ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಭೇಟಿ ನೀಡಿ ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಶ್ರೀಪಾದರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಮಲ್ಪೆ : ಉಡುಪಿಯ ಇತಿಹಾಸ ಪ್ರಸಿದ್ದ ಮಲ್ಪೆ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನಕ್ಕೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ ವಿಜಯೆಂದ್ರ ಭೇಟಿ ನೀಡಿ ದೇವರ ದರ್ಶನ ಪಡೆದು, ದೇವಾಲಯದ ಸಮಗ್ರ ಜೀರ್ಣೋದ್ಧಾರವನ್ನು ನೋಡಿ ಪ್ರಶಂಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಹರೀಶ್ ಪೂಂಜ ಹಾಗೂ ಮಂಗಳೂರು ಎಂ.ಪಿ. ಕ್ಯಾ. ಬ್ರಿಜೇಶ್ ಚೌಟ ಹಾಗೂ ದೇವಾಲಯದ ಟಿ. ಶ್ರೀನಿವಾಸ ಭಟ್, ಶ್ರೀಶ ಆಚಾರ್ಯ ಕಡೇಕಾರ್, ನಾಗರಾಜ ಮೂಲಿಗಾರ್, ಶಶಿಧರ್ ಅಮೀನ್, ಶರತ್ ಬೈಲಕೆರೆ, ಈಶ್ವರ್ ಜಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಬಸ್ರೂರು : ಶ್ರೀ ಶಾರದಾ ಕಾಲೇಜು ಇಲ್ಲಿನ ಮಾದಕ ದ್ರವ್ಯ ವಿರೋಧಿ ಘಟಕ ಹಾಗೂ ಐಕ್ಯೂಎಸಿ ಇದರ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಮಾದಕ ದ್ರವ್ಯ ವಿರೋಧಿ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಡ್ಲೂರು ಗ್ರಾಮಾಂತರ ಪೋಲಿಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀ ಭೀಮಾ ಶಂಕರ್ ಸಿನ್ನೂರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಆಪಘಾತ, ಪ್ರಾಣಹಾನಿ ಸಂಭವಗಳು ಕಡಿಮೆ ಮಾಡಲು ಸಾಧ್ಯ ಎಂದರು.
ಮಾದಕ ದ್ರವ್ಯ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು, ಕಾನೂನಿನಲ್ಲಿ ಇರುವ ಶಿಕ್ಷೆ ಮತ್ತು ಸೈಬರ್ ಕೇಸ್ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಚಂದ್ರಾವತಿ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಡಾ ರವಿಚಂದ್ರ, ಐಕ್ಯೂಎಸಿ ಸಂಯೋಜಕರಾದ ಶ್ರೀ ಸಂದೀಪ್ ಕೆ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ರಾಘವೇಂದ್ರ ಶೆಟ್ಟಿ ಎಸ್ ನಿರೂಪಿಸಿ, ಶ್ರೀ ದೀಪಕ್ ಕುಮಾರ್ ವಂದಿಸಿದರು.
ಮಂಗಳೂರು : ಸ್ಟೇಟ್ಬ್ಯಾಂಕ್ ಬಳಿ ಇರುವ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಖಾಸಗಿ ಬಸ್ ನಿರ್ವಾಹಕರೊಬ್ಬರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮೃತ ದುರ್ದೈವಿಯನ್ನು ಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ನಲ್ಲಿ ನಿರ್ವಾಹಕರಾಗಿದ್ದ ರಾಜೇಶ್ (30) ಎಂದು ಗುರುತಿಸಲಾಗಿದೆ.
ಯಾವುದೋ ವಿಚಾರಕ್ಕೆ ಗಲಾಟೆಯಾಗಿ ಅಥವಾ ಲೂಟಿ ಮಾಡುವ ಸಂದರ್ಭ ಪ್ರತಿರೋಧ ಒಡ್ಡಿರುವುದಕ್ಕೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಕುರಿತು ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲ್ಪೆ : ಕಳೆದ ನಾಲ್ಕೈದು ವರ್ಷಗಳಿಂದ ಹೋಂಸ್ಟೇ ರೆಸಾರ್ಟ್ಗಳಿಂದ, ಅದರಿಂದ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಂದ, ಊರಿನ ಪರಂಪರೆಗೆ, ಭಜನಾ ಮಂದಿರಗಳ ಪಾವಿತ್ರ್ಯತೆಗೆ ಸತತ ಧಕ್ಕೆಯಾಗುತ್ತಿರುವುದನ್ನು ಕಂಡು ಕಳೆದ ನಾಲ್ಕೈದು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟೂ ಸುಸ್ತಾದ ಊರಿನ ನಾಗರಿಕರು ಮುಂದಿನ ಪ್ರಬಲ ಹೋರಾಟಕ್ಕೆ ಪೂರ್ವಭಾವಿಯಾಗಿ ಸರ್ವಸಂಸ್ಥೆಯ ನೇತೃತ್ವದಲ್ಲಿ ಬೃಹತ್ ಸಭೆಯನ್ನು ಆಯೋಜಿಸಿದ್ದರು.
ಸಭೆಯಲ್ಲಿ ಮಲ್ಪೆ ಪಡುಕರೆಯಿಂದ ಕಾಪು ತನಕದ ಎಲ್ಲಾ ಭಜನಾ ಮಂದಿರಗಳ ಸಹಿತವಾಗಿ ಒಟ್ಟು 35 ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾತೃಮಂಡಳಿಗಳ ಸದಸ್ಯರು ಹಾಗೂ ಊರ ನಾಗರಿಕರು ಸೇರಿದ್ದರು. ಎಲ್ಲಾ ಭಜನಾಮಂದಿರಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
“ಅನಾದಿ ಕಾಲದಿಂದ ಮೀನುಗಾರಿಕೆಯನ್ನೇ ನಂಬಿ ಭಜನಾಮಂದಿರಗಳ ನೆಲೆಯಲ್ಲಿ ಬದುಕು ಕಟ್ಟಿಕೊಂಡಿರುವ ಅಪೂರ್ವ ಸಂಸ್ಕೃತಿಯ ಊರು ನಮ್ಮದು. ಇತ್ತೀಚಿನ ಕೆಲವರ್ಷಗಳಿಂದ ಹೋಂಸ್ಟೇ ರೆಸಾರ್ಟ್’ಗಳಿಗೆ ಬರುವ ಪ್ರವಾಸಿಗರಿಂದಾಗಿ ನಮ್ಮ ಪರಂಪರೆಗೆ ಅಪಾರವಾದ ಹಾನಿಯಾಗಿದೆ. ಇನ್ನೂ ನಾವು ಸುಮ್ಮನೆ ಕುಳಿತರೆ ಕೇರಳದ ವಯನಾಡಿನಂತೆ ಊರು ಸರ್ವನಾಶವಾಗುವುದು ಖಂಡಿತ. ಕೊನೆಯ ಎಚ್ಚರಿಕೆಯ ಪ್ರತೀಕವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಎಲ್ಲಾ ಮಂದಿರಗಳೂ ಸೇರಿ ಮನವಿಯನ್ನು ನೀಡೋಣ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗದೇ ಹೋದರೆ ನಾವು ಬೃಹತ್ ಪ್ರತಿಭಟನೆಗೆ ಸಿದ್ಧರಾಗೋಣ. ಸಾವಿರಾರು ಕೋಟಿ ರೂಪಾಯಿಗಳ ಮರಿನಾದಂತಹ ಬೃಹತ್ ಯೋಜನೆಯನ್ನೇ ಓಡಿಸಿದವರಿಗೆ ಇದು ಅಸಾಧ್ಯದ ಸಂಗತಿಯಲ್ಲ” ಎಂದು ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ಮಂಡನೆಯಾಯಿತು.
ಕುಂದಾಪುರ : ನಗರದ ಶ್ರೀ ನಾರಾಯಣ ಗುರು ಯುವಕ ಮಂಡಲದ ಆಶ್ರಯದಲ್ಲಿ ನಡೆದ 47ನೇ ವರ್ಷದ ನವರಾತ್ರಿ ಮಹೋತ್ಸವದ ಸಮಾರಂಭದಲ್ಲಿ ಕುಂದಾಪುರ ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ವನಿತಾ ಬಿಲ್ಲವ ಇವರನ್ನು ಯುವಕ ಮಂಡಲ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ, ಪ್ರಧಾನ ಕಾರ್ಯದರ್ಶಿಗಳಾದ ವಿಠಲವಾಡಿ ಗಣೇಶ್ ಪೂಜಾರಿ, ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷರಾದ ಸಂದೇಶ ಪೂಜಾರಿ ಕಾರ್ಯದರ್ಶಿಗಳಾದ ರಮೇಶ್ ಪೂಜಾರಿ, ಮದ್ದುಗುಡ್ಡೆ ಬಿಲ್ಲವ ಮಹಿಳಾ ಮಂಡಳಿಯ ಅಧ್ಯಕ್ಷರಾದ ಗಿರಿಜಾ ಮಾಣಿ ಗೋಪಾಲ್, ಯೋಗೇಶ್ ಪೂಜಾರಿ, ರಮೇಶ್ ಪೂಜಾರಿ ಮೇಲ್ ಹಿತ್ಲು, ಭಾಸ್ಕರ ಬಿಲ್ಲವ ಹೇರಿಕುದ್ರು ಹಾಗೂ ರಾಜೇಶ್ ಕಡ್ಗಿಮನೆ ಮೊದಲಾದವರು ಉಪಸ್ಥಿತರಿದ್ದರು.
ಮಲ್ಪೆ : ಕಾರ್ತಿಕ್ ಬಿಲ್ಡಿಂಗ್ ಬಳಿ, ಅನಾಥ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಮಂಗಳವಾರ ನಡೆದಿದೆ.
ಕಾರ್ಯಚರಣೆಗೆ ತಾಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಸಿಬ್ಬಂದಿಗಳು ನೆರವಿಗೆ ಬಂದಿದ್ದರು.
ರಕ್ಷಿಸಲ್ಪಟ್ಟ ವೃದ್ಧರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ದೇಹ ನಿತ್ರಾಣದಿಂದ ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣದಿಂದ ಹೆಸರು ವಿಳಾಸ ತಿಳಿದುಬಂದಿಲ್ಲ. ವೃದ್ಧರನ್ನು ಯಾರೋ ಕರೆದು ತಂದು ಬಿಟ್ಟು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಉಪ್ಪಿನಂಗಡಿ : ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು. ಈ ನಡುವೆ ರಾತ್ರಿ ವೇಳೆ ವ್ಯಕ್ತಿಯೊಬ್ಬರು ಕಳ್ಳತನಕ್ಕೆ ಹೊಂಚು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉಪ್ಪಿನಂಗಡಿ ಭಾಗದಲ್ಲಿ ಕಳೆದ ಕೆಲವು ಸಮಯದಿಂದ ಮನೆಗಳಲ್ಲಿ ಕಳ್ಳತನದ ಪ್ರಕರಣಗಳು ನಡೆದಿದ್ದವು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಆದರೆ ಕಳ್ಳನ ಪತ್ತೆ ಮಾತ್ರ ನಡೆದಿಲ್ಲ. ಈ ನಡುವೆ ಕಳ್ಳತನಕ್ಕಾಗಿ ರಾತ್ರಿ ಹೊಂಚು ಹಾಕುವ ದೃಶ್ಯ ಪೊಲೀಸರಿಗೆ ದೊರೆತಿದೆ.
ಕಡಬ ರಸ್ತೆ ಭಾಗದಲ್ಲಿ ಬರುವ ಪೆರಿಯಡ್ಕದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪೆರಿಯಡ್ಕ ಸಹಕಾರಿ ಸಂಘದ ಶಾಖಾ ಕಟ್ಟಡದ ಮುಂಭಾಗದಲ್ಲಿ ಈತ ಕಾಣಿಸಿಕೊಂಡಿದ್ದಾನೆ. ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಇದು ದಾಖಲಾಗಿದೆ. ಈ ಸಂದರ್ಭ ಸ್ಥಳೀಯ ಕೆಲ ಯುವಕರು ಈತನ ಚಲನವಲನವನ್ನು ದೂರದಿಂದ ನೋಡಿದ್ದಾರೆ. ಬಳಿಕ ಅವರು ಹತ್ತಿರ ಬರುತ್ತಿದ್ದಂತೆ ಈತ ಪರಾರಿಯಾಗಿದ್ದಾನೆ. ಕಡಬ ರಸ್ತೆಯಲ್ಲಿಯೇ ಓಡಿರುವ ಈತನನ್ನು ಬೆನ್ನಟ್ಟುವ ಕೆಲಸವೂ ಸ್ಥಳೀಯ ಯುವಕರಿಂದಾಗಿದೆ. ಆದರೆ ಈತ ಯುವಕರ ಕೈಗೆ ಸಿಕ್ಕಿಲ್ಲ. ಈ ಘಟನೆ ಕುರಿತು ಉಪ್ಪಿನಂಗಡಿ ಪೊಲೀಸರಿಗೂ ದೂರು ನೀಡಲಾಗಿದೆ. ಆದರೆ ಸಿಸಿ ಕ್ಯಾಮರಾದಲ್ಲಿ ಈತನ ಮುಖದ ಚಿತ್ರಣ ಸ್ಪಷ್ಟವಾಗಿ ಕಂಡುಬರದ ಹಿನ್ನಲೆಯಲ್ಲಿ ಕಳ್ಳನ ಪತ್ತೆಯ ಕಾರ್ಯಕ್ಕೆ ತಡೆಯಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರ ಪ್ರಕಾರ ಈತ ಬೇರೆ ಊರಿನ ವ್ಯಕ್ತಿ. ಪೂರ್ತಿಯಾಗಿ ರೈನ್ ಕೋಟ್ ಹಾಕಿರುವ ಕಾರಣ ಈತನ ಮುಖ ಸ್ಪಷ್ಟವಾಗಿ ಕಂಡುಬರಲಿಲ್ಲ. ಈತನನ್ನು ಪೆರಿಯಡ್ಕದ ಸಮೀಪದ ಓಡ್ಲ ತನಕ ಯುವಕರು ಬೆನ್ನಟ್ಟಿದ್ದು, ಕಳ್ಳ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭಿಸಿದೆ.
ಗಂಗೊಳ್ಳಿ : ಪತಿ ಹಾಗೂ ಅತ್ತೆಯ ಹಿಂಸೆ ತಾಳಲಾರದೇ ಪತ್ನಿ ಪೊಲೀಸ್ ಠಾಣಾ ಮೆಟ್ಟಿಲೇರಿದ ಘಟನೆ ಗಂಗೊಳ್ಳಿ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪತಿ ವಿಪರೀತ ಕುಡಿತದ ಚಟ ಹೊಂದಿದ್ದು, ಮದುವೆಯಾದ ಎರಡನೇ ದಿನದಿಂದಲೇ ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ನೀಡುತ್ತಿರುವುದಾಗಿ ಪತ್ನಿ, ನಾಡಾ ಗ್ರಾಮದ ಸೀಮಾ ಗಂಗೊಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
2020ರ ಡಿಸೆಂಬರ್ 28ರಂದು ರವಿ ಎಂಬಾತನ ಜೊತೆ ಸೀಮಾ ವಿವಾಹ ನೆರವೇರಿತ್ತು. ಆದರೆ ಪತಿ ಕುಡಿದು ಬಂದು ಸೀಮಾಳ ಮೇಲೆ ಹಲ್ಲೆ ನಡೆಸುವುದು, ಸರಿಯಾದ ಸಮಯಕ್ಕೆ ಊಟ ನೀಡದೆ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
2021ರ ಸೆಪ್ಟೆಂಬರ್ನಲ್ಲಿ ಸೀಮಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ತವರು ಮನೆಯಲ್ಲಿ ಬಾಣಂತನ ಮುಗಿಸಿ ಗಂಡನ ಮನೆಗೆ ವಾಪಸ್ ಹೋಗಿದ್ದು, ಈ ಸಂದರ್ಭದಲ್ಲಿ ಪತಿ ರವಿಯ ಒತ್ತಡದಿಂದ ಒಂದು ಜೊತೆ ಚಿನ್ನದ ಬೆಂಡೋಲೆಯನ್ನು ಗಂಗೊಳ್ಳಿಯ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಇಟ್ಟು 5,000 ರೂಪಾಯಿ ಗಂಡನಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಕುಂದಾಪುರದ ಸಮಸ್ಥ ಕೋ ಅಪರೇಟಿವ್ ಸೊಸೈಟಿಯಲ್ಲಿ 45,000 ಸಾವಿರ ರೂಪಾಯಿ, ಸ್ಪಂದನ ಸ್ಫೂರ್ತಿ ಕೋ ಅಪರೇಟಿವ್ ಸೊಸೈಟಿಯಿಂದ 42,000 ಸಾವಿರ ರೂಪಾಯಿ ಸಾಲ ತೆಗೆದು ಗಂಡನಿಗೆ ನೀಡಿದ್ದು, ಅದರಲ್ಲಿ 20,000 ರೂಪಾಯಿ ಸೀಮಾ ತೀರಿಸಿರುವುದಾಗಿ ತಿಳಿಸಿದ್ದಾರೆ.
ಪತಿ ರವಿ ಹಾಗೂ ಅತ್ತೆ ಅಕ್ಕಮ್ಮ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈದು, ಮನೆಯಿಂದ ಹೊರ ಹಾಕಿ ಜೀವ ಬೆದರಿಕೆ ಒಡ್ಡಿದ್ದು, ಈಗ ತಾನು ತವರು ಮನೆಗೆ ಬಂದು ವಾಸವಾಗಿರುವುದಾಗಿ ಸೀಮಾ ದೂರಿನಲ್ಲಿ ಉಲ್ಲೇಖಿಸಿದ್ದು, ಅದರಂತೆ ಆರೋಪಿಗಳ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ : ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರದ ಆಶಯದಂತೆ 2025ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ದಿಟ್ಟ ಸಂಕಲ್ಪದಲ್ಲಿ ಮಾನ್ಯ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನದ ಅಂಗವಾಗಿ ಕಾರ್ಕಳ ತಾಲೂಕಿನ ಆಯ್ದ 11 ಕ್ಷಯರೋಗಿಗಳಿಗೆ ನಿಕ್ಷಯ್ ಮಿತ್ರ ಯೋಜನೆಯ ಮೂಲಕ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ವತಿಯಿಂದ ಪೌಷ್ಟಿಕ ಆಹಾರದ ಕಿಟ್ ಅನ್ನು ವಿತರಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ ಇವರು ಪ್ರಾಸ್ತಾವಿಕ ಮಾತನಾಡಿ ಕ್ಷಯರೋಗ ಹಾಗೂ ನಿಕ್ಷಯ್ ಮಿತ್ರ ಯೋಜನೆಯ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿದರು ಹಾಗೂ ಕ್ಷಯಮುಕ್ತ ಗ್ರಾಮ ಪಂಚಾಯತ್ ಮಾಡಲು ಪೌಷ್ಟಿಕ ಆಹಾರದ ಕಿಟ್ ವಿತರಣೆ ಕೂಡ ಒಂದು ಮಾನದಂಡವಾಗಿದ್ದು ಈ ನಿಟ್ಟಿನಲ್ಲಿ ಕಾರ್ಕಳ ಟೈಗರ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶ್ರೀ ಶಿವಕುಮಾರ್ ಮಾತನಾಡಿ ಪ್ರಧಾನ ಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನದ ಮಹತ್ವ ಹಾಗೂ ಕಾರ್ಕಳ ತಾಲೂಕಿನ ಕ್ಷಯರೋಗದ ಸ್ಥಿತಿ ಗತಿಗಳ ಕುರಿತು ಮಾಹಿತಿ ನೀಡಿದರು. ಕಾರ್ಕಳ ಟೈಗರ್ಸ್ ಕೇಂದ್ರ ಬಿಂದು ಶ್ರೀ ಬೋಳ ಪ್ರಶಾಂತ್ ಕಾಮತ್ ತಂಡದ ಪರವಾಗಿ ಇವರು ಕಾರ್ಕಳ ತಾಲೂಕಿನ ಒಟ್ಟು 11 ಮಂದಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಕ್ಷಯರೋಗ ಮುಕ್ತ ಭಾರತ ಪರಿಕಲ್ಪನೆಗೆ ನಮ್ಮ ತುಂಬು ಸಹಕಾರ ಯಾವಾಗಲು ಇದೆ ಎಂದು ತಿಳಿಸಿದರು.
ಶ್ರೀಮತಿ ರಮಿತ ಶೈಲೇಂದ್ರ ಕಾರ್ಯಕ್ರಮ ನಿರೂಪಿಸಿದರು, ಪ್ರಕಾಶ್ ರಾವ್ ವಂದಿಸಿದರು, ಟೈಗರ್ಸ್ ತಂಡದ ಶೃಂಗಾರ್ ಪ್ರದೀಪ್, ರವಿ ಶೆಟ್ಟಿ, ಶ್ರೀನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಹಾಗೂ ಅರುಣ್ ಅವರು ಉಪಸ್ಥಿತರಿದ್ದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.