ಉಡುಪಿ : ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಕಹಿ ಘಟನೆಯನ್ನು ಕೇಳಿ ತುಂಬಾ ಬೇಸರವಾಗಿದೆ. ಇಂತಹ ಪ್ರವೃತ್ತಿ ಮುಂದುವರಿದರೆ ಭಾರತ ದೇಶದ ಸನಾತನ ಧರ್ಮದ ಅಸ್ತಿತ್ವವೇ ನಾಶವಾಗುತ್ತದೆ ಎನ್ನುವ ಆತಂಕ ಎದುರಾಗುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ ಸರಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಲ, ಕೇರಳದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದಾಗ ಇದರ ಹಿಂದೆ ಮಾಸ್ಟರ್ ಪ್ಲಾನ್ ಅಡಗಿದೆ. ಇದರಲ್ಲಿ ಸಕ್ರಿಯರಾದವರ ಬಗ್ಗೆ ಸರಕಾರ ವಿಮರ್ಶೆ ಮಾಡಿ ಇದನ್ನು ಮೂಲ ಸಹಿತ ನಿರ್ಮೂಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಹಿಂದುತ್ವದ ಮೇಲೆ ಉದ್ದೇಶಪೂರ್ವಕವಾಗಿ ಆಕ್ರಮಣ ಮಾಡುವುದು ಆತಂಕಕಾರಿ ವಿಷಯವಾಗಿದೆ. ಇಷ್ಟರವರೆಗೆ ಉಗ್ರಗಾಮಿಗಳು ಸ್ವೇಚ್ಛಾಚಾರಿಗಳಾಗಿ ನಿರಪರಾಧಿಗಳನ್ನು ಕೊಲ್ಲುತ್ತಿದ್ದಾರೆ ಎಂಬ ಭಾವನೆ ಇತ್ತು. ಆದರೆ ಪ್ರಸ್ತುತ ಆಯ್ದ ಹಿಂದೂ ಜನರನ್ನೇ ಕೊಲ್ಲುತ್ತಿರುವ ಅಂಶ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇದನ್ನು ಕೇವಲ ಭಯೋತ್ಪಾದನೆ ಎಂದು ಕರೆಯಲು ಬರುವುದಿಲ್ಲ. ಇದನ್ನು ಜಾಗತಿಕವಾದ ಪ್ರಬಲ ಷಡ್ಯಂತ್ರ ಎಂಬುದನ್ನು ಗಮನಿಸಬೇಕಿದೆ. ಅದಕ್ಕೆ ತಕ್ಕಂತೆ ಸೂಕ್ತ ಪರಿಹಾರೋಪಾದಿ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.