Wednesday, January 8, 2025
Banner
Banner
Banner
Home » ಸಾರಿಗೆ ದರ ಹೆಚ್ಚಳ ಜನ ವಿರೋಧಿ : ಉಡುಪಿ ಜಿಲ್ಲಾ ಸಿಪಿಐಎಂ ಖಂಡನೆ

ಸಾರಿಗೆ ದರ ಹೆಚ್ಚಳ ಜನ ವಿರೋಧಿ : ಉಡುಪಿ ಜಿಲ್ಲಾ ಸಿಪಿಐಎಂ ಖಂಡನೆ

by NewsDesk

ಉಡುಪಿ : ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಾರಿಗೆ ದರಗಳು ಶೇಕಡ 15ರಷ್ಟು ಹೆಚ್ಚಿಸಿರುವ ರಾಜ್ಯ ಸರಕಾರ ಕ್ರಮವನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.

ಡೀಸೆಲ್ ದರಗಳ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದ ನೆಪದಲ್ಲಿ ದರ ಏರಿಕೆ ಮಾಡಿರುವುದು ಅಪ್ರಜಾಸತ್ತಾತ್ಮಕ ಮತ್ತು ಅವೈಜ್ಞಾನಿಕವಾಗಿದೆ. ಅಲ್ಲದೆ ಇದು ಸಾಮಾನ್ಯ ಜನರ ವಿರೋಧಿಯಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ನರಳುತ್ತಿರುವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ರಾಜ್ಯ ಸರಕಾರ ದರ ಹೆಚ್ಚಳದ ತೀರ್ಮಾನವನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೀಸೆಲ್ ಹೆಚ್ಚಳವಾಗಿದೆ ಎನ್ನುವ ಸರ್ಕಾರ, ಡೀಸೆಲ್ ದರ ಇಳಿದಾಗ ದರಗಳನ್ನು ಎಂದಾದರೂ ಕಡಿಮೆ ಮಾಡಿದೆಯೇ? ಅದಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಸಾರಿಗೆಯ ಡೀಸೆಲ್ ದರಗಳನ್ನು ಕಡಿಮೆ ಇಡಬೇಕಾದ್ದು ಸರಕಾರದ ಜವಾಬ್ದಾರಿಯಾಗಿದೆ. ವಿಪರ್ಯಾಸವೆಂದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವು ಮುಕ್ತ ಮಾರುಕಟ್ಟೆ ದರಗಳಿಗಿಂತ ದುಬಾರಿಯಾಗಿದೆ. ಸರಕಾರಕ್ಕೆ ನಿಜಕ್ಕೂ ವೆಚ್ಚವನ್ನು ಕಡಿಮೆ ಮಾಡಬೇಕೆಂದಿದ್ದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು ಅಥವಾ ಮುಕ್ತ ಮಾರುಕಟ್ಟೆ ದರಗಳಲ್ಲಾದರೂ ಪೂರೈಸಬೇಕು. ಆದ್ದರಿಂದ ಶೇಕಡ 15ರ ದರ ಹೆಚ್ಚಳಕ್ಕೆ ಡೀಸೆಲ್ ದರ ಹೆಚ್ಚಳ ಕಾರಣ ಎನ್ನುವುದು ಸುಳ್ಳು ನೆಪವಾಗಿದೆ.

ಸಿಬ್ಬಂದಿ ವೆಚ್ಚ ಹೆಚ್ಚಳವಾಗಿರುವುದು ಮತ್ತೊಂದು ಕಾರಣವೆನ್ನಲಾಗಿದೆ. ಈಗಾಗಲೇ ನಾಲ್ಕು ನಿಗಮಗಳಲ್ಲಿ ಸಿಬ್ಬಂದಿಗಳಿಗೆ ಸುಮಾರು 3 ವರ್ಷಗಳ ವೇತನ ಬಾಕಿ ನೀಡಬೇಕಿದೆ ಮತ್ತು ಹೊಸ ವೇತನ ಒಪ್ಪಂದ ಮಾಡಬೇಕಿದೆ. 1950ರ ಕಾಯ್ದೆ ಪ್ರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸರ್ಕಾರ ಬಜೆಟ್ ಬೆಂಬಲ ನೀಡುವುದು ಅಗತ್ಯ. ಏಕೆಂದರೆ ಸಾರ್ವಜನಿಕ ಹಿತ ದೃಷ್ಟಿಯಿಂದ ಒದಗಿಸುವ ಸಾರಿಗೆಯನ್ನು ಲಾಭ ನಷ್ಟದ ಲೆಕ್ಕದಲ್ಲಿ ನೋಡಬಾರದು. ನಷ್ಟ ಉಂಟಾದಲ್ಲಿ ಸರಕಾರ ಅದನ್ನು ಭರಿಸಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಗಳು ಎಲ್ಲಾ ಸಂದರ್ಭಗಳಲ್ಲೂ ಲಾಭವನ್ನು ತರಲು ಆಗುವುದಿಲ್ಲ. ಸಾರಿಗೆ ನಿಗಮಗಳ ಅರ್ಧದಷ್ಟು ಮಾರ್ಗ ಕಾರ್ಯಾಚರಣೆಗಳು ಗ್ರಾಮಾಂತರದಲ್ಲಿ ಇರುವುದರಿಂದ ಸಹಜವಾಗಿಯೇ ನಷ್ಟ ಹೊಂದುತ್ತದೆ. ಜನರ ಹಿತದೃಷ್ಟಿಯಿಂದ ಸರಕಾರ ಅದನ್ನು ಭರಿಸಬೇಕು. ಅದರ ಬದಲಿಗೆ ಬೆಲೆ ಹೆಚ್ಚಳ ಮಾಡುವುದು ಜನವಿರೋಧಿ ಕ್ರಮವಾಗಿದೆ

ಸಾರಿಗೆ ನಿಗಮಗಳ ನಷ್ಟ ಕಡಿಮೆ ಮಾಡಲು ಸಾರ್ವಜನಿಕರ, ರಾಜಕೀಯ ಪಕ್ಷಗಳ ಸಲಹೆಗಳನ್ನು ಆಡಳಿತ ವರ್ಗ ಪಡೆಯಬಹುದು. ಆಡಳಿತಾತ್ಮಕ ವಿಧಾನಗಳಲ್ಲಿ ಸಾಕಷ್ಟು ನಷ್ಟ ಕಡಿಮೆ ಮಾಡಬಹುದು. ಪ್ರಯಾಣಿಕರ ಸಾರಿಗೆ ದರ ಹೆಚ್ಚಳ ಉತ್ತಮ ಮಾರ್ಗವಲ್ಲ. ಎಲೆಕ್ಟ್ರಿಕ್ ಬಸ್ಸುಗಳನ್ನು ನಿಗಮಗಳೇ ಕಾರ್ಯಾಚರಣೆಯನ್ನು ಮಾಡಿದರೆ ಸಾಕಷ್ಟು ಆದಾಯ ಹೆಚ್ಚುತ್ತದೆ. ಖಾಸಗಿ ಕಂಪನಿಗಳ ಜೊತೆ ದುಬಾರಿ ಒಪ್ಪಂದಗಳನ್ನು ಮಾಡಿಕೊಂಡು ನಿಗಮಗಳೇ ನಷ್ಟ ಉಂಟು ಮಾಡಿಕೊಳ್ಳುತ್ತಿವೆ. ನಿಗಮಗಳ ಬಸ್ಸುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ನಷ್ಟ ಕಡಿಮೆ ಮಾಡಬಹುದು. ಸರ್ಕಾರ ಈ ವಿಧಾನಗಳನ್ನು ಕೈ ಬಿಟ್ಟು ದರ ಹೆಚ್ಚಿಸುತ್ತಿರುವುದು ಜನವಿರೋಧಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb