ಕಾರ್ಕಳ : ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ನಸುಕಿನ ವೇಳೆಯಲ್ಲಿ ನಡೆದ ವಿಶ್ವರೂಪ ದರ್ಶನ ನೆರೆದ ಅಸಂಖ್ಯಾತ ಭಕ್ತರ ಕಣ್ಮನ ಸೆಳೆಯಿತು.
ದೇವಸ್ಥಾನದ ಒಳ ಹಾಗೂ ಹೊರ ಭಾಗಗಳಲ್ಲಿ ಬೆಳಗಿಸಿದ ಸಾವಿರಾರು ಹಣತೆಗಳ ಬೆಳಕಿನಲ್ಲಿ ದೇವಾಲಯದ ಸೊಬಗು ಇಮ್ಮಡಿಗೊಂಡಿತ್ತು. ಆ ದೃಶ್ಯ ಸಹೃದಯಿ ಭಕ್ತರ ಮನಕ್ಕೆ ಮುದನೀಡಿತು. ದೇವಾಲಯದ ಒಳ ಪ್ರಾಂಗಣದಲ್ಲಿ ವರ್ಣರಂಜಿತ ರಂಗೋಲಿಗಳು ಮೂಡಿದ್ದವು. ಅದರಲ್ಲೂ ತ್ರೀಡಿ ಎಫೆಕ್ಟ್‌ನ ಈ ರಂಗೋಲಿಗಳು ನೋಡುಗರಿಗೆ ಅಚ್ಚರಿ ಹುಟ್ಟಿಸಿತು. ನಸುಕಿನ ವೇಳೆ ಮೂರು ಗಂಟೆಗೆ ಮಣ್ಣಗೋಪುರದಿಂದ ಭಜನೆ ಹೊರಟು ದೇವಾಲಯವನ್ನು ತಲುಪಿತು. ಮೂರೂವರೆ ಗಂಟೆಗೆ ದೇವಾಲಯದಲ್ಲಿ ಮಂತ್ರಘೋಷ ಸಹಿತ ಭಜನಾ ಸಂಕೀರ್ತನೆಗಳ ಹಿನ್ನೆಲೆಯಲ್ಲಿ ದೇವಾಲಯದ ದ್ವಾರಪೂಜೆ ನಡೆದು ದೇವರ ದರ್ಶನ ಆರಂಭಗೊಂಡಿತು.
ಅಸಂಖ್ಯಾತ ಮಂದಿ ಸರದಿ ಸಾಲಿನಲ್ಲಿ ಆಗಮಿಸಿ ದೇವರ ವಿಶ್ವರೂಪ ದರ್ಶನ ಪಡೆದರು. ಹಿನ್ನೆಲೆಯ ಭಕ್ತಿ ಸಂಗೀತ ದೈವಿಕ ವಾತಾವರಣಕ್ಕೆ ಸಾಕ್ಷಿಯಾಗಿತ್ತು. ಬಂದ ಎಲ್ಲ ಭಕ್ತಾದಿಗಳಿಗೂ ದೇವಾಲಯದಿಂದ ಪ್ರಸಾದ ವಿತರಣೆ ವ್ಯವಸ್ಥೆಯಿತ್ತು. ಒಂದೇ ಒಂದು ವಿದ್ಯುದ್ದೀಪ ಇಲ್ಲದೇ ಎಲ್ಲವೂ ನೈಸರ್ಗಿಕ ಮಣ್ಣಿನ ಹಣತೆಗಳ ಬೆಳಕಿನಲ್ಲಿ ವೆಂಕಟರಮಣ ದೇವಳವು ಮಿಂದೇಳುವಂತಿತ್ತು. ಸೂರ್ಯೋದಯದ ಮೊದಲು ದೇವರಿಗೆ ವಿಶೇಷ ಪೂಜೆ ನಡೆಯಿತು. ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದವಾಗಿ ಇಲ್ಲಿಯೇ ತಯಾರಾದ ತುಪ್ಪದ ತಿರುಪತಿಯ ಲಾಡು ಮತ್ತು ಫಲವಸ್ತುಗಳನ್ನು ನೀಡಲಾಯ್ತು.
ಬೆಳಿಗ್ಗೆ ನಸುಕಾದರೂ ಸರತಿಯ ಸಾಲು ಕರಗಲಿಲ್ಲ. ಇದೇ ಕಾರಣಕ್ಕೆ ಭಕ್ತಿ ಭಾವ ಪರಾಕಾಷ್ಠೆಯ ವಿಶ್ವರೂಪ ದರ್ಶನ ಭಕ್ತರಿಗೆ ಇಡೀ ವರ್ಷ ಮರೆತು ಹೋಗುವುದೇ ಇಲ್ಲ.