Monday, July 7, 2025
Banner
Banner
Banner
Home » ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

by NewsDesk

ಉಡುಪಿ : ಕರಾವಳಿಯ ಯಕ್ಷಗಾನಕ್ಕೆ ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಹವ್ಯಾಸಿ ಕಲಾವಿದರಾಗಿ ಬರುತ್ತಿದ್ದಾರೆ. ಅಲ್ಲದೆ ಉತ್ಸಾಹಿ ಯುವ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿ ಮೇಳಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿoದ ಇಲ್ಲಿನ ಯಕ್ಷಗಾನ ಕಲೆಗೆ ಉತ್ತಮ ಭವಿಷ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯದ ಡಾ.ಯು.ಆರ್.ರಾವ್ ಸಭಾಂಗಣದಲ್ಲಿ ವಿವಿಯ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಕೊಡ ಮಾಡುವ 2024-25ನೇ ಸಾಲಿನ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಮ್ಮೆಲ್ಲಾ ಹಿರಿಯ ಯಕ್ಷಗಾನ ಕಲಾವಿದರು ಯಕ್ಷಗಾನವನ್ನು ದೈವೀ ಕಲೆಯೆಂದು ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಕಲೆಯ ಉಳಿವು ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಅವರು ಹಾಕಿಕೊಟ್ಟ ಆ ಸಂಪ್ರದಾಯದ ಚೌಕಟ್ಟಿನಲ್ಲಿಯೇ ಯಕ್ಷಗಾನ ಮುಂದುವರಿಸಿಕೊoಡು ಹೋಗುವ ಅಗತ್ಯವಿದೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಈ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯಕ್ಷಗಾನವನ್ನು ಅಭ್ಯಾಸಿಸುತ್ತಿರುವುದು ಸಂತೋಷದ ಸಂಗತಿ. ಹೀಗಾಗಿ ನಮ್ಮ ಯಕ್ಷಗಾನಕ್ಕೆ ಮೂಡಲಪಾಯದ ಪರಿಸ್ಥಿತಿ ಬರಲಾರದು ಎಂದು ಅವರು ಅಭಿಪ್ರಾಯಪಟ್ಟರು.

ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಅವರು ಒಂದು ಕೋಟಿ ರೂ.ಅನುದಾನ ನೀಡಿ ಸ್ಥಾಪಿಸಿದ ಈ ಯಕ್ಷಗಾನ ಕೇಂದ್ರ ಇಂದು ಉತ್ತಮ ಕಾರ್ಯ ಮಾಡುತ್ತಿದೆ. ಸಾಧಕ ಯಕ್ಷಗಾನ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವುದಲ್ಲದೆ ಯಕ್ಷಗಾನಕ್ಕೆ ಸಂಬoಧಪಟ್ಟ ಸಂಶೋಧನಾ ಕೃತಿಗಳಿಗೂ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ. ವಿಶ್ವವಿದ್ಯಾಲಯದ ಈ ಕಾರ್ಯಕ್ಕೆ ಯಕ್ಷಗಾನ ಅಕಾಡೆಮಿಯಿಂದ ಸಾಧ್ಯವಾಗುವ ಸಹಕಾರವನ್ನು ನೀಡಲು ಬದ್ಧನಾಗಿದ್ದೇನೆ ಎಂದು ಅವರು ತಿಳಿಸಿದರು.

ಪ್ರಶಸ್ತಿ ವಿಜೇತ ಕಲಾವಿದರಿಗೆ ಅಭಿನಂದನಾ ಭಾಷಣ ಮಾಡಿದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಅವರು, ಇಂದು ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿಯ ಭರವಿಲ್ಲ. ಅದೆಷ್ಟೋ ಸಂಘಸoಸ್ಥೆಗಳು ಪ್ರಶಸ್ತಿ ನೀಡಿಕೊಂಡು ಬರುತ್ತಿವೆ. ಆದರೆ ಮಂಗಳೂರು ವಿಶ್ವವಿದ್ಯಾಲಯ ನೀಡುವ ಯಕ್ಷಮಂಗಳ ಪ್ರಶಸ್ತಿಗೆ ವಿಶೇಷ ಮನ್ನಣೆ, ಗೌರವವಿದೆ. ದಾನಿಗಳು ನೀಡುವ ಮೊತ್ತದಲ್ಲಿಯೇ ಸರಳವಾಗಿ ಸಮಾರಂಭವನ್ನು ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈವರೆಗೆ 22 ಮಂದಿ ಯಕ್ಷಮಂಗಳ ಪ್ರಶಸ್ತಿ ಹಾಗೂ 7 ಮಂದಿ ಯಕ್ಷಮಂಗಳ ಕೃತಿ ಪ್ರಶಸ್ತಿ ನೀಡಲಾಗಿದೆ. ಯಕ್ಷಗಾನ ಜನಪದವೇ ? ಶಾಸ್ತ್ರೀಯವೇ ಎಂಬ ಜಿಜ್ಞಾಸೆ ಹುಟ್ಟಿಕೊಂಡಿದೆ. ಆದರೆ ಯಕ್ಷಗಾನ ಜನಪದೀಯವಾಗಿದ್ದರೂ ಕೂಡಾ ಇಂದು ಶಾಸ್ತ್ರೀಯ ಕಲೆಯಾಗಿಯೂ ಗುರುತಿಸಲ್ಪಟ್ಟಿದೆ ಎಂದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ವಾಣಿಜ್ಯೇತರ ಒಲವಿನಿಂದ ಕೆಲಸ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯ ಆಯೋಜಿಸುವ ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕಿರಣಗಳಿಗೆ ಅಕಾಡೆಮಿ ಸಹಕಾರ ನೀಡುವಂತಾದರೆ ಒಳಿತು. ನಾವು ಅಕಾಡೆಮಿ ನೀಡುವ ಪ್ರೋತ್ಸಾಹವನ್ನು ಸ್ವೀಕರಿಸಲು ಸಿದ್ಧರಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಕಾಸರಗೋಡು, ಯಕ್ಷಗಾನ ವಿದ್ವಾಂಸ ಪ್ರೊ. ಎಂ. ಎಲ್. ಸಾಮಗ ಹಾಗೂ ತೆಂಕುತಿಟ್ಟು ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಇವರಿಗೆ 2024-25ನೇ ಸಾಲಿನ ಯಕ್ಷ ಮಂಗಳ ಪ್ರಶಸ್ತಿ ಹಾಗೂ ಅಶೋಕ ಹಾಸ್ಯಗಾರ ಶಿರಸಿ ಅವರ ‘ದಶರೂಪಕಗಳ ದಶಾವತಾರ’ ಯಕ್ಷಗಾನ ಸಂಶೋಧನಾ ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿ ವಿ ಯ ಕುಲಪತಿ ಪ್ರೊ. ಪಿ. ಎಲ್. ಧರ್ಮ ವಹಿಸಿದ್ದರು. ಕುಲಸಚಿವ ಕೆ. ರಾಜು ಮೊಗವೀರ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ ಉಪಸ್ಥಿತರಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೇಂದ್ರದ ಸಂಶೋಧನಾಧಿಕಾರಿ ಸತೀಶ್ ಕೊಣಾಜೆ ವಂದಿಸಿದರು.

ಪ್ರಶಸ್ತಿ ವಿಜೇತರ ಬಗ್ಗೆ ಯಕ್ಷಗಾನ ಪದ್ಯವನ್ನು ದ್ವಿವಿತ್ ಕೋಟ್ಯಾನ್ ಪೆರಾಡಿ ರಚಿಸಿದರೆ, ಯುವ ಭಾಗವತ ಮನ್ವಿತ್ ಶೆಟ್ಟಿ ಇರಾ ಅದನ್ನು ಸುಶ್ರಾವ್ಯವಾಗಿ ಹಾಡಿ ಸಮಾರಂಭದ ಕಳೆಯನ್ನು ಹೆಚ್ಚಿಸಿದರು. ಕೇಂದ್ರದ ಹಳೆ ವಿದ್ಯಾರ್ಥಿನಿ ಸಾಯಿ ಸುಮಾ ನಾವುಡ ನಿರೂಪಿಸಿದರು. ಹಿಮ್ಮೇಳದಲ್ಲಿ ಚೆಂಡೆಯಲ್ಲಿ ಕೌಶಿಕ್ ರಾವ್ ಪುತ್ತಿಗೆ, ಮದ್ದಳೆ ಸ್ಕಂದ ಕೊನಾರ್ ಹಾಗೂ ಚಕ್ರತಾಳದಲ್ಲಿ ಹರಿಶ್ಚಂದ್ರ ನಾಯ್ಗ ಮಾಡೂರು ಸಹಕರಿಸಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb