ಉಡುಪಿ : ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2024-25ನೇ ಸಾಲಿನಲ್ಲಿ 2,935 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ 19.37 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 107 ವರ್ಷಗಳಿಂದ ಸಾರ್ಥಕ ಸೇವೆಯನ್ನು ನೀಡುತ್ತಿರುವ ಸಂಘವು 2024-25 ಆರ್ಥಿಕ ವರ್ಷಾಂತ್ಯಕ್ಕೆ 21,519 ಸದಸ್ಯರಿಂದ 4.83 ಕೋ.ರೂ ಪಾಲು ಬಂಡವಾಳ ಹೊಂದಿದೆ. 1,050 ಕೋಟಿ ರೂ. ವ್ಯವಹಾರ ವರದಿ ವರ್ಷಾಂತ್ಯಕ್ಕೆ ಸಂಘವು ಒಟ್ಟು 573 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಕಳೆದ ಸಾಲಿಗಿಂತ ಶೇ.12.45 ಏರಿಕೆ ಕಂಡಿದೆ ಎಂದರು.
ಸದಸ್ಯರಿಗೆ ವಿವಿಧ ಸಾಲವನ್ನು ವಿತರಿಸುತ್ತಿದ್ದು ವರದಿ ವರ್ಷಾಂತ್ಯಕ್ಕೆ 477 ಕೋಟಿ ರೂ. ಸದಸ್ಯರ ಹೊರಬಾಕಿ ಸಾಲ ಇದ್ದು, ಕಳೆದ ಸಾಲಿಗಿಂತ ಶೇ.18.62 ಏರಿಕೆ ಕಂಡಿದೆ. 95.18 ಕೋ.ರೂ ನಿಧಿಗಳು, 229.73 ಕೋಟಿ ರೂ ಹೂಡಿಕೆಗಳು ಇದ್ದು, 673.20 ಕೋಟಿ ರೂ. ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ಅವರು ಹೇಳಿದರು.
ಸಂಘವು ತನ್ನ ಕಾರ್ಯಕ್ಷೇತ್ರದಲ್ಲಿ 11 ಶಾಖೆಗಳನ್ನು ಹೊಂದಿದ್ದು ಈ ಪೈಕಿ 8 ಶಾಖೆಗಳು ಸಂಘದ ಸ್ವಂತ ನಿವೇಶನದಲ್ಲಿವೆ. 12ನೇ ಶಾಖೆಯಾಗಿ ಕುಂದಾಪುರದ ಹೃದಯಭಾಗದಲ್ಲಿ ಸ್ವಂತ ಕಛೇರಿಯನ್ನು ಈಗಾಗಲೇ ಖರೀದಿಸಲಾಗಿದ್ದು, ಸದ್ಯದಲ್ಲೇ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ. ವಾರ್ಷಿಕ ಸುಮಾರು 20 ಲಕ್ಷ ರೂ.ನಷ್ಟು ಹಣವನ್ನು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತದೆ ಎಂದರು.
ಮುಂದಿನ ವರದಿ ವರ್ಷದಲ್ಲಿ 800 ಕೋಟಿ ರೂ. ಠೇವಣಿ, 700 ಕೋಟಿ ರೂ. ಹೊರಬಾಕಿ ಸಾಲ ಅಂದರೆ ಒಟ್ಟು 1,500 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಿದೆ. ಉಡುಪಿಯ ಹೃದಯ ಭಾಗದಲ್ಲಿ ಈಗಾಗಲೇ ಖರೀದಿಸಿರುವ 1 ಎಕ್ರೆ ಆಸ್ತಿಯಲ್ಲಿ 10ಕೋಟಿ ರೂ. ವೆಚ್ಚದಲ್ಲಿ ಸಹಕಾರ ಸೌಧ ನಿರ್ಮಾಣದ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜಾರ್ಜ್ ಸಾಮ್ಯುಯೆಲ್, ಆಡಳಿತ ಮಂಡಳಿ ಸದಸ್ಯರಾದ ಉಮಾನಾಥ ಎಲ್., ವಿನಯ ಕುಮಾರ್ ಟಿ.ಎ, ಪದ್ಮನಾಭ ನಾಯಕ್, ಸದಾಶಿವ ನಾಯ್ಕಿ, ಮನೋಹರ ಎಸ್. ಶೆಟ್ಟಿ, ಜಯಾ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.