ಉಡುಪಿ : ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ಮಾರ್ಗದರ್ಶನದಲ್ಲಿ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಸರ್ವಿಸ್ ಬಸ್‌ಸ್ಟಾಂಡ್ ಬಳಿ ಇರುವ ಕ್ಲಾಕ್ ಟವರ್ ಬಳಿ ಆಟಿ ಅಮವಾಸ್ಯೆಯ ಕಷಾಯ ವಿತರಣಾ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾಧ್ಯಕ್ಷರಾದ ಕೃಷ್ಣಕುಮಾರ್‌ರವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳಿಂದ ಕಷಾಯ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ ಕೊಳಲಗಿರಿ ತುಳುನಾಡಿನ ಹಿರಿಯರ ಸಂಪ್ರದಾಯದಂತೆ ಆಟಿ ಕಷಾಯದ ಜೊತೆಗೆ ದೇಹಕ್ಕೆ ತಂಪನ್ನು ನೀಡಲು ಮೆಂತೆ ಗಂಜಿ ಸೇವನೆ ಮಾಡಲಾಗುತ್ತದೆ. ಇದು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡಿ ಕಾಯಿಲೆಯನ್ನು ದೂರ ಮಾಡಲು ತುಂಬಾ ಸಹಕಾರಿಯಾಗಿದೆ. ಇಂದಿನ ಯುವ ಜನಾಂಗಕ್ಕೆ ಹಾಳೆ ಮರ ಸೇರಿದಂತೆ ಆಯುರ್ವೇದೀಯ ಅಂಶದ ಗಿಡಮೂಲಿಕೆಗಳ ಬಗ್ಗೆ ತಿಳಿಸಬೇಕಾದ ಅನಿವಾರ್ಯತೆಯಿದೆ. ಕಳೆದ 9 ವರ್ಷಗಳಿಂದ ಸಾರ್ವಜನಿಕರಿಗೆ ವಿತರಣೆಯನ್ನು ಮಾಡಲಾಗುತ್ತಿದೆ ಎಂದರು.
ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ ಪ್ರಧಾನ ಕಾರ್ಯದರ್ಶಿಯಾದ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ನಾಗಲಕ್ಷ್ಮಿ, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಸತೀಶ್ ಪೂಜಾರಿ ಕೀಳಂಜೆ, ಕಾಪು ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಮಜೀದ್, ಸಾಹಬುದ್ದೀನ್, ಅವಿನಾಶ್ ಮಾಸ್ಟರ್, ಪ್ರೀತಮ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತಿ ಇದ್ದರು. ಸುಮಾರು 500 ಕ್ಕೂ ಹೆಚ್ಚು ಜನರು ಕಷಾಯ ಮತ್ತು ಮೆಂತೆ ಗಂಜಿ ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.