ಮಂಗಳೂರು : ಆದಾಯ ಗಳಿಕೆಯಲ್ಲಿ ರಾಜ್ಯಕ್ಕೇ ಅಗ್ರಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ರಸ್ತೆ (ಕುಮಾರಧಾರ-ಕೈಕಂಬ)ಯಲ್ಲಿ ಅಪಾಯಕಾರಿ ಹೊಂಡ-ಗುಂಡಿಗಳು ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವನ್ನೇ ಅಣಕವಾಡುವ ಬ್ಯಾನರ್ ಒಂದು ಕೈಕಂಬ ರಸ್ತೆಯಲ್ಲಿ ಕಂಡು ಬಂದಿದೆ.
“ಯಾರೋ ಮಾಂತ್ರಿಕರು ಕೈಕಂಬದಿಂದ – ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿಯಿದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮದ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ, ನಿಧಾನವಾಗಿ ಚಲಿಸಿ” ಎಂಬ ಬ್ಯಾನರ್ ಅಳವಡಿಸಲಾಗಿದೆ. ಕೈಕಂಬದಿಂದ ಸುಬ್ರಹ್ಮಣ್ಯವರೆಗಿನ ರಸ್ತೆಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರೇ ಈ ಬ್ಯಾನರ್ ಅಳವಡಿಸಿರಬಹುದೆಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸ್ಥಳೀಯ ವಾಹನ ಸವಾರರು ಈ ರಸ್ತೆಯ ಹೊಂಡಗುಂಡಿಗಳನ್ನು ಟೇಪ್ ಹಿಡಿದು ಅಳತೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಕುಮಾರಧಾರ ಸೇತುವೆ ಬಳಿ ಸುಮಾರು 12 ಫೀಟ್ ಅಗಲಕ್ಕೆ 3 ಫೀಟ್ ಆಳದ ಹೊಂಡ ಪತ್ತೆಯಾಗಿದೆ ಎಂದು ಗುಂಡಿಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಗುಂಡಿಗೆ ಜಲ್ಲಿಹುಡಿಗಳನ್ನು ಹಾಕಿ ಮುಚ್ಚಿದ್ದರು. ಇದೀಗ ಮತ್ತೆ ಗುಂಡಿಗಳು ಸವಾರರಿಗೆ ತೊಂದರೆ ಕೊಡುತ್ತಿವೆ.
ಅಪಘಾತಗಳು ನಡೆದು ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಹೊಂಡಗಳನ್ನು ಮುಚ್ಚಬೇಕಾಗಿದೆ. ಯಾವಾಗ ಈ ರಸ್ತೆಯ ಹೊಂಡಗಳಿಗೆ ಮುಕ್ತಿ ದೊರೆಯುತ್ತದೆಯೋ ಎಂದು ಕಾದು ನೋಡಬೇಕಿದೆ.