ಉಡುಪಿ : ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆಡಳಿತಾತ್ಮಕ ಕಿರುಕುಳ ಮುಂದುವರೆಸಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕೋಟ, ಜನೌಷಧಿ ಕೇಂದ್ರದಲ್ಲಿ ಜನ ವಾರ್ಷಿಕ 250 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ದೇಶದಲ್ಲಿ 2 ಸಾವಿರ ಕೋಟಿ ವ್ಯವಹಾರ ಜನೌಷಧಿ ಕೇಂದ್ರದಲ್ಲಿ ನಡೆಯುತ್ತದೆ. ಕಡಿಮೆ ದರದಲ್ಲಿ ರೋಗಿಗಳಿಗೆ ಔಷದ ಸಿಗುತ್ತಿದೆ. ಆಸ್ಪತ್ರೆಯ ಆವರಣದ ಒಳಗೆ ಇದ್ದರೆ ಅದನ್ನು ಬಂದ್ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ನೀವು ಉಚಿತವಾಗಿ ಕೊಟ್ಟರೆ ಜನಔಷಧಿ ಕೇಂದ್ರ ತನ್ನಷ್ಟಕ್ಕೆ ಮುಚ್ಚಲಿ. ನೀವಾಗಿ ಯಾಕೆ ಮುಚ್ಚುತ್ತೀರಿ? ಬಡ ರೋಗಿಗಳಿಗೆ ಬಹುದೊಡ್ಡ ಗಂಡಾಂತರ ಇದು ಎಂದು ಹೇಳಿದ್ದಾರೆ.
ಕೇಂದ್ರದ ಯೋಜನೆಯನ್ನು ವಿಫಲಗೊಳಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದ ಅವರು, ಸಿಎಂ ಸಿದ್ದರಾಮಯ್ಯ ದಿನೇಶ್ ಗುಂಡೂರಾವ್ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಬಡ ರೋಗಿಗಳಿಗೆ ಕಿರುಕುಳ ಕೊಟ್ಟು ನಿಮ್ಮ ರಾಜಕೀಯ ಬೇಡ. ರಾಜ್ಯ ಸರ್ಕಾರ ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು. ನಿಮ್ಮ ನಿಲುವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.