ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ಮಣಿಪಾಲ ಜಿ.ಎಸ್.ಎಲ್.ಆರ್ ಘಟಕದ ಟ್ಯಾಂಕನ್ನು ಸ್ವಚ್ಛಗೊಳಿಸುವ ಹಿನ್ನೆಲೆ, ನವೆಂಬರ್ 14ರಂದು ಕುಡಿಯುವ ನೀರಿನ ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
NewsDesk
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಪ್ರಕರಣ : ಶಿಲ್ಪಿ ಕೃಷ್ಣ ನಾಯ್ಕ್ ಬಂಧನವಾಗಿದೆ.. ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
ಉಡುಪಿ : ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್ನಲ್ಲಿನ ಪರಶುರಾಮ ಮೂರ್ತಿ ನಿರ್ಮಾಣದ ಹಿಂದಿನ ಅಕ್ರಮ ವಿಳಂಬವಾಗಿ ಬೆಳಕಿಗೆ ಬಂದಿದೆ.
ವಂಚನೆ ಮಾಡಿದ ಶಿಲ್ಪಿ ಕೃಷ್ಣ ನಾಯ್ಕ ಈಗಾಗಲೇ ಬಂಧನಕ್ಕೊಳಗಾಗಿದ್ದು, ಉಳಿದ ಆರೋಪಿಗಳನ್ನು ಪೊಲೀಸರು ತತ್ಕ್ಷಣವೇ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದರು.
ಪರಶುರಾಮನ ಮೂರ್ತಿಯ ಸೊಂಟದ ಮೇಲ್ಭಾಗ ಎಲ್ಲಿಗೆ ಹೋಗಿದೆ ಎಂಬ ಬಗ್ಗೆಯೂ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಹಲವರ ಕೈವಾಡವಿದ್ದು ಪೊಲೀಸರು ಎಲ್ಲರನ್ನು ವಿಚಾರಣೆಗೆ ಒಳಗಪಡಿಸಬೇಕು. ಪ್ರಕರಣವನ್ನು ಅತಿ ಶೀಘ್ರದಲ್ಲಿ ಇತ್ಯರ್ಥಪಡಿಸಿ. ಉಮಿಕಲ್ ಬೆಟ್ಟದ ಮೇಲೆ ಹೊಸ ಮೂರ್ತಿಯನ್ನು ನಿರ್ಮಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಶುರಾಮನ ಮೂರ್ತಿ ವಿಚಾರದಲ್ಲಿ ಶಿಲ್ಪಿ ಕೃಷ್ಣ ನಾಯ್ಕಗೆ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ತಪ್ಪಿಗೆ ನೇರ ಹೊಣೆಯಾಗಿರುವವರು ವಿಧಾನಸಭೆ ಸದಸ್ಯರಾಗಿದ್ದು, ಕಲಾವಿದ ಮಾತ್ರ ಜೈಲುಪಾಲಾಗಿದ್ದಾನೆ. ಮೂರ್ತಿ ನಿರ್ಮಾಣಕ್ಕೆಂದು ಮಂಜೂರಾದ 1.25 ಕೋಟಿ ರೂ.ಗಳನ್ನು ಟೆಂಡರ್ಗೂ ಮೊದಲೇ ಕೃಷ್ಣ ನಾಯ್ಕಗೆ ನೀಡಿದ್ದಾರೆ. ಕೇವಲ 45 ದಿನಗಳಲ್ಲಿ 33 ಅಡಿ ಕಂಚಿನ ಮೂರ್ತಿ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವಿಟ್ಲ ಜೋಗಿ ಮಠ ಪುನರ್ ನಿರ್ಮಾಣಕ್ಕಾಗಿ ಶ್ರೀ ಕ್ಷೇ. ಧ. ಗ್ರಾ. ಯೋ.ಯಿಂದ ಮಂಜೂರಾದ ಸಹಾಯಧನದ ಚೆಕ್ ಹಸ್ತಾಂತರ
ಬಂಟ್ವಾಳ : ತಾಲೂಕಿನ ವಿಟ್ಲ ಶ್ರೀ ಯೋಗೀಶ್ವರ ಜೋಗಿ ಮಠದ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ 2 ಲಕ್ಷ ರೂ.ನ ಸಹಾಯಧನದ ಚೆಕ್ಕನ್ನು ವಿಟ್ಲ ಶ್ರೀ ಯೋಗೀಶ್ವರ ಮಠದ ಶ್ರೀ ರಾಜಗುರು ಶ್ರದ್ಧಾನಾಥಾಜಿ ಮಠಾಧೀಶರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ರಮೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಯಶವಂತ್ ವಿಟ್ಲ, ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಗೀತಾ ಪ್ರಕಾಶ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಕೃಷ್ಣಯ್ಯ ಬಳ್ಳಾಲ್, ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ, ವಲಯ ಮೇಲ್ವಿಚಾರಕರಾಕಿ ಸರಿತಾ, ಉಪಸ್ಥಿತರಿದ್ದರು.
ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಇರುವ ಬ್ಯಾಗನ್ನು ವಾರಸುದಾರರಿಗೆ ಹಸ್ತಾoತರಿಸಿ ಪ್ರಾಮಾಣಿಕತೆ ಮೆರೆದ ಯುವಕ
ಬೈಂದೂರು : ಯುವಕನೋರ್ವ ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳಿರುವ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ನ. 11 ರಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಶಿರೂರಿನ ಯುವಕ ಅಬ್ದುಲ್ ಜಾವ್ವೆದ್ ಅವರು ನ. 11 ರಂದು ಬೆಳಿಗ್ಗೆ 6:30 ರ ಸಮಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಟ್ಕಳದಿಂದ ಶಿರೂರು ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಶಿರೂರಿನ ಕರಿಕಟ್ಟೆ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಬ್ಯಾಗೊಂದನ್ನು ಕಂಡು ಬೈಕ್ ನಿಲ್ಲಿಸಿ ಬ್ಯಾಗನ್ನು ಎತ್ತಿಕೊಂಡು ಮನೆಗೆ ಬಂದು ಪರಿಶೀಲಿಸಿದಾಗ ಅದರಲ್ಲಿ ರೂ. 2.5 ಲಕ್ಷ ಬೆಲೆಬಾಳುವ ಚಿನ್ನ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳಿರುವುದು ಕಂಡು ಬಂದಿದ್ದು ಬೇರೆ ಯಾವುದೇ ವಿಳಾಸಗಳು ಇದ್ದಿರುವುದಿಲ್ಲ. ಅಲ್ಲದೆ ಬ್ಯಾಗ್ನಲ್ಲಿ ಒಂದು ಹಾರ್ಡ್ ಡಿಸ್ಕ್ ಇರುವುದು ಕಂಡು ಬಂದಿದ್ದು ಅದನ್ನು ಪರಿಶೀಲಿಸಿದಾಗ ಒಂದು ಮೊಬೈಲ್ ನಂಬರ್ ದೊರಕಿದ್ದು ಅದರ ಆಧಾರದ ಮೇಲೆ ವಾರಸುದಾರರನ್ನು ಪತ್ತೆ ಹಚ್ಚಿ ಬ್ಯಾಗನ್ನು ಹಿಂದಿರುಗಿಸಿರುತ್ತಾರೆ.
ಕೇರಳದ ವಿನೋದ್ ಹಾಗೂ ಸ್ವಾತಿ ದಂಪತಿಗಳು ಕೊಲ್ಲೂರು ದೇವಸ್ಥಾನಕ್ಕೆ ಬೆಂಗಳೂರಿಂದ ಶಿರೂರಿಗೆ ರೈಲಿನಲ್ಲಿ ಬಂದಿದ್ದರು. ಸೋಮವಾರ ಮುಂಜಾನೆ ಶಿರೂರು ರೈಲ್ವೆ ಸ್ಟೇಷನ್ನಲ್ಲಿ ಇಳಿದು ಆಟೋ ರಿಕ್ಷಾವೊಂದರಲ್ಲಿ ಬೈಂದೂರು ಕಡೆಗೆ ಹೋಗುತ್ತಿದ್ದ ವೇಳೆ ಶಿರೂರಿನ ಕರಿಕಟ್ಟೆ ಎಂಬಲ್ಲಿ ಟ್ರಾಲಿ ಮೇಲೆ ಇರಿಸಿದ್ದ ಬ್ಯಾಗ್ ಜಾರಿ ಕೆಳಗೆ ಬಿದ್ದಿರುತ್ತದೆ.
ಅದೇ ದಾರಿಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ಶಿರೂರು ಅಬ್ದುಲ್ ಜಾವ್ವೆದ್ ಅವರಿಗೆ ಅನಾಥವಾಗಿ ಬಿದ್ದಿದ್ದ ಬ್ಯಾಗ್ನ್ನು ಕಂಡು ಅದನ್ನು ಎತ್ತಿಕೊಂಡು ಮನೆಗೆ ಹೋಗಿ ಪರಿಶೀಲಿಸಿದಾಗ ಅದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಇಲೆಕ್ಟ್ರಾನಿಕ್ ವಸ್ತುಗಳಿರುವುದು ಕಂಡು ಬಂದಿದೆ. ಅಲ್ಲದೆ ವಾರಿಸುದಾರರನ್ನು ಸಂಪರ್ಕಿಸಲು ಯಾವುದೇ ವಿಳಾಸ ಇಲ್ಲದೆ ಕೊನೆಗೆ ಅದರಲ್ಲಿ ಇದ್ದ ಹಾರ್ಡ್ ಡಿಸ್ಕ್ನಲ್ಲಿರುವ ಮೊಬೈಲ್ ನಂಬರ್ನಿಂದ ಕೇರಳ ದಂಪತಿಗಳನ್ನು ಪತ್ತೆ ಹಚ್ಚಿ ರಸ್ತೆಯಲ್ಲಿ ಸಿಕ್ಕಿದ 2.5 ರೂ. ಲಕ್ಷ ಮೌಲ್ಯದ ಚಿನ್ನ ಇರುವ ಬ್ಯಾಗನ್ನು ಬೈಂದೂರು ಪೊಲೀಸ್ ಸ್ಟೇಷನ್ಗೆ ನೀಡಿ ಪೊಲೀಸರ ಸಮ್ಮುಖದಲ್ಲೇ ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಅಬ್ದುಲ್ ಜಾವ್ವೆದ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಕೊಡಿಯಾಲ್ಬೈಲ್ ಪುನರಾಯ್ಕೆ
ಮಂಗಳೂರು : ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಸತತ ಮೂರನೇ ಭಾರಿಗೆ ಪ್ರವೀಣ್ ಕುಮಾರ್ ಕೊಡಿಯಾಲ್ಬೈಲ್ ಆಯ್ಕೆ ಆಗಿದ್ದಾರೆ.

ಮಂಗಳೂರು ತಾಲೂಕಿಗೆ ಚಂಚಲಾತೇಜೋಮಯ, ಪುತ್ತೂರು ತಾಲೂಕಿಗೆ ಸಂತೋಷ್ ರೈ, ಸುಳ್ಯ ತಾಲೂಕಿಗೆ ಜಯರಾಮ ಶೆಟ್ಟಿ ಸುಳ್ಯ, ಮೂಡುಬಿದಿರೆ ತಾಲೂಕಿಗೆ ಪದ್ಮಶ್ರೀ ಭಟ್ ನಿಡ್ಡೋಡಿ, ಬೆಳ್ತಂಗಡಿ ತಾಲೂಕಿಗೆ ವಿಜಯಕುಮಾರ್ ಜೈನ್, ಬಂಟ್ವಾಳ ತಾಲೂಕಿಗೆ ಪ್ರಮೀಳಾ ಸಾಯಿ ಪ್ರಿಯ ಆಯ್ಕೆಯಾಗಿದ್ದಾರೆ.
‘ಕಾರ್ಮಿಕರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ’ ಉಡುಪಿ ಡಿಸಿ ಕರೆ
ಉಡುಪಿ : ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಅವರ ಪರವಾದ ಕಾನೂನುಗಳಿವೆ. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಉದ್ಯೋಗದಾತರು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಕಾರ್ಮಿಕರ ದುಡಿಮೆಗೆ ಅನುಗುಣವಾಗಿ ಕನಿಷ್ಠ ವೇತನ ಕಾಯಿದೆಯಂತೆ ಸಂಬಳ, ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಇ.ಎಸ್.ಐ, ಪಿಎಫ್, ಹೆಚ್ಚುವರಿ ಕೆಲಸ ಮಾಡಿಸಿಕೊಂಡಲ್ಲಿ ಹೆಚ್ಚುವರಿ ಪೇಮೆಂಟ್ ನೀಡಬೇಕು. ಅಲ್ಲದೇ ಕಾರ್ಮಿಕರು ಸುರಕ್ಷತೆಯಿಂದ ಕೆಲಸ ಮಾಡಲು ಸುರಕ್ಷಿತ ವಾತಾವರಣವನ್ನು ಅವರಿಗೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ, ವೈದ್ಯಕೀಯ ಸೇವೆ ಹಾಗೂ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಹಾಗೂ ಇತರೆ ಇಲಾಖೆಗಳಿಂದ ಅನುಷ್ಠಾನ ಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಮಿಕ ಕಾಯ್ದೆಗಳು ಬಲಿಷ್ಠವಾಗಿವೆ. ಇವುಗಳ ಬಗ್ಗೆ ಉದ್ಯೋಗದಾತರಿಗೆ ಕಾನೂನಿನ ಅರಿವು ಮೂಡಿಸಿ, ಆ ಮೂಲಕ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಸರಿಯಾಗಿ ನೀಡುವಂತೆ ನೋಡಿಕೊಳ್ಳಿ. ಮಾನವೀಯ ನೆಲೆಯೊಂದಿಗೆ ಕಾನೂನಿನ ಅಡಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಕಾಯಿದೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳುತ್ತವೆ ಎಂದವರು ನುಡಿದರು.

ಉಡುಪಿ : ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಮಾತನಾಡಿ ಉಡುಪಿ ತಾಲೂಕಿನ ಕಾಪು ಕ್ಷೇತ್ರದ 10 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 94 ಸಿ. ಹಾಗೂ 94 ಸಿ.ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕಡತಗಳನ್ನು ಶೀಘ್ರವೇ ವಿಲೆಗೊಳಿಸುವಂತೆ ತಿಳಿಸಿದರು. ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ, ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಸಣ್ಣ ನೀರಾವರಿ ವ್ಯಾಪ್ತಿಗೆ ಬರುವ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಶೇಖರಣೆಯನ್ನು ಸಮರ್ಪಕವಾಗಿ ನಿರ್ವಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕುಡಿಯುವ ನೀರು ಹಾಗೂ ಕೃಷಿ ಕಾರ್ಯಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಅನರ್ಹ ಬಿಪಿಎಲ್ ಕಾರ್ಡ್ ಎಂದು ಗುರುತಿಸಿರುವ ಪಡಿತರ ಚೀಟಿಗಳ ಫಲಾನುಭವಿಗಳ ದಾಖಲೆಗಳ ನೈಜತೆ ಪರಿಶೀಲನೆ ಮಾಡಿ ನಂತರವೇ ಅವರ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ರವೀಂದ್ರ, ಉಡುಪಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ, ತಹಶೀಲ್ದಾರರಾದ ಗುರುರಾಜ್ ಹಾಗೂ ಉಡುಪಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಎಬಿವಿಪಿಯಿಂದ ಮಂಗಳೂರು ವಿವಿಯ ವಿವಿಧ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಕುಲಪತಿಗಳೊಂದಿಗೆ ಚರ್ಚೆ; ಬಗೆಹರಿಸಲು ಆಗ್ರಹ
ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ನಿಯೋಗವು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಭೇಟಿ ಮಾಡಿ ವಿವಿಯ ವಿವಿಧ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇದನ್ನು ಬಗೆಹರಿಸುವಂತೆ ಆಗ್ರಹಿಸಿ ತಪ್ಪಿದ್ದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ವಿವಿಯು ಪರೀಕ್ಷಾ ಶುಲ್ಕವನ್ನು ಏಕಾಏಕಿ 50-60% ದಷ್ಟು ಏರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಣದ ಬರೆಯನ್ನು ಎಳೆದಿದ್ದಾರೆ. ಇದಲ್ಲದೆ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರ ಕೊರತೆ, ಅಂಕಪಟ್ಟಿ ಕುರಿತು ಇರುವಂತಹ UUCMS ನ ತಾಂತ್ರಿಕ ಸಮಸ್ಯೆಗಳು ಹಾಗೂ ಇತರ ಮೂಲಭೂತ ಸಮಸ್ಯೆಗಳು ವಿವಿಯನ್ನು ಸಮಸ್ಯೆಯ ಗೂಡಾಗಿ ಪರಿವರ್ತಿಸಿದೆ.
ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಕುಲಪತಿಗಳು ಇದಕ್ಕೆಲ್ಲ ಕಾರಣ ಕಳೆದ 6 ವರ್ಷಗಳಿಂದ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಧನ ಸಹಾಯ ಬಾರದೆ ಇರುವುದು ಇದರಿಂದಾಗಿ ಬೇರೆ ಯಾವುದೇ ದಾರಿ ಇಲ್ಲದೆ ವಿದ್ಯಾರ್ಥಿಗಳ ಮೂಲಕವೇ ಶುಲ್ಕವನ್ನು ಪಡೆದು ವ್ಯವಸ್ಥೆಯನ್ನು ಕಲ್ಪಿಸುವ ಪರಿಸ್ಥಿತಿ ಬಂದಿದೆ ಇದರಿಂದಾಗಿ ಎಲ್ಲಾ ಅಗತ್ಯತೆಗಳನ್ನು ಸರಿಯಾಗಿ ಪೂರೈಸಲು ಕಷ್ಟ ಸಾಧ್ಯವಾಗುತ್ತಿದೆ ಎಂದು ತಮ್ಮ ಸ್ಥಿತಿಯನ್ನು ಹೇಳಿಕೊಂಡರು.
ಈ ಸಂದರ್ಭ ಎಬಿವಿಪಿ ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ, ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಮಹಾನಗರ ಕಾರ್ಯದರ್ಶಿ ಮೊನಿಶ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಿತೇಶ್ ಹಾಗೂ ಪ್ರಮುಖರಾದ ಹರ್ಷ ಮತ್ತಿತರರಿದ್ದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂ|ಡಾ| ಲೊರೇನ್ಸ್ ಸಿ ಡಿಸೋಜಾ ನಿಧನ
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂ|ಡಾ| ಲೊರೇನ್ಸ್ ಸಿ ಡಿಸೋಜಾ ಅವರು ದೀರ್ಘಕಾಲದ ಅಸೌಖ್ಯದಿಂದ ಮಂಗಳವಾರ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
1948 ನವೆಂಬರ್ 28ರಂದು ಶಿರ್ವ ಸಮೀಪದ ಪೆರ್ನಾಲ್ನಲ್ಲಿ ಜನಿಸಿದ ಅವರು 1977ರಲ್ಲಿ ಧರ್ಮಗುರುವಾಗಿ ಯಾಜಕ ದೀಕ್ಷೆಯನ್ನು ಪಡೆದರು.
ಗುರುದೀಕ್ಷೇ ಪಡೆದ ಬಳಿಕ ಹಲವಾರು ಹುದ್ದೆಗಳನ್ನು ಅಲಂಕರಿಸಿರುವ ವಂ| ಲೋರೆನ್ಸ್ ಡಿಸೋಜಾ ಅವರ ಸೇವೆಯ ವಿವರ :
1977-79ರ ವರೆಗೆ ಕುಲಶೇಖರ ಚರ್ಚಿನ ಸಹಾಯಕ ಧರ್ಮಗುರುಗಳಾಗಿ, 1979-84ರ ತನಕ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿ ಸಹಾಯಕ ನಿರ್ದೇಶಕರಾಗಿ, 1984-92ರ ವರೆಗೆ ಮಂಗಳೂರು ಧರ್ಮಪ್ರಾಂತ್ಯ ಕಥೊಲಿಕ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ, 1998-2006ರ ವರೆಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ, 2006-2008 ರ ವರೆಗೆ ಕುಲಶೇಖರ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ, 2008-2014 ರ ವರೆಗೆ ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯ ನಿರ್ದೇಶಕರಾಗಿ, 2015-18ರ ವರೆಗೆ ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ಕಾರ್ಯದರ್ಶಿಯಾಗಿ, 2018-2020ರ ವರೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
ನಾಲ್ಕು ದಶಕಗಳ ಸುದೀರ್ಘ ಧಾರ್ಮಿಕ ಸೇವೆಯ ಬಳಿಕ 2020ರಲ್ಲಿ ತಮ್ಮ ಅನಾರೋಗ್ಯದ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿ ಕಲ್ಯಾಣಪುರದಲ್ಲಿ ನಿವೃತ್ತ ಯಾಜಕರ ನಿವಾಸ ಮಿಲಾಗ್ರಿಸ್ ಹೋಮ್ನಲ್ಲಿ ವಾಸ್ತವ್ಯ ಹೊಂದಿದ್ದರು.
ಮೃತರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿಗಳಾದ ವಂ|ಡಾ|ರೋಶನ್ ಡಿಸೋಜಾ, ಧರ್ಮಪ್ರಾಂತ್ಯದ ಧರ್ಮಗುರುಗಳು ಹಾಗೂ ಭಕ್ತವೃಂದ ಕಂಬನಿ ಮಿಡಿದಿದ್ದಾರೆ.
ಮೃತ ವಂ|ಲೋರೆನ್ಸ್ ಸಿ ಡಿಸೋಜಾ ಅವರ ಅಂತ್ಯಕ್ರಿಯೆ ನವೆಂಬರ್ 16 ಶನಿವಾರ ಬೆಳಿಗ್ಗೆ ನಡೆಯಲಿದ್ದು, 8.00 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನಲ್ಲಿ ಇರಿಸಿ, ಬೆಳಿಗ್ಗೆ 9.30ಕ್ಕೆ ಬಲಿಪೂಜೆಯೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ-ತಾಲೂಕು ಘಟಕಗಳ ನಡುವೆ ಜಗಳ; ಕೋರ್ಟ್ ಮೆಟ್ಟಿಲೇರಿದ ಕನ್ನಡ ಕದನ
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ಜಗಳ ಕೋರ್ಟ್ ಮೆಟ್ಟಿಲೇರಿದೆ. ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪದಚ್ಯುತಗೊಳಿಸಿದ್ದೇ ಇದಕ್ಕೆಲ್ಲ ಮೂಲ ಕಾರಣ. ಆದರೆ ಜಿಲ್ಲಾಧ್ಯಕ್ಷರ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡುವುದರೊಂದಿಗೆ ಈ ಜಗಳ ಮತ್ತೊಂದು ಹಂತ ತಪುಪಿದೆ.
ಮೂರನೇ ಬಾರಿಗೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ನೀಲಾವರ ಸುರೇಂದ್ರ ಅಡಿಗ, ತಾಲೂಕು ಘಟಕದ ಮೇಲೆ ಆರೋಪ ಮಾಡಿ ಬೆನ್ನುಬೆನ್ನಿಗೆ ಐದು ನೋಟೀಸುಗಳನ್ನು ನೀಡಿದ್ದಾರೆ. ಇದಕ್ಕೆ ತಾಲೂಕು ಘಟಕದವರು ಉತ್ತರವನ್ನೂ ನೀಡಿದ್ದರು. ಆದರೆ ಉತ್ತರಕ್ಕೆ ತೃಪ್ತರಾಗದ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಅವರನ್ನು ಪದಚ್ಯುತಿಗೊಳಿಸಿದ್ದರು. ಇದೀಗ ಪದಚ್ಯುತಿ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ತಾಲೂಕು ಘಟಕ ನಿರಾಳವಾಗಿದೆ.

ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ
ಈ ಕುರಿತು ಮಾತನಾಡಿರುವ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್ ಪಿ, ಕಳೆದ ಎರಡೂವರೆ ವರ್ಷಗಳಲ್ಲಿ ಉಡುಪಿ ತಾಲೂಕು ಅಧ್ಯಕ್ಷರಾಗಿ ತಾವು ಕಸಾಪದ ಮೂಲಕ 300ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಎರಡು ತಾಲೂಕು ಸಮ್ಮೇಳನಗಳನ್ನು ನಡೆಸಿದ್ದೇವೆ. ಕನ್ನಡ ಕಟ್ಟುವ ಕಾಯಕದಲ್ಲಿ ನಾವು ಸಕ್ರಿಯರಾಗಿದ್ದೆವು. ಕೇವಲ 20 ದಿನಗಳ ಅಂತರದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಗಳು ನಡೆದವು. ಜಿಲ್ಲಾ ಕಸಾಪ ಅಧ್ಯಕ್ಷರ ಅಧಿಕಾರದ ವ್ಯಾಪ್ತಿ ಮೀರಿದ ನಡವಳಿಕೆ ಆದೇಶವನ್ನು ಪರಿಶೀಲಿಸಿದ ಕರ್ನಾಟಕ ಉಚ್ಚನ್ಯಾಯಾಲಯ ಜಿಲ್ಲಾಧ್ಯಕ್ಷರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಇದು ಸತ್ಯಕ್ಕೆ ಫಲಿಸಿದ ಜಯ. ಜಿಲ್ಲಾ ಕಸಾಪದ ಹಠಾತ್ ಕ್ರಮಕ್ಕೆ ಕಾರಣಗಳೇನು ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳಿದರು.