ಉಡುಪಿ : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಉಪ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 24ರಂದು ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮತ ಎಣಿಕೆಗೆ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, 12 ಮೇಜುಗಳಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬರು ಸಹಾಯಕರು ಮತ್ತು ಒಬ್ಬರು ‘ಡಿ’ ಗ್ರೂಪ್ ಸಿಬಂದಿ ಇರಲಿದ್ದಾರೆ. ಒಟ್ಟು 392 ಮತ ಪೆಟ್ಟಿಗೆಗಳನ್ನು ಪ್ರತಿ ಟೇಬಲ್‌ಗೆ 33ರಂತೆ ಹಂಚಿಕೆ ಮಾಡಲಾಗುತ್ತದೆ.
ಮೊದಲು ಹಂತದಲ್ಲಿ ಒಟ್ಟು ಮತಗಳ ಎಣಿಕೆ ಮತ್ತು ಮಿಶ್ರಣ ಕಾರ್ಯ, ಎರಡನೇ ಹಂತದಲ್ಲಿ ಮತಪತ್ರಗಳ ಸಿಂಧುತ್ವ ಪರಿಶೀಲನೆ ಮಾಡಿ ಅನಂತರ ಒಂದನೇ ಪ್ರಾಶಸ್ತ್ರದ ಮತಗಳ ಎಣಿಕೆ ಮಾಡಲಾಗುತ್ತದೆ.
ನಿಗದಿತ ಕೋಟವನ್ನು ಮೊದಲ ಪ್ರಾಶಸ್ತ್ರದಲ್ಲಿ ಪಡೆದ ಅಭ್ಯರ್ಥಿಯ ಆಯ್ಕೆಯನ್ನು ಘೋಷಿಸಲಾಗುವುದು. ಅಕ್ಟೋಬರ್ 21ರಂದು ನಡೆದ ಚುನಾವಣೆಯಲ್ಲಿ ಒಟ್ಟು 392 ಮತಗಟ್ಟೆಗಳಲ್ಲಿ 5,906 ಮತದಾರರು ಮತ ಚಲಾಯಿಸಿದ್ದರು.