ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ಜಗಳ ಕೋರ್ಟ್ ಮೆಟ್ಟಿಲೇರಿದೆ. ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪದಚ್ಯುತಗೊಳಿಸಿದ್ದೇ ಇದಕ್ಕೆಲ್ಲ ಮೂಲ ಕಾರಣ. ಆದರೆ ಜಿಲ್ಲಾಧ್ಯಕ್ಷರ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡುವುದರೊಂದಿಗೆ ಈ ಜಗಳ ಮತ್ತೊಂದು ಹಂತ ತಪುಪಿದೆ.
ಮೂರನೇ ಬಾರಿಗೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ನೀಲಾವರ ಸುರೇಂದ್ರ ಅಡಿಗ, ತಾಲೂಕು ಘಟಕದ ಮೇಲೆ ಆರೋಪ ಮಾಡಿ ಬೆನ್ನುಬೆನ್ನಿಗೆ ಐದು ನೋಟೀಸುಗಳನ್ನು ನೀಡಿದ್ದಾರೆ. ಇದಕ್ಕೆ ತಾಲೂಕು ಘಟಕದವರು ಉತ್ತರವನ್ನೂ ನೀಡಿದ್ದರು. ಆದರೆ ಉತ್ತರಕ್ಕೆ ತೃಪ್ತರಾಗದ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಅವರನ್ನು ಪದಚ್ಯುತಿಗೊಳಿಸಿದ್ದರು. ಇದೀಗ ಪದಚ್ಯುತಿ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ತಾಲೂಕು ಘಟಕ ನಿರಾಳವಾಗಿದೆ.
ಈ ಕುರಿತು ಮಾತನಾಡಿರುವ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್ ಪಿ, ಕಳೆದ ಎರಡೂವರೆ ವರ್ಷಗಳಲ್ಲಿ ಉಡುಪಿ ತಾಲೂಕು ಅಧ್ಯಕ್ಷರಾಗಿ ತಾವು ಕಸಾಪದ ಮೂಲಕ 300ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಎರಡು ತಾಲೂಕು ಸಮ್ಮೇಳನಗಳನ್ನು ನಡೆಸಿದ್ದೇವೆ. ಕನ್ನಡ ಕಟ್ಟುವ ಕಾಯಕದಲ್ಲಿ ನಾವು ಸಕ್ರಿಯರಾಗಿದ್ದೆವು. ಕೇವಲ 20 ದಿನಗಳ ಅಂತರದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಗಳು ನಡೆದವು. ಜಿಲ್ಲಾ ಕಸಾಪ ಅಧ್ಯಕ್ಷರ ಅಧಿಕಾರದ ವ್ಯಾಪ್ತಿ ಮೀರಿದ ನಡವಳಿಕೆ ಆದೇಶವನ್ನು ಪರಿಶೀಲಿಸಿದ ಕರ್ನಾಟಕ ಉಚ್ಚನ್ಯಾಯಾಲಯ ಜಿಲ್ಲಾಧ್ಯಕ್ಷರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಇದು ಸತ್ಯಕ್ಕೆ ಫಲಿಸಿದ ಜಯ. ಜಿಲ್ಲಾ ಕಸಾಪದ ಹಠಾತ್ ಕ್ರಮಕ್ಕೆ ಕಾರಣಗಳೇನು ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳಿದರು.