ಮಂಗಳೂರು : ವಿದ್ಯುತ್ ತಂತಿ ಸ್ಪರ್ಶಗೊಂಡು ರಿಕ್ಷಾ ಚಾಲಕರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಗರದ ರೊಸಾರಿಯೊ ಶಾಲೆಯ ಬಳಿ ನಡೆದಿದೆ.
ರಾಜು ಮತ್ತು ದೇವರಾಜು ಮೃತಪಟ್ಟ ರಿಕ್ಷಾ ಚಾಲಕರು. ಇವರಲ್ಲಿ ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು ಸಕಲೇಶಪುರದವರು ಎಂದು ತಿಳಿದು ಬಂದಿದೆ. ಇಬ್ಬರೂ ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿಯ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.
ಬೆಳಗ್ಗೆ 4.30ರ ಸುಮಾರಿಗೆ ರಿಕ್ಷಾ ಸ್ವಚ್ಚಗೊಳಿಸಲೆಂದು ಹೊರಬಂದಾಗ, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರು. ಒಬ್ಬನಿಗೆ ವಿದ್ಯುತ್ ತಂತಿ ಸ್ಪರ್ಶಿಸಿರಬಹುದು. ಮತ್ತೋರ್ವನು ಗೋಣಿ ಚೀಲ ಹಿಡಿದು ರಕ್ಷಣೆಗೆ ಮುಂದಾಗಿದ್ದು, ಆತನೂ ವಿದ್ಯುತ್ ಅಘಾತಕ್ಕೆ ಒಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎರಡೂ ಮೃತದೇಹಗಳನ್ನು ವೆನ್‌ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.



