ಉಡುಪಿ : ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ. ಪೌಡರ್ ಹಾಗೂ ಚರಸ್ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 3.25 ಲಕ್ಷ ಮೌಲ್ಯದ ಎಂ.ಡಿ.ಎಂ.ಎ, ಚರಸ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಜ.4ರ ಶನಿವಾರ ನಡೆದಿದೆ.
ಬಂಧಿತ ಆರೋಪಿಯನ್ನು ಬ್ರಹ್ಮಾವರದ ಉಪ್ಪೂರು ನಿವಾಸಿ, ನಾಗರಾಜ್ (25) ಎಂದು ಗುರುತಿಸಲಾಗಿದೆ.
ಆರೋಪಿ ನಾಗರಾಜ್‌ನಿಂದ 3.25 ಲಕ್ಷ ರೂ. ಮೊತ್ತದ ಎಂ.ಡಿ.ಎಂ.ಎ, ಚರಸ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಬಯಲು ರಂಗಮಂದಿರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೋಟಾರು ಬೈಕ್‌ನಲ್ಲಿ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಪೌಡರ್ ಹಾಗೂ ಚರಸ್ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಎಂದು ತಿಳಿದು ಬಂದಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ ಹಾಗೂ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್, ಸಿಬ್ಬಂದಿಯವರಾದ ಸುರೇಶ್, ಬಶೀರ್, ಹೇಮಂತ್, ರಾಜೇಶ್, ವಿನಯ್, ಆನಂದ, ಶಿವಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.