ಬ್ರಹ್ಮಾವರ : ಉಡುಪಿಯಲ್ಲಿ ಮಳೆ ಕೊಂಚ ವಿರಾಮ ನೀಡಿದೆ. ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದ್ದ ನದಿಗಳು ಮಂದಗತಿಯಲ್ಲಿ ಹರಿಯಲಾರಂಭಿಸಿವೆ. ಪಶ್ಚಿಮ ಘಟ್ಟದ ತಪಲು ಪ್ರದೇಶದಲ್ಲೂ ವಾತಾವರಣ ತಿಳಿಯಾಗಿದೆ.
ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಬ್ರಹ್ಮಾವರ ತಾಲೂಕಿನ ಚಾಂತರು ಗ್ರಾಮದಲ್ಲಿ ಹರಿಯುವ ಸೀತಾ ನದಿ ತನ್ನ ವೇಗ ತಗ್ಗಿಸಿದೆ. ಚಾಂತಾರು ಗ್ರಾಮದ ಹೇರೂರು ಉಗ್ಗೇಲುಬೆಟ್ಟು ಎಂಬಲ್ಲಿರುವ ಕಿಂಡಿ ಅಣೆಕಟ್ಟಿಗೆ ಬಾರಿ ಗಾತ್ರದ ಮರದ ದಿಮ್ಮಿಗಳು ಸಿಲುಕಿತ್ತು. ಹರಿದು ಬರುವ ನೀರಿನಲ್ಲಿ, ದೊಡ್ಡ ಪ್ರಮಾಣದ ಮರದ ದಿಮ್ಮಿಗಳು ಬಂದು ಅಣೆಕಟ್ಟು ಪ್ರದೇಶದಲ್ಲಿ ಸಿಲುಕುವುದು ಸಾಮಾನ್ಯ. ಇದೀಗ ಅಣೆಕಟ್ಟಿಗೆ ಸಿಲುಕಿದ ಮರಗಳನ್ನು ಪಂಚಾಯತ್ ಅಧಿಕಾರಿಗಳು ಸದಸ್ಯರ ನೆರವಿನೊಂದಿಗೆ ತೆರವು ಮಾಡಿದ್ದಾರೆ. ಅಧಿಕಾರಿಗಳ ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ನಿವಾಸಿಗಳೂ ಕೈಜೋಡಿಸಿದ್ದಾರೆ.