಿಗಳನ್ನು ಗೌರ್ನಮೆಂಟ್ ಮೊಂಟೆಸರಿಗಳಾಗಿ ಪರಿವರ್ತಿಸಲಾಗುವುದು ಎಂದರು.
ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ದಕ್ಷಿಣ ಕನ್ನಡದ ಜಿಲ್ಲೆಗೆ 10 ಸರಕಾರಿ ಮೊಂಟೆಸರಿಗಳು ಸೇರಿದಂತೆ 25 ಅಂಗನವಾಡಿ ಕೇಂದ್ರಗಳನ್ನು ಈ ವರ್ಷವೇ ನೀಡಲಾಗುವುದು. ಈ ಅಂಗನವಾಡಿ ಕೇಂದ್ರಗಳಿಗೆ ತಲಾ 20 ಲಕ್ಷ ರೂಪಾಯಿ ಅನುದಾನ ದೊರಕಿಸಲಾಗುವುದು ಎಂದರು.
ಸಮಾರಂಭದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು. ಸಂಘದ ಅಧ್ಯಕ್ಷರಾದ ಜ್ಯೋತಿ ಚೇಳ್ಯಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ಮಾಜಿ ಸಂಸದೀಯ ಕಾರ್ಯದರ್ಶಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ, ಎಂಆರ್ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ಮೀನಾಕ್ಷಿ, ಕಾರ್ಪೊರೇಟರ್ ಗಣೇಶ್ ಕುಲಾಲ್, ಪ್ರಾಧ್ಯಾಪಕಿ ಡಾ. ಸಬಿತಾ ಬನ್ನಾಡಿ, ಹಿರಿಯ ಲೇಖಕಿ ಇಂದಿರಾ ಹಾಲಂಬಿ ಸೇರಿದಂತೆ ಕರಾವಳಿಯ ಲೇಖಕರು, ವಾಚಿಕೆಯರು ಉಪಸ್ಥಿತರಿದ್ದರು.
ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಹಿಳಾ ಲೇಖಕಿಯರ ಜೊತೆ ವಾಚಕಿಯರನ್ನು ಸೇರಿಸಿಕೊಂಡು ಸಂಘವನ್ನು ಮುನ್ನಡೆಸುತ್ತಿರುವುದನ್ನು ಕಂಡು ವಿಶೇಷ ಎನಿಸುತ್ತದೆ ಎಂದರು.
ಕರಾವಳಿ ಲೇಖಕಿಯರ – ವಾಚಕಿಯರ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಸಂತಸದ ವಿಷಯ. ಹಾಗೆಯೇ ಈ ಸಂಘಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೊಡ ಮಾಡುವ ರಾಜ್ಯ ಪ್ರಶಸ್ತಿಯನ್ನು ನೀಡುವುದಾಗಿ ಇದೇ ವೇಳೆ ಸಚಿವರು ಘೋಷಿಸಿದರು.
ಮಹಿಳೆ ಎಂದರೆ ಸಂಘರ್ಷ. ಮಹಿಳೆಯರು ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡುವುದು ಸ್ವಾತಂತ್ರ ಬಂದು 76 ವರ್ಷಗಳ ನಂತರವೂ ಮುಂದುವರಿದಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು
ಸಮಾಜದಲ್ಲಿ ಇಂದು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಬಾಲಗರ್ಭಿಣಿ, ದೌರ್ಜನ್ಯ ಹೀಗೆ ನಿರಂತರ ಶೋಷಣೆ ನಡೆಯುವುದನ್ನು ಕಾಣುತ್ತಿದ್ದೇವೆ. ಆದರೂ, ಮಹಿಳೆ ಮಾನಸಿಕ ಸದೃಢತೆ ಹೊಂದಿರುವವಳು. ಇದರಿಂದಾಗಿಯೇ ಒಲಿಂಪಿಕ್ಸ್ ಕ್ರೀಡೆ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ಮುಂದೆ ಇದ್ದಾಳೆ. ಹೀಗಿದ್ದರೂ ರಾಜಕೀಯದಲ್ಲಿ ಮಹಿಳೆಯರ ಹಾಜರಾತಿಗೆ ಇನ್ನೂ ಒತ್ತು ನೀಡಬೇಕಾದ ಪ್ರಸಂಗ ಸಮಾಜದಲ್ಲಿದೆ. ಆ ನಿಟ್ಟಿನಲ್ಲಿ ಕರಾವಳಿ ಲೇಖಕಿಯರ ಮತ್ತು ರಾಜಕೀಯ ಸಂಘದಂತಹ ಮಹಿಳಾಪರ ಸಂಘ-ಸಂಸ್ಥೆಗಳ ಕಾರ್ಯಾಚರಣೆಗಳು ಪೂರಕವಾಗಿವೆ ಎಂದು ಸಚಿವರು ಹೇಳಿದರು.
ಮಂಗಳೂರು : ಪುತ್ತೂರು ಶಾಸಕ ಅಶೋಕ್ ರೈ ಮಾತಿನಿಂದ ನೊಂದು ಪುಡಾ (ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ) ಅಧ್ಯಕ್ಷ ಸ್ಥಾನಕ್ಕೆ ಕೆ. ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಜೂ.11 ರಂದು ಬೆಂಗಳೂರಿನಿಂದ ಶಾಸಕರು ಕರೆ ಮಾಡಿ, ಪುಡಾ (ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ) ಸತ್ತಿದೆ. ನಿಮ್ಮ ಕಾರ್ಯವೈಖರಿ ಬಗ್ಗೆ ಜನ ಮಾತನಾಡಲು ಶುರು ಮಾಡುತ್ತಾರೆ ಎಂದರು. ನಾನು ಪುಡಾ ಅಧ್ಯಕ್ಷನಾಗಿ ಪದಗ್ರಹಣ ಮಾಡಿದಾಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಯಿತು. ಅದು ಜೂ.6 ರವರೆಗೆ ಇತ್ತು. ಬಳಿಕ ಸಿಕ್ಕ 22 ದಿನದಲ್ಲಿ ಕಟ್ ಕನ್ವರ್ಷನ್ ಹಾಗೂ ಶ್ರೀ ಮಹಾಲಿಂಗೇಶ್ವರ ದೇಗುಲದ ಬಿಲ್ ಮಂಜೂರು ಮಾಡುವ ಕಾರ್ಯವನ್ನು ಮಾಡಿದ್ದೇನೆ ಎಂದು ತಿಳಿಸಿದರು.
ನನ್ನನ್ನು ಯಾವುದೇ ಶಿಫಾರಸು ಇಲ್ಲದೇ ಶಾಸಕರು ಆಯ್ಕೆ ಮಾಡಿದ್ದು, ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ನೀಡುವುದು ಸೂಕ್ತ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಉಡುಪಿ : ಅಯೋಧ್ಯೆಯ ಶ್ರೀ ರಾಮಮಂದಿರದ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಗುರುವಾರ ಅಯೋಧ್ಯೆಯಲ್ಲಿ 25 ಬ್ರಾಹ್ಮಣ ಬಾಲಕರಿಗೆ ಸಾಮೂಹಿಕ ಬ್ರಹ್ಮೋಪದೇಶ ನೆರವೇರಿತು.
ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಕಡುಬಡತನದಲ್ಲಿರುವ ಕುಟುಂಬಗಳ 80ಕ್ಕೂ ಅಧಿಕ ಬ್ರಾಹ್ಮಣ ಬಾಲಕರನ್ನು ಶ್ರೀಪಾದರು ಆರೇಳು ವರ್ಷಗಳಿಂದ ಹೊಸದಿಲ್ಲಿಯಲ್ಲಿರುವ ಶ್ರೀಮಠದ ಶಾಖೆಗೆ ಕರೆತಂದು ಅಲ್ಲಿನ ಶ್ರೀ ವೇದವ್ಯಾಸ ಗುರುಕುಲದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಾ ಅವರ ಯೋಗಕ್ಷೇಮವನ್ನು ಮಠದ ವತಿಯಿಂದಲೇ ನಿರ್ವಹಿಸುತ್ತಿದ್ದಾರೆ.
ಆ ಪೈಕಿ 25 ಬಾಲಕರಿಗೆ ಅಯೋಧ್ಯೆಯ ಶ್ರೀ ರಾಮನ ಕ್ಷೇತ್ರದಲ್ಲಿ ವಿಧ್ಯುಕ್ತವಾಗಿ ಉಪನಯನ ವಿಧಿಗಳನ್ನು ನೆರವೇರಿಸಿದರು. ಜಾನಕೀ ಘಾಟ್ ಬಳಿ ಇರುವ ಶ್ರೀ ರಾಮವಲ್ಲಭ ಕುಂಜ ಎಂಬ ಭವನದಲ್ಲಿ ಉಪನಯನ ನಡೆಯಿತು. ಎಲ್ಲ ವಟುಗಳಿಗೆ ಮಧುಪರ್ಕ ಸಾಹಿತ್ಯ, ವಸ್ತ್ರ, ಮಕ್ಕಳ ಪಾಲಕರಿಗೆ ವಸ್ತ್ರ ಹಾಗೂ ಊಟೋಪಹಾರ ಸಹಿತ ಎಲ್ಲ ವೆಚ್ಚಗಳನ್ನೂ ಮಠದಿಂದಲೇ ಭರಿಸಲಾಯಿತು.
ಶ್ರೀಪಾದರು ಎಲ್ಲ ವಟುಗಳಿಗೂ ಕೃಷ್ಣಮಂತ್ರೋಪದೇಶ ನೀಡಿ ಬ್ರಾಹ್ಮಣ್ಯದ ಕರ್ತವ್ಯಗಳನ್ನು ಜೀವನ ಪರ್ಯಂತ ಪಾಲಿಸುವಂತೆ ಸಂದೇಶ ನೀಡಿದರು.
ಬೈಂದೂರು : ಬೈಂದೂರು ತಾಲ್ಲೂಕಿನ ಯಡಮೊಗೆ ಹಾಗೂ ತೊಂಬಟ್ಟುವಿನಲ್ಲಿ ಕಾಲುಸಂಕವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಇಂದು ಉದ್ಘಾಟಿಸಿದರು.
ಸಮೃದ್ಧ ಬೈಂದೂರು ಪರಿಕಲ್ಪನೆಯಲ್ಲಿ ಬೆಂಗಳೂರಿನ ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಯಡಮೊಗೆಯ ರಾಂಪಯ್ಯಜಡ್ಡು ಹಾಗೂ ಕುಮ್ಟಿಬೇರು ಸಂಪರ್ಕಿಸುವ ಮತ್ತು ತೊಂಬಟ್ಟುವಿನ ಕಬ್ಬಿನಾಲೆ – ಗುಡ್ಡಿಮನೆ ಸಂಪರ್ಕಿಸುವಲ್ಲಿ ಅತ್ಯಾಧುನಿಕ ಮಾದರಿಯ ಮತ್ತು ಹಳೆಯ ಬಸ್, ಲಾರಿಗಳ ಚಾಸಿಸಿ ಬಳಸಿ ನಿರ್ಮಾಣಗೊಂಡ ಕಾಲುಸಂಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕರು ಗ್ರಾಮೀಣ ಜನರ ಅನೇಕ ದಶಕಗಳ ಕನಸನ್ನು ನನಸು ಮಾಡಿರುವುದರ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.
ಸರ್ಕಾರಿ ವ್ಯವಸ್ಥೆಯ ಮೂಲಕ ಕಾಲು ಸಂಕ ನಿರ್ಮಿಸಲು ಅಸಾಧ್ಯ ಎನ್ನುವುದು ನಮ್ಮ ಗಮನದಲ್ಲಿತ್ತು. ಆದರೆ ಹಾಗೆಯೇ ಬಿಟ್ಟರೆ ನಮ್ಮ ಜನರ ಸಮಸ್ಯೆಯೂ ಬಗೆಹರಿಯುವುದಿಲ್ಲ ಎನ್ನುವುದೂ ಕೂಡಾ ಅರಿವಿತ್ತು. ಇದಕ್ಕಾಗಿ ನಾನು ಮತ್ತು ಅನುದೀಪ್ ಹೆಗ್ಡೆ ಅವರು ಸೇತುವೆಯ ರೀತಿಯಲ್ಲಿ ದಾನಿಗಳನ್ನು ಜೋಡಿಸುವ ಕೆಲಸ ಮಾಡಿದ್ದೇವೆ ಅಷ್ಟೇ, ಉಳಿದೆಲ್ಲವೂ ಕೂಡಾ ದೇವರು ದಾನಿಗಳ ಮೂಲಕ ಮಾಡಿಸಿದ್ದಾರೆ. ದೂರದ ಬೆಂಗಳೂರಿನಲ್ಲಿ ಕುಳಿತು ಅರುಣಾಚಲಮ್ ಟ್ರಸ್ಟ್ ನಮ್ಮ ಬೈಂದೂರಿನ ಕ್ಷೇತ್ರದ ಗ್ರಾಮೀಣ ಭಾಗದ ಬಗ್ಗೆ ಯೋಚಿಸುತ್ತದೆ ಎಂದರೆ ಅಂತಹ ಸಂಸ್ಥೆಗೆ ನಾವು ಎಷ್ಟು ಚಿರಋಣಿಗಳಾಗಿದ್ದರೂ ಸಾಲದು ಎಂದು ಅಭಿಪ್ರಾಯಿಸಿ ಟ್ರಸ್ಟ್ ಸಹಕಾರ ಮತ್ತು ಸ್ಥಳೀಯ ಜನರ ಶ್ರಮದಿಂದ ಇಂದು ಸುಸಜ್ಜಿತ ಕಾಲು ಸಂಕ ನಿರ್ಮಾಣಗೊಂಡಿದೆ. ಅರುಣಾಚಲಂ ಟ್ರಸ್ಟ್ ಮುಖ್ಯಸ್ಥರಿಗೆ, ಪದಾಧಿಕಾರಿಗಳಿಗೆ ಹಾಗೂ ಸ್ಥಳೀಯರಿಗೆ ಧನ್ಯವಾದ ಸಲ್ಲಿಸಿದರು.
ಸಮಾರಂಭದ ಮುಖ್ಯ ಉಪಸ್ಥಿತಿ ವಹಿಸಿದ್ದ ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿಗಳು ಹಾಗೂ ದಾನಿಗಳಾದ ಡಾ. ಆರ್. ಅರುಣಾಚಲಮ್ ಅವರ ಸುಪುತ್ರರಾದ ಡಾ. ರಮೇಶ್ ಅರುಣ್ ಅವರು ಮಾತನಾಡಿ ಬೈಂದೂರಿಗೆ ಕಾಲು ಸಂಕಗಳ ಅನಿವಾರ್ಯತೆಯನ್ನು ಶಾಸಕರು ತಿಳಿಸಿದಾಗ ಜನರ ಪರಿಸ್ಥಿತಿ ನೆನೆದು ದುಃಖವಾಗಿತ್ತು. ಕೂಡಲೇ ತಂದೆಯ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಅರಿತುಕೊಂಡು ಕಾಲುಸಂಕ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದ್ದೆವು. ಅದರಂತೆ ಇಂದು ಕಾಲುಸಂಕ ನಿರ್ಮಾಣಗೊಂಡಿದೆ. ಸಮಾಜಕಾರ್ಯ ಮಾಡಬೇಕೆಂದಾಗ ಅದಕ್ಕೆ ನಮ್ಮಲ್ಲಿನ ಬದ್ಧತೆಯ ಜೊತೆಗೆ ಸ್ಥಳೀಯರ ಇಚ್ಚಾ ಶಕ್ತಿಯು ಮುಖ್ಯವಾಗುತ್ತದೆ. ಬೈಂದೂರಿನಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರ ಇಚ್ಛಾಶಕ್ತಿ, ಬದ್ಧತೆ, ತೊಡಗಿಸಿಕೊಳ್ಳುವಿಕೆ ಅಭೂತಪೂರ್ವವಾಗಿತ್ತು. ಅದರ ಫಲವಾಗಿ ಇಂದು ಕಾಲುಸಂಕ ನಿರ್ಮಾಣಗೊಂಡಿದೆ. ಗ್ರಾಮೀಣ ಜನರ ಸೇವೆ ಮಾಡುವಂತಹ ಅವಕಾಶ ಕಲ್ಪಿಸಿದ ಗಂಟಿಹೊಳೆ ಹಾಗೂ ಅವರ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಕಾಲುಸಂಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿಗಳಾದ ಡಾ. ರಮೇಶ್ ಅರುಣ್, ಬೆಂಗಳೂರು ಟ್ರಿಪ್ ನಿರ್ವಿಘ್ನ ಮಾರ್ಕೆಟಿಂಗ್ ಇದರ ಮುಖ್ಯಸ್ಥರಾದ ಶ್ರೀ ಅನುದೀಪ್ ಹೆಗ್ಡೆ, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ (ರಿ), ಬೈಂದೂರು ಅಧ್ಯಕ್ಷರು ಶ್ರೀ ಬಿ.ಎಸ್. ಸುರೇಶ್ ಶೆಟ್ಟಿ, ಯಡಮೊಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಾಣೇಶ್ ಯಡಿಯಾಲ್, ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಗಾಣಿಗ, ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಇದರ ಆಡಳಿತ ಮೊಕ್ತೆಸರರಾದ ಶ್ರೀ ಸಚ್ಚಿದಾನಂದ ಚಾತ್ರ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ಮಾಜಿ ಅಧ್ಯಕ್ಷರಾದ ಟಿ. ಚಂದ್ರಶೇಖರ ಶೆಟ್ಟಿ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ಉಪಾಧ್ಯಕ್ಷರಾದ ಶೇಖರ ಪೂಜಾರಿ, ಅಮಾಸೆಬೈಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಲಕ್ಷ್ಮಿ ಶೆಟ್ಟಿ, ಶ್ರೀ ಮಹಾಗಣಪತಿ ದೇವಸ್ಥಾನ ತೊಂಬಟ್ಟು ಧರ್ಮದರ್ಶಿಗಳು ಮತ್ತು ಆಡಳಿತ ಮೊಕ್ತೇಸರರಾದ ಸತ್ಯನಾರಾಯಣ ಉಡುಪ ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಉಡುಪಿ : ಟೀಮ್ ನೇಷನ್ ಫಸ್ಟ್(ರಿ) ತಂಡವು ಪ್ರತಿ ವರ್ಷದಂತೆ ಈ ವರ್ಷವೂ “ಚಿಣ್ಣರ ನಟ್ಟಿ” ಕಾರ್ಯಕ್ರಮವನ್ನು ಈ ಭಾನುವಾರದಂದು ಕಿದಿಯೂರಿನ ಹೊಸ ವಾಟರ್ ಟ್ಯಾಂಕ್ನ ಬಳಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ಸೂರಜ್ ಕಿದಿಯೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ 200-250 ವಿದ್ಯಾರ್ಥಿಗಳು ಪಾಲುಗೊಳ್ಳರಿದ್ದಾರೆ. ಬೆಳಿಗ್ಗೆ 7:30ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರ ಪಾಲುಗೊಳ್ಳುವಿಕೆಗೂ ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಚಿಣ್ಣರ ನಟ್ಟಿ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಪಾಲ್ಗೊಂಡು ನಮ್ಮನ್ನು ಪ್ರಶಂಸಿಸಿ ಹರಸಿದ್ದರು ಎಂದು ನೆನಸಿಕೊಂಡರು.
ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತದ ನಾಟಿ ಮಾಡುವ ಅವಕಾಶ ಹಾಗು ಸಮಾಜದಲ್ಲಿ ಕೃಷಿಯ ಪ್ರಾಮುಖ್ಯತೆಯ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸೂರಜ್ ಕಿದಿಯೂರ್ – 7353308181 ಇವರನ್ನು ಸಂಪರ್ಕಿಸಬಹುದು.
ಮಗಳ ಖಾಸಗಿ ವೀಡಿಯೊಗಳನ್ನು ವೈರಲ್ ಮಾಡಿದ ತಂದೆ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ
ಪಡುಬಿದ್ರಿ : ತನ್ನ ಸ್ವಂತ ಮಗಳ ಖಾಸಗಿ ವಿಡಿಯೋಗಳನ್ನು ತಂದೆಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಇದರಿಂದ ಮನನೊಂದ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಂದೆ ಆಸೀಫ್ ಯಾನೆ ಆಸೀಫ್ ಆಪದ್ಭಾಂದವನ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆಪದ್ಬಾಂಧವ ಆಸಿಫ್ ಎಂದೇ ಗುರುತಿಸಿಕೊಂಡಿರುವ ಪಡುಬಿದ್ರಿ ಸಮೀಪದ ಕಂಚಿನಟ್ಕ ನಿವಾಸಿ ಆಸಿಫ್ ಆರೋಪಿ. ಮಗಳ ವೀಡಿಯೊಗಳನ್ನು ವಾಟ್ಸಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿರುವುದಕ್ಕೆ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಆಸಿಫ್ ಪುತ್ರಿ ತೀರ್ಥಹಳ್ಳಿಯ ಸಂಬಂಧಿಕನೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ಇದು ಆಸಿಫ್ಗೆ ಇಷ್ಟವಿರಲಿಲ್ಲ.
ಈ ಹಿನ್ನಲೆ ಯುವಕನನ್ನು ಮನೆಗೆ ಕರೆಸಿ ಹಲ್ಲೆ ಮಾಡಿದ್ದಲ್ಲದೆ ಇಬ್ಬರ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವೀಡಿಯೊ ಮತ್ತು ಫೋಟೊಗಳನ್ನು ತನ್ನ ಮೊಬೈಲ್ಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಅವುಗಳನ್ನು ವಾಟ್ಸಪ್ ಗ್ರೂಪ್ಗಳು ಸೇರಿ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಕ್ಕೆ ಪತ್ನಿ ಆಕ್ಷೇಪಿಸಿದ್ದು, ಆಕೆಗೆ ಮತ್ತು ಪುತ್ರಿಗೆ ಹಲ್ಲೆಯನ್ನೂ ಮಾಡಿದ್ದಾನೆ. ಈ ಕುರಿತಾಗಿ ಪತ್ನಿಯು ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪತ್ನಿಯು ಉಚ್ಚಿಲದ ತನ್ನ ತಾಯಿ ಮನೆಯಲ್ಲಿದ್ದಾಗ ಅಲ್ಲಿಗೂ ಹೋಗಿ ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕನಕದಾಸ ಅಧ್ಯಯನ, ಸಂಶೋಧನಾ ಕೇಂದ್ರದ ಸದಸ್ಯರಾಗಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ನೇಮಕ
ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯರನ್ನಾಗಿ ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರನ್ನು ಸರ್ಕಾರವು ನೇಮಕ ಮಾಡಿ ಆದೇಶ ಹೊರಡಿಸಿದೆ.
ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಸಾಹಿತ್ಯದ ಕಾವ್ಯ, ಕತೆ, ನಾಟಕ, ವಿಮರ್ಶೆ, ಅಂಕಣ ಬರಹ, ಅನುವಾದ, ಸಂಶೋಧನೆ ಮಂತಾದ ಪ್ರಕಾರಗಳಲ್ಲಿ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕಾಯಕಾವ್ಯ, ಅವನು ಹೆಣ್ಣಾಗಬೇಕು, ನಕ್ಷತ್ರ ನಕ್ಕ ರಾತ್ರಿ, ಮುಂತಾದ ಕವನ ಸಂಗ್ರಹಗಳು, ತೊಗಲು ಗೊಂಬೆ ಕಾದಂಬರಿ, ಇರವಿನ ಅರಿವು, ಮೊಗ್ಗಿನ ಮಾತು, ಮುಂತಾದವು ಇವರ ಕೆಲವು ಕೃತಿಗಳು.
ಕನಕದಾಸರ ಕೀರ್ತನೆಗಳನ್ನು ಮತ್ತು ವಚನಗಳನ್ನು ತುಳುವಿಗೆ ಅನುವಾದ ಮಾಡಿರುವ ಇವರು ಕನಕನ ಕೃತಿಗಳನ್ನು ಆಧರಿಸಿ ನಾಟಕಗಳನ್ನು ಬರೆದಿದ್ದಾರೆ. ರಾಮಧಾನ್ಯ ಚರಿತೆಯನ್ನು ತುಳುವಿಗೆ ಅನುವಾದ ಮಾಡಿ ಮೂಲದೊಂದಿಗೆ ಪ್ರಕಟಿಸಿದ್ದಾರೆ. ಇದಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರವು ‘ಕನಕ ಯುವ ಪ್ರಶಸ್ತಿ’ಯನ್ನು ನೀಡಿದೆ.
ಸಾಹಿತ್ಯ ಸಂಸ್ಕೃತಿಗೆ ಇವರು ಕೊಟ್ಟಿರುವ ಕೊಡುಗೆಯನ್ನು ಗಮನಿಸಿ ಸರ್ಕಾರ, ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಬಹುಮಾನ ನೀಡಿ ಗೌರವಿಸಿವೆ. ಪ್ರಸ್ತುತ ಅವರು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಕ್ರೀಡಾ ತಾರೆ ಹೆಬ್ರಿ ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನ
ಹೆಬ್ರಿ : ಕ್ರೀಡಾ ತಾರೆಯಾಗಿರುವ ಹೆಬ್ರಿ ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಅವರನ್ನು ಉಡುಪಿ ಜಿಲ್ಲಾಡಳಿತದ ವತಿಯಿಂದ ಕಂದಾಯ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು.
ಉಡುಪಿಯಲ್ಲಿ ನಡೆದ 2023-24ನೇ ಸಾಲಿನ ಜಿಲ್ಲಾ ಮಟ್ಟದ 2೦೦ ಮೀಟರ್ ಹರ್ಡಲ್ಸ್ನಲ್ಲಿ ಪ್ರಥಮ, 100 ಮೀಟರ್ ಹರ್ಡಲ್ಸ್ ಪ್ರಥಮ, ಹೈಜಂಪ್ನಲ್ಲಿ ದ್ವೀತಿಯ ಪ್ರಶಸ್ತಿ, ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ 11೦ ಮೀಟರ್ ಹರ್ಡಲ್ಸ್ನಲ್ಲಿ ಪ್ರಥಮ ಪ್ರಶಸ್ತಿ ಪಡೆದ ಚಂಡೀಗಢದಲ್ಲಿ ನಡೆದ ರಾಷ್ಟ್ರಮಟ್ಟದ 1೦೦ ಮೀಟರ್ ಹರ್ಡಲ್ಸ್ನಲ್ಲಿ 5 ಸ್ಥಾನ ಪಡೆದಿದ್ದಾರೆ.
ಗ್ರಾಮೀಣ ಪ್ರತಿಭೆಯಾಗಿರುವ ನವೀನ್ ಕುಮಾರ್ ಸೇವೆಯಲ್ಲಿ ಜನಮೆಚ್ಚುಗೆ ಪಡೆದು ನಿಷ್ಠಾವಂತ ಅಧಿಕಾರಿಯಾಗಿದ್ದಾರೆ. ಕಂದಾಯ ಇಲಾಖೆಯ ಜೊತೆಗೆ ನಾಡಿಗೆ ಕೀರ್ತಿ ತಂದಿದ್ದಾರೆ. ರಾಷ್ಟ್ರ ಮಟ್ಟದ ಸಿವಿಲ್ ಸರ್ವಿಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ವೈಯಕ್ತಿಕ ಸಾಧನೆ ಮಾಡಿದ್ದಾರೆ. ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸತತ 4 ವರ್ಷಗಳಿಂದ ವೈಯಕ್ತಿಕ ಚಾಂಪಿಯನ್ ಶಿಪ್ ಸಾಧನೆ ಮಾಡುತ್ತಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಸನ್ಮಾನಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿಎಸ್, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ, ಹೆಬ್ರಿ ತಹಶೀಲ್ಧಾರ್ ಪ್ರಸಾದ್ ಎಸ್ಎ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.