ಉಡುಪಿ : ಯಕ್ಷಗಾನವು ಕರಾವಳಿಯ ಸಾಂಪ್ರದಾಯಿಕ ಕಲೆಯಾಗಿದ್ದು ಭಾವನೆಗಳನ್ನು ಬೆಸೆಯುವ ಕಲೆಯಾಗಿದೆ ನಿತ್ಯ ನೂತನವಾಗಿರುವ ಈ ಕಲೆಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಉಡುಪಿಯ ಅದಮಾರು ಮಠದ ಅತಿಥಿ ಗ್ರಹದಲ್ಲಿ ವಾರಣಾಸಿಯ ರಾಷ್ಟ್ರೀಯ ನಾಟ್ಯ ವಿದ್ಯಾಲಯ (ಎನ್‌ಎಸ್‌ಡಿ) ವಿದ್ಯಾರ್ಥಿಗಳಿಗೆ ಪೂರ್ಣಪ್ರಜ್ಞ ಯಕ್ಷಗಾನ ಕೇಂದ್ರ ಹಾಗೂ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ 25 ದಿನಗಳ ಯಕ್ಷಗಾನ ಕಾರ್ಯಗಾರಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ರಾಮಾಯಣ, ಮಹಾಭಾರತ ಕಥೆಗಳನ್ನು ಸುಲಭವಾಗಿ ಜನಮಾನಸಕ್ಕೆ ತಲುಪಿಸುತ್ತದೆ. ಈ ಅಪರೂಪದ ಕಲೆಯನ್ನು ಅನ್ಯ ರಾಜ್ಯದ ವಿದ್ಯಾರ್ಥಿಗಳು ಕಲಿಯಲು ಬಂದಿರುವುದು ಸಂತಸದ ವಿಚಾರ. ಕಲೆಯೊಂದು ನನ್ನ ಸೀಮೆ ದಾಟಿದಾಗ ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಯಕ್ಷ ಗುರು ಸಂಜೀವ ಸುವರ್ಣ, ಎನ್‌ಎಸ್‌ಡಿ ನಿರ್ದೇಶಕ ಪ್ರವೀಣ್ ಕುಮಾರ್ ಗುಂಜನ್, ಉಪಸ್ಥಿತರಿದ್ದರು. ಯಕ್ಷಗಾನ ಕಲಿಯಲು ಆಗಮಿಸಿರುವ ಎನ್‌ಎಸ್‌ಡಿ ವಾರಣಾಸಿಯ 11 ವಿದ್ಯಾರ್ಥಿಗಳು ಹಾಗೂ 9 ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸುಬ್ರಮಣ್ಯ ಪ್ರಸಾದ್ ಪ್ರಾರ್ಥಿಸಿದರು ಮಠದ ಆಡಳಿತ ಅಧಿಕಾರಿ ಗೋವಿಂದರಾಜ್ ಸ್ವಾಗತಿಸಿ ಮಣಿಪಾಲದ ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.