Wednesday, January 15, 2025
Banner
Banner
Banner
Home » 1500ಕ್ಕೂ ಅಧಿಕ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿದ ವಿಶಿಷ್ಟ ಸಾಧಕ ಪರೋಪಕಾರಿ, ಕಾರ್ಪೊರೇಟರ್ ಗಣೇಶ್ ಕುಲಾಲ್ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆ

1500ಕ್ಕೂ ಅಧಿಕ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿದ ವಿಶಿಷ್ಟ ಸಾಧಕ ಪರೋಪಕಾರಿ, ಕಾರ್ಪೊರೇಟರ್ ಗಣೇಶ್ ಕುಲಾಲ್ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆ

by NewsDesk

ಮಂಗಳೂರು : ಮಂಗಳೂರು ಮಹಾ‌ನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸುವುದರ ಜತೆಗೆ ಅನಾಥ ಶವಗಳ ಅಂತ್ಯ ಸಂಸ್ಕಾರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣೇಶ ಕುಲಾಲ್ ಅವರು 2024-25ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿವೆ. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ನೇತೃತ್ವದ ಆಯ್ಕೆ ಸಮಿತಿಯು ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜ. 26ರಂದು ನಡೆಯಲಿರುವ ಪ್ರೆಸ್‌ಕ್ಲಬ್ ದಿನಾಚರಣೆಯಲ್ಲಿ ಗಣೇಶ ಕುಲಾಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗಣೇಶ್ ಕುಲಾಲ್ ಅವರು ವಾರೀಸುದಾರರು ಇಲ್ಲದ ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸುವ ಮಾನವೀಯ ಕಾರ್ಯದಲ್ಲಿ 25 ವರ್ಷಗಳಿಂದ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಬಡವರು, ಶ್ರೀಮಂತರು, ಅನಾಥರು ಎಂಬ ಭೇದವಿಲ್ಲದೆ ಇದುವರೆಗೆ 1500ಕ್ಕೂ ಅಧಿಕ ಮೃತದೇಹಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ ಸಾಧನೆ ಇವರದ್ದು. ಇವರು ಈ ಸೇವೆಗಾಗಿ ಯಾರಿಂದಲೂ ಏನನ್ನು ಪಡೆಯುವುದಿಲ್ಲ. ಮಂಗಳೂರು ನಗರದಲ್ಲಿ ಯಾರೇ ಆಗಲಿ ಶವದ ಅಂತ್ಯ ಸಂಸ್ಕಾರ ನೆರವೇರಿಸಲು ಕರೆದರೆ ಅಲ್ಲಿ ಗಣೇಶ್ ಕುಲಾಲ್ ಹಾಜರು. ವೆನ್‌ಲಾಕ್ ಆಸ್ಪತ್ರೆಯಲ್ಲಿ ವಿಲೇವಾರಿಯಾಗದ ಅನಾಥ ಶವಗಳನ್ನು ಇವರು ಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಈ ಸೇವೆಯನ್ನು ದೇವರ ಸೇವೆ ಎಂದು ನಂಬಿದವರು. ಅವರು ಜಾತಿ, ಪಕ್ಷ ಭೇದವನ್ನು ಎಣಿಸದೆ, ನಿಸ್ವಾರ್ಥ ಸೇವೆಯ ಮೂಲಕ ಆನಾಥ ಬಂಧು ಎನಿಸಿಕೊಂಡಿದ್ದಾರೆ.

ತಂದೆಯೇ ಪ್ರೇರಣೆ : ತಂದೆ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಿದ್ದರು. ಅವರ ಸೇವೆಗೆ ಕೈಜೋಡಿಸಲು ಚಿಕ್ಕಂದಿನಲ್ಲಿ ಹೋಗುತ್ತಿದ್ದೆ. ಮಂದೆ ವಿಧಿವಿಧಾನವನ್ನು ಕಲಿತು, ಅದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. 30ರ ಹರೆಯಲ್ಲಿ ಈ ಸೇವೆಗೆ ಇಳಿದೆ. ಆರಂಭದಲ್ಲಿ ಮನೆಯಲ್ಲಿ ವಿರೋಧ ಕಂಡು ಬಂದಿತ್ತು. ಆದರೆ ತಾಯಿ ನನಗೆ ಪೂರ್ಣ ಬೆಂಬಲ ನೀಡಿದರು ಎನ್ನುತ್ತಾರೆ ಗಣೇಶ್ ಕುಲಾಲ್.

ಗಣೇಶ್ ಕುಲಾಲ್ ಅವರು ಶವಗಳ ವಿಲೇವಾರಿ ಮಾತ್ರವಲ್ಲ, ಕಾಯಿಲೆ ಬಿದ್ದವರನ್ನು ಆಸ್ಪತ್ರೆಗಳಿಗೆ ಸಾಗಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕಾರ್ಯವನ್ನು ಮಾಡುತ್ತಾರೆ. ಕೊರೋನ ಸಮಯದಲ್ಲಿ 150ಕ್ಕೂ ಅಧಿಕ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೊರೋನದಿಂದ ಮೃತಪಟ್ಟ ಶವಗಳನ್ನು ಆಸ್ಪತ್ರೆಗಳಿಂದ ಬೋಳಾರ ಮತ್ತು ನಂದಿಗುಡ್ಡೆಯ ಸ್ಮಶಾನಗಳಿಗೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಆ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು. ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ದೂರದ ಊರಿನ ಕಾರ್ಮಿಕರಿಗೆ, ಬಡವರಿಗೆ ಆಹಾರದ ವ್ಯವಸ್ಥೆ, ಕಿಟ್ ವ್ಯವಸ್ಥೆ ಒದಗಿಸಿದ್ದರು. ನಿರಾಶ್ರಿತರ ಶಿಬಿರ ಆರಂಭಿಸಿ ಸುಮಾರು 30 ಮಂದಿಗೆ ಮೂರು ಹೊತ್ತು ಆಹಾರದ ವ್ಯವಸ್ಥೆಯನ್ನು ಹಲವು ತಿಂಗಳುಗಳ ನೀಡಿದ್ದರು.

55 ಹರೆಯದ ಗಣೇಶ್ ಕುಲಾಲ್ ಆರ್ಥಿಕವಾಗಿ ಸ್ಥಿತಿವಂತರಲ್ಲ. 8ನೇ ತರಗತಿ ಶಿಕ್ಷಣ ಪಡೆದಿದ್ದಾರೆ. ಚಿಕ್ಕಂದಿನಲ್ಲಿ ಕೆಂಪು ಕಲ್ಲು ಹೊರುವ ಕೆಲಸದ ಮೂಲಕ ದುಡಿಯಲು ಆರಂಭಿಸಿದೆ. ಒಂದು ಕಲ್ಲಿಗೆ 50 ಪೈಸೆಯಿಂದ ಒಂದು ರೂಪಾಯಿ ಸಿಗುತ್ತಿತ್ತು. ಅದೇ ದುಡಿಮೆಯಿಂದ ಬಂದ ಆದಾಯವನ್ನು ಕೂಡಿಟ್ಟು ರಿಕ್ಷಾ ಖರೀದಿಸಿದರು. ಅದೇ ರಿಕ್ಷಾದಲ್ಲಿ ಚಾಲಕ ರಾಗಿ 10 ವರ್ಷಗಳ ಕಾಲ ದುಡಿದು, ಬಳಿಕ ಮಿನಿ ಟೆಂಪೋ ಖರೀದಿಸಿದರು. ಅದರಲ್ಲಿ ಚಾಲಕರಾಗಿ ದುಡಿಯುತ್ತಾ, ಸಣ್ಣ ಕಾರ್ಯಕ್ರಮಗಳಿಗೆ ಬಾಡಿಗೆಗೆ ಶಾಮಿಯಾನ ನೀಡುವ ಬ್ಯುಸಿನೆಸ್ ಆರಂಭಿಸಿದ್ದರು. 2019ರಲ್ಲಿ ರಾಜಕೀಯ ಪ್ರವೇಶಿಸಿ ಮನಪಾ ಸದಸ್ಯರಾದ ಬಳಿಕ ಇವರಿಗೆ ಜವಾಬ್ದಾರಿ ಜಾಸ್ತಿಯಾಗಿ ಶಾಮಿಯಾನ ಮತ್ತು ಚೆಯರ್ ಬಾಡಿಗೆಗೆ ನೀಡುವ ಇವರ ಅಂಗಡಿ ಬಂದ್ ಆಯಿತು. ಈಗ ಅವರ ಬಳಿ 15 ವರ್ಷಗಳಷ್ಟು ಹಳೆಯ ಒಂದು ಸಣ್ಣ ಟೆಂಪೋ ಇದೆ. ಗಣೇಶ್ ಕುಲಾಲ್ ಅವರ ಸಮಾಜ ಸೇವೆಗೆ ಪತ್ನಿ, ಪುತ್ರ ಪ್ರೋತ್ಸಾಹ ನೀಡುತ್ತಿದ್ದಾರೆ.

ಸ್ವಂತ ಮನೆಯಿಲ್ಲ : ಗಣೇಶ್ ಕುಲಾಲ್ ಅವರಿಗೆ ಸ್ವಂತ ಮನೆಯಿಲ್ಲ. ಹೆತ್ತವರು ಉರ್ವ ಮಾರಿಗುಡಿ ದೇವಸ್ಥಾನದ ಚಾಕರಿ ಮಾಡಿಕೊಂಡು ಇದ್ದವರು. ದೇವಸ್ಥಾನದ ಚಾಕರಿ ಮಾಡುವವರಿಗೆ ದೇವಸ್ಥಾನದ ವತಿಯಿಂದ ಮನೆ ನೀಡಲಾಗುತ್ತದೆ. ಅದೇ ಮನೆಯಲ್ಲಿ ಇವರು ಹುಟ್ಟಿ ಬೆಳೆದವರು. ಸ್ವಂತ ಮನೆ ಮಾಡುವ ಕಡೆಗೆ ಗಮನ ಹರಿಸಿದವರಲ್ಲ. ಕಾಯಕದಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. “ಅಮ್ಮ(ಮಾರಿಯಮ್ಮ)ನನ್ನು ಬಿಟ್ಟು ಬೇರೆ ಕಡೆಗೆ ಹೋಗಲು ಮನಸ್ಸು ಒಪ್ಪುತ್ತಿಲ್ಲ” ಎಂದು ಹೇಳುವ ಮೂಲಕ ದೇವರ ಬಗ್ಗೆ ಅಚಲ ವಿಶ್ವಾಸವಿಟ್ಟು ತನ್ನ ಕಾಯಕವನ್ನು ಮುಂದುವರಿಸಿದ್ದಾರೆ ಗಣೇಶ ಕುಲಾಲ್.

ಗಣೇಶ್ ಕುಮಾಲ್ ನಿರ್ಗತಿಕರಿಗೆ ಮನೆ ಕಟ್ಟಿಕೊಡುವಲ್ಲಿ ಶ್ರಮಿಸಿದ್ದಾರೆ. ತಾಯಿ ಮತ್ತು ಮಗಳು ಮಾತ್ರ ಇರುವ ನಿರ್ಗತಿಕ ಕುಟುಂಬವೊಂದಕ್ಕೆ ಗಣೇಶ್ ಕುಲಾಲ್ ಅವರು ಸ್ಥಳೀಯ ಸ್ಥಳೀಯ ದಾನಿಗಳ ನೆರವಿನಲ್ಲಿ 7 ಲಕ್ಷ ರೂ.ವೆಚ್ಚದಲ್ಲಿ ಉರ್ವದಲ್ಲಿ ಮನೆ(ಅಟಲ್ ನಿಲಯ) ನಿರ್ಮಿಸಿ ಕೊಟ್ಟಿದ್ದಾರೆ

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb