ಮಂಗಳೂರು : ನಗರದ ಸಂತ ಅಲೋಶಿಯಸ್ ಕಾಲೇಜು ಕ್ಯಾಂಪಸ್‌ನಲ್ಲಿ ಕಳೆದ 40ವರ್ಷಗಳಿಂದ ಸಮೋಸ ಮಾರಿ ಜೀವನ ನಡೆಸುತ್ತಿದ್ದ ವಿದ್ಯಾರ್ಥಿಗಳ ಪಾಲಿನ ‘ಸಮೋಸ ಅಜ್ಜ’ ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೂಲದ ಮದುಕೇಶ್ವರ್ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ(84)ಯವರು ಸಮೋಸ ಅಜ್ಜರೆಂದೇ ಪ್ರಖ್ಯಾತರಾಗಿದ್ದರು. 40ವರ್ಷಗಳ ಹಿಂದೆ ಅಳಿಯನೊಂದಿಗೆ ಮಂಗಳೂರಿಗೆ ಬಂದಿದ್ದ ಇವರು ಅಲೋಶಿಯಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮೋಸ ಮಾರಲು ಆರಂಭಿಸಿದ್ದರು. ಸಮೋಸದೊಂದಿಗೆ ಚಿಕ್ಕಿ, ನೆಲಗಡಲೆ, ಜಿಲೇಬಿ, ಬರ್ಫಿಗಳನ್ನೂ ಮಾರುತ್ತಿದ್ದರು.
ಮಂಗಳೂರಿನ ಕಾವೂರಿನಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ‘ಸಮೋಸ ಅಜ್ಜ’ರಿಗೆ ನಾಲ್ವರು ಪುತ್ರಿಯರಿದ್ದು, ಎಲ್ಲರಿಗೂ ಮದುವೆಯಾಗಿದೆ. ಓರ್ವ ಪುತ್ರನಿದ್ದು, ಅವರು ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಗಾಂಧಿ ಟೋಪಿ, ಕನ್ನಡಕ, ಬಿಳಿ ಜುಬ್ಬಾ ಮತ್ತು ಬಿಳಿ ಕಚ್ಚೆ, ಹಣೆಗೊಂದು ಇವರ ಟ್ರೇಡ್ ಮಾರ್ಕ್. ಈ ಧಿರಿಸಿನಲ್ಲಿ ಅಪ್ಪಟ ಗಾಂಧಿವಾದಿಯಂತೆ ಕಾಣುತ್ತಿದ್ದರು. ಇವರಲ್ಲಿ ಅಣ್ಣಾ ಹಜಾರೆಯವರ ಆಕರ್ಷಣೆಯಿತ್ತು.
ದೇಹಕ್ಕೆ ವಯಸ್ಸಾದರೂ ಎಂದೂ ತಮ್ಮ ವೃತ್ತಿಗೆ ಅವರು ನಿವೃತ್ತಿ ಘೋಷಿಸಿರಲಿಲ್ಲ. ದಿನವೂ ಮಧ್ಯಾಹ್ನ ಊಟದ ಹೊತ್ತಿಗೆ ಸಂಜೆ ಶಾಲೆ ಬಿಡುವ ಸಂದರ್ಭ ಮಕ್ಕಳಿಗೆ ತಿಂಡಿಗಳನ್ನು ಮಾರುತ್ತಿದ್ದರು. ಆದ್ದರಿಂದ ಕಳೆದ 40 ವರ್ಷಗಳಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಕಲಿತವರೆಲ್ಲ ಅಜ್ಜನ ನೆನಪನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
