ಉಡುಪಿ : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಕರಾವಳಿಯ ಯಾತ್ರಾರ್ಥಿಗಳಿಗಾಗಿ ಒದಗಿಸಲಾದ ವಿಶೇಷ ರೈಲಿನ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಫೆಬ್ರವರಿ 14ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವಕಾಶ ಮಾಡಿಕೊಡಲಾಗಿತ್ತು. ಕೇವಲ 15 ನಿಮಿಷಗಳಲ್ಲೇ ಎಲ್ಲ ಸೀಟುಗಳು ಭರ್ತಿಯಾಗಿವೆ.
ಬೆಳಗ್ಗೆ 8 ಗಂಟೆಯಿಂದಲೇ ಇಂದ್ರಾಳಿ ರೈಲು ನಿಲ್ದಾಣ ಸಹಿತ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್‌ಗಾಗಿ ಯಾತ್ರಾರ್ಥಿಗಳು ಕಾದು ಕುಳಿತಿದ್ದರು. ಮಧ್ಯಾಹ್ನ 1 ಗಂಟೆಗೆ ಬುಕ್ಕಿಂಗ್ ತೆರೆದು 1.15ರೊಳಗೆ ಬಂದ್ ಆಗಿರುವುದರಿಂದ ಅನೇಕರಿಗೆ ಟಿಕೆಟ್ ಸಿಗಲಿಲ್ಲ.
ಉಡುಪಿಯಿಂದ ಪ್ರಯಾಗ್‌ರಾಜ್‌ಗೆ ರೈಲು ಬುಕ್ಕಿಂಗ್ ಮಾತ್ರ ಮಧ್ಯಾಹ್ನ ಅವಕಾಶ ಮಾಡಲಾಗಿತ್ತು. ಅಲ್ಲಿಂದ ವಾಪಸ್ ಬರುವ ರೈಲಿನ ಟಿಕೆಟ್ ಬುಕ್ಕಿಂಗ್ ಆ ವೇಳೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಬಹುತೇಕರು ಗೊಂದಲಕ್ಕೆ ಒಳಗಾಗಿದ್ದರು. ಅನಂತರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೊಂಕಣ್ ರೈಲ್ವೇ ಅಧಿಕಾರಿಗಳು ದಿಲ್ಲಿಗೆ ನಿರಂತರ ಸಂಪರ್ಕ ಬೆಳೆಸಿದ ಫಲವಾಗಿ ರಾತ್ರಿ 8 ಗಂಟೆ ಸುಮಾರಿಗೆ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದ್ದು, ಆ ವೇಳೆಗೆ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್‌ಗಳು ಮುಚ್ಚಿದ್ದವು. ಹೀಗಾಗಿ ಆನ್‌ಲೈನ್‌ನಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದಲೂ ಒಂದಿಷ್ಟು ಮಂದಿ ಗೊಂದಲಕ್ಕೆ ಒಳಗಾಗಿದ್ದರು. ಪ್ರಯಾಗ್ ರಾಜ್‌ಗೆ ಹೋಗಲು ಮುಂಗಡ ಟಿಕೆಟ್ ಕಾದಿರಿಸಿದ್ದ ಹಲವರಿಗೆ ವಾಪಸ್ ಬರಲು ಟಿಕೆಟ್ ಸಿಕ್ಕಿರಲಿಲ್ಲ.
ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜತೆ ಮಾತನಾಡಿ, ಟಿಕೆಟ್ ಬುಕ್ಕಿಂಗ್ ಬಗ್ಗೆ ಸಣ್ಣಪುಟ್ಟ ಗೊಂದಲವಾಗಿದ್ದರೂ ಎಲ್ಲವೂ ಸರಿ ಯಾಗಲಿದೆ. ರಿಟರ್ನ್ ಟಿಕೆಟ್ ಆನ್‌ಲೈನ್‌ನಲ್ಲಿ ವ್ಯವಸ್ಥೆಯಾಗಿತ್ತು. ಇನ್ನೊಂದು ವಿಶೇಷ ರೈಲು ವ್ಯವಸ್ಥೆಗೂ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಫೆಬ್ರವರಿ 17ರ ಮಧ್ಯಾಹ್ನ 12.30ಕ್ಕೆ ಉಡುಪಿಯಿಂದ ಹೊರಡುವ ಈ ರೈಲು ಫೆಬ್ರವರಿ 19ರ ಬೆಳಗ್ಗೆ ಪ್ರಯಾಗ್‌ರಾಜ್ ತಲುಪಲಿದೆ. 20ರ ಸಂಜೆ 6ಕ್ಕೆ ಅಲ್ಲಿಂದ ಹೊರಟು 22ರ ಸಂಜೆ ಉಡುಪಿ ತಲುಪಲಿದೆ.