Saturday, January 18, 2025
Banner
Banner
Banner
Home » ನವೆಂಬರ್ 10 ರಂದು ಯುವವಾಹಿನಿ ಸಂಸ್ಥೆಯಿಂದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ

ನವೆಂಬರ್ 10 ರಂದು ಯುವವಾಹಿನಿ ಸಂಸ್ಥೆಯಿಂದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ

by NewsDesk

ಕರಾವಳಿಯ ಕಡಲತಡಿಯ ಪುಣ್ಯ ಭೂಮಿಯಲ್ಲಿ ಜನಿಸಿ, ಕನ್ನಡ ಸಾರಸ್ವತ ಲೋಕದ ಬೆಳ್ಳಿತಾರೆಯಾಗಿ ಬೆಳಗಿ, ಕನ್ನಡದ ಶ್ರೇಷ್ಠ ಕತೆಗಾರರಾಗಿ, ನಟರಾಗಿ, ನಾಟಕಕಾರರಾಗಿ, ಪತ್ರಕರ್ತರಾಗಿ, ಬರಹಗಾರರಾಗಿ, ಕನ್ನಡ ತುಳು ಚಿತ್ರಗಳ‌ ನಿರ್ದೇಶಕರಾಗಿ ಸಾರಸ್ವತ ಲೋಕದಲ್ಲಿ ಮಿಂಚಿ ಮರೆಯಾದ ಹೆಮ್ಮೆಯ ಧೀಮಂತ ಸಾಹಿತಿ ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿಯು ಕಳೆದ 20 ವರ್ಷಗಳಿಂದ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ವಿಶುಕುಮಾರ್ ಕೈಯಾಡಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಈ ನಾಡಿನ ಸಾಧಕರಿಗೆ ಯಾ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

2002ನೇ ನವೆಂಬರ್ 3 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕವಿಗೋಷ್ಟಿ, ವಿಚಾರ ಗೋಷ್ಠಿ, ಸಂವಾದದೊಂದಿಗೆ ವಿಶುಕುಮಾರ್ ಸಂಸ್ಮರಣಾ ಕಾರ್ಯಕ್ರಮ ನಡೆಸಿತು. ಇದಕ್ಕೆ ಲಭಿಸಿದ ಅಭೂತ ಪೂರ್ವ ಯಶಸ್ಸಿನಿಂದಾಗಿ ಯುವವಾಹಿನಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತು.

ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಿ 2003ನೇ ಸಾಲಿನಿಂದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಮಾಡಲು ಮುಂದಡಿ ಇಟ್ಟಿತು.

ಇದಲ್ಲದೆ ವಿಶುಕುಮಾರ್ ಬದುಕು ಸಾಹಿತ್ಯ ಸಂವಾದ ಕಾರ್ಯಕ್ರಮ, ವಿಶುಕುಮಾರ್ ಕನ್ನಡ ರಾಜ್ಯೋತ್ಸವ, ವಿಶುಕುಮಾರ್ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ಭಾಷಣ ಸ್ಪರ್ಧೆ, ವಿಶುಕುಮಾರ್ ಅವರ ನಾಟಕ ಅಭಿನಯ ನಡೆಸುತ್ತಾ, ಮುದ್ರಣವಾಗಿದ್ದರೂ ಇಂದು ಲಭ್ಯವಿಲ್ಲದ ಅವರ ಕೃತಿಗಳಿಗೆ ಮರುಜೀವ ನೀಡುವ ಕಾರ್ಯವನ್ನು ಯುವವಾಹಿನಿ ನಡೆಸುತ್ತಾ ಬರುತ್ತಿದೆ.

2003 ನೇ ಸಾಲಿನ ಪ್ರಶಸ್ತಿಯನ್ನು
ಕಾದಂಬರಿಕಾರ ಡಾ. ನಾ. ಮೊಗಸಾಲೆಯವರಿಗೆ ನೀಡಲಾಯಿತು. 2004ನೇ ಸಾಲಿನಲ್ಲಿ ಸಣ್ಣ ಕವಿತೆಗಳಿಗಾಗಿ ಅನುಸೂಯದೇವಿ, 2005ನೇ ಸಾಲಿನಲ್ಲಿ ಕವನ ಸಂಕಲಕ್ಕಾಗಿ ಶ್ರೀನಿವಾಸ ಕಾರ್ಕಳ, 2006ನೇ ಸಾಲಿನಲ್ಲಿ ರಂಗಕರ್ಮಿ ಸದಾನಂದ ಸುವರ್ಣ, 2007‌ನೇ ಸಾಲಿನಲ್ಲಿ ಅಂಕಣ ಬರಹಕಾರ ಕೆ. ಆನಂದ ಗಾಣಿಗ, 2008‌ನೇ ಸಾಲಿನಲ್ಲಿ ಕಾದಂಬರಿ ಕ್ಷೇತ್ರದಲ್ಲಿ ಡಾ. ಪ್ರಭಾಕರ್ ನೀರುಮಾರ್ಗ, 2009‌ನೇ ಸಾಲಿನಲ್ಲಿ ಕಥಾಸಂಕಲನಕ್ಕಾಗಿ ಡಾ. ರಾಮಕೃಷ್ಣ ಗುಂದಿ, 2010‌ನೇ ಸಾಲಿನಲ್ಲಿ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ, 2011‌ನೇ ಸಾಲಿನಲ್ಲಿ ಯಕ್ಷಗಾನ‌ ವಿದ್ವಾಂಸ ಡಾ. ಕೆ.ಎಂ.ರಾಘವ ನಂಬಿಯಾರ್, 2012‌ನೇ ಸಾಲಿನಲ್ಲಿ ಸಾಹಿತಿ, ಪತ್ರಕರ್ತ ಪಾ.ಸಂಜೀವ ಬೋಳಾರ್, 2013‌ನೇ ಸಾಲಿನಲ್ಲಿ ಪತ್ರಕರ್ತ ನವೀನ್ ಚಂದ್ರ ಪಾಲ್, 2014ನೇ ಸಾಲಿನಲ್ಲಿ ‌ಬಹುಭಾಷಾ ಸಾಹಿತಿ ಮುದ್ದುಮೂಡು ಬೆಳ್ಳೆ, 2015‌ನೇ ಸಾಲಿನಲ್ಲಿ ಹಿರಿಯ ಸಾಹಿತಿ ಬೊಳುವಾರ್ ಮಹಮ್ಮದ್ ಕುಂಞ, 2016‌ನೇ ಸಾಲಿನಲ್ಲಿ ಸಾಹಿತಿ, ಸಂಘಟಕಿ ಜಾನಕಿ ಬ್ರಹ್ಮಾವರ್, 2017‌ನೇ ಸಾಲಿನಲ್ಲಿ ಸಮಗ್ರ ಸಾಹಿತ್ಯದ ಸಾಧಕಿ ಬಿ.ಎಮ್ ರೋಹಿಣಿ, 2018ನೇ ಸಾಲಿನಲ್ಲಿ ರಂಗಭೂಮಿ ಸಾಧಕ ವಸಂತ್ ವಿ. ಅಮೀನ್, 2021‌ನೇ ಸಾಲಿನಲ್ಲಿ ಜಾನಪದ ಸಂಶೋಧಕ ಡಾ.ತುಕರಾಮ ಪೂಜಾರಿ, 2022‌ನೇ ಸಾಲಿನಲ್ಲಿ ಸಾಹಿತಿ ಡಾ.ಬಿ.ಜನಾರ್ದನ ಭಟ್ ಇವರುಗಳಿಗೆ ವಿಶುಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

2023‌ನೇ ಸಾಲಿನಲ್ಲಿ ಚಲನಚಿತ್ರ ಕ್ಷೇತ್ರದ ಸಾಧಕ ಡಾ. ಪುನೀತ್ ರಾಜ್‌ಕುಮಾರ್ ಇವರಿಗೆ ಮರಣೋತ್ತರವಾಗಿ ವಿಶುಕುಮಾರ್ ಪ್ರಶಸ್ತಿ ನೀಡಲಾಗಿದೆ.

2024‌ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಸಾಹಿತಿ ಸಂಶೋಧಕ, ಪತ್ರಿಕೋದ್ಯಮಿ ಬಾಬು ಶಿವಪೂಜಾರಿ ಆಯ್ಕೆಯಾಗಿದ್ದಾರೆ.

2009‌ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪುರಸ್ಕೃತ ಡಾ.ಪ್ರಭಾಕರ ನೀರುಮಾರ್ಗ ಇವರ ಆಶಯದಂತೆ, ಉದಯೋನ್ಮುಖ, ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2009ನೇ ಸಾಲಿನಿಂದ ಯುವವಾಹಿನಿ ಯುವಸಾಹಿತಿ ಪ್ರಶಸ್ತಿ ಆರಂಭಿಸಲಾಯಿತು.
2024ನೇ ಸಾಲಿನ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತಿ ಪ್ರಶಸ್ತಿಗೆ ಉದಯೋನ್ಮುಖ ಬರಹಗಾರ್ತಿ ರಾಜಶ್ರೀ ಜೆ. ಪೂಜಾರಿ ಆಯ್ಕೆಯಾಗಿದ್ದಾರೆ.

ಇದೇ ಬರುವ ನವೆಂಬರ್ 10‌ನೇ ಆದಿತ್ಯವಾರದಂದು ಮಂಗಳೂರಿನ ಉರ್ವಸ್ಟೋರ್ನಲ್ಲಿರುವ ತುಳುಭವನದ “ಅಮೃತ ಸೋಮೇಶ್ವರ ಸಭಾಂಗಣ”ದಲ್ಲಿ ಬೆಳಗ್ಗೆ ಗಂಟೆ 9.30‌ರಿಂದ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಹಯೋಗದೊಂದಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಹಿರಿಯ ಸಾಹಿತಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ. ವೀರಪ್ಪ ಮೊಯಿಲಿಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಎ. ಕೋಟ್ಯಾನ್, ಗುರುಬೆಳದಿಂಗಳು ಫೌಂಡೇಶನ್ (ರಿ), ಕುದ್ರೋಳಿ ಇದರ ಅಧ್ಯಕ್ಷರಾದ ಪದ್ಮರಾಜ್‌ ಆರ್. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ., ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ.ಕೆ.. ವಿಶುಕುಮಾರ್ ದತ್ತಿನಿಧಿ ಸಂಚಾಲಕರಾದ ಸುರೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ರಾಜೇಂದ್ರ ಚಿಲಿಂಬಿ, ಸಲಹೆಗಾರರಾದ ಟಿ.ಶಂಕರ್ ಸುವರ್ಣ, ಸಾಧು ಪೂಜಾರಿ, ಪ್ರಚಾರ ನಿರ್ದೇಶಕರಾದ ಪ್ರಥ್ವಿರಾಜ್, ಪಣಂಬೂರು ಘಟಕದ ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣ, ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb