ಉಡುಪಿ : ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ಸುತ್ತೆಲ್ಲಾ ಹಬ್ಬುತ್ತಿರುವ ವೇಳೆ ಅದನ್ನು ಆರಿಸಲು ಹೋದ ಕೃಷಿಕರೋರ್ವರು ಗದ್ದೆಯಲ್ಲೇ ಸಜೀವ ದಹನವಾದ ದಾರುಣ ಘಟನೆ ಎ. 5ರಂದು ಮಧ್ಯಾಹ್ನ ಕುಂದಾಪುರ ತಾಲೂಕಿನ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ನಡೆದಿದೆ.

ಬೆಂಕಿಯ ಕೆನ್ನಾಲಗೆ ಬಲಿಯಾದ ದುರ್ದೈವಿಯನ್ನು ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (80) ಎಂದು ಗುರುತಿಸಲಾಗಿದೆ.
ಮಗಳು ಬೇಬಿಯೊಂದಿಗೆ ಮಹಾಲಿಂಗ ದೇವಾಡಿಗ ಅವರು ತಮ್ಮ ಗದ್ದೆಯಲ್ಲಿ ಕೃಷಿ ತ್ಯಾಜ್ಯ (ಸುಡುಮಣ್ಣು)ಕ್ಕೆ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತಲೂ ಆವರಿಸಿದ್ದು, ಸಮೀಪದ ನಾಗಬನಕ್ಕೂ ಬೆಂಕಿ ಹಬ್ಬುತ್ತಿದ್ದರಿಂದ ಬೇಬಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವ ವೇಳೆ ಇತ್ತ ಮಹಾಲಿಂಗ ದೇವಾಡಿಗ ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಹೋಗುವ ರಸ್ತೆ ವ್ಯವಸ್ಥೆ ಸರಿಯಿಲ್ಲದ ಹಿನ್ನೆಲೆ ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ಬರಲು ಸಾಧ್ಯವಾಗದೆ ಕಾರ್ಯಾಚರಣೆಗೆ ತೊಡಕಾಗಿದ್ದರಿಂದ ಮಹಾಲಿಂಗ ದೇವಾಡಿಗ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.