ಉಡುಪಿ : ಜಿಲ್ಲೆಯ ಹಳ್ಳ ತೊರೆ ಮತ್ತು ಕೆರೆಗಳಲ್ಲಿ ಗುರುತಿಸಿರುವ ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸುವ ಕುರಿತು ಈಗಾಗಲೇ ಆಶಯ ಪತ್ರ ನೀಡಲಾಗಿದೆ. ಇನ್ನುಳಿದ ಕೆಲವು ಪ್ರದೇಶಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹೂಳೆತ್ತುವ ಸಂಬಂಧ ಕ್ರಮ ಕೈಗೊಳ್ಳಬೇಕು. ಆಯಾ ಗ್ರಾಮ ಪಂಚಾಯತ್‌ಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸಲು ನೀಡಿರುವ ಆಶಯ ಪತ್ರಗಳ ಪ್ರಗತಿ ಪರಿಶೀಲನೆ ಬಗ್ಗೆ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
37 ಬ್ಲಾಕ್‌ಗಳನ್ನು ಗುರುತಿಸಿ ಅವರಿಗೆ ಆಶಯ ಪತ್ರ ನೀಡಲಾಗಿದೆ. 37 ಪಂಚಾಯತ್‌ಗಳ ಪೈಕಿ 22 ಪಂಚಾಯತ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ಪಂಚಾಯತಿಗಳು ಶುಲ್ಕ ಪಾವತಿಸಿಲ್ಲ. ಕಾವ್ರಾಡಿ, ಯಡ್ತಾಡಿ, ವಡ್ಡರ್ಸೆ, ಉಳ್ಳೂರು, ಕೆದೂರು, ಬೇಳೂರು ಗ್ರಾಮ ಪಂಚಾಯತಿಗಳಿಗೆ ಹೂಳೆತ್ತಲು ಅವಕಾಶ ನೀಡಲಾಗಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹೂಳೆತ್ತಲು ಅವಕಾಶ ಇಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂದೀಪ ತಿಳಿಸಿದರು.
ಎಲ್ಲಾ ಕಡೆಗಳಲ್ಲಿ ಡ್ಯಾಂ ಪಕ್ಕದಲ್ಲಿ ಹೂಳು ಶೇಖರಣೆಗೊಂಡಿದ್ದು, ಇಲ್ಲಿ ಹೂಳೆತ್ತಲು ಸಣ್ಣ ನೀರಾವರಿ ಇಲಾಖೆಯವರು ಅನುಮತಿ ನೀಡುತ್ತಿಲ್ಲ. ಸೇತುವೆ ಮತ್ತು ಡ್ಯಾಂನಿಂದ 250 ಮೀಟರ್ ಬಿಟ್ಟು ಹೂಳೆತ್ತ ಬೇಕೆಂದು ಸಣ್ಣ ನೀರಾವರಿ ಇಲಾಖೆ ಕಾನೂನು ಇದ್ದು, ಸಣ್ಣ ನೀರಾವರಿ ಇಲಾಖೆಯವರು ಅನುಮತಿ ನೀಡಿದರೆ ಇಂತಹ ಪ್ರದೇಶಗಳಲ್ಲಿ ಹೂಳೆತ್ತಲು ಅವಕಾಶ ಕೊಡಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂಧ್ಯಾ ಹೇಳಿದರು.