ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ನ ಸಾಂಸ್ಥಿಕ ಸಂಪರ್ಕ ಕಚೇರಿ [ಆಫೀಸ್ ಆಫ್ ಕಾರ್ಪೊರೇಟ್ ರಿಲೇಶನ್ಸ್] ಏಕ ದಿನ ಚಿಕಿತ್ಸಾ ಸಾಮರ್ಥ್ಯ ಅಭಿವೃದ್ಧಿ [ಕ್ಲಿನಿಕಲ್ ಕಾಂಪಿಟೆನ್ಸಿ ಡೆವಲಪ್‌ಮೆಂಟ್] ಕಾರ್ಯಕ್ರಮವನ್ನು ಜೂನ್ 14, 2024ರಂದು ಹಮ್ಮಿಕೊಂಡಿದ್ದು ಬೆಂಗಳೂರಿನ ಫಿಲಿಪ್ಸ್ ನಾವೀನ್ಯ ಕೇಂದ್ರ [ಫಿಲಿಪ್ಸ್ ಇನ್ನೋವೇಶನ್ ಸೆಂಟರ್] ದ ಆ್ಯಂಬುಲೇಟರಿ ಮಾನಿಟರಿಂಗ್ [ಹೃತ್‌ವಿದ್ಯುತ್‌ಕ್ರಿಯೆಯ ಪರಿಶೀಲನ] ಮತ್ತು ಡಯಗ್ನಿಸ್ಟಿಕ್ಸ್ [ರೋಗನಿರ್ಣಯ] ವಿಭಾಗದ 14 ಮಂದಿ ಇಂಜಿನಿಯರ್‌ಗಳು ಇದರಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವು ವಿಶೇಷವಾಗಿ ಹೃದಯದಲ್ಲಿ ವಿದ್ಯುತ್‌ಕ್ರಿಯೆಯನ್ನು ಪರಿಶೀಲಿಸುವ ಮತ್ತು ಕಾಯಿಲೆಯನ್ನು ನಿರ್ಧರಿಸುವ ವಿಚಾರದ ಬಗ್ಗೆ ಕೇಂದ್ರೀಕೃತವಾಗಿದ್ದು, ಇದು ತಂತ್ರಜ್ಞಾನ [ಇಂಜಿನಿಯರಿಂಗ್] ಮತ್ತು ಆರೋಗ್ಯಆರೈಕೆಯ ವಿಭಾಗಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ಮತ್ತು ಭಾಗಿಗಳಾದವರಿಗೆ ಸಮಗ್ರ ಪ್ರಾಯೋಗಿಕ ಅನುಭವವನ್ನು ನೀಡುವ ಕಾರ್ಯಕ್ರಮವಾಗಿತ್ತು. ಕೆಎಂಸಿಯ ನುರಿತ ಬೋಧಕರು ತರಗತಿಗಳನ್ನು ನಡೆಸಿಕೊಟ್ಟರಲ್ಲದೆ, ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳ ಕಾರ್ಯ ವೈಖರಿ, ಅವುಗಳ ಅನ್ವಯಗಳು, ಮತ್ತು ರೋಗಿಗಳ ಚಿಕಿತ್ಸೆಯ ಸವಾಲುಗಳ ಭಾಗಿಗಳು ತಿಳಿದುಕೊಂಡರು. ಒಟ್ಟಾರೆಯಾಗಿ ಕಾರ್ಯಕ್ರಮವು ವಿಷಯಕವಾದ ಅರಿವಿನ ಜೊತೆಗೆ ಪ್ರಾಯೋಗಿಕ ಅನುಭವಗಳನ್ನು ನೀಡುವ ಕುರಿತು ಒತ್ತು ನೀಡಿತು.
ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ನಾರಾಯಣ ಸಭಾಹಿತ್ ಅವರು ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತು ವೈದ್ಯಕೀಯ ವಿಭಾಗಗಳ ನಡುವೆ ಸಂಬಂಧವನ್ನು ಸಾಂದ್ರಗೊಳಿಸುವ ಆಶಯವನ್ನು ಎತ್ತಿಹಿಡಿದರಲ್ಲದೆ, ಇಂಜಿನಿಯರ್‌ಗಳನ್ನು ವೈದ್ಯಕೀಯ ಜ್ಞಾನದೊಂದಿಗೆ ಸಿದ್ಧಗೊಳಿಸುವುದರ ಅಗತ್ಯದ ಕುರಿತು ಮಾತನಾಡಿದರು. ‘ಸಾಮಾಜಿಕ ಸ್ವಾಸ್ಥ್ಯದ ಆವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಆರೋಗ್ಯಆರೈಕೆ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವಲ್ಲಿ ಪ್ರಸ್ತುತ ಕಾರ್ಯಕ್ರಮವು ಪ್ರಮುಖ ಹೆಜ್ಜೆಯಾಗಿದೆ‘ ಎಂದರು.
ಮಾಹೆಯ ತಾಂತ್ರಿಕ ಮತ್ತು ಯೋಜನಾ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಎನ್. ಎನ್. ಶರ್ಮಾ ಅವರು ‘ಎರಡೂ ಜ್ಞಾನಶಿಸ್ತುಗಳ ಸಹಭಾಗಿತ್ವದಿಂದಾಗಿ ಕೇವಲ ತಾಂತ್ರಿಕ ಸುಧಾರಣೆಯಷ್ಟೇ ಅಲ್ಲ, ವೈದ್ಯಕೀಯ ಶುಶ್ರೂಷಾ ವಿಭಾಗದ ನವೀನ ಸಂಶೋಧನೆಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳುವಲ್ಲಿಯೂ ಪರಿಣಾಮ ಬೀರಲಿದೆ. ಅಂತಿಮವಾಗಿ ರೋಗಿಗಳ ಶುಶ್ರೂಷೆಯಲ್ಲಿ ಸುಧಾರಣೆ ತರುವ ಜೀಪಪರ ಧೋರಣೆಯೇ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ’ ಎಂದರು.
ಮಾಹೆಯ ನಿಯೋಜಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಯೋಜನೆ ಮತ್ತು ಆರ್ಥಿಕ ವಿಭಾಗದ ನಿರ್ದೇಶಕ ಡಾ. ರವಿರಾಜ ಎನ್. ಎಸ್. ಅವರು ಕೃತಕ ಬುದ್ಧಿಮತ್ತೆ [ಆರ್ಟಿಫಿಶಲ್ ಇಂಟಲಿಜೆನ್ಸ್] ನಿಯಂತ್ರಿತ ಶುಶ್ರೂಷಾ ವಿಧಾನ, ವೈಯಕ್ತಿಕ ಶುಶ್ರೂಷೆ, ದೂರನಿಯಂತ್ರಿತವಾಗಿ ರೋಗಿಯ ಚಿಕಿತ್ಸೆ ಮುಂತಾದ ಅತ್ಯಾಧುನಿಕ ಸೌಲಭ್ಯಗಳ ನಿರ್ವಹಣೆಯಲ್ಲಿ ತಂತ್ರಜ್ಞಾನ ಮತ್ತು ವೈದ್ಯಕೀಯ ವ್ಯವಸ್ಥೆ ಜೊತೆಯಾಗಿ ಕಾರ್ಯನಿರ್ವಹಿಸಬೇಕಾಗಿರುವುದರ ಅಗತ್ಯವನ್ನು ಒತ್ತಿಹೇಳಿದರು.
ಮಾಹೆಯ ಕಾರ್ಪೊರೇಟ್ ರಿಲೇಶನ್ಸ್ ವಿಭಾಗದ ನಿರ್ದೇಶಕ ಡಾ. ಹರೀಶ ಕುಮಾರ್ ಅವರು ಸ್ವಾಗತಿಸಿ, ಕಾರ್ಯಕ್ರಮದ ಕೊನೆಗೆ ಧನ್ಯವಾದ ಸಮರ್ಪಿಸಿದರು. ವಿನೋದ್ ಸಿ; ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.