ಮಣಿಪಾಲ : ಫೆಡೆಕ್ಸ್ ಕಂಪೆನಿಯ ಹೆಸರಿನಲ್ಲಿ ಮುಂಬಯಿ ಪೊಲೀಸ್ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಸಂಭವಿಸಿದೆ.
ಕುಂಜಿಬೆಟ್ಟುವಿನ ನಮೃತಾ ವಂಚನೆಗೊಳಗಾದವರು. ಇವರು ಮಣಿಪಾಲದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ತನ್ನ ಹೆಸರು ಸಂಜಯ್ ಕುಮಾರ್ ಎಂದು ತಿಳಿಸಿ ತಾನು ಫೆಡೆಕ್ಸ್ ಕಂಪೆನಿ ಉದ್ಯೋಗಿ ಎಂದು ತಿಳಿಸಿದ್ದಾನೆ.
ನಿಮ್ಮ ಹೆಸರಿನಲ್ಲಿ ಒಂದು ಪಾರ್ಸಲ್ ಬಂದಿದ್ದು, ಅದರಲ್ಲಿ 5 ಇರಾನಿ ಪಾಸ್‌ಪೋರ್ಟ್, 5 ಡೆಬಿಟ್ ಕಾರ್ಡ್, 2 ಕೆಜಿ ಬಟ್ಟೆ, 150 ಗ್ರಾಂ ಎಂಡಿಎಂಎ ಇದ್ದು, ಈ ಬಗ್ಗೆ ಮುಂಬಯಿ ಪೊಲೀಸರಿಗೆ ತಿಳಿಸಿದ್ದು, ಈ ಬಗ್ಗೆ ಎಫ್ಐಆರ್ ಆಗಿರುವುದಾಗಿ ನಂಬಿಸಿದ್ದಾನೆ.
ಅನಂತರ ನೀವು ಮುಂಬಯಿ ಪೊಲೀಸರೊಂದಿಗೆ ಮಾತನಾಡುವಂತೆ ಅಪರಿಚತ ವ್ಯಕ್ತಿ ಬೇರೊಬ್ಬ ವ್ಯಕ್ತಿಗೆ ಕರೆ ಮಾಡಿದ್ದಾನೆ. ಅನಂತರ ಆ ವ್ಯಕ್ತಿ ಮಾತನಾಡಿ, ತಾನು ಮುಂಬಯಿ ಪೊಲೀಸ್ ಪ್ರದೀಪ್ ಸಾವಂತ್ ಎಂದು ತಿಳಿಸಿ, ಅವರ ಆಧಾರ್ ಕಾರ್ಡ್, ಬ್ಯಾಂಕ್ ಡೆಬಿಟ್ ಕಾರ್ಡ್‌ಗಳ ಮಾಹಿತಿ ಪಡೆದು ಅವರ ಖಾತೆಯಿಂದ 7,90,000 ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.